ವಿಷಯಕ್ಕೆ ಹೋಗು

ಪಡಿತರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೊಮೇನಿಯಾದ ಪಡಿತರ ಚೀಟಿ, ೧೯೮೯

ಪಡಿತರ ಎಂದರೆ ವಿರಳವಾಗಿರುವ ಯಾವುದೇ ವಸ್ತು ಅಥವಾ ಸೇವೆಯು ಒಂದು ಸಮಾಜದಲ್ಲಿ ಅಥವಾ ದೇಶದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಯಥೋಚಿತವಾಗಿ ಸಲ್ಲಬೇಕಾದಷ್ಟು ಸಲ್ಲುವಂತೆ ಕೈಗೊಳ್ಳಲಾಗುವ ಕ್ರಮ (ರೇಷನಿಂಗ್). ಒಂದನೆಯ ಮಹಾಯುದ್ಧದ ಕಾಲದಲ್ಲಿ ಅನೇಕದೇಶಗಳಲ್ಲಿ ಈ ಪದ್ಧತಿಯನ್ನು ವ್ಯಾಪಕವಾಗಿ ಜಾರಿಗೆ ತರಲಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜನರ ಜೀವನಾವಶ್ಯಕ ವಸ್ತುಗಳ ಸರಬರಾಜನ್ನು ನಿಯಂತ್ರಿಸಿ ಅವರು ಅಭಾವದಿಂದ ತೊಂದರೆಗೆ ಒಳಗಾಗದಂತೆ ಈ ಕ್ರಮ ತೆಗೆದುಕೊಳ್ಳಲಾಯಿತು.

ಮುಕ್ತ ಮಾರುಕಟ್ಟೆಯಲ್ಲಿ ದಿನನಿತ್ಯವೂ ವಿವಿಧ ಸರಕುಗಳು ಹಾಗೂ ಸೇವೆಗಳು ಸಹಜವಾಗಿಯೇ ಪಡಿತರದ ಪ್ರಕ್ರಿಯೆಗೆ ಒಳಗಾಗಿರುತ್ತವೆನ್ನಬಹುದು. ಬೆಲೆ ವ್ಯವಸ್ಥೆ ಒಂದು ರೀತಿಯಲ್ಲಿ ಪಡಿತರ ವ್ಯವಸ್ಥೆಯೇ. ಒಂದು ಪದಾರ್ಥದ ಬೆಲೆಗೆ ಅನುಗುಣವಾಗಿ, ಹಾಗೂ ತಮ್ಮ ಅಗತ್ಯ, ರುಚಿ ಮತ್ತು ವರಮಾನದ ಆಧಾರದ ಮೇಲೆ ಜನರು ಆ ಪದಾರ್ಥದ ಅನುಭೋಗವನ್ನು ಸೀಮಿತಗೊಳಿಸಿಕೊಳ್ಳಬೇಕಾಗುತ್ತದೆ, ಎಂದರೆ ಒಂದು ಬಗೆಯ ಪಡಿತರಕ್ಕೆ ಒಳಗಾಗಬೇಕಾಗುತ್ತದೆ.

ಆದರೆ ಯಾವುದೇ ಪದಾರ್ಥದ ಅಥವಾ ಯಾವುದೇ ಪದಾರ್ಥಗಳ ಅಭಾವ ಉಂಟಾದಾಗ ಅಥವಾ ಅಂಥ ಪರಿಸ್ಥಿತಿ ಸಂಭಾವ್ಯವೆನಿಸಿದಾಗ ಖರೀದಿದಾರರು ಅಥವಾ ಬಿಕರಿದಾರರು ಅಕ್ರಮ ದಾಸ್ತಾನುಮಾಡಿ ಅಭಾವವನ್ನು ಸೃಷ್ಟಿಸಬಹುದು, ಅಥವಾ ಅದನ್ನು ಹೆಚ್ಚಿಸಬಹುದು ಅದರಿಂದ ಸರಕಿನ ವಿತರಣೆ ಏರುಪೇರಾಗಿ ಅನ್ಯಾಯವಾಗಬಹುದು. ಬೆಲೆಗಳು ತೀವ್ರವಾಗಿ ಏರಿ ಸಾಮಾನ್ಯರಿಗೆ ತೊಂದರೆಯಾಗಬಹುದು. ಅವರು ಕೊಳ್ಳ ಬಹುದಾದ ಬೆಲೆಯಲ್ಲಿ ಸರಕು ದೊರಕದೆಯೇ ಹೋಗಬಹುದು. ಅಂಥ ಸಮಯದಲ್ಲಿ ಬೆಲೆಗಳು ತೀವ್ರವಾಗಿ ಏರದಂತೆ ಹತೋಟಿ ಏರ್ಪಡಿಸುವುದು ಒಂದು ವಿಧಾನ. ಬೆಲೆಯನ್ನು ನಿಯಂತ್ರಿಸಿದಾಗ ಅದರ ವಿತರಣ ಪ್ರಕ್ರಿಯೆ ಕುಂಠಿತವಾಗುತ್ತದೆ. ಸರಬರಾಜಿನ ವಿತರಣೆಯಲ್ಲಿ ಯಾವ ಕ್ರಮವೂ ಇರುವುದಿಲ್ಲ. ಅದು ಸಿಕ್ಕರೆ ಸಿಗಬಹುದು, ಇಲ್ಲದಿದ್ದರೆ ಇಲ್ಲ. ಬಿಕರಿದಾರರು ತಮಗೆ ಬೇಕಾದವರಿಗೆ ಸರಬರಾಜು ಮಾಡಬಹುದು ; ಅಥವಾ ದಾಸ್ತಾನು ಇರುವವರೆಗೂ ಸರಕಿ ಮಾರಾಟವಾಗಿ, ತಡವಾಗಿ ಬಂದವರಿಗೆ ಅದು ಇಲ್ಲದೆಯೇ ಹೋಗಬಹುದು. ಕೊಳ್ಳುವವರ ಅಗತ್ಯಕ್ಕೆ ಅನುಕೂಲವಾಗಿ ಸರಕಿನ ವಿತರಣೆ ಆಗದೆಯೆ ಹೋಗಬಹುದು ; ಬೆಲೆಯನ್ನು ನಿಯಂತ್ರಿಸದಿದ್ದರೆ ಅದು ಅತಿಯಾಗಿ ಏರಿ, ಕಡಿಮೆ ವರಮಾನದ ಜನ ಅದನ್ನು ಕೊಳ್ಳುವುದು ಸಾಧ್ಯವಾಗದಂತೆ ಆಗಬಹುದು. ಸರಕುಗಳ ಅಭಾವವಿದ್ದಾಗ ಅಥವಾ ಅಭಾವ ಸಂಭವಿಸಬಹುದೆಂಬ ನಿರೀಕ್ಷೆಯಿದ್ದಾಗ, ಮತ್ತು ಆ ವಿರಳ ಸರಕುಗಳು ಜನರ ಬದುಕಿಗೆ ಹಾಗೂ ನೆಮ್ಮದಿಗೆ ಅವಶ್ಯವಾಗಿದ್ದ ಪಕ್ಷದಲ್ಲಿ ಪಡಿತರವನ್ನು ಜಾರಿಗೆ ತರುವ ಕ್ರಮ ತೆಗೆದುಕೊಳ್ಳಬಹುದಾಗಿದೆ. ಪಡಿತರಕ್ಕೆ ಒಳಪಡುವ ಸರಕಿನ ಸರಬರಾಜಿನ ಮೇಲೆ ಮತ್ತು ವಿತರಣೆಯ ವ್ಯವಸ್ಥೆಯ ಮೇಲೆ ಎಷ್ಟರಮಟ್ಟಿನ ನಿಯಂತ್ರಣ ಸಾಧ್ಯ-ಎಂಬುದನ್ನೇ ಪಡಿತರದ ಯಶಸ್ಸು ಅವಲಂಬಿಸಿದೆ.

ಐಚ್ಛಿಕ ಪಡಿತರ

[ಬದಲಾಯಿಸಿ]

ಪಡಿತರ ಐಚ್ಛಿಕವಾದ್ದಾಗಿರಬಹುದು, ಕಡ್ಡಾಯದ್ದಾಗಿರಬಹುದು. ಐಚ್ಛಿಕವಾಗಿ ಆರಂಭವಾದ್ದು ಕಡ್ಡಾಯದ್ದಾಗಿ ಪರಿಣಮಿಸುವುದುಂಟು. 1965ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ಸಂಭವಿಸಿದಾಗ ಭಾರತದ ಪ್ರಧಾನಿಯಾಗಿದ್ದ ಲಾಲ್‍ಬಹಾದೂರ್ ಶಾಸ್ತ್ರಿಯವರು ವಾರಕ್ಕೆ ಒಂದು ಹೊತ್ತು ಪ್ರತಿಯೊಬ್ಬರೂ ಊಟ ಬಿಟ್ಟು ಆಹಾರವನ್ನುಳಿಸಬೇಕೆಂದು ಹೇಳಿದರು. ಇದು ಐಚ್ಛಿಕ ಪಡಿತರಕ್ಕ ಒಂದು ನಿದರ್ಶನ. ಪದಾರ್ಥದ ಉತ್ಪಾದಕರು ಅಥವಾ ಸಗಟು ವ್ಯಾಪಾರಿಗಳು ಹಳೆಯ ಗ್ರಾಹಕರಿಗೆ ಮಾತ್ರ ಪದಾರ್ಥವನ್ನು ಸರಬರಾಜು ಮಾಡಬಹುದು ; ಸಾಲದ ವ್ಯಾಪಾರವನ್ನು ನಿಲ್ಲಿಸಬಹುದು ; ಇಲ್ಲವೇ ಸಾಲ ತೀರಿಸಲಾರರೆಂಬ ಸಂದೇಹ ಇದ್ದವರಿಗೆ ಪದಾರ್ಥ ಬಿಕರಿ ಮಾಡದಿರಬಹುದು ; ಹಳೆಯ ಗ್ರಾಹಕರೆಲ್ಲರಿಗೂ ಸರಬರಾಜು ಮಾಡಬಹುದಾದಷ್ಟು ದಾಸ್ತಾನು ಇಲ್ಲವೆನಿಸಿದಾಗ ಗ್ರಾಹಕರು ಸಾಮಾನ್ಯವಾಗಿ ಕೊಳ್ಳುವ ಒಂದು ಶೇಕಡಾಂಶದಷ್ಟನ್ನು ಮಾತ್ರ ನೀಡುವುದಾಗಿ ಬಿಕರಿದಾರರು ಹೇಳಬಹುದು ; ಒಬ್ಬೊಬ್ಬ ಗ್ರಾಹಕರಿಗೆ ಇಷ್ಟಿಷ್ಟು ಎಂದು ಹಸುಗೆ (ಕೋಟಾ) ನಿಗದಿ ಮಾಡುವುದೂ ಉಂಟು. ಆದರೆ ಇಂಥ ಕ್ರಮಗಳಿಂದ ಸಾಮಾನ್ಯವಾಗಿ ಕೊನೆಗೆ ಅನ್ಯಾಯಕ್ಕೆ ಎಡೆಯುಂಟಾಗಿ, ಅಭಾವ ಪರಿಸ್ಥಿತಿ ತುಂಬ ತೀವ್ರವಾಗಬಹುದು. ಆಗ ಸರ್ಕಾರ ಅಥವಾ ಬೇರೆ ಯಾವುದೇ ಪ್ರಾಧಿಕರಣ ನಡುವೆ ಪ್ರವೇಶಿಸಿ, ಕಡ್ಡಾಯ ಪಡಿತರವನ್ನು ಜಾರಿಗೆ ತರಬೇಕಾಗಿ ಬರುವುದು ಅಪರೂಪವೇನಲ್ಲ.

ಕಡ್ಡಾಯ ಪಡಿತರ

[ಬದಲಾಯಿಸಿ]

ಕಡ್ಡಾಯ ಪಡಿತರದಲ್ಲಿ ನಾನಾ ವಿಧಾನಗಳುಂಟು. ಪದಾರ್ಥದ ಬಳಕೆಯಲ್ಲಿ ಪಡಿತರವನ್ನೇರ್ಪಡಿಸುವುದು ಒಂದು ವಿಧಾನ. ಹಲವು ಬಗೆಯಾಗಿ ಉಪಯೊಗವಾಗುವ ಒಂದು ಪದಾರ್ಥವನ್ನು ಅದರ ಕನಿಷ್ಠ ಪ್ರಾಮುಖ್ಯದ ಉಪಯೋಗಕ್ಕೆ ಬಳಸದಂತೆ ನಿಷೇಧಿಸುವುದು ಈ ವಿಧಾನ. ಒಂದು ನಗರದಲ್ಲಿ ನೀರಿನ ಅಭಾವ ಸಂಭವಿಸಿದಾಗ ಅದನ್ನು ಗಿಡಗಳಿಗೆ ಹಾಕುವುದಕ್ಕಾಗಲಿ ಇಂಥ ಬೇರೆ ಕೆಲಸಗಳಿಗಾಗಲಿ ಬಳಸಕೂಡದೆಂದು ನಿರ್ಬಂಧ ವಿಧಿಸಬಹುದು. ಅನುಭೋಗ ಸರಕುಗಳಿಗಿಂತ ಕೈಗಾರಿಕಾ ಕಚ್ಚಾ ಸಾಮಗ್ರಿಗಳನ್ನು ಇಂಥ ಪಡಿತರಕ್ಕೆ ಒಳಪಡಿಸುವುದು ಹೆಚ್ಚು ಸಾಮಾನ್ಯ.

ಒಂದು ಸರಕಿನ ಬಳಕೆಯನ್ನು ಪರಿಮಾಣಾತ್ಮಕವಾದ ಪಡಿತರಕ್ಕೆ ಒಳಪಡಿಸುವುದು ಎರಡನೆಯ ವಿಧಾನ. ಇದರಲ್ಲಿ ಎರಡು ಬಗೆಯುಂಟು. ಸರಕಿನ ಸರಬರಾಜನ್ನು ದಿನದ ಕೆಲವು ಗಂಟೆಗಳಿಗೆ ಸೀಮಿತಗೊಳಿಸುವುದು ಒಂದು ಬಗೆ. ಬಹಳ ಸುಲಭವಾದ, ಸರಳವಾದ, ಪರಿಣಾಮಕಾರಿಯಾದ, ಆದರೆ ತುಂಬ ಒರಟಾದ್ದೆನ್ನಬಹುದಾದ ವ್ಯವಸ್ಥೆಯಿದು. ನಲ್ಲಿಯಲ್ಲಿ ನೀರನ್ನು ದಿನದ ನಿಶ್ಚಿತವಾದ ಕೆಲವೇ ಗಂಟೆಗಳಲ್ಲಿ ಸರಬರಾಜು ಮಾಡುವ ವ್ಯವಸ್ಥೆ ಇದಕ್ಕೆ ಉದಾಹರಣೆ. 1950ರ ದಶಕದಲ್ಲಿ ತುರ್ಕಿಯಲ್ಲಿ ಕಾಫಿಯ ಅಭಾವ ಸಂಭವಿಸಿದಾಗ ಅದನ್ನು ಯಾವುವೋ ದಿನಗಳಲ್ಲಿ ಮಾತ್ರ, ಅದೂ ಬೆಳಗಿನ ಜಾವದ ಸಮಯದಲ್ಲಿ, ಮಾರಾಟ ಮಾಡಲಾಗುತ್ತಿತ್ತು. ಅದರೆ ಬೆಲೆಯನ್ನು ಹೆಚ್ಚಾಗಿರಿಸಲಾಗಿತ್ತು.

ಸರಕಿನ ಬಳಕೆಯನ್ನು ಪರಿಮಾಣಾತ್ಮಕವಾದ ಪಡಿತರಕ್ಕೆ ಒಳಪಡಿಸುವ ಇನ್ನೊಂದು ಬಗೆ ಹೆಚ್ಚು ಸಂಕೀರ್ಣವಾದ್ದು. ಇದು ಹೆಚ್ಚು ಸಾಮ್ಯವಾದ್ದು (ಎಕ್ವಿಟಬಲ್). ಯಾರು ಯಾರು ಬಳಕೆದಾರರೆಂದು ಗೊತ್ತಾಗಿದೆಯೋ, ಮಾನ್ಯ ಮಾಡಲಾಗಿದೆಯೋ ಅವರಿಗೆಲ್ಲ ನಿರ್ದಿಷ್ಟ ಹಸುಗೆಗಳನ್ನು (ಕೋಟಾ) ಹಂಚಲಾಗುವುದು. ಗುಣದಲ್ಲಿ ವ್ಯತ್ಯಾಸವಿಲ್ಲದ, ಶಿಷ್ಟೀಕೃತವಾದ ಸರಕುಗಳನ್ನು ಈ ರೀತಿ ಹಂಚುವುದು ಸುಲಭ. ಬಳಕೆದಾರರಿಗೆ ನೀಡಲಾಗುವ ಪರಿಮಾಣವನ್ನು ಸೂಚಿಸುವ ಕೂಪನ್ನುಗಳನ್ನು ಹಂಚಲಾಗುವುದು. ಅಥವಾ ಒಂದು ಅವಧಿಯಲ್ಲಿ ಸಲ್ಲುವ ಪಡಿತರದ ಪರಿಮಾನವೆಷ್ಟೆಂಬುದನ್ನು ಗುರುತಿಸಿದ ಪುಸ್ತಕವೊಂದನ್ನು ಅವರಿಗೆ ನೀಡಲಾಗುವುದು. ಅವರು ಪಡೆಯುವ ಪರಿಮಾಣ, ಅದನ್ನು ಪಡೆದ ದಿನಾಂಕ ಮುಂತಾದವನ್ನು ಆ ಪುಸ್ತಕದಲ್ಲಿ ಬರೆಯಲಾಗುವುದು.

ಒಂದು ಪದಾರ್ಥವನ್ನು ಬಳಸುವವರು ನಾನಾ ಬಗೆಯವರಾಗಿದ್ದರೆ, ಎಲ್ಲರಿಗೂ ಆ ಪದಾರ್ಥ ಒಂದೇ ರೀತಿಯ ಪ್ರಾಮುಖ್ಯ ಉಳ್ಳದ್ದಾಗಿರದಿದ್ದರೆ, ಮೇಲೆ ಹೇಳಿದ ವ್ಯವ್ಯಸ್ಥೆಯಲ್ಲಿ ತೊಡಕು ಉಂಟಾಗುತ್ತದೆ. ಹಾಲು ಒಂದು ಉದಾಹರಣೆ. ಹಾಲು ಉಳಿದವರಿಗಿಂತ ಮಕ್ಕಳಿಗೆ ಹೆಚ್ಚು ಅವಶ್ಯಕ. ಮಕ್ಕಳಿರುವವರಿಗೆ ಹೆಚ್ಚು ಹಾಲನ್ನೂ ಇಲ್ಲದವರಿಗೆ ಕಡಿಮೆಯನ್ನೂ ಪಡಿತರ ಮಾಡಬೇಕಾದೀತು. ಈ ವ್ಯವಸ್ಥೆಯನ್ನು ಅನ್ವಯಗೊಳಿಸುವಲ್ಲಿ ಅನೇಕ ತೊಂದರೆಗಳು ಉದ್ಭವಿಸುತ್ತವೆ. ಇಲ್ಲಿ ಕುಟುಂಬದ ಸದಸ್ಯರ ಕೇವಲ ಸಂಖ್ಯೆಗೆ ಅನುಗುಣವಾಗಿ ಪಡಿತರದ ಪರಿಮಾಣವನ್ನು ನಿರ್ಧರಿಸುವುದಕ್ಕಾಗುವುದಿಲ್ಲ.

ಗುಣದಲ್ಲಿ ವ್ಯತ್ಯಾಸದಿಂದ ಕೂಡಿರುವ, ವೈವಿಧ್ಯಪೂರಿತವಾದ ಪದಾರ್ಥಗಳನ್ನು ಪರಿಮಾಣಾನುಗುಣವಾದ ಪಡಿತರಕ್ಕೆ ಒಳಪಡಿಸುವುದು ಸಾಧ್ಯವಾಗುವುದಿಲ್ಲ. ಅಂಥ ಪದಾರ್ಥಗಳ ಪಡಿತರಕ್ಕೆ ಮೌಲ್ಯವನ್ನು ಆಧಾರವಾಗಿಟ್ಟುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ತರಕಾರಿ. ತರಕಾರಿಗಳಲ್ಲಿ ನಾನಾ ಪ್ರಭೇದಗಳುಂಟು. ಪ್ರತಿಯೊಂದು ತರಕಾರಿಯಲ್ಲೂ ಗುಣಮಟ್ಟಗಳ ವ್ಯತ್ಯಾಸಗಳಿರುತ್ತವೆ. ತರಕಾರಿಗಳನ್ನು ಪಡಿತರಕ್ಕೆ ಒಳಪಡಿಸಿದಾಗ ಪ್ರತಿ ಕುಟುಂಬಕ್ಕೂ ಒಂದು ನಿಗದಿಯಾದ ಮೌಲ್ಯದ ತರಕಾರಿಗಳನ್ನು ಕೊಳ್ಳಲು ಅವಕಾಶ ನೀಡಬಹುದು. ಅವರು ಯಾವುವೇ ತರಕಾರಿಗಳನ್ನು ಕೊಳ್ಳಲಿ, ಅವುಗಳ ಒಟ್ಟು ಮೌಲ್ಯವೆಂದು ನಿಗದಿಯಾದ ಮೊಬಲಗನ್ನು ಮೀರಬಾರದು ಎಂದು ವಿಧಿಸಬಹುದು. ಹೆಚ್ಚು ಸರಬರಾಜಾಗುವ ತರಕಾರಿಯ ಬೆಲೆ ಕಡಿಮೆ ಇದ್ದರೆ ಜನರು ಅವನ್ನು ಹೆಚ್ಚು ಹೆಚ್ಚಾಗಿ ಕೊಳ್ಳಬಹುದು. ಹೀಗೆ ಬೆಲೆಯನ್ನು ಹೆಚ್ಚಿಸಿ ಅಥವಾ ಕಡಿಮೆ ಮಾಡಿ ಬೇಡಿಕೆಯನ್ನು ನಿಯಂತ್ರಿಸಬಹುದು. ನಾಶೀ ಗುಣವುಳ್ಳ ಪದಾರ್ಥದ ದಾಸ್ತಾನನ್ನು ಕರಗಿಸಲು ಅದರ ಬೆಲೆ ಸಹಾಯಕವಾಗುತ್ತದೆ.

ಒಂದು ಪದಾರ್ಥದ ಪಡಿತರವನ್ನು ಜಾರಿಗೆ ತಂದಾಗ ಆ ಪದಾರ್ಥದ ಬದಲು ಇನ್ನೊಂದು ಪದಾರ್ಥಕ್ಕೆ ಬೇಡಿಕೆ ಏರಬಹುದು. ಇದರಿಂದ ಆ ಇನ್ನೊಂದರ ಬೆಲೆ ಏರುವುದಲ್ಲದೆ ಅದರಲ್ಲೂ ಅಭಾವ ಉಂಟಾಗುತ್ತದೆ. ಹೀಗೆ ಇತರ ಕ್ಷೇತ್ರಗಳಿಗೂ ಅಭಾವ ವಿಸ್ತರಿಸುತ್ತದೆ. ಇದನ್ನು ತಪ್ಪಿಸುವ ಉದ್ದೇಶವುಳ್ಳ ಪಡಿತರ ವಿಧಾನವೆಂದರೆ ಅಂಕೀಯ ಪಡಿತರ (ಪಾಯಿಂಟ್ ರೇಷನಿಂಗ್), ಪ್ರತಿಯೊಂದು ಪದಾರ್ಥಕ್ಕೂ ನಿಶ್ಚಿತ ಅಂಕಗಳನ್ನು ನಿರ್ಧರಿಸಿ, ಪ್ರತಿಯೊಬ್ಬರೂ ಒಂದು ನಿಗದಿಯಾದ ಅಂಕಗಳಿಗೆ ಮೀರದಷ್ಟು ಮೊತ್ತದ ಪದಾರ್ಥಗಳನ್ನು ಕೊಳ್ಳಬಹುದೆಂದು ವಿಧಿಸುವುದು ಅಂಕೀಯ ಪಡಿತರ.

ಪಡಿತರವನ್ನು ಜಾರಿಗೆ ತಂದಾಗ ಅನುಭೋಗಿಗಳು ತಮತಮಗೆ ಬೇಕಾದ ಪದಾರ್ಥಗಳನ್ನೆಲ್ಲ ಯಥೇಚ್ಛವಾಗಿ ಕೊಳ್ಳುವುದು ಸಾಧ್ಯವಾಗದಿರುವುದರಿಂದ ಅವರ ಕೈಯಲ್ಲಿರುವ ಎಲ್ಲ ಹಣವೂ ಖರ್ಚಾಗದೆ ಹೋಗಬಹುದು ; ಹಣ ವರಮಾನದ ಒಂದು ಭಾಗ ಉಳಿಯಬಹುದು. ಈ ಹೆಚ್ಚುವರಿ ಕೊಳ್ಳುವ ಶಕ್ತಿಯನ್ನು ಉಳಿತಾಯ ಮಾಡುವಂತೆ ಸರ್ಕಾರ ಪ್ರೋತ್ಸಾಹ ನೀಡುವುದು ಅಗತ್ಯವೆನಿಸುತ್ತದೆ. ಪಡಿತರ ವ್ಯವಸ್ಥೆಯೊಂದಿಗೆ ಹಣದ ಉಳಿತಾಯ ಚಳವಳಿಯನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ.

ಗ್ರಂಥಸೂಚಿ

[ಬದಲಾಯಿಸಿ]
  • Allocation of Ventilators in an Influenza Pandemic, Report of New York State Task Force on Life and the Law, 2007.
  • Matt Gouras. "Frist Defends Flu Shots for Congress." Associated Press. October 21, 2004.
  • Stiglitz, J. & Weiss, A. (1981). Credit Rationing in Markets with Imperfect Information, American Economic Review, vol. 71, pages 393-410.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪಡಿತರ&oldid=972681" ಇಂದ ಪಡೆಯಲ್ಪಟ್ಟಿದೆ