ಪಚ್ಚೆತೆನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಚ್ಚೆತೆನೆಯು ಲ್ಯಾಮಿಯೇಸೀ (ಲೇಬಿಯೇಟೀ) ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ (ಪಚೌಲಿ). ಪೋಗೊಸ್ಟಿಮಾನ್ ಪಚೌಲಿ ಇದರ ಶಾಸ್ತ್ರೀಯ ಹೆಸರು. ಇಂಡೋಮಲೇಷ್ಯ ಇದರ ತವರು. ಭಾರತದ ಪಶ್ಚಿಮ ಘಟ್ಟಗಳು, ನೀಲಗಿರಿ, ಕೋಟಗಿರಿ, ದಕ್ಷಿಣ ಕನ್ನಡದ ದಟ್ಟಕಾಡುಗಳಲ್ಲಿ, ಪೊದೆಯ ರೂಪದಲ್ಲಿ ಸೊಂಪಾಗಿ ಬೆಳೆಯುತ್ತದೆ. ಇದರ ಸುವಾಸನೆಯ ತೈಲಕ್ಕೋಸ್ಕರ[೧] ಇದನ್ನು ಮನೆಗಳಲ್ಲೂ ತೋಟಗಳಲ್ಲೂ ಬೆಳೆಸುತ್ತಾರೆ. 1952 ರಿಂದೀಚೆಗೆ ಇದರ ಬೇಸಾಯ ಹೆಚ್ಚಿದೆ.

ಇದರ ಕಾಂಡ ಚತುರ್ಮೂಲೆಯುಳ್ಳದ್ದು. ಎಲೆಗಳು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗೊಂಚಲುಗಳು ಮೂಡುವುದು ಕಾಂಡದ ತುದಿಯಲ್ಲಿ. ಹೂಗಳು ಚಿಕ್ಕ ಗಾತ್ರದವು : ಪ್ರತಿ ಹೂವಿನಲ್ಲಿ 5 ಪತ್ರಗಳ ಪುಷ್ಪಪಾತ್ರೆ, 5 ದಳಗಳ ದಳಸಮೂಹ, 4 ಕೇಸರಗಳು, 2 ಕಾರ್ಪೆಲುಗಳಿಂದ ರಚಿತವಾದ ಉಚ್ಚಸ್ಥಾನದ ಅಂಡಾಶಯ ಇವೆ. ದಳಸಮೂಹ ಇರ್ತುಟಿಯಾಕಾರದ್ದು; ಇದರ ಬಣ್ಣ ತಿಳಿ ನೇರಳೆ. ಕೇಸರಗಳಲ್ಲಿ ಎರಡು ಉಳಿದೆರಡಕ್ಕಿಂತ ಚಿಕ್ಕವು. ಅಂಡಕೋಶದ ಒಳಗೆ 4 ಅಂಡಕಗಳುಂಟು.

ಪಚ್ಚೆತೆನೆ ಸಮಶೀತೋಷ್ಣ ಹವಾಗುಣದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಣ್ಣಿನ ಆಮ್ಲತೆ 5.5-6.2 ಇದ್ದರೆ ಚೆನ್ನ. ಭೂಮಿಯಲ್ಲಿ ನೀರು ನಿಲ್ಲಬಾರದು. 150ರಿಂದ 300 ಸೆಂ.ಮೀ ಮಳೆ, 24ರಿಂದ 28 ಸೆಂ.ಮೀ ಉಷ್ಣತೆ, ಶೇ. 75 ಭಾಗ ತೇವಾಂಶ ಇವು ಇದರ ಬೆಳೆಗೆ ಬೇಕಾದ ಇತರ ಅವಶ್ಯಕತೆಗಳು. ಇದನ್ನು ಬೀಜಗಳ ಮೂಲಕ ಅಥವಾ 2-3 ಗಿಣ್ಣುಗಳಿರುವ ಕಾಂಡತುಂಡುಗಳ ಮೂಲಕ ಬೆಳೆಸಬಹುದು. ಮಳೆಗಾಲದಲ್ಲಿ ಕಾಂಡಗಳನ್ನು ನೆಡುವುದು ವಾಡಿಕೆ.

ಕಾಂಡವನ್ನು ನೆಟ್ಟ 5-6 ತಿಂಗಳಾದ ಮೇಲೆ ಪಚ್ಚೆತೆನೆ ಕೊಯ್ಲಿಗೆ ಸಿದ್ಧವಾಗುತ್ತದೆ. 3-4 ಜೊತೆ ಎಲೆಗಳುಳ್ಳ ಕಾಂಡದ ತುದಿಗಳನ್ನು ಬೆಳಗಿನ ಜಾವದಲ್ಲಿ ಅಥವಾ ಸೂರ್ಯ ಮುಳುಗಿದ ಮೇಲ ಕೀಳಲಾಗುತ್ತದೆ. 6 ತಿಂಗಳಿಗೊಮ್ಮೆ ಹೀಗೆ ಕೀಳಬಹುದು. ಬೆಳೆ ಚೆನ್ನಾಗಿದ್ದರೆ ವರ್ಷವೊಂದಕ್ಕೆ ಒಂದು ಹೆಕ್ಟೇರಿಗೆ 7000 ಕೆಜಿ ಎಲೆಯನ್ನು ಪಡೆಯಬಹುದು. ಕೊಯ್ದ ಎಲೆಗಳನ್ನು ಕೋಣೆಯೊಂದರಲ್ಲಿ ತೆಳುಪದರವಾಗಿ ಹರಡಿ 3 ದಿನದವರೆಗೂ ಒಣಗಿಸಲಾಗುತ್ತದೆ. ಬಿಸಿಲಿನಲ್ಲಿ ಒಣಗಿಸಿದರೆ, ತೈಲ ನಷ್ಟವಾಗುತ್ತದೆ. ಹೆಚ್ಚು ತೇವವಿದ್ದರೂ ಒಳ್ಳೆಯದಲ್ಲ. ಆಗ ಎಲೆಗಳಿಗೆ ಬೂಷ್ಟು ಬರುವ ಸಾಧ್ಯತೆಯುಂಟು.

ಇದರಲ್ಲಿರುವ ಪಚೌಲಿ ತೈಲವನ್ನು ಆವಿ ಆಸಮೀಕರಣದಿಂದ ಹೊರತೆಗೆಯಲಾಗುತ್ತದೆ. ಕುಡಿಗಳಲ್ಲಿ ಹೆಚ್ಚು ಪ್ರಮಾಣದ ತೈಲವಿರುತ್ತದೆ. ನಿಧಾನವಾಗಿ ಬಟ್ಟಿ ಇಳಿಸಿದರೆ, ಹೆಚ್ಚು ತೈಲ ಸಿಗುತ್ತದೆ. ಆದರೆ 24 ಗಂಟೆಗಳಿಗಿಂತ ಹೆಚ್ಚಾಗಬಾರದು. ಸಾಧಾರಣವಾಗಿ 3.5% ತೈಲ ದೊರೆಯುತ್ತದೆ. ಸಿಂಗಪೂರ್ ತಳಿ ವರ್ಷವೊಂದಕ್ಕೆ ಒಂದು ಹೆಕ್ಟೇರಿಗೆ 142 ಕೆಜಿ. ತೈಲ ನೀಡುತ್ತದೆ.

ಪಚೌಲಿ ತೈಲ ಮಂದವಾದ ತಿಳಿ ಹಸುರು ಬಣ್ಣದ, ಸುವಾಸನಾ ಯುಕ್ತ ಪದಾರ್ಥ. ಹಳೆಯದಾದಂತೆ, ತೈಲದ ವಾಸನೆ ಉತ್ತಮಗೊಳ್ಳುತ್ತದೆ. ಪಚೌಲಿ ತೈಲದಲ್ಲಿ ವಿವಿಧ ರೀತಿಯ ಸಾವಯವ ರಾಸಾಯನಿಕ ವಸ್ತುಗಳಿವೆ. ತೈಲದ ಜೊತೆ ಪಚೌಲಿ ಆಲ್ಕೊಹಾಲ್ ಸಹ ಉಂಟು.

ತೈಲದ ಕಾರಣ ಪಚ್ಚೆತೆನೆಯನ್ನು ಸುಗಂಧದ್ರವ್ಯ, ಸಾಬೂನು, ಸೌಂದರ್ಯ ಸಾಧನಗಳು ಹಾಗೂ ಊದುಕಡ್ಡಿ ತಯಾರಿಕೆಗೆ ಬಳಸಲಾಗುತ್ತದೆ. ಸಿಗರೇಟು ಮತ್ತು ಹೊಗೆಸೊಪ್ಪನ್ನು ಸುವಾಸನಾಯುಕ್ತವನ್ನಾಗಿ ಮಾಡಲು ಉಪಯೋಗಿಸುವುದುಂಟು. ಬಟ್ಟೆಗಳನ್ನೂ ಉಣ್ಣೆ ಶಾಲುಗಳನ್ನೂ ಇಡುವ ಬೀರುವಿನಲ್ಲಿ ಈ ತೈಲವನ್ನು ಸಿಂಪಡಿಸಿದರೆ, ಬಟ್ಟೆಗಳು ಸುವಾಸನಾಭರಿತವಾಗುವುದಲ್ಲದೆ, ಕೀಟಗಳಿಂದಲೂ ರಕ್ಷಿತವಾಗುವುವು.

ನೀರಿಗೆ ಈ ಎಲೆಗಳನ್ನು ಹಾಕಿ ಕುದಿಸಿ, ಅನಂತರ ಈ ನೀರಿನಲ್ಲಿ ಸ್ನಾನ ಮಾಡಿದರೆ ಸಂಧಿವಾತ ರೋಗ ನಿವಾರಣೆಯಾಗುತ್ತದೆ ಎನ್ನಲಾಗಿದೆ. ಈ ಸಸ್ಯಕ್ಕೆ ವಾತಹರ, ಮೂತ್ರಸ್ರಾವಕ ಗುಣವಿದೆ. ಎಲೆಯನ್ನು ಅರೆದು ಹುಣ್ಣುಗಳಿಗೂ ತಲೆನೋವಿಗೂ ಮಲಯದಲ್ಲಿ ಬಳಸುವುದಿದೆ. ಎಲೆಯ ಕಷಾಯವನ್ನು ಕೆಮ್ಮು, ಗೂರಲು ರೋಗ ನಿವಾರಣೆಗೂ ಬೇರಿನ ಕಷಾಯವನ್ನು ಜಲೋದರ, ಸಂಧಿವಾತಗಳ ಚಿಕಿತ್ಸೆಗೂ ಉಪಯೋಗಿಸಲಾಗುತ್ತದೆ. ಒಣಗಿದ ಗಿಡದ ಪುಡಿಯಿಂದ ಮಾದಕ ಪಾನೀಯಗಳಿಗೆ ವಾಸನೆ ಕಟ್ಟಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Ballentine, Sandra (5 November 2010). "Vain Glorious | Sex in a Bottle". Tmagazine.blogs.nytimes.com. Retrieved 10 December 2011.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: