ಪಂ. ರಘುನಾಥ್ ನಾಕೋಡ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಪಂ. ರಘುನಾಥ್ ನಾಕೋಡ್ (೧೭.೦೧.೧೯೫೪)
ರಾಷ್ಟ್ರೀಯ ಮಟ್ಟದ ತಬಲ ವಾದಕರಾದ ರಘುನಾಥ್ ನಾಕೋಡ್ ರವರು ಹುಟ್ಟಿದ್ದು ಹುಬ್ಬಳ್ಳಿಯ ಸಂಗೀತಗಾರರ ಮನೆತನದಲ್ಲಿ. ತಂದೆ ಅರ್ಜುನ್ ಸಾ. ನಾಕೋಡ್ ಹಿಂದೂಸ್ತಾನಿ ಸಂಗೀತಗಾರರು, ತಾಯಿ ಅನಸೂಯಾ ನಾಕೋಡ್. ಸಾಮಾನ್ಯ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ. ವರೆಗೆ. ತಂದೆಯಿಂದಲೇ ಸಂಗೀತದ ಪ್ರಥಮ ಪಾಠ. ಆರಿಸಿಕೊಂಡದ್ದು ತಬಲ ನುಡಿಸಲು. ತಾಳ, ಲಯಗಳನ್ನು ಕಲಿಸಿದವರು ವೀರಣ್ಣ ಕುಮಾರ್, ನಂತರ ಬಸವರಾಜ ಬೆಂಡಿಗೇರಿಯವರ ಬಳಿ ಕಠಿಣ ಅಭ್ಯಾಸ. ಹತ್ತರ ಹರೆಯದಲ್ಲೇ ತಂದೆಯ ಸಂಗೀತಕ್ಕೆ ನೀಡಿದ ಸಾಥಿ. ಹೈದರಾಬಾದಿನ ಉಸ್ತಾದ ಶೇಖ್‌ದಾವೂದ್, ಇವರ ಮಗ ತಬ್ಬೀರ್ ದಾವೂದ್, ಗುರುಬಂಧು ನಂದಕುಮಾರ್ ಮುಂತಾದವರ ಬಳಿ ಮುಂದುವರೆದ ಶಿಕ್ಷಣ.
೧೯೭೭ರಲ್ಲಿ ಉದ್ಯೋಗಕ್ಕಾಗಿ ಸೇರಿದ್ದು ಮಂಗಳೂರಿನ ಆಕಾಶವಾಣಿ ನಿಲಯ. ಕಲಾವಿದರಾಗಿ. ಹಲವಾರು ಮಂದಿ ಹಿಂದೂಸ್ತಾನಿ ಸಂಗೀತಗಾರರಿಗೆ ತಬಲ ನುಡಿಸುವ ಅವಕಾಶ. ಆಕಾಶವಾಣಿಯ ಉನ್ನತ ಮಟ್ಟದ ತಬಲ ಕಲಾವಿದರೆಂಬ ಹೆಗ್ಗಳಿಕೆ. ಕೆಲಕಾಲ ಧಾರವಾಡದ ಆಕಾಶವಾಣಿ ಕೇಂದ್ರದಲ್ಲೂ ಸಲ್ಲಿಸಿದ ಸೇವೆ.
ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಗೀತೋತ್ಸವಗಳಲ್ಲಿ ಪ್ರಖ್ಯಾತಿ ಸಂಗೀತಗಾರರಿಗೆ ನೀಡಿದ ತಬಲ ಸಾಥಿ. ೧೯೮೮ರಲ್ಲಿ ಲಂಡನ್ನಿನ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ, ೧೯೯೬ರಲ್ಲಿ ಫ್ರಾನ್ಸ್‌ನ ಸಾಂಸ್ಕೃತಿಕ ಕಾರ್ಯಕ್ರಮಗಳಡಿಯಲ್ಲಿ ತಬಲ ಸಾಥಿಯಾಗಲು ನೀಡಿದ ಆಹ್ವಾನಿತ ಕಾರ್ಯಕ್ರಮದಲ್ಲಿ ಭಾಗಿ. ಆಕಾಶವಾಣಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತಗಾರರಾದ ಪಂ. ಮಲ್ಲಿಕಾರ್ಜುನ ಮನಸೂರ, ಪಂ. ಬಸವರಾಜರಾಜಗುರು, ಡಾ. ಪ್ರಭಾಅತ್ರೆ, ಗೋಪಾಲಕೃಷ್ಣನ್ (ಪಿಟೀಲು), ಪಂ. ನಂದಾಲಾಲ್ ಘೋಷ್ (ಸರೋರ್), ಶ್ರೀಮತಿ ಜಯಶ್ರೀ ಪಟ್ನಕರ್, ಪಂ. ವೆಂಕಟೇಶ ಗೋಡ್ಖಿಂಡಿ (ಕೊಳಲು), ಡಾ. ರಾಜಶೇಖರ ಮನಸೂರ್ ಮುಂತಾದವರುಗಳಿಗೆ ನೀಡಿದ ಸಾಥಿ.
ಬಂದ ಪ್ರಶಸ್ತಿಗಳು ಹಲವಾರು, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಮೈಸೂರಿನ ತ್ಯಾಗರಾಜ ಆರಾಧನಾ ಸಮಿತಿಯಿಂದ ‘ಸಂಗೀತಕಲಾ ತಪಸ್ವಿ’, ಧಾರವಾಡದ ಗುರು ಪಂಚಾಕ್ಷರಿ ಸಂಗೀತ ವಿದ್ಯಾಲಯದಿಂದ ‘ತಾಳ-ಲಯ-ಕಣ್ಮಣಿ’, ಬಸವಗುರು ಕಾರುಣ್ಯ ಪ್ರತಿಷ್ಠಾನದಿಂದ ‘ತಬಲ ವಾದ್ಯ ಗಾರುಡಿಗ’ ಮುಂತಾದ ಪ್ರಶಸ್ತಿಗಳು. ಪತ್ನಿ ರೇಣುಕಾ ನಾಕೋಡ್ ಹಿಂದೂಸ್ತಾನಿ ಸಂಗೀತ ಗಾರ್ತಿಯಾದರೆ ಮಗ ರವಿಕಿರಣ್ ನಾಕೋಡ್ ಪ್ರವರ್ಧಮಾನಕ್ಕೆ ಬರುತ್ತಿರುವ ತಬಲ ಕಲಾವಿದ.