ನ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನ್ಯಾಸ - ಒಬ್ಬ (ಅಥವಾ ಹಲವರು) ಒಂದು ಸ್ವತ್ತನ್ನು ಇನ್ನೊಬ್ಬನ (ಅಥವಾ ಹಲವರ) ಪ್ರಯೋಜನಾರ್ಥವಾಗಿ ನಿರ್ವಹಿಸುವ ವಿಶ್ವಾಸಾವಲಂಬಿ ಕರ್ತವ್ಯಕ್ಕೆ ಒಳಪಟ್ಟು ಆಸ್ವತ್ತಿನ ಮೇಲೆ ಪಡೆಯುವ ಸ್ವಾಧಿನದ ಮೂಲಕ ಸ್ಥಾಪಿತವಾಗುವ ವೈಧಿಕ ಸಂಬಂಧ (ಟ್ರಸ್ಟ್).

ಪ್ರಾಚೀನ ಭಾರತದಲ್ಲಿ[ಬದಲಾಯಿಸಿ]

ನ್ಯಾಸ ಎಂಬ ಪದವನ್ನು ಇಡು ಗಂಟು, ಇಡಲ್ಪಟ್ಟದ್ದು ಎಂಬ ಅರ್ಥದಲ್ಲಿ ಪ್ರಾಚೀನ ಸಂಸ್ಕøತ ಸಾಹಿತ್ಯದಲ್ಲಿ ಬಳಸಲಾಗಿದೆ. ಭಾರತದ ಪ್ರಾಚೀನ ನ್ಯಾಯಶಾಸ್ತ್ರದಲ್ಲಿ ನ್ಯಾಸ ಎಂಬ ವಿಶಿಷ್ಟ ನ್ಯಾಯಿಕ ಕಲ್ಪನೆ ಇತ್ತೆಂಬುದೂ ಅದು ಒತ್ತೆಗಿಂತ ಸ್ವಲ್ಪ ಭಿನ್ನವಾಗಿತ್ತೆಂಬುದೂ ಹಿಂದೂ ಧರ್ಮಶಾಸ್ತ್ರದಿಂದ ತಿಳಿದುಬರುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಆಸ್ತಿಯನ್ನು ನ್ಯಾಸವಾಗಿ ಇಡುವುದರ ಉಲ್ಲೇಖವಿದೆ.

ಧಾರ್ಮಿಕ ಸಾಮಾಜಿಕ ಉದ್ದೇಶಗಳನ್ನು ಹೊಂದಿದ್ದು ಈಗಿನ ನ್ಯಾಸಕ್ಕೆ ಹೋಲಿಕೆಯಾಗುವಂಥ ವೈಧಿಕ ಸಂಬಂಧಗಳು ಪ್ರಾಚೀನ ಭಾರತದಲ್ಲಿ ಅಸ್ತಿತ್ವದಲ್ಲಿದ್ದುವು. ಅವಿಭಕ್ತ ಕುಟುಂಬದ ಕರ್ತನ ಹೊಣೆಗಾರಿಕೆ ಇಂಥದು. ಇಸ್ಲಾಮೀ ನ್ಯಾಯದಲ್ಲೂ ನ್ಯಾಸದಂಥ ವ್ಯವಸ್ಥೆಗಳನ್ನು ಕಾಣಬಹುದಾಗಿದೆ. ಅಣ್ಣ-ತಮ್ಮಂದಿರ ಉಸ್ತುವಾರಿಯಲ್ಲಿರುವ-ಮೃತ ತಂದೆಯ-ಸ್ವತ್ತಿನಲ್ಲಿ ಹೆಣ್ಣು ಮಕ್ಕಳಿಗೆ ಸಲ್ಲುವ ಪಾಲು, ಗಂಡನಲ್ಲಿ ಉಳಿದಿರುವ-ಹೆಂಡತಿಗೆ ಬರಬೇಕಾದ-ಡೋವರ್ ಹಣ (ಒಂದು ರೀತಿಯ ಸ್ತ್ರೀಧನ) ಇವು ನ್ಯಾಸಸ್ವತ್ತು ಮತ್ತು ನ್ಯಾಸಧನಗಳನ್ನು ಹೋಲುತ್ತವೆ.

ಇಂಗ್ಲೆಂಡಿನಲ್ಲಿ[ಬದಲಾಯಿಸಿ]

ಇಂಗ್ಲೆಂಡಿನಲ್ಲಿ ನ್ಯಾಸವನ್ನು ಕುರಿತ ನ್ಯಾಯಸೂತ್ರಗಳು ರೂಪುಗೊಳ್ಳಲು ಆರಂಭವಾದ್ದು ಸುಮಾರು 11ನೆಯ ಶತಮಾನದಲ್ಲಿ, ಯೂಸ್ ಅಥವಾ ಬಳಸು ಎಂಬ ನ್ಯಾಯಿಕ ಪದ್ಧತಿಯನ್ನು ವಕೀಲರು ಕಂಡುಹಿಡಿದಿದ್ದರು. ಇನ್ನೊಬ್ಬನ ಪ್ರಯೋಜನಕ್ಕಾಗಿ ಒಬ್ಬನಿಗೆ ಸ್ವತ್ತನ್ನು ವರ್ಗಾಯಿಸುವ ಪದ್ಧತಿ ಇದು. ವರ್ಗ ಪಡೆದಾತ ಆ ಸ್ವತ್ತಿನ ಪ್ರಯೋಜನವನ್ನು ಇನ್ನೊಬ್ಬನಿಗೆ ನೀಡುವುದು ಅವನ ಕರ್ತವ್ಯವಾಗಿತ್ತು. ಅಥವಾ ಅಂಥ ಪ್ರಯೋಜನವನ್ನು ಪಡೆಯಲು ಅನುಮತಿ ದೊರಕಿಸಲಾಗುತ್ತಿತ್ತು. ಸುಮಾರು 300 ವರ್ಷಗಳ ಕಾಲ ಈ ಪದ್ಧತಿ ಬಳಕೆಯಲ್ಲಿದ್ದರೂ 15ನೆಯ ಶತಮಾನದ ವರೆಗೆ ಇಂಗ್ಲೆಂಡಿನ ನ್ಯಾಯಾಲಯಗಳು ಈ ವಿಷಯದಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸುತ್ತಿರಲಿಲ್ಲ. ಈ ಪದ್ಧತಿಯ ವಿವಿಧ ವ್ಯವಸ್ಥೆಗಳು ಕಾನೂನಿಗೂ ಜನರಿಗೂ ತೊಡಕುಗಳನ್ನೊಡ್ಡ ಹತ್ತಿದುವು. ಇದರಿಂದಾಗಿ 1535ರಲ್ಲಿ ಪಾರ್ಲಿಮೆಂಟು ಒಂದು ಅಧಿನಿಯಮವನ್ನು ಜಾರಿಗೆ ತಂದು ಅನೇಕ ರೀತಿಯ ಬಳಕೆಗಳನ್ನು ರದ್ದುಮಾಡಿತು. ಆದರೆ ನ್ಯಾಯಾಲಯಗಳು ಈ ಅಧಿನಿಯಮಕ್ಕೆ ವಿಶೇಷಾರ್ಥ ನೀಡಿದುವು. ನ್ಯಾಸಧಾರಿಗೆ ವಿಶೇಷವಾದ ಕರ್ತವ್ಯಗಳನ್ನು ವಿಧಿಸಲಾಗಿದ್ದ ವ್ಯವಸ್ಥೆಗಳನ್ನು ರದ್ದು ಮಾಡಲಿಲ್ಲ. ಹೀಗೆ ಉಳಿದುಕೊಂಡ ವ್ಯವಸ್ಥೆಗಳು ಮುಂದೆ ನ್ಯಾಸಗಳಾಗಿ ಪರಿಣಮಿಸಿದುವು ಎನ್ನಬಹುದಾಗಿದೆ.

ಆಧುನಿಕ ಭಾರತದಲ್ಲಿ[ಬದಲಾಯಿಸಿ]

1882ರ ಭಾರತೀಯ ನ್ಯಾಸಗಳ ಅಧಿನಿಯಮಕ್ಕೆ ಇಂಗ್ಲಿಷ್ ನ್ಯಾಯಸೂತ್ರಗಳು ತಳಹದಿಯಾಗಿವೆ. ಹಿಂದೂ ಧಾರ್ಮಿಕ ದತ್ತಿಗಳು, ಮುಸ್ಲಿಮರ ವಕ್ಛ್‍ಗಳು ಮತ್ತು ಎರಡೂ ಧರ್ನುಗಳನ್ವಯದ ನ್ಯಾಸದಂಥ ವೈದಿಕ ಸಂಬಂಧಗಳು-ಇವನ್ನು ಬಿಟ್ಟು ಉಳಿದ ರೀತಿಯ ಖಾಸಗಿ ನ್ಯಾಸಗಳಿಗೆಲ್ಲ 1882ರ ನ್ಯಾಸಗಳ ಅಧಿನಿಯಮ ಅನ್ವಯವಾಗುತ್ತದೆ. ಇಂಗ್ಲಿಷ್ ನ್ಯಾಯದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನ್ಯಾಯಿಕ ಸ್ವಾಮ್ಯ, ನೀತಿ-ನಿಮಿತ್ತಸ್ವಾಮ್ಯ ಎಂಬ ವಿಭಿನ್ನ ರೂಪಗಳನ್ನು ಭಾರತದ ಕಾನೂನಿನಲ್ಲಿ ಅಳವಡಿಸಿಲ್ಲ. ಇವನ್ನು ಬಿಟ್ಟರೆ, ಸಾಮಾನ್ಯವಾಗಿ ಈ ಕಾನೂನಿನ ನಿರ್ವಚನಕ್ಕೆ ಇಂಗ್ಲಿಷ್ ನ್ಯಾಯ ಸೂತ್ರಗಳ ಹಾಗೂ ನ್ಯಾಯಾಲಯಗಳ ತೀರ್ಪುಗಳ ನೆರವನ್ನು ಪಡೆಯಬಹುದಾಗಿದೆ.

1882ರ ಭಾರತೀಯ ನ್ಯಾಸಗಳ ಅಧಿನಿಯಮದಲ್ಲೂ ನ್ಯಾಸ ಪದದ ವ್ಯಾಖ್ಯೆಯನ್ನು ಕೊಡಲಾಗಿದೆಯಲ್ಲದೆ ಅನೇಕ ಪದಗಳ ಪರಸ್ಪರ ಸಂಬಂಧವನ್ನೂ ವಿವರವನ್ನೂ ನೀಡಿದೆ. ನ್ಯಾಸಕರ್ತ, ನ್ಯಾಸಧಾರಿ (ಟ್ರಸ್ಟೀ), ನ್ಯಾಸಸ್ವತ್ತು, ನ್ಯಾಸಧನ, ಫಲಾನುಭವಿ, ಫಲಾನುಭವಿಯ ಹಕ್ಕು, ನ್ಯಾಸಪತ್ತ, ನ್ಯಾಸಭಂಗ, ನ್ಯಾಸನಿರಾಕರಣ ಮುಂತಾದ ಪದಗಳು ಮುಖ್ಯವಾದವು. ಫಲಾನುಭವಿಯ ಹಿತವನ್ನು ನ್ಯಾಸಧಾರಿ ರಕ್ಷಿಸುತ್ತಾನೆ-ಎಂಬ ನ್ಯಾಸಕರ್ತನ ನಂಬುಗೆಯೇ ನ್ಯಾಸಕ್ಕೆ ಮೂಲ ಆಧಾರ. ಸಾಮಾನ್ಯವಾಗಿ ನ್ಯಾಸ ಪತ್ರದ ಮೂಲಕ ನ್ಯಾಸ ಅಸ್ತಿತ್ವಕ್ಕೆ ಬರುತ್ತದೆ. ಆ ಪತ್ರ ನೋಂದಣಿಯಾಗಬೇಕು. ನ್ಯಾಸದ ಸ್ವತ್ತು ಅಥವಾ ವ್ಯಾಸಧನವನ್ನು ನ್ಯಾಸಧಾರಿಗೆ ಒಪ್ಪಿಸಬೇಕು. ನ್ಯಾಸಧಾರಿ ನ್ಯಾಸವನ್ನು ನಿರಾಕರಿಸಿರಬಾರದು. ನ್ಯಾಸದ ಉದ್ದೇಶ ಕಾನೂನುಬಾಹಿರವಾಗಿರಬಾರದು. ಈ ನಿಯಮಗಳ ಪೂರೈಕೆಯಾದಾಗ ಮಾತ್ರ ಒಂದು ನ್ಯಾಸ ಅಸ್ತಿತ್ವಕ್ಕೆ ಬಂದು ಫಲಕಾರಿಯಾಗಲು ಸಾಧ್ಯವಾಗುತ್ತದೆ.

ವ್ಯಾಖ್ಯೆ ಮತ್ತು ವರ್ಗೀಕರಣ[ಬದಲಾಯಿಸಿ]

ನ್ಯಾಸಗಳ ವರ್ಗೀಕರಣದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ರಚನೆ, ಸ್ವರೂಪ ಮತ್ತು ಉದ್ದೇಶಗಳ ದೃಷ್ಟಿಯಿಂದ ನ್ಯಾಸಗಳನ್ನು ಮುಂದೆ ಹೇಳಿರುವ ರೀತಿಯಲ್ಲಿ ವರ್ಗೀಕರಿಸಲಾಗಿದೆ. ಅಭಿವ್ಯಕ್ತ ಹಾಗೂ ಇಂಗಿತ ನ್ಯಾಸಗಳು, ಪರಿಣಾಮಿ ಮತ್ತು ಊಹ್ಯ ನ್ಯಾಸಗಳು, ಪಡೆದ ನ್ಯಾಸ ಮತ್ತು ನಿಷ್ಪಾದ್ಯ ನ್ಯಾಸಗಳು, ಪೂರ್ಣ ಮತ್ತು ಅಪರಿಪೂರ್ಣ ನ್ಯಾಸಗಳು, ಖಾಸಗಿ ಮತ್ತು ಸಾರ್ವಜನಿಕ ನ್ಯಾಸಗಳು, ನ್ಯಾಯಸಮ್ಮತ ಹಾಗೂ ನ್ಯಾಯಬಾಹಿರ ನ್ಯಾಸಗಳು, ಪ್ರಾರ್ಥನಾತ್ಮಕ ನ್ಯಾಸಗಳು ಮತ್ತು ಗುಪ್ತನ್ಯಾಸಗಳು.

ನ್ಯಾಸಗಳಿಗೆ ಸಂಬಂಧಿಸಿದ ಭಾರತೀಯ ನ್ಯಾಯಸೂತ್ರಗಳು ವೈವಿಧ್ಯಪೂರಿತವೂ ವೈಶಿಷ್ಟ್ಯಪೂರ್ಣವೂ ಆಗಿವೆ.

ಪೂರ್ಣ ಮತ್ತು ಅಪರಿಪೂರ್ಣ ನ್ಯಾಸಗಳಲ್ಲಿರುವ ವ್ಯತ್ಯಾಸವೆಂದರೆ ಪೂರ್ಣನ್ಯಾಸ ಆಚರಣೆಗೆ ತರಬಹುದಾದ ಸ್ವರೂಪದಲ್ಲಿರುತ್ತದೆ. ಅಪರಿಪೂರ್ಣ ನ್ಯಾಸ ಎಲ್ಲ ರೀತಿಯಲ್ಲೂ ಪೂರ್ಣವಾಗಿರದ ಕಾರಣ ಆಚರಣೆಗೆ ಬರಲು ಶಕ್ತವಾಗಿರುವುದಿಲ್ಲ. ಸ್ವೀಕೃತ ನ್ಯಾಸ ಸೃಷ್ಟ ರೂಪದಲ್ಲಿದ್ದು ನ್ಯಾಸಧಾರಿ ಕೇವಲ ನ್ಯಾಸಪತ್ರದ ನಿರ್ದೇಶನದಂತೆ ನಡೆಯಬೇಕಾಗಿರುತ್ತದೆ. ನಿಷ್ಪಾದ್ಯ ನ್ಯಾಸದಲ್ಲಿ ನ್ಯಾಸಧಾರಿ ತನ್ನ ವಿವೇಚನಾಶಕ್ತಿಯನ್ನು ಉಪಯೋಗಿಸಬೇಕಾಗುತ್ತದೆ. ಇಲ್ಲಿ ನ್ಯಾಸಕರ್ತ ತನ್ನ ಉದ್ದೇಶಗಳನ್ನು ಸೂಚಿಸಿ ಅವನ್ನು ನ್ಯಾಸಧಾರಿ ತನಗೆ ಸಾಧ್ಯವಾಗುವ ಮಟ್ಟಿಗೆ ನಿರ್ವಹಿಸಬೇಕೆಂಬ ಉಕ್ತಿ ಇರುತ್ತದೆ. ಇಂಗಿತ ನ್ಯಾಸ, ಪರಣಾಮಿ ನ್ಯಾಸ, ಗುಪ್ತ ನ್ಯಾಸ ಹಾಗೂ ಊಹ್ಯ ನ್ಯಾಸ-ಈ ನಾಲ್ಕು ರೀತಿಯ ನ್ಯಾಸಗಳು ನ್ಯಾಯಾಲಯದ ತೀರ್ಪುಗಳ ಪರಿಣಾಮವಾಗಿ ಅಸ್ತಿತ್ವಕ್ಕೆ ಬಂದರೂ ಇವುಗಳಲ್ಲಿ ವ್ಯತ್ಯಾಸವನ್ನು ಕಾಣಬಹುದಾಗಿದೆ. ಪ್ರಾರ್ಥನಾತ್ಮಕ ನ್ಯಾಸಗಳ ರಚನೆಯಲ್ಲಿ ಪ್ರಾರ್ಥನಾತ್ಮಕ ಸೂಚ್ಯ ಪದಗಳು ಇರುತ್ತವೆ. ರಚನೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದ್ದೆಂದರೆ ಅಭಿವ್ಯಕ್ತ ನ್ಯಾಸ. ಇದು ಲಿಖಿತ ರೂಪದಲ್ಲಿದ್ದು, ಸರಳ ಹಾಗೂ ಸ್ಪಷ್ಟವಾಗಿರುತ್ತದೆ. ಆ ಪ್ರಯುಕ್ತ ನ್ಯಾಯಾಲಯದ ನಿರ್ವಚನದ ಆವಶ್ಯಕತೆ ಇರುವುದಿಲ್ಲ ಈ ರೀತಿಯ ನ್ಯಾಸಗಳಲ್ಲಿ ನ್ಯಾಸದ ಉದ್ದೇಶ, ನಿರ್ವಹಣೆ ಎಲ್ಲವನ್ನೂ ಸ್ಪಷ್ಟವಾಗಿ ನಿರೂಪಿಸಲಾಗಿರುತ್ತದೆ.

ನ್ಯಾಸಗಳ ವರ್ಗೀಕರಣದಲ್ಲಿ ಅತಿ ಮುಖ್ಯವಾದ್ದು ಖಾಸಗಿ ಮತ್ತು ಸಾರ್ವಜನಿಕ ನ್ಯಾಸಗಳು. ಒಂದು ನ್ಯಾಸ ಪರಿಪೂರ್ಣವಾಗಿದ್ದು, ಕೂಡಲೇ ಆಚರಣೆಗೆ ಬಾರದೆ, ಯಾವುದೋ ನಿಶ್ಚಿತ ಘಟನೆ ಸಂಭವಿಸಿದರೆ ಇಲ್ಲವೇ ಸಂಭವಿಸದಿದ್ದರೆ ಮಾತ್ರ ಆಚರಣೆಗೆ ಬರಬಹುದಾಗಿದ್ದರೆ ಅದು ಸಂಭಾವ್ಯ ನ್ಯಾಸ. ಸಾರ್ವನಿಕ ನ್ಯಾಸ ಸಾಮಾನ್ಯವಾಗಿ ಎಲ್ಲರ ಅಥವಾ ವಿಶಿಷ್ಟ ವರ್ಗದವರ ಹಿತಕ್ಕಾಗಿ ಇರುತ್ತದೆ. ಹಾಗೆ ನೋಡಿದರೆ ಸಾರ್ವಜನಿಕ ನ್ಯಾಸಗಳೆಲ್ಲ ಸಾಧಾರಣವಾಗಿ ಧರ್ಮಾರ್ಥ ನ್ಯಾಸಗಳಾಗಿರುತ್ತವೆ. ಖಾಸಗಿ ನ್ಯಾಸದಲ್ಲಿ ಒಂದು ವಿಶಿಷ್ಟ ವ್ಯಕ್ತಿ ಫಲಾನುಭವಿಯಾಗಿರಬಹುದು; ಅಥವಾ ಕೆಲವು ನಿರ್ದಿಷ್ಟ ಜನರು ಮಾತ್ರ ಫಲಾನುಭವಿಗಳಾಗಿರಬಹುದು. ಸಾರ್ವಜನಿಕ ನ್ಯಾಸಗಳು ಶಾಶ್ವತವಾಗಿ ಉಳಿಯಬಹುದಾದವುಗಳಾಗಿರುತ್ತವೆ. ಅಂದರೆ ಅವಕ್ಕೆ ಕಾಲದ ನಿಗದಿ ಇರುವುದಿಲ್ಲ. ಖಾಸಗಿ ನ್ಯಾಸಗಳು ಒಂದು ವಿಶಿಷ್ಟ ಅವಧಿಯವರೆಗೆ ಇರುತ್ತವೆ. ಉದ್ದೇಶ ಸಾಧನೆಯಾದ ಮೇಲೆ ನ್ಯಾಸ ರದ್ದುಗೊಳ್ಳಬೇಕಾಗುತ್ತದೆ. ಹುಟ್ಟಬಹುದಾದ ಮಗುವಿನ ಹಿತರಕ್ಷಣೆಗಾಗಿ ಒಂದು ಖಾಸಗಿ ನ್ಯಾಸವನ್ನು ರಚಿಸಿರಬಹುದು. ಆ ಮಗು ಹುಟ್ಟಿ ಇಪ್ಪತ್ತೊಂದು ವರ್ಷಗಳನ್ನು ದಾಟಿದರೆ ಆ ನ್ಯಾಸ ಮುಕ್ತಾಯ ಘಟ್ಟಕ್ಕೆ ಬರುತ್ತದೆ.

ಖಾಸಗಿ ನ್ಯಾಸಗಳನ್ನು ಯಾರೂ ರಚಿಸಬಹುದು. ಅಂಥ ನ್ಯಾಸದ ಸ್ವತ್ತು ಎಂಥದಾಗಿರಬೇಕು. ನ್ಯಾಸ ಅಸ್ತಿತ್ವಕ್ಕೆ ಬರುವ ಮತ್ತು ರದ್ದುಗೊಳ್ಳುವ ಸಂದರ್ಭಗಳು ಯಾವುವು ಎಂಬುದನ್ನು 1882ರ ಭಾರತೀಯ ನ್ಯಾಸಗಳ ಅಧಿನಿಯಮದಲ್ಲಿ ಹೇಳಲಾಗಿದೆ. ಕರಾರುಗಳನ್ನು ಮಾಡಿಕೊಳ್ಳಲು ಸಮರ್ಥನಾದವನು ಮಾತ್ರ ನ್ಯಾಸಕರ್ತನಾಗಬಹುದು. ಈ ಅಧಿನಿಯಮದಲ್ಲಿ ನ್ಯಾಸಧಾರಿಯ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ಹಾಗೆಯೇ ನ್ಯಾಸಧಾರಿಯ ಹಕ್ಕುಗಳು ಮತ್ತು ಅಧಿಕಾರಗಳನ್ನು ವಿವರಿಸಲಾಗಿದೆ. ನ್ಯಾಸಧಾರಿ ಒಮ್ಮೆ ಒಪ್ಪಿಕೊಂಡ ಮೇಲೆ ನ್ಯಾಸವನ್ನು ನಿರಾಕರಿಸಬಹುದು. ಮುಖ್ಯ ಸಿವಿಲ್ ನ್ಯಾಯಾಧೀಶನ ಅಥವಾ ಯೋಗ್ಯನೂ ವಯಸ್ಕನೂ ಆದ ಫಲಾನುಭವಿಯ ಅನುಮತಿ ಪಡೆದು, ಇಲ್ಲವೇ ನ್ಯಾಸಪತ್ರದಲ್ಲಿ ಉಕ್ತವಾದದ ರೀತಿಯಲ್ಲಿ ಮಾತ್ರ, ನ್ಯಾಸವನ್ನು ನಿರಾಕರಿಸಬಹುದು. ನ್ಯಾಸಧಾರಿ ನಿಯೋಗ್ಯ ನಾಗಬಹುದಾದ ಸಂದರ್ಭಗಳು, ಫಲಾನುಭವಿಯ ಹಕ್ಕುಗಳು ಹಾಗೂ ಹೊಣೆಗಾರಿಕೆಗಳು, ನ್ಯಾಸದಂಥ ಹೊಣೆಗಾರಿಕೆಗಳು ಇವೇ ಮುಂತಾದ ವಿಷಯಗಳನ್ನು ಈ ಕಾನೂನಿನಲ್ಲಿ ಹೇಳಲಾಗಿದೆ.

ಭಾರತದ ಕಾನೂನಿನನ್ವಯ ನ್ಯಾಸಗಳನ್ನು ವಿವೇಚಿಸುವಾಗ ಖಾಸಗಿ ನ್ಯಾಸಗಳನ್ನಲ್ಲದೆ ಸಾರ್ವಜನಿಕ ನ್ಯಾಸಗಳನ್ನೂ ಹಿಂದೂ ಮತ್ತು ಮುಸ್ಲಿಮ್ ಮತೀಯ ನ್ಯಾಸಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಮತೀಯ ನ್ಯಾಸಗಳು ಕೂಡ ಖಾಸಗಿ ಮತ್ತು ಸಾರ್ವಜನಿಕ ನ್ಯಾಸಗಳಾಗಿರಬಹುದು. ಮುಸ್ಲಿಮರ ಮತೀಯ ನ್ಯಾಸಗಳಾದ ವಕ್ಛ್‍ಗಳ ಸಂಬಂಧದಲ್ಲಿ ವಕ್ಛ್‍ಗಳ ಕಾನೂನು ಆಚರಣೆಯಲ್ಲಿದೆ. ಹಾಗೆಯೇ ಹಿಂದೂ ಧಾರ್ಮಿಕ ದತ್ತಿಗಳ ಸಂಬಂಧದಲ್ಲಿ ಬೇರೆಬೇರೆ ಕಾನೂನುಗಳು ಅಸ್ತಿತ್ವದಲ್ಲಿವೆ. ಹಿಂದೆ ಹೇಳಿದ ಮತೀಯ ಸಾರ್ವಜನಿಕ ಧರ್ಮಾರ್ಥ ನ್ಯಾಸಗಳನ್ನು ಬಿಟ್ಟರೆ, ಉಳಿದ ಸಾರ್ವಜನಿಕ ನ್ಯಾಸಗಳ ಸಂಬಂಧದಲ್ಲಿ 1890ರ ಧಮಾರ್ಥ ದತ್ತಿಗಳ ಅಧಿನಿಯಮ ಮತ್ತು 1920ರ ಮತೀಯ ಮತ್ತು ಧರ್ಮಾರ್ಥ ನ್ಯಾಸಗಳ ಅಧಿನಿಯಮ ಆಚರಣೆಯಲ್ಲಿವೆ.

1920ರ ಅಧಿನಿಯಮದಲ್ಲಿ ಧರ್ಮಾರ್ಥ ಪದದ ವ್ಯಾಖ್ಯೆ ಇಲ್ಲ. ಆದರೆ 1890ರ ಧರ್ಮಾರ್ಥ ದತ್ತಿಗಳ ಕಾನೂನಿನಲ್ಲಿ ಧರ್ಮಾರ್ಥದ ಉದ್ದೇಶವನ್ನು ವಿವರಿಸಲಾಗಿದೆ. ಉತ್ತರಾಧಿಕಾರದ ಅಧಿನಿಯಮ, ವರಮಾನ ತೆರಿಗೆಯ ಅಧಿನಿಯಮ, ಸ್ವತ್ತಿನ ವರ್ಗಾವಣೆ ಅಧಿನಿಯಮ ಇವುಗಳ ನೆರವಿನಿಂದ ಧರ್ಮಾರ್ಥ ಪದದ ವಿವರಣೆಯನ್ನು ಪಡೆದು ಆ ಉದ್ದೇಶಗಳಿಗಾಗಿ ನ್ಯಾಸಗಳನ್ನು ಸ್ಥಾಪಿಸಿಕೊಳ್ಳಬಹುದಾಗಿವೆ. ಉದ್ದೇಶಗಳು ಸಮಾಜಕಲ್ಯಾಣಕ್ಕಾಗಿ ಇರಬೇಕು; ಕಾನೂನು ಬಾಹಿರವಾಗಿರಬಾರದು. ರಾಜಕೀಯ ಉದ್ದೇಶಗಳಿಗಾಗಿ ನ್ಯಾಸಗಳನ್ನು ರಚಿಸಲಾಗದು. ಕಲೆ, ವಿದ್ಯೆ, ಸಂಗೀತ ಮುಂತಾದವುಗಳ ಬಗ್ಗೆ ನ್ಯಾಸಗಳನ್ನು ರಚಿಸಿಕೊಂಡು, ತನ್ಮೂಲಕ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಯಿಸಬಹುದು. ಸಮಾಜ ಸುಧಾರಣೆ ಮತ್ತು ಬಡತನ ನಿವಾರಣೆಯಂಥ ಉದ್ದೇಶ ಸಾಧನೆಗಾಗಿಯೂ ನ್ಯಾಸಗಳನ್ನು ಸ್ಥಾಪಿಸಿಕೊಳ್ಳಬಹುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನ್ಯಾಸ&oldid=1156485" ಇಂದ ಪಡೆಯಲ್ಪಟ್ಟಿದೆ