ನೆಗ್ಗಿಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೆಗ್ಗಿಲು ಜೈóಗೊಫಿಲೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಪಾಳು ಹೊಲ ಮುಂತಾದ ಸ್ಥಳಗಳಲ್ಲಿ ಬೆಳೆಯುತ್ತದೆ. ಟ್ರಿಬ್ಯುಲಸ್ ಟೆರೆಸ್ಟ್ರಿಸ್ ಶಾಸ್ತ್ರೀಯ ಹೆಸರು. ವಡದ ಕಾಂಡ ಮತ್ತು ಎಲೆಗಳ ಮೇಲೆಲ್ಲ ಒತ್ತಾಗಿ ರೋಮಗಳು ಬೆಳೆದುಕೊಂಡಿವೆ. ಎಲೆಗಳು ಸಂಯುಕ್ತ ಮಾದರಿಯವು; ಅಭಿಮುಖ ವಿನ್ಯಾಸದಲ್ಲಿ ಜೋಡಣೆಗೊಂಡಿವೆ. ಎಲೆಗಳ ತೊಟ್ಟಿನ ಬಳಿ ವೃಂತಪತ್ರಗಳುಂಟು.

ಸಾಮಾನ್ಯವಾಗಿ ಗಿಡದಲ್ಲಿ ವರ್ಷವಿಡೀ ಹೂ ಅರಳುವುವು. ಹೂ ಅರಳುವುದು ಎಲೆಯ ಕಂಕುಳಲ್ಲಿ. ಒಂಟೊಂಟಿಯಾಗಿ. ಹೂವಿನ ಬಣ್ಣ ಹಳದಿ. ಪುಷ್ಪಪಾತ್ರೆಯ ಭಾಗಗಳು ಮತ್ತು ದಳಗಳು ಬಿಡಿಬಿಡಿಯಾಗಿವೆ. ಕೇಸರಗಳು ದಳಗಳ ಎರಡರಷ್ಟು ಸಂಖ್ಯೆಯಲ್ಲಿವೆ. ಅಂಡಾಶಯ ಉಚ್ಚಸ್ಥಾನದ್ದು. ಹಣ್ಣಿನಲ್ಲಿ ಎರಡು ಮುಳ್ಳುಗಳಿವೆ. ಇವುಗಳ ಸಹಾಯದಿಂದ ಹಣ್ಣು ಪ್ರಾಣಿಗಳ ಚರ್ಮಕ್ಕೆ, ತುಪ್ಪಟಕ್ಕೆ ಇಲ್ಲವೆ ಕಾಲಿಗೆ ಚುಚ್ಚಿಕೊಂಡು ಹಣ್ಣು ಪ್ರಸಾರವಾಗುತ್ತದೆ.

ಈ ಗಿಡದ ಪ್ರತಿಯೊಂದು ಭಾಗಕ್ಕೂ ಔಷಧಿ ಮಹತ್ತ್ವ ಉಂಟು. ಯುನಾನಿ ಆಯುರ್ವೇದ ಪದ್ಧತಿಯ ಔಷಧಿಗಳಲ್ಲಿ ಎಲೆ, ಬೇರು, ಹಣ್ಣುಗಳ ಉಪಯೋಗ ಪ್ರತಿಪಾದಿತವಾಗಿದೆ. ಚೀನ, ಯೂರೋಪು ಖಂಡದ ದಕ್ಷಿಣ ದೇಶಗಳಲ್ಲೂ ಇದರ ಉಪಯೋಗ ಸೂಚಿತವಾಗಿದೆ.

ಇದರ ಹಣ್ಣು ಶಮನಕಾರಕ, ಮೂತ್ರಸ್ರಾವ ಉತ್ತೇಜಕ, ಕಾಮೋತ್ತೇಜಕ, ಹಾಗೂ ಮೂತ್ರನಾಳಗಳಲ್ಲಿ ಉಂಟಾಗುವ ಕಲ್ಲುಗಳನ್ನು ಕರಗಿಸುತ್ತದೆ. ಎಲೆಗಳು ಬಲವೃದ್ಧಿಕಾರಕ, ರಕ್ತವನ್ನು ಹೆಚ್ಚಿಸುತ್ತವೆ. ಗಿಡವನ್ನು ನೆನೆಹಾಕಿದ ನೀರನ್ನು ಮುಕ್ಕಳಿಸಿದರೆ ಬಾಯಲ್ಲಿನ (ಒಸಡಿನ) ಹುಣ್ಣುಗಳು ಗುಣವಾಗುತ್ತವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: