ವಿಷಯಕ್ಕೆ ಹೋಗು

ನೂರ್ ಜಹಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಹಾಂಗೀರನ ಜೀವನದ ಅತ್ಯಂತ ಮಹತ್ತ್ವಪೂರ್ಣವಾದ ಘಟನೆಯೆಂದರೆ ಇವನು ನೂರ್ ಜಹಾನಳನ್ನು ಮದುವೆಯಾದದ್ದು (1611). ಪರ್ಷಿಯಾದಿಂದ ಬಂದಿದ್ದ ಮಿರ್ಜಾ ಘಯಾಸ್ ಬೇಗನ ಮಗಳಾದ ಮೆಹರುನ್ನೀಸಾ 17ನೆಯ ವಯಸ್ಸಿನಲ್ಲಿ ಅಲಿಕುಲಿ ಬೇಗನನ್ನು ಮದುವೆಯಾಗಿದ್ದಳು. ಷೇರ್ ಆಪ್ಘನ್ ಎಂಬ ಬಿರುದನ್ನು ಪಡೆದಿದ್ದ ಈತ ಬಂಗಾಲದ ಬದ್ರ್ವಾನನ್ನು ಜಹಾಂಗೀರನಿಂದ ಜಾಗೀರಾಗಿ ಪಡೆದಿದ್ದ. ಆದರೆ ಅವಿಧೇಯನಾಗಿ ವರ್ತಿಸಿದ ಈತನನ್ನು ಜಹಾಂಗೀರನ ಆದೇಶದಂತೆ ಬಂಗಾಲದ ಪ್ರಾಂತ್ಯಾಧಿಕಾರಿ ಎದುರಿಸಿದ. ಪ್ರಾಂತ್ಯಾಧಿಕಾರಿಯನ್ನೇ ಕೊಂದ ಷೇರ್ ಆಪ್ಘನನನ್ನು 1607ರಲ್ಲಿ ಸೈನಿಕರು ಸೆರೆಹಿಡಿದು ಕೊಂದರು. ಮೆಹರುನ್ನೀಸಳನ್ನು ರಾಜಧಾನಿಗೆ ಒಯ್ಯಲಾಯಿತು. ಅರಮನೆಯಲ್ಲಿ ಊಳಿಗಕ್ಕೆ ಸೇರಿದ್ದ ಇವಳ ಸೌಂದರ್ಯಕ್ಕೆ ಮರುಳಾಗಿ ಜಹಾಂಗೀರ್ ಇವಳನ್ನು ಮದುವೆಯಾಗಿ ನೂರ್ ಮಹಲ್ (ಅರಮನೆಯ ಬೆಳಕು) ಎಂದು ಕರೆದ. ನೂರ್ ಜಹಾನ್ (ವಿಶ್ವದ ಬೆಳಕು) ಎಂಬುದ ಅನಂತರ ಇವಳಿಗೆ ಬಂದ ಹೆಸರು. ವ್ಯವಹಾರಜ್ಞಾನ, ಬುದ್ಧಿಕುಶಲತೆ ಮತ್ತು ಮಹತ್ತ್ವಾಕಾಂಕ್ಷೆಗಳಿಂದ ಕೂಡಿದ್ದ ಈಕೆ ಸಾಮ್ರಾಟನನ್ನು ಮರುಳುಗೊಳಿಸಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಎಲ್ಲವನ್ನೂ ನಿಯಂತ್ರಿಸತೊಡಗಿದಳು. ರಾಜ್ಯಭಾರದಲ್ಲಿ ಜಹಾಂಗೀರನ ಆಸಕ್ತಿ ಕ್ರಮೇಣ ಕಡಿಮೆಯಾಯಿತು. ಮದ್ಯಪಾನ ಮಾಂಸಾಹಾರಗಳಲ್ಲಿ ಕಾಲಕಳೆಯುತ್ತಿದ್ದ ಜಹಾಂಗೀರನನ್ನು ಮೂಲೆಗೆ ತಳ್ಳಿ ನೂರ್‍ಜಹಾನಳೇ ಸರ್ವಾಧಿಕಾರಿಣಿಯಾದಳು. ಅವಳ ಹೆಸರನ್ನು ಟಂಕಿಸಿದ ನಾಣ್ಯಗಳೂ ಚಲಾವಣೆಗೆ ಬಂದುವು.