ವಿಷಯಕ್ಕೆ ಹೋಗು

ನುಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನುಸಿಯು ಅರಾಕ್ನಿಡಾ ವರ್ಗಕ್ಕೆ ಸೇರಿದ ಸಣ್ಣ ಗಾತ್ರದ ಸಂಧಿಪದಿ. ಕೆಲವು ಕಣ್ಣಿಗೆ ಕಾಣುವಷ್ಟು ದೊಡ್ಡವಾಗಿದ್ದರೆ ಇನ್ನು ಕೆಲವು ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿರುವುವು. ಉಣ್ಣೆ ಮತ್ತು ಕೆಂಪು ಮಖಮಲ್ಲು ನುಸಿಗಳು ದೊಡ್ಡದಾಗಿ ಸುಮಾರು ಒಂದು ಸೆಂಟಿಮೀಟರ್ ಉದ್ದದವರೆಗೂ ಬೆಳೆಯುವುದುಂಟು. ದೇಹ ರಚನೆಯಲ್ಲಿ ಕೀಟಗಳಿಗೂ, ನುಸಿಗಳಿಗೂ ಬಹುಮುಖ್ಯ ವ್ಯತ್ಯಾಸಗಳಿವೆ. ನುಸಿಗಳಿಗೆ ಕುಡಿಮೀಸೆಗಳಿಲ್ಲ. ಪ್ರೌಢಕೀಟಗಳಿಗೆ ಮೂರು ಜೊತೆ ಕಾಲುಗಳಿದ್ದರೆ ನುಸಿಗಳಿಗೆ ನಾಲ್ಕು ಜೊತೆ ಕಾಲುಗಳಿವೆ. ಕೀಟಗಳಲ್ಲಿ ಶರೀರ ತಲೆ, ಎದೆ ಮತ್ತು ಉದರ ಭಾಗಗಳಾಗಿ ವಿಂಗಡವಾಗಿದೆಯಾದರೆ ನುಸಿಗಳಲ್ಲಿ ಹೀಗಿಲ್ಲ. ಉದರ ಭಾಗ ಖಂಡವಿಭಾಗವಾಗಿರದೆ ಮತ್ತು ಸಂದು ಬಿಡದೆ ಶಿರೋವಕ್ಷಕ್ಕೆ ಸೇರಿಕೊಂಡಿದೆ. ಆದ್ದರಿಂದ ದೇಹ ಭಾಗಗಳು ವಿವರವಾಗಿ ಕಾಣದೆ ಶರೀರವೆಲ್ಲ ಒಂದಾಗಿ ಕಾಣುತ್ತದೆ. ಕೆಲವು ನುಸಿಗಳ ಶರೀರ ಹಿಂದೆ ಮತ್ತು ಮುಂದೆ ಕ್ರಮೇಣ ಸಣ್ಣದಾಗಿ ಹುಳದ ಹಾಗೆ ಕಾಣುವುದುಂಟು. ನುಸಿಗಳು ಸಾಮಾನ್ಯವಾಗಿ ಮೃದುಶರೀರಿಗಳು; ಆದರೆ ಕೆಲವು ಹಿಂಸ್ರ ನುಸಿಗಳಿಗೆ ಗಡುಸಾದ ಹೊರಚರ್ಮವಿದೆ. ನುಸಿಗಳ ಬಾಯಿಭಾಗ ಕಿರಿದು. ಬಾಯಿ ಮತ್ತು ಬಾಯ ಅಂಗಗಳು ಈ ಭಾಗದಲ್ಲಿವೆ. ಇದಕ್ಕೂ ಸಂದಿಪಧಿಗಳ ತಲೆಗೂ ಯಾವ ಸಂಬಂಧವೂ ಇಲ್ಲ. ಈ ಭಾಗವನ್ನು ಕ್ಯಾಪಿಟುಲಮ್ ಎಂದು ಕರೆಯುವುದೂ ಉಂಟು. ಮುಂಭಾಗ ಮತ್ತು ಹಿಂಭಾಗಗಳಲ್ಲಿ ಮೇಲೆ ಎರಡೆರಡು ಜೊತೆ ಕಾಲುಗಳಿವೆ. ಕೆಲವು ವೇಳೆ ಬಾಯಿಭಾಗ ಮತ್ತು ಮುಂಭಾಗಗಳನ್ನು ಪ್ರೋಸೋಮವೆಂದೂ ಮತ್ತು ಉಳಿದ ಭಾಗವನ್ನು ಒಪಿಸ್ತೋಸೋಮವೆಂದೂ ಕರೆಯುವುದುಂಟು. ಒಪಿಸ್ತೋಸೋಮ ಕಾಲುಗಳ ಹಿಂದಕ್ಕಿರುವ ದೇಹಭಾಗ.

ಬೇಕರ್ ಮತ್ತು ವಾರ್ಟನ್ ಪ್ರಕಾರ ಆಕರೈನ ಗಣದಲ್ಲಿ 5 ಉಪಗಣಗಳುಂಟು:

  • ಉಪಗಣ 1. ಅಂಕೊಪ್ಯಾಲ್ಪಡ: ಇದರಲ್ಲಿ ಮೇಲ್ಭಾಗದ ಪಕ್ಕೆಗಳಲ್ಲಿ ನಾಲ್ಕು ಜೊತೆ ಶ್ವಾಸರಂಧ್ರಗಳನ್ನುಳ್ಳ ನೋಟೊಸ್ಟಿಗ್ಮ್ಯಾಟ ಹಾಗೂ ಎರಡು ಜೊತೆ ಶ್ವಾಸರಂಧ್ರಗಳನ್ನುಳ್ಳ ಹಾಲೊತೈರಾಯ್ಡಿಯ ಗುಂಪುಗಳೂ ಸೇರಿವೆ.
  • ಉಪಗಣ 2. ಮೀಸೊಸ್ಟಿಗ್ಮ್ಯಾಟ: ಕಾಲುಗಳ ಪಕ್ಕದಲ್ಲಿ ಒಂದು ಜೊತೆ ಶ್ವಾಸರಂಧ್ರಗಳಿವೆ.
  • ಉಪಗಣ 3. ಇಕ್ಸೋಡಿಡಿಸ್: ಇದರಲ್ಲಿ ಉನ್ನತಮಟ್ಟದ ಪ್ರಾಣಿಗಳ ಪರೋಪಜೀವಿಗಳಾದ ಉಣ್ಣೆಗಳೆಲ್ಲ ಸೇರಿವೆ.
  • ಉಪಗಣ 4. ಟ್ರಾಂಬಿಡಿಫಾರ್ಮಿಸ್: ಈ ನುಸಿಗಳ ಬಾಯಿ ಭಾಗದಲ್ಲಿ ಒಂದು ಜೊತೆ ಶ್ವಾಸರಂಧ್ರಗಳೂ ಇವೆ. ವಿವಿಧ ನುಸಿಗಳನ್ನೊಳಗೊಂಡ ಈ ಉಪಗಣದಲ್ಲಿ ಸಸ್ಯಗಳ ಮೇಲೆ ಜೀವಿಸುವ ನುಸಿಗಳಾದ ಇಲ್ಯೂತರಂಗೋನ ಮತ್ತು ಜಲಚರಿ ನುಸಿಗಳಾದ ಪ್ಯಾರಿಸಿಂಟಿಂಗೋನ ಗುಂಪುಗಳು ಸೇರಿವೆ.
  • ಉಪಗಣ 5. ಸಾರ್ಕೋಪ್ಪಿಫಾರ್ಮಿಸ್: ಪ್ರಾಯಶಃ ಬಹಳ ಉನ್ನತಮಟ್ಟದ ಗುಂಪು. ಚೀಸ್‍ನುಸಿ, ಕಜ್ಜಿನುಸಿ ಮತ್ತು ಟೈರೋಗ್ಲಿಫಿಡಿಗೆ ಸೇರಿದ ಇತರ ನುಸಿಗಳನ್ನೊಳಗೊಂಡ ಅಕ್ಯಾರಿಡಿಯ ಮತ್ತು ಓರಿಬೇಟಿಯೈ ಅಥವಾ ಚಿಪ್ಪಿನ ನುಸಿ ಗುಂಪುಗಳು ಇದರಲ್ಲಿ ಸೇರಿವೆ.

ಸ್ವತಂತ್ರಜೀವಿಗಳಾಗಿ ಬದುಕುವ ನುಸಿಗಳು ವಿವಿಧ ಸನ್ನಿವೇಶಗಳಿಗೆ ಹೊಂದಿಕೊಂಡಿವೆ. ಕೆಲವು ಎತ್ತರದ ಬೆಟ್ಟಪ್ರದೇಶಗಳಲ್ಲಿ ಸುಮಾರು 5000 ಮೀಟರ್ ಎತ್ತರದಲ್ಲಿ ವಾಸಿಸುತ್ತವೆ. ಸಸ್ಯವರ್ಗ ಬೆಳೆಯುವ ಎಡೆಗಳಲ್ಲೆಲ್ಲ ಇವನ್ನು ಕಾಣಬಹುದು. ಮತ್ತು ಕೊಳೆಯುತ್ತಿರುವ ಸಸ್ಯಾವಶೇಷಗಳನ್ನುಳ್ಳ ಮೇಲುಮಣ್ಣಿನಲ್ಲಿ ಇವು ಬಹಳ ಹೆಚ್ಚಾಗಿರುತ್ತವೆ. ಕೆಲವು ನುಸಿಗಳು ಯಾವಾಗಲೂ ಭೂಮಿಯಲ್ಲಿರುವ ಬಿರುಕು ಮತ್ತು ರಂಧ್ರಗಳಲ್ಲಿ ಮತ್ತು ಬಿಲಗಳಲ್ಲಿ ವಾಸಿಸುತ್ತವೆ. (ಉದಾ: ಯೂಪೋಡಿಡಿ, ಪೆಂತೇಲಿಡಿ, ಮತ್ತು ಕೆಲವು ಮೀಸೊಸ್ಟಿಗ್ಮ್ಯಾಟ). ಈ ತೆರನ ನುಸಿಗಳ ಕಣ್ಣು ಕಿರಿದು. ಕೆಲವು ನುಸಿಗಳು ಜೌಗುಪ್ರದೇಶಗಳಲ್ಲಿ ಕೆರೆ ಮತ್ತು ಕೊಳಗಳ ತಳಭಾಗದಲ್ಲಿ ಜೀವಿಸುತ್ತವೆ. ಇವು ಈಜಲಾರವು. ಇನ್ನೂ ಕೆಲವು ಗುಹೆಗಳಲ್ಲಿರುವ ನೀರಿನಲ್ಲಿ ಜೀವಿಸುತ್ತವೆ. ಹೈಡ್ರ್ಯಾಕ್ನೆಲ್ಲಿಡೀಗೆ ಸೇರಿದ ನುಸಿಗಳು ಕೊಳ ಮತ್ತು ಹೊಳೆಗಳಲ್ಲಿ ಈಜುಜೀವನ ನಡೆಸುವುವು. ಇದಕ್ಕೆ ಅನುಕೂಲವಾಗುವಂತೆ ಇವುಗಳ ಹಿಂಗಾಲುಗಳ ಮೇಲೆ ಕೂದಲುಗಳುಂಟು. ಮತ್ತೆ ಕೆಲವು ನುಸಿಗಳು (ಉದಾ: ಹಾಲಕ್ಯಾರಿಡಿ) ಸಮುದ್ರತೀರಗಳಲ್ಲಿಯೂ ಆಳನೀರಿನಲ್ಲಿಯೂ (1400 ಮೀ ಆಳದ) ಇರುತ್ತವೆ. ಕೆಲವು ಜಾತಿಯ ನುಸಿಗಳು ಫಾರ್ಮೋಸ, ಕಾಶ್ಮೀರ, ಟಿಬೆಟ್ ಮತ್ತು ಅಮೆರಿಕದಲ್ಲಿನ ಬಿಸಿನೀರಿನ ಬುಗ್ಗೆಗಳಲ್ಲಿ ಕೂಡ ವಾಸಿಸುತ್ತವೆ. ಅನೇಕ ಜಾತಿಯ ಪಕ್ಷಿಗಳು, ಇಲಿ ಮತ್ತು ಇತರ ಸಸ್ತನಿಗಳ ಗೂಡಿಗಳಲ್ಲೂ ವಿವಿಧ ಬಗೆಯ ನುಸಿಗಳುಂಟು. ಹಲವು ನುಸಿಗಳು ಸಸ್ಯಗಳ ರಸ ಹೀರಿ ಬದುಕುತ್ತವಾದರೆ ಇನ್ನು ಕೆಲವು, ಸಾಯುತ್ತಿರುವ ಜೀವಿಗಳು ಅಥವಾ ಕೊಳೆಯುತ್ತಿರುವ ವಸ್ತುಗಳ ಮೇಲೆ ಮತ್ತು ಇನ್ನೂ ಕೆಲವು, ಸಣ್ಣಪ್ರಾಣಿಗಳನ್ನು ಅಂದರೆ ಸಸ್ಯಾಹಾರಿ ನುಸಿಗಳನ್ನು ತಿಂದು ಜೀವಿಸುತ್ತವೆ. ದಾಸ್ತಾನು ಮಾಡಿದ ಧಾನ್ಯಗಳೂ, ಚೀಸ್ ಮತ್ತು ದ್ರಾಕ್ಷಾರಸಗಳಲ್ಲಿ ಕೂಡ ಹಲವು ರೀತಿಯ ನುಸಿಗಳಿರುವುದುಂಟು.

ಎಲ್ಲ ತರಹದ ಪ್ರಾಣಿ, ಸಸ್ಯ ಮತ್ತು ಕೊಳೆಯುತ್ತಿರುವ ಪದಾರ್ಥಗಳು ನುಸಿಗಳಿಗೆ ಆಹಾರವಾಗುವುದುಂಟು. ಮಿಸೋಸ್ಟಿಗ್ಮ್ಯಾಟದ ಯೂರೋಪೂಡೀನಕ್ಕೆ ಸೇರಿದ ನುಸಿಗಳು ಕೊಳೆಯುತ್ತಿರುವ ಎಲೆಗಳು, ಸಗಣಿ ಮತ್ತು ಗೊಬ್ಬರದಲ್ಲಿ ವಾಸವಾಗಿದ್ದು, ಕೇವಲ ಬೂಷ್ಟುಗಳನ್ನು ತಿಂದು ಜೀವಿಸುತ್ತವೆ. ಓರಿಬೇಟಿಯೈಗೆ ಸೇರಿದ ನುಸಿಗಳೂ ಕೂಡ ಇದೇ ತರಹದ ಸನ್ನಿವೇಶಗಳಲ್ಲಿ ಬದುಕುವುವು. ಸ್ವಲ್ಪ ತೇವವಿರುವ ಮನೆಗಳಲ್ಲಿ ಮರದಿಂದ ಮಾಡಿರುವ ಪೀಠೋಪಕರಣಗಳ ಮೇಲೆ ಅನೇಕ ವೇಳೆ ಗ್ಲೈಸಿಫ್ಯಾಜಿಡಿಗೆ ಸೇರಿದ ಕೆಲವು ನುಸಿಗಳನ್ನು ಅಸಂಖ್ಯಾತವಾಗಿ ನೋಡಬಹುದು.

ಗುಹೆಗಳ ನೀರಿನಲ್ಲಿ ಜೀವಿಸುವ ಕೆಲವು ಹಾಲಕ್ಯಾರಿಡಿಗೆ ಸೇರಿದ ನುಸಿಗಳು ಆ ನೀರಿನಲ್ಲಿ ಬೆಳೆಯುವ ಪಾಚಿಯನ್ನು ತಿಂದು ಜೀವಿಸುತ್ತವೆ. ಕೆಲವು ಓರಿಬೇಟಿಯೈಗಳು ಬಂಡೆಯ ಮೇಲೆ ಬೆಳೆಯುವ ಕಲ್ಲುಹೂವಿನ ಮೇಲೆ ಕಾಣುವುದುಂಟು.

ಅಕ್ಯಾರಸ್ ಸೈರೊ ಕೆಲವು ವೇಳೆ ದಾಸ್ತಾನು ಧಾನ್ಯಗಳಿಗೆ ಬಹಳ ಹಾನಿ ಮಾಡುತ್ತದೆ. ಕಾರ್ಪೋಗ್ಲಿಫಸ್ ಲ್ಯಾಕ್ಟಿಸ್ ಒಣಗಿದ ಹಣ್ಣು, ಹಾಲಿನ ಪುಡಿ ಮತ್ತು ಅಪರೂಪವಾಗಿ ದ್ರಾಕ್ಷಾರಸಕ್ಕೂ ಹಾನಿಯುಂಟುಮಾಡುತ್ತದೆ. ಇನ್ನೂ ಕೆಲವು ನುಸಿಗಳೂ ಚರ್ಮ, ತುಪ್ಪಳ, ಬಟ್ಟೆ ಮುಂತಾದ ಸಾಮಾನುಗಳನ್ನು ಹಾಳುಮಾಡುತ್ತವೆ.

ಆಂಕೋಪ್ಯಾಲ್ಪಿಡಕ್ಕೆ ಸೇರಿದ ನುಸಿಗಳು ಸಾಮಾನ್ಯವಾಗಿ ಚುರುಕಾಗಿರುವುವು. ಇವು ಕಲ್ಲುಗಳ ಕೆಳಗೆ ಮತ್ತು ತೇವಪೂರಿತ ಪ್ರದೇಶಗಳಲ್ಲಿ ವಾಸಿಸುವ ಅನೇಕ ಸಂಧಿಪದಿಗಳನ್ನು ಹಿಡಿದು ತಿನ್ನುತ್ತವೆ. ಟ್ರಾಂಬಿಡಿಫಾರ್ಮಿಸ್ ಉಪಗಣದಲ್ಲಿ ಸಣ್ಣ ಕೀಟಗಳನ್ನು ತಿನ್ನುವ ಅನೇಕ ನುಸಿಗಳು ಸೇರಿವೆ. ಕೆಲವು ಹಾಲಕ್ಯಾರಿಡಿಗಳು ಸಮುದ್ರದ ಜೊಂಡು ಮತ್ತು ಬಂಡೆಯ ಮೇಲಿನ ಸಣ್ಣಪುಟ್ಟ ಪ್ರಾಣಿಗಳನ್ನು ತಿನ್ನುತ್ತವೆ. ವಿವಿಧ ಬೆಳೆಗಳಿಗೆ ಬೀಳುವ ಕೀಟಗಳನ್ನು ತಿಂದು ಹತೋಟಿಯಲ್ಲಿಡಲು ಸಹಾಯ ಮಾಡುವ ಫೈಯಟೊಸೈಯಿಡೀ ಕುಟುಂಬದ ನುಸಿಗಳು ಇಲ್ಲಿ ಉಲ್ಲೇಖಾರ್ಹ. ಅನೇಕ ಓರಿಬೇಟಿಯೈಗಳು ಕೂಡ ಹಿಂಸ್ರಪ್ರಾಣಿಗಳು. ಅಕ್ಯಾರಿಡಿಯಿಯಲ್ಲಿ ಕೂಡ ಕೆಲವು ನುಸಿಗಳು ವಿವಿಧ ಕೀಟಗಳ ಮೊಟ್ಟೆಗಳನ್ನು ತಿಂದು ಜೀವಿಸುತ್ತವೆ. ಅವುಗಳಲ್ಲಿ ಕೆಲವು ತಮ್ಮ ಜೀವನದಲ್ಲಿ ಹೈಪೋಪಸ್ ಎಂಬ ಅವಸ್ಥೆಯನ್ನು ತೋರಿಸುತ್ತವೆ. ಕೀಟಗಳ ಶರೀರಕ್ಕೆ ಅಂಟಿಕೊಂಡು ಸ್ಥಳದಿಂದ ಸ್ಥಳಕ್ಕೆ ಸಾಗಣೆಯಾಗುವುದಕ್ಕೆ ಇದು ಬಹಳ ಸೊಗಸಾಗಿ ಹೊಂದಿಕೊಂಡಿದೆ.

ಬೇರೆ ಪ್ರಾಣಿಗಳನ್ನು ಹಿಡಿದು ತಿನ್ನುವ ಸ್ವಭಾವವಲ್ಲದೆ ಪರೋಪ ಜೀವನ ಕ್ರಮ ಕೂಡ ಟ್ರಾಂಬಿಡಿಫಾರ್ಮಿಸ್, ಮೀಸೊಸ್ಟಿಗ್ಮ್ಯಾಟ, ಇಕ್ಸೋಡಿಡಿಸ್ ಮತ್ತು ಸಾರ್ಕೋಫ್ಟಿಫಾರ್ಮಿಸ್‍ಗೆ ಸೇರಿದ ಅನೇಕ ನುಸಿಗಳಲ್ಲಿ ಕಂಡುಬರುತ್ತದೆ. ಅನೇಕ ನುಸಿಗಳು ರಾಸುಗಳನ್ನೊಳಗೊಂಡಂತೆ ವಿವಿಧ ಸ್ತನಿಗಳನ್ನು ಮುತ್ತುತ್ತವೆ. ಕುದುರೆ, ಕುರಿ ಮತ್ತು ದನಕರುಗಳಲ್ಲಿ ಮೇಂಜ್ ಕಜ್ಜಿ ಎಂಬ ಚರ್ಮರೋಗವನ್ನುಂಟುಮಾಡುವ ಸೋರೋಪ್ಟಿಸ್ ಕಮ್ಯುನಿಸ್ ಇಂಥ ನುಸಿಗಳಲ್ಲಿ ಮುಖ್ಯವಾದ್ದು. ಕೆಲವು ಅಕ್ಯಾರಿಡ್ ನುಸಿಗಳು ಚರ್ಮದೊಳಗೆ ಕೊರೆದುಕೊಂಡು ದೇಹದ ಒಳಹೋಗುವುವು. ಮನುಷ್ಯ ಮತ್ತು ಇತರ ಪ್ರಾಣಿಗಳಲ್ಲಿ ನವೆ, ಕೆರೆತ ಮತ್ತು ಕಜ್ಜಿಯನ್ನುಂಟುಮಾಡುವ ಸಾರ್ಕೊಪ್ಟಿಸ್ ಸ್ಕ್ಯಾಬಿಯೈ ಒಂದು ಪ್ರಸಿದ್ಧವಾದ ಕಜ್ಜಿಹುಳು. ಡೀಮೊಡಿಸಿಡೀ ಕುಟುಂಬದ ನುಸಿಗಳು ಹೆಚ್ಚು ಕಡಿಮೆ ಹುಳುವಿನ ಹಾಗೆ ಇದ್ದು ರೋಮಕೂಪದೊಳಕ್ಕೆ ಕೊರೆದುಕೊಂಡು ಹೋಗುವುದರಿಂದ ಕೂದಲುಗಳು ಉದುರಿಹೋಗುತ್ತವೆ. ಡೀಮೋಡೆಕ್ಸ್ ಫಾಲಿಕ್ಯುಲೋರಮ್ ನುಸಿ ಮನುಷ್ಯನಲ್ಲೂ ಇದೇ ಜಾತಿಗೆ ಸೇರಿದ ಇತರ ನುಸಿಗಳು ನಾಯಿ ಮತ್ತು ಮೂಷಕಗಳಲ್ಲೂ ಪರಾವಲಂಬಿಗಳಾಗಿವೆ. ಸರ್ವೇಸಾಮಾನ್ಯವಾಗಿ ಜಿಗ್ಗರ್ ನುಸಿ ಎಂದು ಕರೆಯಲ್ಪಡುವ ಟ್ರಾಂಬಿಕ್ಯೂಲಿಡಿ ನುಸಿಗಳ ಮರಿಗಳು ಮನುಷ್ಯ ಮತ್ತು ಅವನ ರಾಸುಗಳನ್ನು ಮುತ್ತುವುದುಂಟು. ಇವು ಚರ್ಮದ ಕೆರೆತ, ದದ್ದು ಮತ್ತು ಚರ್ಮದ ಊತವನ್ನುಂಟುಮಾಡುತ್ತವೆ. ಟ್ರಾಂಬಿಕ್ಯೂಲಕ್ಕೆ ಸೇರಿದ ಕೆಲವು ನುಸಿಗಳು ರಿಕೆಟ್ಸಿಯ ಕಾಯಿಲೆಯನ್ನು ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಮೀಸೋಸ್ಟಿಗ್ಮ್ಯಾಟಕ್ಕೆ ಸೇರಿದ ರಕ್ತಹೀರುವ ನುಸಿಗಳು ವಿವಿಧ ಸಣ್ಣಪುಟ್ಟ ಸ್ತನಿಗಳನ್ನು ಮುತ್ತುತ್ತವೆ.

ರಕ್ತಹೀರುವ ನುಸಿಗಳಲ್ಲಿ ಬಹಳ ವೈಶಿಷ್ಟ್ಯಪಡೆದವೆಂದರೆ ಇಕ್ಸೋಡಿಡಿಸ್‍ಗೆ ಸೇರಿದ ಉಣ್ಣೆಗಳು. ಅರ್ಗ್ಯಾಸಿಡಿ ಉಣ್ಣೆಗಳು ಆಗಾಗ್ಗೆ ರಕ್ತಹೀರುತ್ತಿದ್ದು ನೆಲದ ಬಿರುಕುಗಳಲ್ಲೋ ಅಥವಾ ನೆಲದ ಮೇಲೋ ಕಾಲಕಳೆಯುತ್ತವೆ. ಆದರೆ ಇಕ್ಸೋಡಿಡಿ ಉಣ್ಣೆಗಳು ಪ್ರೌಢಾವಸ್ಥೆಯಲ್ಲಿ ಕೇವಲ ಒಂದು ಸಾರಿ ರಕ್ತಹೀರುತ್ತವೆ. ಉಣ್ಣೆಗಳು ತಾವು ರಕ್ತಹೀರುವ ಪ್ರಾಣಿಗಳ ಮೇಲೆ ಮೊಟ್ಟೆಗಳನ್ನಿಡುವ ತಾವು ಅಡಗಿಕೊಂಡಿರುವ ನೆಲದ ಮೇಲೆ ಇಡುತ್ತವೆ. ಮನೆರಾಸುಗಳು ಮುಂತಾದ ಸಸ್ತನಿಗಳನ್ನು ಸಾಮಾನ್ಯವಾಗಿ ಮುತ್ತುವ ಉಣ್ಣೆಗಳೆಂದರೆ: ಆರ್ನಿತೋಡೋರಸ್, ಆರ್ಗ್ಯಾಸ್, ಇಕ್ಸೋಡಿಸ್ ಮತ್ತು ಬುಫೈಲಸ್‍ಗಳು.

ಪಕ್ಷಿಗಳನ್ನು ಮುತ್ತುವ ಇತರ ನುಸಿಗಳು ಅನೇಕವಿವೆ. ನಿಮಿಡೋಕಾಪ್ಟಿಸ್ ಗುಂಪಿಗೆ ಸೇರಿದ ಕೆಲವು ಪ್ರಭೇದಗಳು ಕೋಳಿಗಳ ಮೇಲೆ ಕಾಣಿಸಿಕೊಂಡು, ಅವುಗಳ ಪುಕ್ಕಗಳನ್ನು ಉದುರಿಸಿ ಅವು ಕುಂಟಾಗುವಂತೆ ಮಾಡುತ್ತವೆ. ರಕ್ತಹೀರುವ ಡರ್ಮಾನಿಸ್ಸಸ್ ಮತ್ತು ಆರ್ನಿತೋನಿಸ್ಸಸ್ ಎಂಬ ಮೀಸೋಸ್ಟಿಗ್ಮ್ಯಾಟ ನುಸಿಗಳು ಪಕ್ಷಿಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಇವು ಹಗಲು ನೆಲದ ಬಿರುಕುಗಳಲ್ಲಿ ಕಾಲಕಳೆದು ರಾತ್ರಿಯಲ್ಲಿ ಕೋಳಿಗಳ ರಕ್ತಹೀರುತ್ತವೆ.

ಬೆನ್ನೆಲುಬಿನ ಪ್ರಾಣಿಗಳಲ್ಲದೆ ನುಸಿಗಳು ಬಹಳ ವಿಶೇಷವಾಗಿ ಮುತ್ತುವ ಪ್ರಾಣಿಗಳೆಂದರೆ ಸಂಧಿಪದಿಗಳು. ಕೀಟಗಳ ಪರೋಪಜೀವಿಗಳಾಗಿರುವ ನುಸಿಗಳಲ್ಲಿ ಟ್ರಾಂಬಿಡಿಫಾರ್ಮಿಸ್ ನುಸಿಗಳೇ ಅತಿಮುಖ್ಯ. ಅದರಲ್ಲೂ ಪೋಡಪೋಲಿಪೋಡಿಡೀ, ಎರಿತ್ರೆಯಿಡೀ ಮತ್ತು ಟ್ರಾಂಬಿಕೊಲಿಡೀ ನುಸಿಗಳು ಮಿಡತೆ, ಚಿಪ್ಪಿನ ಕೀಟಗಳು, ನೊಣ ಮುಂತಾದ ವಿವಿಧ ಕೀಟಗಳನ್ನು ಮೇಲೆ ಕಾಣಿಸಿಕೊಳ್ಳುತ್ತವೆ, ನೀರಿನಲ್ಲಿರುವ ಅನೇಕ ಕೀಟಗಳನ್ನು ಕೂಡ ಕೆಲವು ನುಸಿಗಳು ಬಿಡುವುದಿಲ್ಲ. ಇವುಗಳಲ್ಲಿ ಮುಖ್ಯವಾದುವೆಂದರೆ ಹೈಡ್ರಾಕ್ನೆಲಿಡಿಗೆ ಸೇರಿದ ನುಸಿಗಳು.

ಕೆಲವು ನುಸಿಗಳು ಪ್ರಾಣಿಗಳ ಶರೀರದೊಳಗೂ ವಾಸಮಾಡುವುದುಂಟು. ಲೀಲಾಪ್ಟಿಡೀ ಕುಟುಂಬದ ಕೆಲವು ನುಸಿಗಳು ನೀರಿನಲ್ಲಿ ವಾಸಿಸುವ ಸಸ್ತನಿಗಳ ಶ್ವಾಸಕೋಶಗಳಲ್ಲಿಯೂ, ಮೂಗಿನ ದ್ವಾರಗಳಲ್ಲಿಯೂ ವಾಸಿಸುತ್ತವೆ. ವಿವಿಧ ಕೀಟಗಳ ಶ್ವಾಸನಾಳಗಳಲ್ಲಿ ಅನೇಕ ಟಾರ್ಸೋನಿಮಿನಿ ನುಸಿಗಳು ಜೀವಿಸುತ್ತವೆ. ಜೇನುಹುಳುಗಳ ಬಹಳ ಹಾನಿಕಾರಕ ನುಸಿಜಾಡ್ಯಕ್ಕೆ ಕಾರಣವಾದ ಅಕಾರ್ಯಾಪಿಸ್‍ಪುಡಿ ನುಸಿ ಜೇನುಹುಳುಗಳ ಶ್ವಾಸನಾಳಗಳಲ್ಲಿ ಜೀವಿಸುತ್ತವೆ.

ಸಸ್ಯಗಳ ಮೇಲೆ ಕಾಣುವ ಅನೇಕ ಸಸ್ಯಾಹಾರಿ ನುಸಿಗಳನ್ನು ತಿಂದು ಜೀವಿಸುವ ನುಸಿಗಳೂ ಉಂಟು. ಆದರೆ ಟ್ರಾಂಬಿಡಿಫಾರ್ಮಿಸ್‍ಗೆ ಸೇರಿದ ಕೆಲವು ನುಸಿಗಳು ಮಾತ್ರ ಗಿಡಗಳ ರಸವನ್ನು ಹೀರಿ ಜೀವಿಸುವುದಕ್ಕೆ ಹೊಂದಿಕೊಂಡಿವೆ. ಈ ಉಪಗಣಕ್ಕೆ ಸೇರಿದ ಟೆಟ್ರಾನಿಕಿಡೀ ಅಥವಾ ಜೇಡನುಸಿಗಳು ಸಸ್ಯಾಹಾರಿ ನುಸಿಗಳಲ್ಲಿ ಬಲು ಸಾಮಾನ್ಯವಾಗಿ ಕಾಣಸಿಗುವಂಥವು. ಜೇಡನುಸಿಗಳು ರಸ ಹೀರುವುದರಿಂದ ಎಳೆರೆಮಬೆ ಮತ್ತು ಎಲೆಗಳ ಮೆಲೆ ಮೂಡುವ ಬಿಳಿಚುಕ್ಕೆಗಳು ಸಾಮಾನ್ಯವಾಗಿ ಉಂಟಾಗುವ ಚಿಹ್ನೆಗಳು. ರಸ ಹೀರುವಾಗ ಸಸ್ಯರಸದೊಂದಿಗೆ ಅದರಲ್ಲಿರುವ ಹಸಿರುಬಣ್ಣದ ಕ್ಲೋರೋಫಿಲ್ಲನ್ನು ಹೀರಿಕೊಳ್ಳುವುದರಿಂದ ಈ ರೀತಿ ಬಿಳಿಮಚ್ಚೆಗಳು ಉಂಟಾಗುವುವು. ಜೇಡನುಸಿಗಳಾದ ಟೆಟ್ರಾನಿಕ್ಸ್‍ಗಳು ಸಾಮಾನ್ಯವಾಗಿ ಗಿಡಗಳ ಎಲೆ ಮತ್ತು ರೆಂಬೆಗಳ ಮೇಲೆ ಸೂಕ್ಷ್ಮ ಬಲೆಯನ್ನು ನೇಯ್ದು ಅದರ ಕೆಳಗೆ ಜೀವಿಸುತ್ತವೆ. ಬ್ರಯೋಬಿಯ ಮುಂತಾದ ಜೇಡನುಸಿಗಳಾದರೋ ಈ ರೀತಿ ಬಲೆ ನೇಯುವುದಿಲ್ಲ. ಅನೇಕ ಜೇಡನುಸಿಗಳು ಬಗೆಬಗೆಯ ದ್ವಿದಳಧಾನ್ಯ, ಹಣ್ಣು, ತರಕಾರಿ ಮೊದಲಾದ ಬೆಳೆಗಳ ಹಾನಿಗೆ ಕೆಲವು ವೇಳೆ ಕಾರಣವಾಗುತ್ತದೆ. ವಾತಾವರಣ ಅನುಕೂಲವಾಗಿದ್ದಾಗ ಬಹುಬೇಗ ಅಂದರೆ ಒಂದೆರಡು ವಾರಕ್ಕೊಂದಾವರ್ತಿ ಒಂದು ಜೀವನಚಕ್ರವನ್ನು ಮುಗಿಸುತ್ತವೆ.

ಇನ್ನು ಟಾರ್ಸೋನೀಮಿಡಿಗೆ ಸೇರಿದ ಕೆಲವು ನುಸಿಗಳು ಅಂದರೆ ಮುಖ್ಯವಾಗಿ ಟಾರ್ಸೋನೀಮಸ್ ಮತ್ತು ಹೆಮಿಟಾರ್ಸೋನೀಮಸ್ ನುಸಿಗಳು ಹಲವು ಬಗೆಯ ತರಕಾರಿ, ಹಣ್ಣು ಮತ್ತು ಹೂಗಿಡಗಳಿಗೆ ಬಹಳ ಹಾನಿಕಾರಕವಾಗಿವೆ. ಈ ನುಸಿಗಳಿಂದ ಆವೃತವಾದ ಎಲೆಗಳು ವಕ್ರವಾಗಿ, ಕಿರಿದಾಗಿ, ತಿರುಚಿಕೊಂಡು, ಒರಟಾಗುತ್ತವೆ.

ಫೈಟೋಪ್ಟಿಪಾಲ್ಪಿಡೀಗೆ ಸೇರಿದ ಸಣ್ಣ ಕೆಂಪು ನುಸಿಗಳು ಹಲವಾರು ಗಿಡಗಳ ರಸ ಹೀರಿ ಜೀವಿಸುತ್ತವೆ. ಟೆನ್ಯೂಪಾಲ್ಪಿಸ್ ಮತ್ತು ಬ್ರೆವಿಪಾಲ್ಪಿಸ್ ನುಸಿಗಳು ಇವುಗಳಲ್ಲಿ ಮುಖ್ಯ. ಇವು ಅನೇಕ ಬೆಳೆಗಳಿಗೆ ಹಾನಿಕಾರಕವಾಗಿವೆ. ಎರಿಯೋಫೈಯಿಡೀಗಳು (ಗಂಟುನುಸಿ) ಸಸ್ಯಗಳ ರಸ ಹೀರಿ ಜೀವಿಸುತ್ತವೆ. ಇವುಗಳಲ್ಲಿ ಕೆಲವು ತಾವು ರಸ ಹೀರುವ ಗಿಡಗಳ ಮೇಲೆ ವಿವಿಧ ರೀತಿಯ ವಿಕಾರ ರೂಪವನ್ನುಂಟುಮಾಡುತ್ತವೆ. ಕೆಲವು ಸಸ್ಯಗಳಿಗೆ ತಗಲುವ ನಂಜುರೋಗಗಳನ್ನು ಹರಡುತ್ತವೆ. ಈ ನುಸಿಗಳು ರಸ ಹೀರುವುದರಿಂದ ಉಂಟಾಗುವ ಮುಖ್ಯ ಚಿಹ್ನೆಗಳೆಂದರೆ:

  • ಇವು ಅಂಟಿದ ಭಾಗ ಒರಟಾಗಿ ಬಣ್ಣ ಬದಲಾಯಿಸುವುದು;
  • ಎಲೆಗಳು ಮತ್ತು ರೆಂಬೆಗಳ ಮೇಲೆ ಮಖಮಲ್ಲಿನಂತೆ ಕೂದಲು ಬೆಳೆಯುವುದು;
  • ಟೊಳ್ಳಾದ ಗಂಟುಗಳು ಎಲೆಗಳು ಕಾಣಿಸಿಕೊಳ್ಳುವುದು;
  • ಕಜ್ಜಿಯ ಹಾಗೆ ಆಗುವುದು;
  • ಮೊಗ್ಗುಗಳ ಸುತ್ತ ಗಟ್ಟಿಗಂಟು ರೂಪುಗೊಳ್ಳುವುದು ಮತ್ತು
  • ರೆಂಬೆಗಳು ಮೊಟಕಾಗಿ ಮೊಂಡು ಪೊರಕೆಯ ಹಾಗೆ ಕಾಣುವುದು.

ಪರೋಪಜೀವಿಗಳಾದ ಲಾಡಿಹುಳು ಜಾತಿಗೆ ಸೇರಿದ ಜೀವಿಗಳಿಗೆ ಸಾರ್ಕೋಪ್ಟಿಫಾರ್ಮಿಸ್‍ಗೆ ಸೇರಿದ ನುಸಿಗಳು ಆಶ್ರಯದಾತಗಳಾಗಿ ವರ್ತಿಸುವುದರಿಂದ ಇವು ಲಾಡಿಹುಳುಗಳ ಅಭಿವೃದ್ಧಿ ಮತ್ತು ಹರಡುವಿಕೆಗೆ ಕಾರಣವಾಗುತ್ತದೆ. ಕೆಲವು ರಕ್ತ ಹೀರುವ ನುಸಿಗಳು ಫೈಲೇರಿಯ ಜಂತುಹುಳುಗಳನ್ನು ಹರಡುತ್ತವೆ. ಅಲ್ಲದೆ ಬೆನ್ನೆಲುಬುಳ್ಳು ಪ್ರಾಣಿಗಳಿಗೆ ತಗಲುವ ಅನೇಕ ಬ್ಯಾಕ್ಟೀರಿಯ ಮತ್ತು ನಂಜು ರೋಗಗಳನ್ನು ಹರಡುವುದರಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ.

ನುಸಿಗಳು ಹರಡುವ ಸಸ್ಯಗಳಿಗೆ ತಗಲುವ ನಂಜುರೋಗಗಳಲ್ಲಿ ಮುಖ್ಯವಾದುವೆಂದರೆ ಅಮೆರಿಕದಲ್ಲಿ ಗೋದಿ ಬೆಳೆಗೆ ತಗಲುವ ಗೆರೆ ಮತ್ತು ಮಚ್ಚೆ ನಂಜುರೋಗಗಳು, ಅಂಜೂರದ ಮಚ್ಚೆರೋಗ ಮತ್ತು ದ್ವೀಪದ್ರಾಕ್ಷಿಯ ನಂಜುರೋಗ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನುಸಿ&oldid=1061529" ಇಂದ ಪಡೆಯಲ್ಪಟ್ಟಿದೆ