ತಂತಿರಹಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಿಸ್ತಂತು ಇಂದ ಪುನರ್ನಿರ್ದೇಶಿತ)

ತಂತಿರಹಿತ ಅಥವಾ ನಿಸ್ತಂತು ಎಂಬುದು ಭೌತಿಕ ತಂತಿಗಳನ್ನು ಬಳಸದೆ ಸಂದೇಶ ಹಾಗೂ ಮಾಹಿತಿಗಳನ್ನು ವಿನಿಮಯಿಸಿಕೊಳ್ಳುವ ತಂತ್ರಜ್ಞಾನವಾಗಿದೆ. ಉದಾಹರಣೆಗೆ ಚರ ದೂರವಾಣಿ (Mobile phone), ಟಿವಿ ದೂರ ನಿಯಂತ್ರಣ ಹಾಗೂ ರೇಡಿಯೋ. ತಂತಿರಹಿತ ತಂತ್ರಜ್ಞಾನವು ವಿದ್ಯುದಯಸ್ಕಾಂತೀಯ ಅಲೆಗಳು ಅಥವಾ ಬೆಳಕನ್ನು ಸಂದೇಶ ಅಥವಾ ಮಾಹಿತಿ ರವಾನೆಗಾಗಿ ಬಳಸುತ್ತದೆ. ಮಾಹಿತಿಯು ಕ್ರಮಿಸುವ ದೂರವು ಕೆಲವು ಮೀಟರ್‌ಗಳಿಂದ ಮಿಲಿಯ ಕಿಲೋಮೀಟರ್‌ಗಳಷ್ಟು ಇರಬಹುದು.ಇನ್ನು ಇನ್ಫ್ರಾರೆಡ್ (ನಸುಗೆಂಪು ಕಿರಣ) ಮತ್ತು ಬ್ಲೂಟೂಥ್ ತಂತ್ರಜ್ಞಾನಗಳು ಕೂಡ ನಿಸ್ತಂತು ಜೋಡಣೆಯ ಸ್ವರೂಪಕ್ಕೆ ಉದಾಹರಣೆಯಾಗಿವೆ.

ಇತಿಹಾಸ[ಬದಲಾಯಿಸಿ]

ಗುಗ್ಲಿಯೆಲ್ಮೋ ಮಾರ್ಕೊನಿ ಎಂಬ ವಿಜ್ಞಾನಿಯು ವಿದ್ಯುದಯಸ್ಕಾಂತೀಯ ಅಲೆಗಳ ಮೂಲಕ ಮಾಹಿತಿ ರವಾನೆಯ ಬಗ್ಗೆ ಸಂಶೋಧನೆಗಳನ್ನು ನಡೆಸಿದರು. ಈ ಕ್ಷೇತ್ರದಲ್ಲಿ ಆತ ಪಡೆದ ಸಫಲತೆಯು ತಂತಿರಹಿತ ತಂತ್ರಜ್ಞಾನಕ್ಕೆ ನಾಂದಿಯಾಯಿತು.

ಕಾರ್ಯತತ್ವ[ಬದಲಾಯಿಸಿ]

ಈ ತಂತ್ರಜ್ಞಾನದಲ್ಲಿ ಪ್ರೇಷಕವೊಂದನ್ನು ಬಳಸಿ ಮಾಹಿತಿಯನ್ನು ವಿದ್ಯುದಯಸ್ಕಾಂತೀಯ ಅಲೆಗಳ ಅಥವಾ ಬೆಳಕಿನ (ನಸುಗೆಂಪು ಕಿರಣಗಳು) ಮೂಲಕ ಕಳುಹಿಸಲಾಗುತ್ತದೆ (ಮೂಲತಃ ಬೆಳಕು ಕೂಡಾ ವಿದ್ಯುದಯಸ್ಕಾಂತೀಯ ಅಲೆಯಾಗಿದೆ). ಉದಾಹರಣೆಗೆ ಟಿವಿ ದೂರ ನಿಯಂತ್ರಣದಲ್ಲಿ ವಾಹಿನಿ ಬದಲಿಸಲು ಗುಂಡಿಯನ್ನು ಒತ್ತಿದಾಗ ಬದಲಿಸಬೇಕಾದ ವಾಹಿನಿಯ ಬಗೆಗಿನ ಮಾಹಿತಿಯು ದೂರ ನಿಯಂತ್ರಣದಿಂದ ನಸುಗೆಂಪು ಕಿರಣಗಳ ರೂಪದಲ್ಲಿ ಹೊರಹೊಮ್ಮುತ್ತದೆ. ಇನ್ನೊಂದು ತುದಿಯಲ್ಲಿ ಅಭಿಗ್ರಾಹಕವೊಂದು ಈ ಮಾಹಿತಿಯನ್ನು ಗ್ರಹಿಸಿ ಸಂಸ್ಕರಿಸುತ್ತದೆ. ಉದಾಹರಣೆಗೆ ಒಂದು ಚರ ದೂರವಾಣಿಯಿಂದ ವಿದ್ಯುದಯಸ್ಕಾಂತೀಯ ರೂಪದಲ್ಲಿ ಬಿತ್ತರಿಸಲಾದ ಮಾತುಗಳನ್ನು ಇನ್ನೊಂದು ಚರ ದೂರವಾಣಿಯು ಗ್ರಹಿಸಿ, ಸಂಸ್ಕರಿಸಿ, ಮಾತಿನ ರೂಪದಲ್ಲಿ ಕೇಳುವಂತೆ ರೂಪಾಂತರಿಸುತ್ತದೆ. ಬೆಳಕಿನ ರೂಪದಲ್ಲಿ ಮಾಹಿತಿಯನ್ನು ಲೇಸರ್‍‍ ಅಥವಾ ನಸುಗೆಂಪು ಕಿರಣಗಳ ರೂಪಗಳಲ್ಲಿ ಕಳುಹಿಸಬಹುದು. ಆದರೆ ಇವು ಕ್ರಮಿಸುವ ದೂರ ಬಹಳ ಕಡಿಮೆ. ಅಲ್ಲದೆ ಎರಡು ವ್ಯವಸ್ಥೆಗಳಲ್ಲೂ ಪ್ರೇಷಕ ಹಾಗೂ ಅಭಿಗ್ರಾಹಕಗಳು ದೃಷ್ಟಿರೇಖೆಯಲ್ಲಿರಬೇಕಾಗುತ್ತದೆ.