ವಿಷಯಕ್ಕೆ ಹೋಗು

ನಿತ್ರಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿತ್ರಾಣ ಎಂದರೆ ಇಡೀ ದೇಹ ಇಲ್ಲವೇ ಯಾವುದಾದರೂ ದೇಹಭಾಗಗಳಲ್ಲಿ ಕಂಡುಬರುವ ಬಲಹೀನತೆ; ಪರ್ಯಾಯನಾಮ ನಿರ್ಬಲತೆ (ಡೆಬಿಲಿಟಿ; ಆಸ್ಥೀನಿಯ-ಗ್ರೀಕ್ ಮೂಲ ಆಸ್ಥೆನಿನ್=ತ್ರಾಣ ಇಲ್ಲದಿರುವಿಕೆ). ಈ ಸ್ಥಿತಿಯಲ್ಲಿ ಐಚ್ಛಿಕ ಚಲನೆಯನ್ನು ಶಕ್ತಿಯುತವಾಗಿ ನೆರವೇರಿಸಲು ಆಗುವುದಿಲ್ಲ.[೧] ಅಲ್ಲದೆ ಬಲವಂತದಿಂದ ಸ್ವಲ್ಪ ಮಟ್ಟಿಗೆ ಚಲನೆಯನ್ನು ಉಂಟುಮಾಡಿದರೂ ಸುಸ್ತಾಗುತ್ತದೆ. ದೈನಂದಿನ ಚಟುವಟಿಕೆಗಳಿಗಾಗಿ ಎದ್ದು ಓಡಾಡಲೂ ಹಲವು ವೇಳೆ ಸಾಧ್ಯವಾಗದು. ದೀರ್ಘಕಾಲಿಕವಾಗಿದ್ದು ದೇಹವನ್ನು ಕೃಶವಾಗಿಸುವ ಏಡಿಗಂತಿ, ರಕ್ತಕಣಹೀನತೆ ಇಂಥ ರೋಗಗಳಲ್ಲಿ ಇಡೀ ದೇಹದ ನಿತ್ರಾಣ ಕಂಡುಬರುತ್ತದೆ. ಯಾವುದೋ ಒಂದು ಅಂಗದಲ್ಲಿ ಅಥವಾ ಅದಕ್ಕೆ ಸಂಬಂಧಪಟ್ಟ ಅಂಗಸಮೂಹದಲ್ಲಿ ತೋರುವ ನಿತ್ರಾಣಕ್ಕೆ ಸ್ಥಾನಿಕ ನಿತ್ರಾಣ (ಲೋಕಲೈಸ್ಡ್ ಆಸ್ಥೀನಿಯ) ಎಂದು ಹೆಸರು. ಉದಾಹರಣೆಗೆ ಕಣ್ಣಿನ ನಿತ್ರಾಣ. ಇದರಲ್ಲಿ ಕಣ್ಣಿನ ಸ್ನಾಯುಗಳು ಬೇಗ ಬಳಲಿ ಕಣ್ಣು ಚಲನೆ, ರೆಪ್ಪೆ ಮುಚ್ಚಿಕೊಳ್ಳುವುದು ಮುಂತಾದವೆಲ್ಲ ಜಡವಾಗಿರುತ್ತದೆ. ಮೈಯಾಸ್ಥೀನಿಯಾ ಗ್ರ್ಯಾವೀಸ್ ಎಂಬ ರೋಗದಲ್ಲಿ ಐಚ್ಛಿಕ ಸ್ನಾಯುಗಳ ನಿತ್ರಾಣವೇ ವಿಶಿಷ್ಟ. ಬೆಳಗ್ಗೆ ಎದ್ದಾಗ ಈ ಸ್ನಾಯುಗಳ ಬಳಲಿಕೆ ಅಷ್ಟಾಗಿ ಕಂಡುಬರದಿದ್ದರೂ ಹೊತ್ತು ಕಳೆದು ಸಂಜೆ ಆಗುತ್ತಿದ್ದಂತೆ ಬಳಲಿಕೆ ಹೆಚ್ಚಾಗುತ್ತದೆ. ಮಿತಿಮೀರಿದ ಸಂದರ್ಭಗಳಲ್ಲಿ ಉಸಿರಾಟದ ಸ್ನಾಯುಗಳು ಸ್ಥಗಿತಗೊಂಡು ಮರಣವೂ ಸಂಭವಿಸಬಹುದು. ಆಧುನಿಕ ಜೀವನದಲ್ಲಿ ಪರಿಸರದ ಒತ್ತಡದ ಪರಿಣಾಮವಾಗಿ ನಿದ್ರಾರಾಹಿತ್ಯ, ಯೋಚನೆ, ಮಾನಸಿಕ ತ್ರಾಸ, ಸಾಮಾಜಿಕ ಘರ್ಷಣೆ ಇತ್ಯಾದಿಗಳಿಗೆ ಈಡಾಗಿ ಅನೇಕರು ನ್ಯೂರಾಸ್ಥೀನಿಯಾ ಮುಂತಾದ ರೋಗಗಳಿಗೆ ತುತ್ತಾಗುತ್ತಾರೆ. ಇವರುಗಳಲ್ಲಿ ವಾಸ್ತವವಾಗಿ ನಿರ್ಬಲತೆ ಇಲ್ಲದಿದ್ದರೂ ಅದರಿಂದ ಪೀಡಿತರಾಗಿರುವಂತೆ ಇವರ ನಡೆವಳಿಕೆಗಳಿಂದ ಕಂಡುಬರುತ್ತದೆ. ಮಿತಿಮೀರಿದ ಮದ್ಯಪಾನ ಮಾಡುವವರಲ್ಲೂ ಹೊಗೆಬತ್ತಿ ಸೇದುವವರಲ್ಲೂ ನಿತ್ರಾಣ ಕಂಡುಬರುವುದು ಸಾಮಾನ್ಯ. ವಿಷಾಣು ಸೋಂಕಿನಿಂದ ಅಥವಾ ಇನ್ನಾವುದಾದರೂ ಕಾರಣದಿಂದ ನರಮಂಡಲದಲ್ಲಿ ರೋಗ ಉಂಟಾಗಿ ವಿಷಮತೆ (ಟಾಕ್ಸಿಸಿಟಿ) ಕಂಡುಬಂದವರಲ್ಲೂ ನಿತ್ರಾಣ ಇರುತ್ತದೆ.

ಸ್ಥಳೀಯವಾಗಿ ನೆಲೆನಿಂತ ಸೋಂಕು (ಫೋಕಲ್ ಸೆಪ್ಸಿಸ್), ರಕ್ತಕಣಕೊರತೆ, ಬೆರಿಬೆರಿ, ಪೆಲ್ಲಾಗ್ರ, ಕ್ಷಯ, ಅಗ್ನಿಮಾಂದ್ಯ, ಮೂತ್ರಪಿಂಡರೋಗ, ಸಿಹಿಮೂತ್ರ ರೋಗ, ಮಿಕ್ಸಿಡೀಮಾ ಮುಂತಾದ ದೀರ್ಘಕಾಲಿಕ ರೋಗಗಳಲ್ಲಿ ನಿತ್ರಾಣ ಒಂದು ಸಾಧಾರಣ ಲಕ್ಷಣವಾಗಿರುತ್ತದೆ. ಸ್ಥಳೀಯ ಸೋಂಕು, ಟಾನ್ಸಿಲ್, ಮೇಲ್ದವಡೆ ಕುಹರ (ಮ್ಯಾಕ್ಸಿಲರಿ ಆಂಟ್ರಮ್), ನಡುಹಣೆ ಕುಹರ (ಫ್ರಾಂಟಲ್ ಸೈನಸ್) ಮುಂತಾದ ಕಡೆ ನೆಲೆನಿಂತ ಗುಪ್ತ ಸೋಂಕಾಗಿರಬಹುದು. ಇಂಥ ಸಂದರ್ಭಗಳಲ್ಲಿ ಈ ಸೋಂಕುಗಳು ನಿತ್ರಾಣವನ್ನು ಉಂಟುಮಾಡುತ್ತವೆ. ಅಲ್ಲದೆ ಬೇರೆ ಬೇರೆ ಕೀಲುಗಳಲ್ಲಿ ಬೇರೆ ಬೇರೆ ಕಾಲದಲ್ಲಿ ಇಲ್ಲವೇ ನಿರಂತರವಾಗಿ ನೋವನ್ನು ಉಂಟುಮಾಡುವ ಸಂಧಿವಾತ ರೋಗಕ್ಕೆ ಮೂಲವೂ ಆಗಿರುತ್ತದೆ. ದೀರ್ಘಕಾಲಿಕವಾಗಿ ಅಗ್ನಿಮಾಂದ್ಯಕ್ಕೆ ಕಾರಣವಾದ ಜಠರದ ಉರಿಯೂತ ಮುಂತಾದ ಜಠರ ಹಾಗೂ ಕರುಳುಗಳ ರೋಗಗಳಲ್ಲಿ ನಿತ್ರಾಣ ಒಂದು ಪ್ರಧಾನ ಲಕ್ಷಣವಾಗಿರಬಹುದು. ಇದಕ್ಕೆ ಈ ರೋಗ ಸ್ಥಿತಿಗಳಲ್ಲಿ ಕಂಡುಬರುವ ವಿಷಮತೆ ಒಂದೇ ಕಾರಣವಲ್ಲ. ಆಹಾರ ಸರಿಯಾಗಿ ಪಚನವಾಗಿ ಸ್ವಾಂಗೀಕೃತವಾಗದೇ ಇರುವುದೂ ಕಾರಣ. ಕೂರು ರೋಗ ಸಂದರ್ಭಗಳಲ್ಲಿ (ಅಕ್ಯೂಟ್ ಡಿಸೀಸಸ್) ರೋಗ ಗುಣಮುಖವಾದ ಮೇಲೆಯೇ ನಿತ್ರಾಣ ಕಂಡುಬರುತ್ತದೆ. ಇನ್‍ಫ್ಲೂಯೆಂಜಾ ಜ್ವರ ಬಂದು ವಾಸಿಯಾದ ಬಳಿಕ ಕಂಡುಬರುವ ತೀವ್ರ ನಿತ್ರಾಣವನ್ನು ಸಾಮಾನ್ಯವಾಗಿ ಎಲ್ಲರೂ ಅನುಭವಿಸಿಯೇ ಇರುತ್ತಾರೆ. ಶಸ್ತ್ರಕ್ರಿಯೆ, ಅಪಘಾತ ಇವುಗಳಿಂದಾದ ದೈಹಿಕ ಹಾಗೂ ಮಾನಸಿಕ ಧಕ್ಕೆಯ (ಟ್ರೌಮ್ಯಾಟಿಕ್ ಷಾಕ್) ಸಂದರ್ಭದಲ್ಲಿ ನಿತ್ರಾಣ ಆ ಕೂಡಲೇ ಕಂಡುಬರುವುದಲ್ಲದೆ ದೀರ್ಘಕಾಲಿಕವಾಗಿಯೂ ಇರುವುದು. ವಾರ್ಧಕ್ಯದಲ್ಲಿ (ಅಂದರೆ ವಯಸ್ಸು ಸಾಮಾನ್ಯವಾಗಿ 60 ಆದ ಬಳಿಕ) ಸಹಜವಾಗಿಯೇ ಕಂಡುಬರುವ ನಿತ್ರಾಣ ಆ ವಯಸ್ಸಿನ ವಿಶಿಷ್ಟವಾದ ಅಪಧಮನಿ ಪೆಡಸಣೆ ರೋಗದಿಂದ (ಆರ್ಟೀರಿಯೊ ಸ್ಕ್ಲೀರೋಸಿಸ್) ಉಲ್ಬಣಿಸಿದಂತಾಗುತ್ತದೆ. ಕುಡುಕರಲ್ಲಿ, ರಕ್ತದ ಒತ್ತಡದ ಏರಿಕೆ, ಪರಂಗಿರೋಗ, ಕ್ಷಯ, ಹೈಪೊಥೈರಾಯ್ಡಿಸಮ್, ಮುಂತಾದವುಗಳಿಂದ ನರಳುತ್ತಿರುವವರಲ್ಲಿ ವಾರ್ಧಕ್ಯದ ಮಾದರಿ ನಿತ್ರಾಣ ಇನ್ನೂ ಎಂಟು ಹತ್ತು ವರ್ಷಗಳ ಮುಂಚೆಯೇ ಕಂಡುಬರಬಹುದು. ಕೆಲವರಲ್ಲಿ ಈ ರೋಗಗಳು ಯಾವುವೂ ಇಲ್ಲದೆ ಈ ರೀತಿಯ ಕ್ಷಿಪ್ರ ನಿತ್ರಾಣ ಕಂಡುಬರಬಹುದು. ಇದು ಅವರವರ ಆನುವಂಶಿಕತೆ, ಶರೀರಧರ್ಮಗಳನ್ನು ಅವಲಂಬಿಸಿವೆ.

ಶರೀರ ಬಿಳಿಚಿಕೊಂಡಿರುವುದೂ ದೇಹ ಕೃಶವಾಗುವುದೂ ನಿತ್ರಾಣ ಸ್ಥಿತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳಾದರೂ ಇವಿಲ್ಲದೆ ಕೂಡ ನಿತ್ರಾಣ ಉಂಟಾಗಬಹುದು. ನ್ಯೂರಾಸ್ಥೀನಿಯಾ, ದೀರ್ಘಕಾಲಿಕ ಅಗ್ನಿಮಾಂದ್ಯ, ಗುಪ್ತವಾದ ಕ್ಷಯರೋಗ ಅಥವಾ ಮಧುಮೇಹ ರೋಗ, ಡಯಾಬಿಟೀಸ್ ಇನ್‍ಸಿಪಡಸ್, ಮುಂತಾದವು ಮುಖ್ಯವಾಗಿ ನಡುವಯಸ್ಸಿನವರಲ್ಲಿ ನಿತ್ರಾಣಕ್ಕೆ ಕಾರಣವಾಗಬಹುದು. ಜೀವನದ ಉತ್ತರಾರ್ಧದಲ್ಲಿ ಕಂಡುಬರುವ ನಿತ್ರಾಣಕ್ಕೆ ದೀರ್ಘಕಾಲಿಕ ಮೂತ್ರಪಿಂಡ ರೋಗ, ಗುಂಡಿಗೆಯ ಕವಾಟಗಳ ರೋಗ, ಸಿಹಿಮೂತ್ರರೋಗ, ಮಿಕ್ಸಿಡೀಮಾ, ಅಡಿಸನ್ನಿನ ರೋಗ ಮುಂತಾದವು ಸಾಮಾನ್ಯ ಕಾರಣಗಳು. ಕೆಲವು ವಿಶಿಷ್ಟ ರೀತಿಯ ನಿತ್ರಾಣಸ್ಥಿತಿಗಳನ್ನು ಈ ಕೆಳಗೆ ವಿವರಿಸಿದೆ.

ಆಸ್ಥೀನಿಯಾ ಗ್ರ್ಯಾವಿಸ್ ಹೈಪೊಫೈಸಿಯೋಜೀನಿಯಾ

[ಬದಲಾಯಿಸಿ]

ಇದು ಹೈಪೊಫೈಸೀಸ್ ಅಥವಾ ಪಿಟ್ಯುಟರಿ ಗ್ರಂಥಿಯ ಒಂದು ರೋಗ. ಕೃಶತೆ ನಿತ್ರಾಣಗಳಿಂದ ಒಡಗೂಡಿದ ಈ ಸ್ಥಿತಿಯಲ್ಲಿ ಹಸಿವಿಲ್ಲದಿರುವಿಕೆ, ಮಲಬದ್ಧತೆ, ರಕ್ತದಲ್ಲಿ ತಗ್ಗಿದ ಶರ್ಕರ ಮಟ್ಟ, ದೇಹೋಷ್ಣತೆ ಕಡಿಮೆ ಆಗಿರುವುದು, ಮಾಸಿಕ ಚಕ್ರದ ತಡೆ ಇವು ಕಂಡುಬರುತ್ತವೆ.

ಮಯಾಲ್ಜಿಕ್ ಆಸ್ಥೀನಿಯ

[ಬದಲಾಯಿಸಿ]

ಈ ಸ್ಥಿತಿಯಲ್ಲಿ ಬಳಲಿಕೆ ನಿತ್ರಾಣದ ಜೊತೆಗೆ ಮಾಂಸಖಂಡಗಳಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಸೈನಿಕರಲ್ಲಿ ಕಂಡುಬರುವ ನ್ಯೂರೋಸಕ್ರ್ಯುಲೇಟರಿ ಆಸ್ಥೀನಿಯಾ ಎಂಬ ನಿತ್ರಾಣಸ್ಥಿತಿ ಬೇರೆ ಸಾಮಾಜಿಕ ವ್ಯಕ್ತಿಗಳಲ್ಲೂ ಕಂಡುಬರಬಹುದು. ಕದನದಲ್ಲಿ ನಿರತರಾದ ಸೈನಿಕರ ಪೈಕಿ ಕೆಲವರಲ್ಲಿ ಕಂಡುಬರುವ ಈ ವಿಶಿಷ್ಟ ರೀತಿಯ ನಿತ್ರಾಣದಲ್ಲಿ ತೀವ್ರ ನಿಶ್ಶಕ್ತಿ, ಸ್ವಲ್ಪ ಕೆಲಸ ಮಾಡಿದರೂ ಏದುಸಿರು ಬಂದು ಸುಸ್ತಾಗುವುದು, ಎದೆಬಡಿತ ಮತ್ತು ಎದೆನೋವು ಇವು ಪ್ರಧಾನಲಕ್ಷಣಗಳು. ಇವು ಗುಂಡಿಗೆಯ ರೋಗ ಲಕ್ಷಣಗಳಂತೆಯೇ ಕಂಡುಬರುವುದರಿಂದ ತಾನು ನಿಜವಾಗಿಯೂ ಗುಂಡಿಗೆಯ ರೋಗದಿಂದಲೇ ಪೀಡಿತನಾಗಿರುವನೆಂದು ರೋಗಿ ಭ್ರಮಿಸಿ ಬಹುವಾಗಿ ಭಯಪಟ್ಟಿರುತ್ತಾನೆ. ಇವನಿಗೆ ಗುಂಡಿಗೆಯ ರೋಗ ಇಲ್ಲವೆಂದು ಮನದಟ್ಟು ಮಾಡಿಕೊಡುವುದು ಅಗತ್ಯ.

ಟ್ರಾಪಿಕಲ್ ಅನ್‍ಹೈಡ್ರಾಟಿಕ್ ಆಸ್ಥೀನಿಯಾ

[ಬದಲಾಯಿಸಿ]

ಇದು ಉಷ್ಣವಲಯದಲ್ಲಿ ತೇವಾಂಶ ಹೆಚ್ಚಾಗಿರುವ ಉಬ್ಬೆ ಆವರಣದಲ್ಲಿ ದೀರ್ಘಕಾಲ ಬಿಡದೆ ಕೆಲಸ ಮಾಡುವವರಲ್ಲಿ ಕಂಡುಬರುತ್ತದೆ. ಈ ವ್ಯಕ್ತಿಗಳಲ್ಲಿ ಬೆವರುವುದು ವಿಪರೀತವಾಗಿದ್ದು ಅವರು ಬಹುವಾಗಿ ಬಳಲಿದವರಾಗಿರುತ್ತಾರೆ. ಏಕಾಗ್ರತೆ ಇಲ್ಲದೆ ಇರುವುದು, ಶೀಘ್ರಕೋಪ ಬರುವುದು, ತಲೆನೋವು, ತಲೆಸುತ್ತು, ಜೂಗರಿಕೆ ಇವು ಇತರ ಲಕ್ಷಣಗಳು. ತಂಪಾದ ಶುಷ್ಕ ಹವೆ ಇರುವ ಕೊಠಡಿಯಲ್ಲಿ ವಿಶ್ರಾಂತಿ ಕೊಡುವುದು ಈ ಸ್ಥಿತಿಗೆ ಯುಕ್ತ ಚಿಕಿತ್ಸೆ.

ಆಸ್ಥೀನಿಯ ಪಿಗ್ಮೆಂಟೋಸಾ

[ಬದಲಾಯಿಸಿ]

ಅಡಿಸನ್ನನ ರೋಗಕ್ಕೆ ಇದು ಇನ್ನೊಂದು ಹೆಸರು. ಇದರಲ್ಲಿ ತೀವ್ರ ನಿತ್ರಾಣದ ಜೊತೆ ಜೊತೆಗೆ ದೇಹತೂಕ ಕಡಿಮೆಯಾಗುವಿಕೆ, ರಕ್ತದ ಒತ್ತಡ ಕಡಿಮೆಯಾಗುವಿಕೆ, ದೇಹದ ಕೆಲವು ಭಾಗಗಳು ಕಪ್ಪು ಬಣ್ಣಕ್ಕೆ ತಿರುಗುವುದು ಇವು ವಿಶಿಷ್ಟವಾಗಿ ಕಂಡುಬರುತ್ತವೆ. ಕಾರ್ಟಿಸಾನನ್ನು ಚಿಕಿತ್ಸಕ ಮದ್ದಾಗಿ ಬಳಸಿ ಈ ರೋಗವನ್ನು ಬಲುಬೇಗ ಸುಧಾರಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Marx, John (2010). Rosen's Emergency Medicine: Concepts and Clinical Practice (7th ed.). Philadelphia, PA: Mosby/Elsevier. p. Chapter 11. ISBN 978-0-323-05472-0.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನಿತ್ರಾಣ&oldid=1085517" ಇಂದ ಪಡೆಯಲ್ಪಟ್ಟಿದೆ