ನಾಗಲಾಂಬಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ನಾಗಮ್ಮ', 'ಅಕ್ಕನಾಗಮ್ಮ' ಎಂದು ಕರೆಯಿಸಿಕೊಳ್ಳುವ ಈಕೆ ಬಸವಣ್ಣನವರ ಸೋದರಿ. ಕಾಲ-೧೧೬೦, ತಂದೆ-ಮಾದರಸ ತಾಯಿ ಮಾದಲಾಂಬಿಕೆ. ಜನ್ಮ ಸ್ಥಳ -ಇಂಗಳೇಶ್ವರ ಬಾಗೆವಾಡಿ. ಗಂಡ ಶಿವದೇವ. ಮಗ - ಚೆನ್ನಬಸವಣ್ಣ. ಈಕೆ ಬಸವಣ್ಣನವರ ಉಜ್ವಲ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾಳೆ. ಕಲ್ಯಾಣದ ಮಹಾಮನೆ, ಅನಭವ ಮಂಟಪಗಳಲ್ಲಿ ಅನನ್ಯ ಕಾರ್ಯಕ್ಷಮತೆಯನ್ನು ತೋರುತ್ತಾಳೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣ ಬಳಗದ ನೇತೃತ್ವವಹಿಸಿ ಉಳುವಿಗೆ ಬರುತ್ತಾಳೆ. ಚೆನ್ನಬಸವಣ್ಣನ ಐಕ್ಯದ ನಂತರ ಚಿಕ್ಕಮಗಳೂರು ಜಿಲ್ಲೆ ಎಣ್ಣೆಹೊಳೆ ತೀರದ ತರೀಕೆರೆಯಲ್ಲಿ ಬಯಲಾಗುತ್ತಾಳೆ.

'ಬಸವಣ್ಣಪ್ರಿಯ ಚೆನ್ನಸಂಗಯ್ಯ' ಎಂಬುದು ಇವಳ ಅಂಕಿತ. ಸದ್ಯ ೧೫ ವಚನಗಳು ದೊರೆತಿವೆ. ಅವುಗಳಲ್ಲಿ ಬಸವಣ್ಣನವರ ಸ್ತುತಿಪರವಾದವುಗಳೇ ಅಧಿಕ. ಜೊತೆಗೆ ಇತರ ಶರಣರ ಪ್ರಸ್ತಾಪವೂ ಇದೆ. ಆಕೆಯ ಬದುಕಿನಲ್ಲಿ ಬಂದೆರಗಿದ ಎಡರುಗಳು, ಅವುಗಳನ್ನು ಧೈರ್ಯದಿಂದ ಎದುರಿಸಿದ ರೀತಿ ಕೆಲವು ವಚನಗಳಲ್ಲಿ ಪ್ರತಿಧ್ವನಿಸಿವೆ.


ಕೆಲವು ವಚನಗಳು[ಬದಲಾಯಿಸಿ]

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ

ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ !

ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ

ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು ?

ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು

ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ.

ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ.

ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ.

ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ.

ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ

ಪ್ರಾಣಲಿಂಗವಾಗಿ ಹೋದೆಯ ಸಂಗನಬಸವಣ್ಣಾ ?

೮೦೦

ಶ್ರೀಗುರುವೆ ತಾಯಿತಂದೆಯಾಗಿ, ಲಿಂಗವೆ ಪತಿಯಾಗಿ,

ಜಂಗಮವೆ ಅತ್ತೆಮಾವಂದಿರಾಗಿ, ಶಿವಭಕ್ತರೆ ಬಾಂಧವರಾಗಿ,

ಸತ್ಯಸದಾಚಾರವೆಂಬ ಮನೆಗೆ ಕಳುಹಿದರಾಗಿ,

ಶರಣಸತಿ ಎಂಬ ನಾಮ ನಿಜವಾಯಿತ್ತು.

ಆದಂತೆ ಇರುವೆ, ಹಿಂದುಮುಂದರಿಯದೆ ನಡೆವೆ.

ಮನಕ್ಕೆ ಮನಸಾಕ್ಷಿಯಾಗಿ ಮಾಡುವೆ,

ಬಸವಣ್ಣಪ್ರಿಯ ಚೆನ್ನಸಂಗಯ್ಯಾ ನಿಮ್ಮಡಿಗಳಿಗೆ.


೭೯೧

ಎನ್ನ ಕುಲಸೂತಕವ ಕಳೆದಾತ ಬಸವಣ್ಣ.

ಎನ್ನ ಛಲಸೂತಕವ ಕಳೆದಾತ ಬಸವಣ್ಣ.

ಎನ್ನ ತನುಸೂತಕವ ಕಳೆದಾತ ಬಸವಣ್ಣ.

ಎನ್ನ ಮನಸೂತಕವ ಕಳೆದಾತ ಬಸವಣ್ಣ.

ಎನ್ನ ನೆನಹುಸೂತಕವ ಕಳೆದಾತ ಬಸವಣ್ಣ.

ಎನ್ನ ಭಾವಸೂತಕವ ಕಳೆದಾತ ಬಸವಣ್ಣ.

ಎನ್ನ ಅರುಹುಮರಹಿನ ಸಂದುಸಂಶಯವಬಿಡಿಸಿದಾತ ಬಸವಣ್ಣ.

ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ.

ತನ್ನ ಎನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ.

ನಿಜದ ನಿರ್ವಯಲ ಬಾಗಿಲ ನಿಜವ ತೋರಿದಾತ ಬಸವಣ್ಣ.

ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯಕಮಲದಲ್ಲಿ

ನಿಜನಿವಾಸಿಯಾಗಿರಿಸಿದ ಎನ್ನ ತಂದೆ ಸಂಗನಬಸವಣ್ಣನು.