ವಿಷಯಕ್ಕೆ ಹೋಗು

ದ್ವಿರುಕ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ (ದ್ವಿಃ ಉಕ್ತಿ - ದ್ವಿರುಕ್ತಿ) ಎನ್ನುವರು. ದ್ವಿರುಕ್ತಿಗಳನ್ನು ಜೋಡು ನುಡಿಗಟ್ಟುಗಳೆಂದು ತಪ್ಪಾಗಿ ತಿಳಿಯಬಾರದು.

  1. ತಿಂಡಿ ತೀರ್ಥ
ಮನೆಮನೆಗಳನ್ನು ತಿರುಗಿ ಭಿಕ್ಷೆ ಬೇಡಿದರು.
  1. ಮಗನೇ, ಬೇಗಬೇಗ ಬಾ.
  2. ಮಕ್ಕಳು ಓಡಿಓಡಿ ದಣಿದರು.
  3. ಅಕ್ಕಟಕ್ಕಟಾ ! ಕಷ್ಟ, ಕಷ್ಟ.
  4. ಈಗೀಗ ಅವನು ಚೆನ್ನಾಗಿ ಓದುತ್ತಿದ್ದಾನೆ.
  5. ದೊಡ್ಡ್ದದೊಡ್ದ ಮಕ್ಕಳು ಬಂದರು.

ಇಲ್ಲಿ, ಮನೆಮನೆ, ಬೇಗಬೇಗ, ಓಡಿಓಡಿ, ಅಕ್ಕಟಕ್ಕಟಾ, ಕಷ್ಟಕಷ್ಟ, ಈಗೀಗ, ದೊಡ್ಡ್ದದೊಡ್ದ ಶಬ್ದಗಳನ್ನು ಎರಡೆರಡು ಸಲ ಪ್ರಯೋಗಿಸಲಾಗಿದೆ.

ಮನೆಮನೆಗಳನ್ನು ತಿರುಗಿ ಎಂಬಲ್ಲಿ ಪ್ರತಿಯೊಂದು ಮನೆಯನ್ನೂ ತಿರುಗಿ ಎಂಬರ್ಥವೂ, ಬೇಗಬೇಗ ಬಾ ಎಂಬಲ್ಲಿ ಅವಸರವೂ (ತ್ವರೆ) ಎಂಬರ್ಥವೂ ವ್ಯಕ್ತವಾಗುವುದು. ಓಡಿಓಡಿ ದಣಿದರು ಎಂಬಲ್ಲಿ ಆಧಿಕ್ಯ ವೂ(ಹೆಚ್ಚು ಓಡಿದನೆಂಬ)ವ್ಯಕ್ತವಾಗುವುದು.

ದ್ವಿರುಕ್ತಿಯು ಸಾಮಾನ್ಯವಾಗಿ ಉತ್ಸಾಹ, ಆಧಿಕ್ಯ (ಹೆಚ್ಚು)ದಲ್ಲಿ, ಪ್ರತಿಯೊಂದೂ ಎಂಬರ್ಥದಲ್ಲಿ, ಕೋಪ, ಸಂಭ್ರಮ, ಆಶ್ಚರ್ಯ, ಆಕ್ಷೇಪ, ಹರ್ಷ, ಒಪ್ಪಿಗೆ (ಸಮ್ಮತಿ), ಅವಸರ (ತ್ವರೆ), ಅನುಕ್ರಮ, ಆದರ, ಅನೇಕ ವಸ್ತುಗಳಲ್ಲಿ ಒಂದನ್ನೇ ಗುರುತಿಸಿ ಹೇಳುವಾಗ ಉಪಯೋಗಿಸುತ್ತೇವೆ.

1. ಉತ್ಸಾಹ ಎಂಬರ್ಥದಲ್ಲಿ  :-

  1. ಹೌದು, ಹೌದು ! ನಾನೇ ಗೆದ್ದೆ.
  2. ನಿಲ್ಲು,ನಿಲ್ಲು ! ನಾನೂ ಬರುತ್ತೇನೆ.
  3. ಇಗೋ  ! ನಾನೂ ಬಂದೆ, ನಾನೂ ಬಂದೆ.

2. ಹೆಚ್ಚು (ಆಧಿಕ್ಯ)ಎಂಬರ್ಥದಲ್ಲಿ :-

  1. ದೊಡ್ಡ ದೊಡ್ಡ ಕಾಯಿಗಳು ಬಿಟ್ಟಿವೆ.
  2. ಹೆಚ್ಚು ಹೆಚ್ಚು ಜನರು ಸೇರಬೇಕು.

3. ಪ್ರತಿಯೊಂದು ಎಂಬರ್ಥದಲ್ಲಿ :-

  1. ಮನೆಮನೆಗಳನ್ನು ತಿರುಗಿದನು.
  2. ಕೇರಿಕೇರಿಗಳನ್ನು ಅಲೆದನು.
  3. ಊರೂರು ತಿರುಗಿ ಬೇಸತ್ತನು.

4. ಕೋಪ ಎಂಬರ್ಥದಲ್ಲಿ  :-

  1. ಎಲೆಲಾ ! ಮೂರ್ಖ ! ನಿಲ್ಲು, ನಿಲ್ಲು, ಬಂದೆ.
  2. ಎಲೆಲೆ ! ನಿನ್ನನ್ನು ಕೊಲ್ಲದೆ ಬಿಡುವೆನೆ ?
  3. ಕಳ್ಳಾ,ಕಳ್ಳಾ,, ನಿನಗಿದೆ ಶಿಕ್ಷೆ  !

5. ಸಂಭ್ರಮ ಎಂಬರ್ಥದಲ್ಲಿ :-

  1. ಅಗೋ ! ಅಗೋ ! ಎಷ್ಟು ಚೆನ್ನಾಗಿದೆ !
  2. ಬನ್ನಿ, ಬನ್ನಿ,, ಕುಳಿತುಕೊಳ್ಳಿ.
  3. ಹತ್ತಿರ ಬಾ, ಹತ್ತಿರ ಬಾ
  4. ಮೇಲೆ ಕೂಡಿರಿ! ಮೇಲೆ ಕೂಡಿರಿ!

6. ಆಶ್ಚರ್ಯ ಎಂಬರ್ಥದಲ್ಲಿ :-

  1. ಅಬ್ಬಬ್ಬಾ! ಎಂಥಾ ರಮ್ಯ ನೋಟವಿದು !
  2. ಅಹಹಾ! ರುಚಿಕರ ಊಟವಿದು !

7. ಆಕ್ಷೇಪಾರ್ಥ ಎಂಬರ್ಥದಲ್ಲಿ :-

  1. ಬೇಡ ಬೇಡ,ಅವನಿಗೆ ಕೊಡಬೇಡ.
  2. ನಡೆ ನಡೆ, ದೊಡ್ಡವರ ರೀತಿ ಅವನಿಗೇಕೆ?
  3. ಎಲೆಲಾ! ನಿನ್ನಂಥವನು ಹೀಗೆ ನುಡಿಯಬಹುದೇ?

8. ಹರ್ಷ ಎಂಬರ್ಥದಲ್ಲಿ  :-

  1. ಅಹಹಾ,ನಾವೇ ಧನ್ಯರು !
  2. ಅಮ್ಮಾ,, ಅಮ್ಮಾ,, ನಾನೇ ಈ ಚಿತ್ರ ಬರೆದವಳು.
  3. ನಿಲ್ಲಿ ನಿಲ್ಲಿ! ನಾನೂ ನೋಡಲು ಬರುತ್ತೇನೆ.

9. ಒಪ್ಪಿಗೆಯ (ಸಮ್ಮತಿ) ಎಂಬರ್ಥದಲ್ಲಿ  :-

  1. ಹೌದು ಹೌದು, ಯೋಗ್ಯನಿಗೇ ಸಂಭಾವನೆ ದೊರಕಿದೆ.
  2. ಆಗಲಿ ಆಗಲಿ, ನೀವು ಬರುವುದು ಸಂತೋಷಕರ.
  3. ಇರಲಿ ಇರಲಿ, ಉತ್ತಮನಾದವನೇ ಇರಲಿ.

10. ಅವಸರ (ತ್ವರೆ) ಎಂಬರ್ಥದಲ್ಲಿ  :-

  1. ಓಡು ಓಡು, ಬೇಗಬೇಗ ಓಡು.
  2. ನಡೆ ನಡೆ, ಹೊತ್ತಾಯಿತು.
  3. ಬಾ ಬಾ, ಬೇಗಬೇಗ ಬಾ.

11. ಅನುಕ್ರಮ ಎಂಬರ್ಥದಲ್ಲಿ  :-

  1. ಗಿಡವು ಮೊದಮೊದಲು ಚಿಕ್ಕಚಿಕ್ಕ ಎಲೆಗಳನ್ನೂ, ಆಮೇಲೆ ದೊಡ್ಡ ದೊಡ್ಡ ಎಲೆಗಳನ್ನೂ ಬಿಡುತ್ತದೆ.
  2. ಚಿಕ್ಕ ಚಿಕ್ಕ ಮಕ್ಕಳು ಮೊದಲು ಊಟ ಮಾಡಲಿ, ಆಮೇಲೆ ದೊಡ್ಡ ದೊಡ್ಡ ಮಕ್ಕಳು ಊಟ ಮಾಡಲಿ.
  3. ದೊಡ್ಡ ದೊಡ್ಡ ವಿಚಾರಗಳನ್ನು ದೊಡ್ಡದೊಡ್ಡವರಿಂದಲೇ ಕೇಳಬೇಕು.

12. ಆದರ ಎಂಬರ್ಥದಲ್ಲಿ  :-

  1. ಅಣ್ಣಾ ಬಾ ಬಾ, ಮೊದಲು ಊಟ ಮಾಡು.
  2. ಇತ್ತ ಬನ್ನಿ, ಇತ್ತ ಬನ್ನಿ,, ಮೇಲೆ ಕುಳಿತುಕೊಳ್ಳಿ.
  3. ಭಾವ ಬಂದ, ಭಾವ ಬಂದ, ಕಾಲಿಗೆ ನೀರು ಕೊಡು.

13. ಒಂದನ್ನು ಗುರುತಿಸು ಎಂಬರ್ಥದಲ್ಲಿ :-

  1. ಈ ನಾಣ್ಯದ ಚೀಲದಲ್ಲಿ ಒಂದೊಂದು ಕಾಸು ತೆಗೆದು ಒಬ್ಬೊಬ್ಬನಿಗೆ ಹಂಚು.
  2. ಈ ಹಣ್ಣುಗಳಲ್ಲಿ ಚಿಕ್ಕ ಚಿಕ್ಕದ್ದನ್ನು ಆರಿಸಿ ಬೇರೆ ಇಡು.
  3. ದೊಡ್ಡ ದೊಡ್ಡ ಕಲ್ಲುಗಳನ್ನೇ ಎತ್ತಿ ತಾ.

ದ್ವಿರುಕ್ತಿಯಲ್ಲಿ ಕಾಣುವ ಕೆಲವು ವಿಶೇಷ ರೂಪಗಳು  :-

  1. ಮೊದಲು+ಮೊದಲು=ಮೊಟ್ಟಮೊದಲು-ಮೊತ್ತಮೊದಲು
  2. ಕಡೆಗೆ+ಕಡೆಗೆ=ಕಡೆಕಡೆಗೆ-ಕಟ್ಟಕಡೆಗೆ
  3. ನಡುವೆ+ನಡುವೆ=ನಡುನಡುವೆ-ನಟ್ಟನಡುವೆ
  4. ಬಯಲು+ಬಯಲು=ಬಟ್ಟಬಯಲು-ಬಚ್ಛಬಯಲು
  5. ತುದಿ+ತುದಿ=ತುಟ್ಟತುದಿ-ತುತ್ತತುದಿ
  6. ಕೊನೆಗೆ+ಕೊನೆಗೆ=ಕೊನೆಕೊನೆಗೆ
  7. ಮೆಲ್ಲನೆ+ಮೆಲ್ಲನೆ=ಮೆಲ್ಲಮೆಲ್ಲನೆ
  8. ಕೆಳಗೆ + ಕೆಳಗೆ =ಕೆಳಕೆಳಗೆ