ವಿಷಯಕ್ಕೆ ಹೋಗು

ದ್ವಂದ್ವ ಸಮಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎರಡು ಅಥವಾ ಅನೇಕ ನಾಮಪದಗಳೂ ಸಹಯೋಗ ತೋರುವಂತೆ ಸೇರಿ, ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸವೆಂದು ಹೆಸರು.

  1. ಆತನು ಹೊಲಮನೆ ಮಾಡಿಕೊಂಡ್ಡಿದ್ದಾನೆ.
  2. ಕೆರೆಕಟ್ಟೆಗಳನ್ನು ಕಟ್ಟಿಸಿದನು.

ಈ ವಾಕ್ಯಗಳಲ್ಲಿ ಕಾಣುವ ಹೊಲಮನೆ, ಕೆರೆಕಟ್ಟೆ ಪದಗಳನ್ನು ಬಿಡಿಸಬಹುದು. ಹಾಗೆ, ಬಿಡಿಸಿ ಬರೆದಾಗ

  • ಹೊಲವನ್ನು+ಮನೆಯನ್ನು= ಹೊಲಮನೆಯನ್ನು ಅಥವಾ ಹೊಲಮನೆಗಳನ್ನು ಎಂದೂ
  • ಕೆರೆಯನ್ನು+ಕಟ್ಟೆಯನ್ನು= ಕೆರೆಕಟ್ಟೆಯನ್ನು ಅಥವಾ ಕೆರೆಕಟ್ಟೆಗಳನ್ನು ಎಂದೂ

ಹೇಳಬಹುದು.

ಇಲ್ಲಿ, ಇತರ ಸಮಾಸಗಳಂತೆ ಪೂರ್ವದ ಅಥವಾ ಉತ್ತರದ ಯಾವುದಾದರೊಂದು ಪದದ ಅರ್ಥಕ್ಕೆ ಪ್ರಾಧಾನ್ಯತೆಯಿರದೆ, ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುವವು.

ಹೊಲವನ್ನು ಮಾಡಿಕೊಂಡನು, ಮನೆಯನ್ನು ಮಾಡಿಕೊಂಡನು ಎಂದರೆ, ಹೊಲ, ಮನೆ ಎರಡೂ ಪದಗಳಿಗೆ ಸಹಯೋಗ ತೋರುತ್ತದೆ.

ಹೊಲಕ್ಕೆ ಮನೆಯ, ಮನೆಗೆ ಹೊಲದ ಸಹಯೋಗ ಕರ್ತೃವಿಗೆ ಇದೆಯೆಂಬ ಅರ್ಥ. ಹಾಗೆಯೇ, ಕೆರೆಯನ್ನು, ಕಟ್ಟೆಯನ್ನು ಇವೆರಡು ಪದಗಳಿಗೂ ಕರ್ತೃಪದಕ್ಕೂ ಸಹಯೋಗವಿರುತ್ತದೆ.

ಹೀಗೆ ಸಹಯೋಗ ತೋರುವಂತೆ ಹೇಳುವ ಸಮಾಸವೇ ದ್ವಂದ್ವ ಸಮಾಸ. ಈ ಸಮಾಸದಲ್ಲಿ ಎರಡಕ್ಕಿಂತ ಹೆಚ್ಚು ಪದಗಳೂ ಇರಬಹುದು.

  • ಕನ್ನಡ - ಕನ್ನಡ ಪದಗಳು
  1. ಕೆರೆಯೂ+ಕಟ್ಟೆಯೂ+ಬಾವಿಯೂ - ಕೆರೆಕಟ್ಟೆಬಾವಿ ಅಥವಾ ಕೆರೆಕಟ್ಟೆಬಾವಿಗಳು
  2. ಗಿಡವೂ+ಮರವೂ+ಬಳ್ಳಿಯೂ+ಪೊದೆಯೂ - ಗಿಡಮರಬಳ್ಳಿಪೊದೆ ಅಥವಾ ಗಿಡಮರಬಳ್ಳಿಪೊದೆಗಳು
  3. ಆನೆಯೂ+ಕುದುರೆಯೂ+ಒಂಟೆಯೂ - ಆನೆಕುದುರೆಒಂಟೆ ಅಥವಾ ಆನೆಕುದುರೆಒಂಟೆಗಳು
  4. ಗುಡುಗೂ+ಸಿಡಿಲೂ+ಮಿಂಚೂ - ಗುಡುಗುಸಿಡಿಲುಮಿಂಚು ಅಥವಾ ಗುಡುಗುಸಿಡಿಲುಮಿಂಚುಗಳು
  • ಸಂಸ್ಕೃತ - ಸಂಸ್ಕೃತ ಪದಗಳು
  1. ಗಿರಿಯೂ+ವನವೂ+ದುರ್ಗವೂ - ಗಿರಿವನದುರ್ಗ ಅಥವಾ ಗಿರಿವನದುರ್ಗಗಳು
  2. ಸೂರ್ಯನೂ+ಚಂದ್ರನೂ+ನಕ್ಷತ್ರವೂ - ಸೂರ್ಯಚಂದ್ರನಕ್ಷತ್ರ ಅಥವಾ ಸೂರ್ಯಚಂದ್ರನಕ್ಷತ್ರಗಳು
  3. ಕರಿಯೂ+ತುರಗವೂ+ರಥವೂ - ಕರಿತುರಗರಥ ಅಥವಾ ಕರಿತುರಗರಥಗಳು

ಇಲ್ಲಿ ದ್ವಂದ್ವ ಸಮಾಸವಾದ ಮೇಲೆ, ಸಮಸ್ತಪದವು, ಏಕವಚನವಾಗಿಯೂ, ಬಹುವಚನವಾಗಿಯೂ ಅಂತ್ಯಗೊಳ್ಳುವುದುಂಟು. ಏಕವಚನವಾಗಿ ಅಂತ್ಯಗೊಂಡರೆ, ಸಮಾಹಾರ ದ್ವಂದ್ವ ಸಮಾಸವೆಂದೂ, ಬಹುವಚನವಾಗಿ ಅಂತ್ಯಗೊಂಡರೆ, ಇತರೇತರ ದ್ವಂದ್ವ ಸಮಾಸವೆಂದು ಹೆಸರು.