ದೊಡ್ಡ ಮನುಷ್ಯನೊಳಗಿನ ಸೂಕ್ಷ್ಮ ಜೀವಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ದೊಡ್ಡ ಮನುಷ್ಯನೊಳಗಿನ ಸೂಕ್ಷ್ಮ ಜೀವಿಗಳು


ನಮೆಲ್ಲರಿಗೆ ಒಂದೊಂದೇ ಹೆಸರು – ರಂಗ, ರಾಬರ್ಟ್, ರಹೀಮ್ ಇತ್ಯಾದಿ. ಒಂದು ದೇಹ, ಒಂದು ಜೀವ ಎಂಬ ಲೆಕ್ಕದಲ್ಲಿ ಒಂದೇ ಹೆಸರು. ಈ ಒಂಟಿ ದೇಹದ ಮೇಲೆ ನಮಗೆ ಬಲು ಮೋಹ, ಬಲು ಹೆಮ್ಮೆ. ಒಂದು ಜೀವಕ್ಕೆ ಒಂದು ಹೆಸರೇ? ಹಾಗಾದರೆ ಒಬ್ಬೊಬ್ಬ ಮನುಷ್ಯನಿಗೂ ಒಂದಲ್ಲ, ನೂರು ಲಕ್ಷ ಕೋಟಿ ಹೆಸರುಗಳಿರಬೇಕಾಗುತ್ತದೆ! ಏಕೆಂದರೆ ಪ್ರತೀ ಮನುಷ್ಯನ ದೇಹದಲ್ಲೂ ಅಷ್ಟೊಂದು ಜೀವಿಗಳು ಸೇರಿಕೊಂಡಿರುತ್ತವೆ! ಅತಿಯಾದ ಹೆಮ್ಮೆಗೂ ಇಂಬಿಲ್ಲ; ಈ ಅನ್ಯ ಜೀವಿಗಳ ನೆರವಿಲ್ಲದೆ ನಮ್ಮೀ ದೊಡ್ಡ ಜೀವವು ಆರೋಗ್ಯದಿಂದಿರಲಾರದು!

ನಮ್ಮ ವಿವಿಧ ಅಂಗಗಳಲ್ಲಿರುವ ಮಾನವ ಜೀವಕಣಗಳ ಸಂಖ್ಯೆ ಸುಮಾರು ಹತ್ತು ಲಕ್ಷ ಕೋಟಿ. ಬರಿ ಕಣ್ಣಿಗೆ ಕಾಣಿಸುವ ಹೇನುಗಳು ಹಾಗೂ ಹುಳುಗಳಂತಹ ಪರಾವಲಂಬಿಗಳು ಒಂದಷ್ಟು. ಇವನ್ನೆಲ್ಲ ಮೀರಿಸುವಂತೆ, ಬರಿ ಕಣ್ಣಿಗೆ ಕಾಣಿಸದ ಸಾವಿರಾರು ಬಗೆಯ ಸೂಕ್ಷ್ಮಜೀವಿಗಳು ನಮ್ಮ ದೇಹದಲ್ಲಿ ಹಾಸುಹೊಕ್ಕಾಗಿವೆ. ಹೊರ ಜಗತ್ತಿಗೆ ತೆರೆದುಕೊಂಡಿರುವ ನಮ್ಮ ಚರ್ಮ, ಬಾಯಿ, ಅನ್ನ ನಾಳ, ಕರುಳುಗಳು, ಮೂತ್ರಾಂಗಗಳು ಹಾಗೂ ಶ್ವಾಸನಾಳಗಳಲ್ಲಿ ಮನೆ ಮಾಡಿಕೊಂಡಿರುವ ಸೂಕ್ಷ್ಮಾಣುಗಳ ಸಂಖ್ಯೆ ನೂರು ಲಕ್ಷ ಕೋಟಿಗೂ ಹೆಚ್ಚು! ಅಂದರೆ ನಮ್ಮ ದೇಹದಲ್ಲಿ ನಮ್ಮ ಜೀವಕಣಗಳಿಗಿಂತ ನಾವಲ್ಲದ ಸೂಕ್ಷ್ಮಾಣುಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಿಗಿದೆ!

ನಾವು ತಿನ್ನುವ ಆಹಾರವೇ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳಿಗೂ ಆಹಾರವಾಗುವುದರಿಂದ, ನಮ್ಮ ಆಹಾರವು ಸರಿಯಿಲ್ಲದಿದ್ದರೆ ಉಪಕಾರಿ ಹಾಗೂ ಅಪಕಾರಿ ಬ್ಯಾಕ್ಟೀರಿಯಾಗಳ ಅತಿ ಸೂಕ್ಷ್ಮವಾದ ಸಮತೋಲನವು ಕೆಟ್ಟು ರೋಗಗಳಿಗೆ ಕಾರಣವಾಗಬಹುದೆನ್ನುವ ಆಸಕ್ತಿದಾಯಕವಾದ ಕೆಲವು ಊಹೆಗಳು ಇತ್ತೀಚೆಗೆ ಪ್ರಕಟವಾಗಿವೆ. ನಾವಿಂದು ಕಾಣುತ್ತಿರುವ ಆಧುನಿಕ ರೋಗಗಳಿಗೂ, ನಮ್ಮ ಆಧುನಿಕ ಆಹಾರಕ್ಕೂ ಈ ಸೂಕ್ಷ್ಮಾಣುಗಳೇ ಕೊಂಡಿಗಳಾಗಿರುವ ಸಾಧ್ಯತೆಗಳಿವೆ. ಮನುಷ್ಯನ ಮೂಲ ಆಹಾರವು ನಾರುಭರಿತವಾದ, ಜೀವಂತವಾದ ಸಸ್ಯಗಳಿಂದಲೂ, ಬಗೆಬಗೆಯ ಮೊಟ್ಟೆ, ಮೀನು ಹಾಗೂ ಮಾಂಸಗಳಿಂದಲೂ ಮಾಡಲ್ಪಟ್ಟಿದ್ದರೆ, ಇಂದು ನಾರೂ ಇಲ್ಲದ, ಜೀವವೂ ಇಲ್ಲದ ಸಕ್ಕರೆಭರಿತವಾಗಿರುವ ಸಂಸ್ಕರಿತ ಆಹಾರವನ್ನೇ ನಾವು ತಿನ್ನುತ್ತಿದ್ದೇವೆ. ಇಂತಹಾ ಸಕ್ಕರೆಯ ಮುದ್ದೆಯು ಬಾಯಿಯಲ್ಲೂ, ಕರುಳಲ್ಲೂ ಇರುವ ಉಪಕಾರಿ ಬ್ಯಾಕ್ಟೀರಿಯಾಗಳಿಗೆ ಒಗ್ಗದೆ, ಅಪಕಾರಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ ಹಾಗೂ ಹಾನಿಕಾರಕ ಸಂಯುಕ್ತಗಳನ್ನು ಬಿಡುಗಡೆಗೊಳಿಸುತ್ತದೆ. ಇದರಿಂದಾಗಿಯೇ ಒಸಡಿನ ಕಾಯಿಲೆಗಳೂ, ದಂತಕ್ಷಯವೂ ಉಂಟಾಗುತ್ತವೆ; ಹಸಿವು-ಸಂತೃಪ್ತಿಯ ಜಾಲದ ಮೇಲಿನ ದುಷ್ಪರಿಣಾಮಗಳಿಂದಾಗಿ ಬೊಜ್ಜು ಹೆಚ್ಚುತ್ತದೆ; ಉರಿಯೂತವೂ ಹೆಚ್ಚಿ ಕರುಳಿನಲ್ಲೂ,ಇತರ ಅಂಗಗಳಲ್ಲೂ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಆದ್ದರಿಂದ ನಾವು ಆರೋಗ್ಯದಿಂದಿರಬೇಕಾದರೆ ನಮ್ಮೊಳಗಿರುವ ಉಪಕಾರಿ ಸೂಕ್ಷ್ಮಜೀವಿಗಳ ಹಿತವನ್ನು ಕಾಯಬೇಕು, ಅವುಗಳಿಗೆ ಹೊಂದುವ ನಿಸರ್ಗದತ್ತವಾದ ಆಹಾರವನ್ನೇ ತಿನ್ನಬೇಕು. ಅನಗತ್ಯವಾಗಿ ಪದೇ ಪದೇ ಆಂಟಿಬಯಾಟಿಕ್ ಗಳನ್ನು ಸೇವಿಸಬಾರದು. ಚರ್ಮವನ್ನು ತೊಳೆಯಲು ಕ್ರಿಮಿನಾಶಕ ಸೋಪುಗಳನ್ನು ಬಳಸದಿರುವುದೇ ಒಳ್ಳೆಯದು.