ದೇಶ ಕಾಲ (ತ್ರೈಮಾಸಿಕ)
ದೇಶ ಕಾಲ ಬೆಂಗಳೂರಿನಿಂದ ಪ್ರಕಟವಾಗುವ ತ್ರೈಮಾಸಿಕ ಪತ್ರಿಕೆ.
ಸಂಪಾದಕರು: ವಿವೇಕ ಶಾನಭಾಗ. ದೇಶ ಕಾಲ ಐದು ವರ್ಷಗಳನ್ನು ಪೂರೈಸಿದಾಗ ಒಂದು ವಿಶೇಷ ಸಂಚಿಕೆಯನ್ನು ಹೊರತಂದಿತು. ಇದು ಕನ್ನಡ ಸಾಹಿತ್ಯದ ಕಥೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ ಎಲ್ಲಾ ರಂಗಗಳಲ್ಲೂ ಹರಿಯುತ್ತಿರುವ ಹೊಸ ಸಂವೇದನೆಗಳನ್ನು ದಾಖಲಿಸುವುದರೊಂದಿಗೇ ಕನ್ನಡದ ಬಹುಮುಖ್ಯ ಬರಹಗಾರರೆಲ್ಲರ ಬರಹಗಳನ್ನೂ ಒಳಗೊಂಡಿದ್ದು ಒಂದು ಬಗೆಯ ಸಾಹಿತ್ಯ ಚರಿತ್ರೆಯನ್ನೇ ಕಟ್ಟಿಕೊಡುವಂತಿದೆ. ಹೊಸ ಬರಹಗಾರರನ್ನೂ, ಕನ್ನಡದ ಮಹತ್ವದ ಕೃತಿಗಳನ್ನೂ ಗುರುತಿಸುವುದರೊಂದಿಗೇ ತನ್ನ ಬಹು ಮುಖ್ಯ ಬರಹಗಾರರೆಲ್ಲರ ಕುರಿತೂ ಸಾಹಿತಿ ಜಯಂತ ಕಾಯ್ಕಿಣಿಯವರ ಪುಟ್ಟ ಪರಿಚಯವನ್ನು ಒದಗಿಸಿರುವುದು ಮಹತ್ವದ ಅಂಶ. ದೇಶ ಕಾಲ ಕಳೆದ ಐದು ವರ್ಷಗಳಲ್ಲಿ ಕನ್ನಡದ, ದೇಶದ ಇತರ ಭಾಷೆಗಳ ಎಂತೋ ಅಂತೆಯೇ ಜಗತ್ತಿನ ಸಾಹಿತ್ಯವನ್ನು ಕೂಡಾ ಕನ್ನಡಿಗರಿಗೆ ಪರಿಚಯಿಸಿದೆ. ಹೊಸ ಬರಹಗಾರರನ್ನು ಪ್ರೋತ್ಸಾಹಿಸಿದೆ, ತಮ್ಮ ಕಲೆಗಾರಿಕೆಯನ್ನು ಉತ್ತಮಪಡಿಸಿಕೊಳ್ಳುವ ಸವಾಲೊಡ್ಡಿದೆ. ಸಮಯ ಪರೀಕ್ಷೆ ಎನ್ನುವ ಒಂದು ಪ್ರತ್ಯೇಕ ವಿಭಾಗದಲ್ಲಿ ನಾಡು ನುಡಿಯ ಜ್ವಲಂತ ಸಮಸ್ಯೆ, ಚರ್ಚೆ, ವಿದ್ಯಮಾನಗಳನ್ನು ಎತ್ತಿಕೊಂಡು ಪ್ರಾಜ್ಞರಿಂದ ಸಂವಾದ-ಜಿಜ್ಞಾಸೆಗಳು ನಡೆಯುವುದಕ್ಕೆ ವೇದಿಕೆಯೊಂದನ್ನು ನಿರ್ಮಿಸಿ ತನ್ನ ಹೆಸರಿನಂತೆಯೇ ದೇಶಕ್ಕೂ ಕಾಲಕ್ಕೂ ಸಮನ್ವಯಕಾರನ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಸಂಪಾದಕ ವಿವೇಕ್ ಶಾನಭಾಗ, ವಿನ್ಯಾಸಕಾರ-ಚಿತ್ರಕಾರ ಮತ್ತು ನೀನಾಸಂನ ಪ್ರತಿಭೆ ಚನ್ನಕೇಶವ ಮತ್ತು ಹೆಗ್ಗೋಡಿನ ನೀನಾಸಂನ ಕೆ.ವಿ.ಅಕ್ಷರರ ಶ್ರಮ-ಸಮಯ ಮತ್ತು ಅರ್ಪಣಾ ಮನೋಭಾವವೇ ದೇಶ-ಕಾಲದ ಹಿಂದಿರುವ ಮೂಲಶಕ್ತಿಯಾದರೂ ತಮ್ಮ ತಮ್ಮ ಸಂಪರ್ಕಗಳು, ಸ್ನೇಹಿತರು, ಸಾಹಿತಿಗಳು ಎಲ್ಲರನ್ನೂ ಸೇರಿಸಿಕೊಂಡು ಈ ಪತ್ರಿಕೆ ಸಮೃದ್ಧವಾಗಿ ಬರುತ್ತಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |