ದೇವಲಕುಂದ ವಾದಿರಾಜ್
ದೇವಲಕುಂದ ವಾದಿರಾಜ್ | |
---|---|
Born | ಮಾರ್ಚ್ ೨೦, ೧೯೨೦ ಕುಂದಾಪುರ ತಾಲ್ಲೂಕಿನ ದೇವಲಕುಂದ |
Died | ಫೆಬ್ರುವರಿ ೨೨, ೧೯೯೩ |
Occupation | ಶಿಲ್ಪಾಚಾರ್ಯರು |
ದೇವಲಕುಂದ ವಾದಿರಾಜ್ (ಮಾರ್ಚ್ ೨೦, ೧೯೨೦) ನಾಡುಕಂಡ ಶ್ರೇಷ್ಠ ಶಿಲ್ಪಿಗಳಲ್ಲಿ ಒಬ್ಬರೆನಿಸಿದ್ದಾರೆ.
ಜೀವನ
[ಬದಲಾಯಿಸಿ]ಸಾಂಪ್ರದಾಯಕ ಶಿಲ್ಪಕಲೆಗೆ ಅಂತರರಾಷ್ಟ್ರೀಯಮಟ್ಟದಲ್ಲಿ ಗೌರವ ತಂದುಕೊಟ್ಟ ರಾಷ್ಟ್ರಪ್ರಶಸ್ತಿ ವಿಜೇತ ವಾದಿರಾಜರು ಕುಂದಾಪುರ ತಾಲ್ಲೂಕಿನ ದೇವಲಕುಂದದಲ್ಲಿ ಮಾರ್ಚ್ ೨೦, ೧೯೨೦ರಂದು ಜನಿಸಿದರು. ತಂದೆ ಸುಬ್ಬರಾಯಭಟ್ಟರದು ಅರ್ಚಕ ವೃತ್ತಿ, ತಾಯಿ ಲಕ್ಷ್ಮಮ್ಮನವರು. ತಂದೆಯ ಅಕಾಲ ಮರಣದಿಂದಾಗಿ. ಹರಿದು ತಿನ್ನುವ ಬಡತನ ಅವರ ಕುಟುಂಬಕ್ಕೆ ಪ್ರಾಪ್ತವಾಯಿತು. ತಾಯಿ ಲಕ್ಷಮ್ಮನವರು ಮಗ ವಾದಿರಾಜನೊಡನೆ ಮೈಸೂರು ಸೇರಿದರು.
ಶಾಲೆಗೆ ಚಕ್ಕರ್ ಚಿತ್ರಕೆ ಹಾಜರ್
[ಬದಲಾಯಿಸಿ]ಹುಡುಗನಿಗೋ ಶಾಲೆಗೆ ಚಕ್ಕರ್ ಹಾಕಿ ಚಿತ್ರ ಬಿಡಿಸುವಲ್ಲಿ ಆಸಕ್ತಿ. ಮುಂದೆ ತಾಯಿ ಮಗ ನಂಜನಗೂಡಿಗೆ ಸ್ಥಳಾಂತರಿಸಿದರು. ಅಲ್ಲೂ ದೇವಸ್ಥಾನದ ಚಿತ್ರಕಲೆಯಿಂದ ಆಕರ್ಷಿತರಾದರು. ಇವರಲ್ಲಿದ್ದ ಆಸಕ್ತಿಯನ್ನು ಗಮನಿಸಿದ ಹಲವು ಹಿರಿಯರು ಮೈಸೂರಿನ ಜಯಚಾಮರಾಜೇಂದ್ರ ಚಿತ್ರಕಲಾ ಶಾಲೆಗೆ ಸೇರಿಸಲು ಸಲಹೆ ಮಾಡಿದರು. ಅಲ್ಲಿ ವಾದಿರಾಜರು ಕೆತ್ತನೆ ಕೆಲಸದಲ್ಲಿ ತರಬೇತಿ ಪಡೆದರು.
ಬಾಳಿನ ಕತ್ತಲಲ್ಲೂ ಅರಳಿದ ಪ್ರತಿಭೆ
[ಬದಲಾಯಿಸಿ]ಈ ಮಧ್ಯೆ ಆಸರೆಯಾಗಿದ್ದ ತಾಯಿ ಮಲೇರಿಯಾ ಜ್ವರದಿಂದ ನಿಧನರಾದರು. 12ರ ವಯಸ್ಸಿನ ಹುಡುಗನಿಗೆ ಹೇಳತೀರದ ಬವಣೆ. ಶಿವಮೊಗ್ಗದಲ್ಲಿ ಹೊಟೇಲೊಂದರ ಮಾಣಿ ಕೆಲಸ ಮಾಡಿದರು. ಧಾರವಾಡ, ಗದಗು, ಹುಬ್ಬಳ್ಳಿ ಸುತ್ತಿ ಮತ್ತೆ ಮೈಸೂರಿಗೆ ಬಂದರು. ಕೆಲಸ ಮಾಡುತ್ತಿದ್ದ ಡಾ. ಸಂಪತ್ತೈಂಗಾರ್ ಮನೆಯಲ್ಲಿ ತೊಳೆಯಲು ಕೊಟ್ಟ ಸಾಬೂನಿನಲ್ಲೂ ಕೆತ್ತನೆ ಕೆಲಸ ಮಾಡಿ ತೋರಿದರು. ಡಾ. ಸಂಪತ್ತೈಂಗಾರ್ ಪ್ರೋತ್ಸಾಹ ಕೊಟ್ಟರು. ಡಾಕ್ಟರಿಗೆ ಬೆಂಗಳೂರಿಗೆ ವರ್ಗವಾದಾಗ, ಅವರ ಜೊತೆ ಬೆಂಗಳೂರಿಗೆ ಬಂದು ಕೆತ್ತನೆ ಕೆಲಸದಂಗಡಿಯಲ್ಲಿ ಉದ್ಯೋಗ ಮಾಡಲಾರಂಭಿಸಿದರು. ಅಲ್ಲಿ ಸಂಗೀತಗಾರ ಎ. ಸುಬ್ಬರಾವ್ ಪರಿಚಯವಾಯಿತು. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಕೃತಿ ರಚನೆ ಮಾಡಿದರು. ನಂತರ ಅಖಿಲ ಭಾರತ ಕರಕುಶಲ ಮಂಡಲಿ ವಿನ್ಯಾಸ ಕೇಂದ್ರದಲ್ಲಿ ಮರದ ಕೆತ್ತನೆ ವಿಭಾಗದಲ್ಲಿ ಕೆಲಸ ದೊರಕಿತು.
ಶ್ರೇಷ್ಠ ಕೃತಿಗಳು
[ಬದಲಾಯಿಸಿ]ವಾದಿರಾಜರು ಹಲವಾರು ಶ್ರೇಷ್ಠ ಕೃತಿಗಳನ್ನು ರಚಿಸಿದರು. ಅವುಗಳಲ್ಲಿ ಆನಂದಮಯಿ ಆಶ್ರಮಕ್ಕೆ ಗಂಧದ ಮಂಟಪ, ಕೈಗಾರಿಕೋದ್ಯಮಿ ನವಲ್ ಕಿಶೋರ್ ರವರಿಗೆ ದಂತದ ಕೃಷ್ಣನ ವಿಗ್ರಹ, ಕೋಲ್ಕತ್ತಾದ ಬಿರ್ಲಾ ಆಸ್ಪತ್ರೆಗೆ ವಿಷ್ಣು ವಿಗ್ರಹ. ಎಂ.ವೈ. ಘೋರ್ಪಡೆಯವರ ಅರಮನೆಯ ದೇವಸ್ಥಾನಕ್ಕೆ ರಚಿಸಿದ ಹಲವಾರು ವಿಗ್ರಹಗಳು ಪ್ರಮುಖವೆನಿಸಿವೆ. ರಾಷ್ಟ್ರದ ಅನೇಕ ದೇವಸ್ಥಾನ, ವಸ್ತು ಸಂಗ್ರಹಾಲಯಗಳಲ್ಲಿ ಖಾಸಗಿ ಗೃಹಗಳಲ್ಲಿ ವಾದಿರಾಜರ ನೂರಾರು ಶಿಲ್ಪಕಲಾಕೃತಿಗಳು ಕಂಗೊಳಿಸುತ್ತಿವೆ.
ವಿಶ್ವದೆಲ್ಲೆಡೆ ಆಹ್ವಾನ
[ಬದಲಾಯಿಸಿ]ಹೀಗೆ ತಮ್ಮ ಕಲೆಯಲ್ಲಿ ನೈಪುಣ್ಯತೆ ಮೆರೆದ ವಾದಿರಾಜರಿಗೆ ಗ್ರೇಟ್ ಬ್ರಿಟನ್ನಿನಲ್ಲಿ ನಡೆದ ಭಾರತ್ ಉತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂತು. ಅಲ್ಲಿ ವಿದೇಶಿ ಪತ್ರಿಕೆಗಳಿಂದ ಅಪಾರ ಪ್ರಶಂಸೆ ಬಂತು. ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್, ಗ್ಲಾಸ್ಗೋ ಮುಂತಾದೆಡೆಗಳಲ್ಲಿ ಕೃತಿ ಪ್ರದರ್ಶನ ನಡೆಸಿದರು.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಕರಕುಶಲ ಮಂಡಲಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದ ವಾದಿರಾಜರು ಕರಕುಶಲ ಕೇಂದ್ರದ ರೂವಾರಿ ಎನಿಸಿದ್ದರು. ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಷ್ಟ್ರಾಧ್ಯಕ್ಷರ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾದಿರಾಜರಿಗೆ ಸಂದಿದ್ದವು.
ವಿದಾಯ
[ಬದಲಾಯಿಸಿ]ವಾದಿರಾಜರು ಫೆಬ್ರವರಿ ೨೨, ೧೯೯೩ರಲ್ಲಿ ಈ ಲೋಕವನ್ನಗಲಿದರು.
ಮಾಹಿತಿ ಕೃಪೆ
[ಬದಲಾಯಿಸಿ]ಕಣಜ Archived 2012-06-30 ವೇಬ್ಯಾಕ್ ಮೆಷಿನ್ ನಲ್ಲಿ.