ದೇವರ/ಜೇಡರ ದಾಸಿಮಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವರ/ಜೇಡರ ದಾಸಿಮಯ್ಯ
ಜನನ೧೧೬೫
ಮುದನೂರು, ಸುರಪುರ ತಾಲ್ಲೋಕು, ಯಾದಗಿರಿ ಜಿಲ್ಲೆ
ಅಂಕಿತನಾಮರಾಮನಾಥ
ಇದಕ್ಕೆ ಪ್ರಸಿದ್ಧವಚನಕಾರ
ಸಂಗಾತಿ(ಗಳು)ದುಗ್ಗಳೆ


ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ. ಸುರಪುರ ತಾಲೂಕಿನ ಮುದನೂರು ಗ್ರಾಮದವರಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕ.[೧]

ಜನನ

ದಾಸಿಮಯ್ಯನವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಬಿ ಗ್ರಾಮದಲ್ಲಿ ರಾಮಯ್ಯ -ಶಂಕರಿ ದಂಪತಿಯ ಪುತ್ರನಾಗಿ, ಚೈತ್ರ ಶುದ್ಧ ಪಂಚಮಿಯಂದು ನೇಕಾರ ಕುಟುಂಬದಲ್ಲಿ ಜನಿಸಿದರು.[೨]

ಶಿಕ್ಷಣ

ದೇವರ ದಾಸಿಮಯ್ಯನವರು ಮುದನೂರಿನ ಸಮೀಪದಲ್ಲಿರುವ ಶೈವ ಕೇಂದ್ರವಾದ ಶ್ರೀಶೈಲದಲ್ಲಿ ಶ್ರೀ ಚಂದ್ರಗುಂಡ ಶಿವಾಚಾರ್ಯರ ಗುರುಕುಲದಲ್ಲಿ ಅಪಾರ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರವನ್ನು ಕೂಡಾ ಪಡೆದು ಜ್ಞಾನವಂತರಾದರು. ದಾಸಿಮಯ್ಯನವರು ಯಾವುದನ್ನೂ ಪ್ರಶ್ನಿಸದೆ ಸ್ವೀಕರಿಸುವ ಮನೋಭಾವದವರಲ್ಲ. ಪ್ರಖರ ವೈಚಾರಿಕ ನೆಲೆಗಟ್ಟಿನ ಅಸದೃಶ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು.

ವಿವಾಹ

ದಾಸಿಮಯ್ಯನವರು ದುಗ್ಗಳೆಯನ್ನು ವಿವಾಹವಾದರು. ದುಗ್ಗಳೆಯನ್ನು ಕುರಿತು ಅವರು ರಚಿಸಿದ ವಚನ ಇಂತಿದೆ:
ಬಂದುದನರಿದು ಬಳಸುವಳು ಬಂದುದ ಪರಿಣಾಮಿಸುವಳು ಬಂಧು ಬಳಗವ ಮರೆಸುವಳು ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ.

ವಚನ ರಚನೆ

ರಾಮನಾಥ ಎಂಬ ಅಂಕಿತದಲ್ಲಿ ಬರೆಯಲಾದ ಇವರ ಸುಮಾರು ೧೫೦ ವಚನಗಳು ದೊರೆತಿವೆಯೆನ್ನಲಾಗಿದೆ.[೩]

1

ಮೊಲೆ ಮೂಡಿ ಬಂದರೆ ಹೆಣ್ಣೆಂಬರು

ಗಡ್ಡ ಮೀಸೆ ಬಂದರೆ ಗಂಡೆಂಬರು

ನಡುವೆ ಸುಳಿಯುವಾತ್ಮನು

ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ

2

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ

ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು

ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ

3

ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ

ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ

ನಿಮ್ಮ ದಾನವನುಂಡು ಅನ್ಯರ ಹೊಗಳುವ

ಕುನ್ನಿಗಳನೇನೆಂಬೆ ರಾಮನಾಥ

4
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ

ಕಡೆಗೀಲು ಬಂಡಿಗಾಧಾರ

ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ

ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.

5
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ

ಸತಿಪತಿಗಳೊಂದಾಗದವನ ಭಕ್ತಿ

ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ.

6

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ
7
ಹರ ತನ್ನ ಭಕ್ತರ ತಿರಿವಂತೆ ಮಾಡುವ

ಒರೆದು ನೋಡುವ ಸುವರ್ಣದ ಚಿನ್ನದಂತೆ

ಅರೆದು ನೋಡುವ ಚಂದನದಂತೆ

ಅರಿದು ನೋಡುವ ಕಬ್ಬಿನ ಕೋಲಿನಂತೆ

ಬೆದರದೆ ಬೆಚ್ಚದೆ ಇದ್ದಡೆ

ಕರವಿಡಿದೆತ್ತಿಕೊಂಬ ನಮ್ಮ ರಾಮನಾಥನು


ಎಂದು ಸಾರುವಲ್ಲಿ ತೋರಿದ ಜನಪರ ಕಾಳಜಿ ಇಂದಿಗೂ ಆನ್ವಯಿಕ. ಶಿವ ಜಗತ್ತನ್ನೇ ವ್ಯಾಪಿಸಿಕೊಂಡಂತೆ, ಜಗತ್ತೇ ಶಿವನ ರೂಪ ಎಂಬ ನಿಲುವಿನೊಂದಿಗೆ, "ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನವಯ್ಯ. ಎಂದೆನ್ನುವ ದಾಸಿಮಯ್ಯನಲ್ಲಿ ಈ ಲೋಕವನ್ನು ನೋಡುವ ಕ್ರಮ ಹೊಸತನದಿಂದ ಕೂಡಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ದೇವರ ದಾಸಿಮಯ್ಯ ನವರ "ದೇವಾಂಗ ಲೋಕ" Archived 2018-09-30 ವೇಬ್ಯಾಕ್ ಮೆಷಿನ್ ನಲ್ಲಿ. Website ನೋಡಿ.

ಉಲ್ಲೇಖಗಳು

  1. http://lingayatreligion.com/K/Sharanaru/JedaraDaasimayya.htm
  2. http://devaradasimayya.blogspot.in/2010/12/blog-post.html#.WZW1wVEjHIU
  3. "ಆರ್ಕೈವ್ ನಕಲು". Archived from the original on 2017-08-05. Retrieved 2017-08-17.

[[ವರ್ಗ:ವಚನಸಂಚಯ ಯೋಜನೆ]