ದಿ ವೈಟ್ ಟೈಗರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿ ವೈಟ್ ಟೈಗರ್[ಬದಲಾಯಿಸಿ]

ನಮ್ಮ ಬದುಕಿನಲ್ಲಿ ನಮಗೇನು ಇಷ್ಟವೋ ಅದನ್ನು ಮಾತ್ರವೇ ನೋಡಲಿಚ್ಚಿಸುತ್ತೇವೆ. ಏನು ಕೇಳಲಿಚ್ಚಿಸುತ್ತೇವೋ ಅದನ್ನು ಬಿಟ್ಟು ಉಳಿದುದನ್ನು ಉಪೇಕ್ಷಿಸುತ್ತೇವೆ. ಇನ್ನೂ ಹೇಳಬೇಕೆಂದರೆ ನಾವು ನೋಡಿದ್ದರಲ್ಲಿ ಕೇಳಿದ್ದರಲ್ಲಿ ಹಾಲು ಬೆರೆತ ನೀರಿನಲ್ಲಿ ಹಂಸ ಕ್ಷೀರ ನ್ಯಾಯ ಎಂಬ ಸ್ಥಿತಿಯಂತೆ ನೀರು-ಹಾಲು ಬೆರೆತ ದ್ರವದಲ್ಲಿ ಹಾಲನ್ನು ಮಾತ್ರ ಹೀರುವ ಹಂಸದಂತೆ ನಮಗೆ ಬೇಕಿದ್ದನ್ನು ಮಾತ್ರ ದೃಷ್ಟಿಸಿ ಅಥವ ಅರ್ಥೈಸಿ ಉಳಿದುದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಸಾಗುತ್ತದೆ ನಮ್ಮ ಬದುಕು. ಆದರೆ ಕೆಲವೊಂದು ವ್ಯಕ್ತಿಗಳು ಹಾಗಲ್ಲ ತಾವು ಕಾಣುತ್ತಿರುವ ಪ್ರಪಂಚವನ್ನು ಆಳದಲ್ಲಿ ತೆರೆದು ನೋಡುತ್ತಾರೆ.ಇಂತಹ ಹಲವು ಬದುಕುಗಳ ಕಥೆಯನ್ನು ನಾವು ಹಲವಾರು ಬಾರಿ ಓದಿ ಕೇಳಿರಲಿಕ್ಕೆ ಸಾಕು. ಗಾಂಧಿ ಚಿತ್ರದಲ್ಲಿ ಗಾಂಧೀಜಿಯವರನ್ನು ಬಣ್ಣಿಸುವಾಗ ರಿಚರ್ಡ್ ಅಟೆನ್ ಬರೋ, ಗಾಂಧಿ ಇಡೀ ಭಾರತದಲ್ಲಿ ಸಂಚಾರ ಕೈಗೊಂಡು ರೈಲಿನಲ್ಲಿ ಅವರು ನೋಡುವ ಕಣ್ಣುಗಳ ಮೂಲಕ, ಒಟ್ಟಾರೆ ಭಾರತದ ಕಲ್ಪನೆ ಗಾಂಧೀಜಿಯ ಆಳವಾದ ಅನುಭಾವದಲ್ಲಿ ಹೇಗೆ ಒಡಮೂಡಿತು ಎಂಬುದರ ಕಲ್ಪನೆಯನ್ನು ಕಟ್ಟಿಕೊಡುತ್ತಾರೆ. ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಕಾರಂತರು ಸ್ವಯಂ ಒಬ್ಬ ವ್ಯಕ್ತಿಯಾಗಿ ತನ್ನ ವಿವಿಧ ನೆಲೆಗಳಲ್ಲಿ ತನ್ನ ಸುತ್ತಲಿನ ಪ್ರಪಂಚವನ್ನು ತೆರೆದು ನೋಡುವ ಅನುಭಾವವಿದೆ. ಮಾಸ್ತಿ ಅವರ ಭಾವದಲ್ಲಿನ ಅನುಭವಗಳು, ಡಾ. ಎಸ್. ಎಲ್. ಭೈರಪ್ಪನವರ ಅನ್ವೇಷಣೆಯ ನಾಯಕ ವಿಶ್ವನಾಥ, ಡಾ. ಯು. ಆರ್. ಅನಂತಮೂರ್ತಿ ಅವರ ಭಾರತೀಪುರದ ನಾಯಕ ಹೀಗೆ ವಿವಿಧ ರೀತಿಯ ಇಂತದ್ದೇ ಚಿತ್ರಗಳು ಈ ಕ್ಷಣಕ್ಕೆ ನೆನಪಿಗೆ ಬರುತ್ತಿವೆ.ಇಂತದ್ದೇ ಭಾವ ಹುಟ್ಟಿಸಿದ ಬಹಳ ದಿನಗಳ ನಂತರದ ಓದು ಅರವಿಂದ ಅಡಿಗರ ‘ದಿ ವೈಟ್ ಟೈಗರ್’’. ಇಡೀ ಭಾರತವೆಂಬ ಇಂದಿನ ವ್ಯವಸ್ಥೆಯನ್ನು ನಾವು ಕಂಡಿದ್ದರೂ, ಹಲವು ರೀತಿಯಲ್ಲಿ ಕೇಳಿ ಅನುಭವಿಸಿದ್ದರೂ ಎಲ್ಲೋ ಅದನ್ನೆಲ್ಲಾ ಅವಿತಿಟ್ಟು ನಮ್ಮ ವೈಯಕ್ತಿಕ ನೆಲೆಯಲ್ಲಿನ ಬೇಕು ಬೇಡಗಳ ಒತ್ತಡ, ಆಶಯ,ಮಾತಿನ ಅಥವ ತೋರಿಕೆಯ ಚಟಗಳಿಗೆ ಏನು ಬೇಕೋ ಅದನ್ನು ಮಾತ್ರ ಆರಿಸಿಕೊಂಡು ಉಳಿದದ್ದನ್ನೆಲ್ಲಾ ವ್ಯವಸ್ಥೆಯ ಟೀಕಾಪ್ರಹಾರಕ್ಕೆ ನಿಲುಕಿಸಿ ನಮ್ಮ ಭ್ರಮಾನಕ ಸ್ವರ್ಗಸೀಮೆಗಳ ಅಂಚಿನಲ್ಲೇ ವಿಹರಿಸುವ ನಮಗೆ, ನಾವು ನಮ್ಮ ಅನುಕೂಲ ಸಿಂಧುತ್ವದ ಆಚೆಯಲ್ಲಿ ಬೇಕಾಬಿಟ್ಟಿಯಾಗಿ ಬಿಟ್ಟುಬಿಟ್ಟಿರುವ ಪ್ರಪಂಚದ ಬಗ್ಗೆ “ಅಷ್ಟೊಂದು ಕೇವಲವಾದ ಭಾವ ಬೇಡ; ನಿನಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೊರನೋಟಕ್ಕೆ ಬಿಟ್ಟುಬಿಟ್ಟಿರುವ ಬೀಡು ಅಥವಾ ಪಾಡು ನಿನ್ನ ಸನಿಹದಲ್ಲೇ ಇದೆ. ಅದು ನಿನ್ನನ್ನು ಯಾವಾಗಲಾದರೂ ನುಂಗೀತು ಎಂಬ ಪಡಿಯೆಚ್ಚರದ ದಿಸೆಯಲ್ಲಿ ಅರವಿಂದ ಅಡಿಗರು ಇಂದಿನ ಸಮಗ್ರ ಭಾರತದ ದರ್ಶನಕ್ಕೆ ನಮ್ಮನ್ನಿಲ್ಲಿ ಕರೆದೊಯ್ಯುತ್ತಿದ್ದಾರೆ”. ಅಂದು ಗಾಂಧೀ ಚಿತ್ರದಲ್ಲಿ ಗಾಂಧೀ ಕಂಡ ಭಾರತಕ್ಕೂ ಇಂದು ನಾವು ನೋಡುವ ಭಾರತಕ್ಕೂ ಅಜಗಜಾಂತರ ವೆತ್ಯಾಸ ಇರಬಹುದು. ಅಂದು ಗಾಂಧೀ ರೈಲಿನಲ್ಲಿ ಕುಳಿತು ಪಟ್ಟಣಗಳ, ಊರುಗಳನ್ನು ಕಂಡಾಗ ಅವರಿಗೆ ಕಂಡದ್ದು ಒಂದು ಸಾಮಾಜಿಕ ಪರಿಸ್ಥಿತಿ, ಆರ್ಥಿಕ ದುಃಸ್ಥಿತಿ. ಇಂದು ನಾವು ರೈಲಿನಲ್ಲಿ –ಬಸ್ಸಿನಲ್ಲಿ ಕುಳಿತುಪಯಣಿಸುವಾಗ ಜನನಿಬಿಡಸ್ಥಳಗಳಲ್ಲಿನಮಗೆ ಕಿಟಕಿಗಳ ಆಚೆಗೆ ಕಾಣುವುದೆಲ್ಲನೋಡಬೇಕೆನಿಸದ ಕೊಳಚೆಯ ಚಿತ್ರಣಗಳೇ ಎಂಬುದು ಬಹು ಮುಖ್ಯ ವಿಷಯವಾಗುತ್ತದೆ. ಇಂತಹ ಒಂದು ಪರಿಸ್ಥಿತಿಯಲ್ಲಿ ನಾವು ನಮ್ಮ ಪ್ರಪಂಚದ ಸುತ್ತ ಕಣ್ಣು ಹಾಯಿಸಲು ಮನಸ್ಸು ಬರುವುದಾದರೂ ಹೇಗೆ ತಾನೇ ಸಾಧ್ಯ ಎಂಬ ಸಂದಿಗ್ಧತೆ ಕಾಡುತ್ತದೆ. ಆದರೆ ಆ ಸಂದಿಗ್ಧತೆಯ ಆಳಕ್ಕೆ ಪರಿಹಾರ ಹುಡುಕುವವರೆಗೆ ನಮ್ಮ ಸಮಾಜ ತನ್ನ ಬಿಡಿಸಲಾರದ ಕಗ್ಗಂಟುಗಳಲ್ಲಿ ಮುಂದೆಯೂ ನರಳುತ್ತ, ಉರುಳುತ್ತಲೇ ಇರುತ್ತದೆ. ಇದನ್ನು ನೋಡಲು ಬೇಕಿರುವ ಕಣ್ಣುಗಳ ಧೈರ್ಯವನ್ನು ಎಷ್ಟು ಮೆಚ್ಚಿದರೂ ಸಾಲದು. ಅದನ್ನು ಇತರರು ಕೂಡ ಮೆಚ್ಚುವಂತೆ ತೆರೆದಿಡುವ ಸಾಮಥ್ರ್ಯವಿದೆಯಲ್ಲ ಅದಕ್ಕೆ ಹೇಳಲು ಅಥವಾ ಕೊಡುವುದೇನಾದರೂ ಇದೆಯೇ. ಅದನ್ನು ತೆರೆದಿಟ್ಟ ರೀತಿ ನಮ್ಮನ್ನು ಮೂಕವಾಗಿಸುವ ಬರಹಗಾರನ ಶೈಲಿಗೆ ನಾವೇನು ತಾನೇ ಕೊಡಲು ಸಾಧ್ಯ. ಅಂತಹ ಅನನ್ಯ ಬರಹ ನಮ್ಮ ಅರವಿಂದ ಅಡಿಗರ ದಿ ವೈಟ್ ಟೈಗರ್ ಅದಕ್ಕೆ 2008ರ ವರ್ಷದ ಬೂಕರ್ ಪ್ರಶಸ್ತಿ ಕೊಟ್ಟವರನ್ನು ನಾವು ವಂದಿಸಬೇಕು. ನಮಗೆ ನಮ್ಮ ಗಾಂಧಿಯವರು ಸ್ವಲ್ಪವಾದರೂ ಹತ್ತಿರವಾಗಲು ರಿಚರ್ಡ್ ಅಟೆನ್ ಬರೋ ಬೇಕಾಯಿತು. ಅರವಿಂದ ಅಡಿಗರ ಈ ಸುಂದರ ಪುಸ್ತಕ ನಮಗೆ ಓದಬೇಕು ಎಂಬ ಅನಿಸಿಕೆ ಮೂಡಲು ಬೂಕರ್ ಪ್ರಶಸ್ತಿ ಶಿಫಾರಸ್ಸು ಮಾಡಬೇಕಾಯಿತು.ನಮಗೆ ಬೇಕಿದ್ದನ್ನು ಮಾತ್ರ ನೋಡುವ – ಕೇಳುವನಮ್ಮ ಗುಣದಬಗ್ಗೆ ಹೇಳುವಾಗ ಅದು ನಮ್ಮ ಹೊರಪ್ರಪಂಚಕ್ಕೆ ಕುರಿತಾದ ವಿಷಯ ಮಾತ್ರವೇನಲ್ಲ. ಒಂದು ರೀತಿಯಲ್ಲಿ ಅದು ನಮ್ಮ ಒಳ ಪ್ರಪಂಚಕ್ಕೂ ಹೆಚ್ಚು ಅನ್ವಯಿಸುತ್ತದೆ. ನಮ್ಮ ಹೊರಗಿನ ಪ್ರಪಂಚದ ಕ್ಷುದ್ರತೆ, ನಮ್ಮ ಸಮಾಜದ ಮನಸ್ಸುಗಳ ಆಳದಲ್ಲಿ ಹುದುಗಿರುವ ಕ್ಷುದ್ರತೆಗಳ ಒಂದು ಸಣ್ಣ ಕಿರಣದ ಮೊನೆಯಷ್ಟೇ! ಇಂತಹ ಆಳದಲ್ಲಿ ನಾವು ಹುಗಿದುಹಾಕಿಬಿಟ್ಟಿರುವ ನಮ್ಮ ಆಂತರ್ಯವು ತನ್ನ ನೆಲೆಗಳನ್ನು ಕಾಣತೊಡಗುವುದು ಸುಳ್ಳುಗಳ ಆಶ್ರಯದಲ್ಲಿ. ಅಂದರೆ ನಾವು ಬೇಕಿದ್ದನ್ನು ಮಾತ್ರ ನೋಡುವ ಕೇಳುವ ಗುಣ, ತನ್ನ ಆಸರೆಯನ್ನು ಪಡೆಯುವುದು, ಬೇಕಿದ್ದನ್ನು ಮಾತ್ರ ಆಡುವ ಜಾಣತನದಲ್ಲಿ! ಇಂತಹ ಜಾಣತನವನ್ನು ಬಯಲು ಮಾಡುವ ಕೆಲಸಕ್ಕೆ ಅರವಿಂದ ಅಡಿಗರು ಈ ಕೃತಿಯಲ್ಲಿ ಅನನ್ಯವಾದ ಕೆಲಸಮಾಡಿದ್ದಾರೆ.ಭಾರತಕ್ಕೆ ಆಗಮಿಸಲಿರುವ ಕಾಲ್ಪನಿಕ ಚೀನಾದ ಅಧ್ಯಕ್ಷರಿಗೆ ನಮ್ಮ ವ್ಯವಸ್ಥೆ ಎಲ್ಲವನ್ನೂ ಮುಚ್ಚಿ ನಮ್ಮ ಸಂಸ್ಕೃತಿ, ಹಿರಿಮೆ, ಸಾಧನೆಗಳ ಬಗ್ಗೆ ಕೊಡಲು ತಯಾರಿರಬಹುದಾದ ಕಾಲ್ಪನಿಕ ವೈಯಾರದ ಹೊದ್ದಿಕೆಯ ವಿಚಾರಗಳಿಗೆ ಈ ಕಥಾ ನಾಯಕ ತನ್ನ ಬದುಕಿನಲ್ಲಿ ಅನುಭವದಿಂದ ಕಂಡ ನೈಜ ಭಾರತದ ಸಮಾನಾಂತರ ಚಿತ್ರಣ ಕೊಡುವ ರೀತಿ ಇದೆಯಲ್ಲ ಅದು ಒಂದು ರೀತಿಯ ಮನರಂಜನಾ ರೀತಿಯಲ್ಲಿ ಪ್ರಾರಂಭವಾಗಿ, ಮುಂದೆ ಪಡೆದುಕೊಳ್ಳುವ ಗಾಂಭೀರ್ಯ, ಪತ್ತೆದಾರಿ ಕಥಾನಕ ರೀತಿಯ ಚಿತ್ರಣ ಕ್ಷಣಕ್ಷಣಕ್ಕೂ ಕುತೂಹಲ ಹುಟ್ಟಿಸುತ್ತಿರುವ ಜೊತೆ ಜೊತೆಯಲ್ಲೇ, ಇದು ನಮ್ಮಬದುಕಿನ ಕಥೆ ಕೂಡ ಹೌದು ಎಂಬ ಅರಿವಿನ ಪ್ರಜ್ಞೆಯನ್ನೂ ಕೂಡ ನಮ್ಮಲ್ಲಿ ಜಾಗೃತಿಗೊಳಿಸುತ್ತಾ ಸಾಗುತ್ತದೆ. ಈ ಕಥಾನಕದ ಸಾಮಥ್ರ್ಯ ಅಡಗಿರುವುದೇ ಈ ಆಳದಲ್ಲಿ. “ಭಾರತ ಚೀನಾದೇಶಕ್ಕೆ ಜೊತೆ ಜೊತೆಯಾಗಿ ಪಶ್ಚಿಮದಿಂದ ಬಂದ ಬದಲಾವಣೆಯ ಗಾಳಿಯಲ್ಲಿ ತೇಲುತ್ತಿರುವ ಸಮಯದಲ್ಲೇ, ಇಲ್ಲಿನ ಸಮಾಜದಲ್ಲಿ ನಡೆಯುತ್ತಿರುವ ಘೋರ ಅನ್ಯಾಯಗಳ ಬಗ್ಗೆ ಬೆಳಕು ಚೆಲ್ಲುವುದು ನನ್ನಂತಹ ಬರಹಗಾರರಿಗೆ ಮುಖ್ಯ ಎಂದು ನಾನು ಭಾವಿಸುತ್ತೇನೆ. ಅದನ್ನೇ ನಾನು ಇಲ್ಲಿ ಮಾಡ ಹೊರಟಿರುವುದು - ಇದು ದೇಶದ ಮೇಲಿನ ಪ್ರಹಾರವಲ್ಲ, ಇದು ನಮ್ಮ ಆತ್ಮಸಾಕ್ಷೀ ಭಾವವನ್ನು ಪ್ರಶ್ನಿಸಿಕೊಳ್ಳುವ ಪ್ರಕ್ರಿಯೆಯಾಗಿದೆ” ಎಂದು ತಮ್ಮ ಈ ಬರಹದ ಆಶಯದ ಕುರಿತಾಗಿ ಅರವಿಂದ ಅಡಿಗರು ಹೇಳಿದ್ದಾರೆ.ಈ ದೇಶದಲ್ಲಿ ಶೋಷಿಸುವವರು ನಿರಂತರವಾಗಿದ್ದಾರೆ, ಪ್ರತಿ ಕ್ಷಣದಲ್ಲೂ ಅದಕ್ಕೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಕೂಡ ನಿರಂತರವಾಗಿ ಬೆಳೆಯುತ್ತಿದೆ. ಬಡಜನರು ತಾವು ಶೋಷಿತರಾಗುವುದು ಮಾತ್ರವಲ್ಲ, ತಮ್ಮ ಸಾಮಾಜಿಕ ನೆಲೆಯಲ್ಲಿರುವ ಮದುವೆಯಂತಹ ಪದ್ಧತಿಗಳ ವ್ಯರ್ಥ ಆಡಂಭರಗಳ ಕ್ಷಣಿಕ ಆಚರಣೆಗಳಿಗಾಗಿ ಚಿಕ್ಕ ಮಕ್ಕಳಾದಿಯಾಗಿ ಇಡೀ ಕುಟುಂಬವನ್ನೇ ಜೀತಕ್ಕೆ ಸಲ್ಲಿಸಿಬಿಡುತ್ತಾರೆ, ಶಾಲೆಯ ಶಿಕ್ಷಕ ತಾನು ಮಾಡುವ ಭ್ರಷ್ಟತೆಯಿಂದ ಸಮಾಜದ ಕಣ್ಣಲ್ಲಿ ಹೀನನಾಗುವ ಬದಲು ಇವನೆಷ್ಟು ಬುದ್ಧಿವಂತ ಜೀವಿ ಎನಿಸುತ್ತಾನೆ, ಕಂಡಕ್ಟರ್ ಅಂತಹ ವ್ಯಕ್ತಿ ತನ್ನ ಮಾತಿನ ಚಕಮಕಿಯ ವರಸೆಯಿಂದ ಸ್ಫೂರ್ತಿಯ ವ್ಯಕ್ತಿಯಾಗಿ ಮೂಡಿ ಕೊನೆಗೆ ಆತನೂ ಸಾಮಾಜಿಕ ಕಾರ್ಯಕರ್ತನ ಧೂರ್ತತನದಲ್ಲಿ ಸಮಾಜವನ್ನು ಶೋಷಿಸುವ ರಾಜಕಾರಣದಂತಹ ವ್ಯವಸ್ಥೆಯಲ್ಲಿನ ಪ್ರಮುಖ ಪಾಲುದಾರ ಆಗಿಬಿಡುತ್ತಾನೆ, ಸ್ವತಃ ಪೋಲೀಸನೇ ಇವರುಗಳಿಗೆ ಪೋಸ್ಟರ್ ಹಚ್ಚುವ ಕೆಲಸಕ್ಕೆ ಕೊಡಾ ತೊಡಗುತ್ತಾನೆ, ಒಂದೆಡೆಯಲ್ಲಿ ಕೆಳ ವರ್ಗದ ಜನರನ್ನು ಶೋಷಿಸಿ ತನ್ನ ಆಳಾಗಿಸಿಕೊಂಡ ಉದ್ಯಮಿ ತನ್ನ ನೆಮ್ಮದಿ ಹಣ ಗಳಿಕೆಯನ್ನೆಲ್ಲಾ ತನ್ನ ಐಶಾರಾಮಿ ಜೀವನ, ಭ್ರಷ್ಟತೆಯ ಬೆಂಬಲ ಪಡೆಯುವಿಕೆ ಮತ್ತು ತಾನು ಮಾಡಿದ ಅಕೃತ್ಯಗಳನ್ನು ಮುಚ್ಚುವಲ್ಲಿ ಮಾಡುವ ಪ್ರಯತ್ನಗಳಲ್ಲಿ ಖರ್ಚು ಮಾಡುವ ಭೀಕರ ನರಕದಲ್ಲಿ ಸಿಲುಕಿ ಅದರಿಂದ ಈಚೆ ಬರುವುದು ಹೇಗೆಂದು ಗೊತ್ತಾಗದೆ ಒದ್ದಾಡುತ್ತಿರುತ್ತಾನೆ, ಆದರೆ ಅದರಿಂದ ಈಚೆ ಬರುವ ಬದಲು ಮತ್ತಷ್ಟು ಆ ಗೋಜಲುಗಳ ಒಳಗೆ ಗಟ್ಟಿಯಾಗಿ ಹೂತುಕೊಳ್ಳುತ್ತಲೇ ಹೋಗುತ್ತಿರುತ್ತಾನೆ. ನಾವು ನೋಡುವ ನಗರಗಳ ಭವ್ಯ ಬಂಗಲೆಗಳ ನೆಲಮಾಳಿಗೆಗಳಲ್ಲಿ, ಶಾಪಿಂಗ್ ಕಾಂಪ್ಲೆಕ್ಸ್ ಗಳ ವಾಹನ ನಿಲ್ದಾಣಗಳಲ್ಲಿ, ವೈಭವದ ಹೋಟೆಲುಗಳ ವಾಹನ ಕಾಯುವಿಕೆಯ ಸ್ಥಳಗಳಲ್ಲಿ ಇರುವ ಉಸಿರುಗಟ್ಟಿಸುವಂತಹ ವಾತಾವರಣದಲ್ಲಿ ಬದುಕಬೇಕಾದ ಹಲವು ಜೀವಿಗಳ ಬದುಕಿನ ವಿಪರ್ಯಾಸಗಳು, ಕಾಲ್ ಸೆಂಟರ್ ಅಂತಹ ಬದುಕಿನಲ್ಲಿ ನಿಶಾಚರರಂತೆ ಬದುಕುವ ಆಧುನಿಕ ಯುಗದ ಜನ ಇವೆಲ್ಲಾ ಕಣ್ಣಿಗೆ ಕಟ್ಟುವಂತೆ ಇಲ್ಲಿ ಚಿತ್ರಿತವಾಗುತ್ತ ಹೋಗುತ್ತದೆ. ಇವೆಲ್ಲವನ್ನೂ ಮೀರುವಂತೆ ಒಬ್ಬನು ತಪ್ಪು ಮಾಡುವಾಗ, ನಾನೇಕೆ ಮಾಡಬಾರದು ಎಂಬಂತಹ ವಾತಾವರಣ ಸೃಷ್ಟಿಯಾಗುತ್ತ ಹೋಗಿ, ಇವೆಲ್ಲಾ ಮಾಡಿಯಾದರೂ ತಾನು ಐಶ್ವರ್ಯವಂತನಾಗಿ ಮೇಲೇರಿ ಉಳಿಯುವುದೇ ಬುದ್ಧಿವಂತಿಕೆಯ ಪರಾಮವಧಿ ಸೂತ್ರದಂತೆ ಬದುಕು ಬಂದು ನಿಲ್ಲುವ ಪರಿ ನಮ್ಮನ್ನು ನಾವು ಬದುಕುತ್ತಿರುವ ಪರಿಯ ಬಗ್ಗೆ ದಿಗ್ಮೂಢರನ್ನಾಗಿಸಿಬಿಡುತ್ತದೆಹೇಗೆ ಹೇಗೋ ಬಂದು ಒಂದಿಷ್ಟು ನಾಳೆ ಎಂಬುದರ ಬಗ್ಗೆ ನಿಶ್ಚಯ ಇದೆ ಎಂಬ ಭರವಸೆ ಇಲ್ಲದಿದ್ದರೂ,ಇಂದು ಯಶಸ್ವಿ ಎಂಬ ಜಾಗದಲ್ಲಿ ಕೂತು ನಾಳೆಯ ಬಗ್ಗೆ ಕನಸು ಕಾಣುವ ನಾಯಕ ಹೀಗಂದುಕೊಳ್ಳುತ್ತಾನೆ. “ಒಂದು ಸಮಯ ನಾನೂ ಹೀಗೇ ಹಣವನ್ನು ಹೆಚ್ಚೆಚ್ಚು ಸಂಪಾದಿಸಿದಾಗ, ಆ ಹಣದಿಂದ ಬಡಮಕ್ಕಳಿಗೆ ಒಂದು ಶಾಲೆಯನ್ನು ನಿರ್ಮಿಸುತ್ತೇನೆ. ಆ ಶಾಲೆಯಲ್ಲಿ ಪ್ರಾರ್ಥನೆ ಮಾಡಿ ಮಕ್ಕಳ ತಲೆ ಕೆಡಿಸುವುದನ್ನಾಗಲಿ, ದೇವರುಗಳ ಅಥವಾ ಗಾಂಧಿ ಬಗ್ಗೆ ಕಥೆ ಹೇಳಿ ಯಾವುದೇ ಮಗುವಿನ ತಲೆಯನ್ನು ತಿನ್ನುವುದನ್ನಾಗಲೀ ನಿಷೇದಿಸುತ್ತೇನೆ. ಅಲ್ಲಿ ಸತ್ಯ ಮತ್ತು ಸತ್ಯವನ್ನಲ್ಲದೆ ಬೇರೇನನ್ನೂ ಮಕ್ಕಳಿಗೆ ಕಲಿಸಲು ಬಿಡುವುದಿಲ್ಲ,ಶಾಲೆಯ ತುಂಬಾ ಬಿಳಿಯ ಹುಲಿಗಳನ್ನೇ ನಿರ್ಮಿಸುತ್ತೇನೆ”. ಹೀಗೆ ತನ್ನ ಭದ್ರವಲ್ಲದ ಪ್ರಪಂಚದಲ್ಲಿ ಆಶಯಗಳನ್ನು ಕಾಣತೊಡಗುತ್ತಾನೆ.