ವಿಷಯಕ್ಕೆ ಹೋಗು

ದಿ ಪ್ಯಾಕ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ದಿ ಪ್ಯಾಕ್' ವನ್ಯಜೀವಿ ಛಾಯಾಚಿತ್ರಕಾರರಾದ ಕೃಪಾಕರ್-ಸೇನಾನಿಯವರ ಅವರ ವೈಲ್ಡ್‌ಸ್ಕ್ರೀನ್ ವಿಶ್ವ ಚಲನಚಿತ್ರೋತ್ಸವ ೨೦೧೦ರಲ್ಲಿ ಅನಿಮಲ್ ಬಿಹೇವಿಯರ್ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದ ಚಿತ್ರ. ’ಸೀಳುನಾಯಿ’ ಅಥವಾ ’ಕೆನ್ನಾಯಿ’ ಎಂದು ಕರೆಸಿಕೊಳ್ಳುವ ಕರ್ನಾಟಕದ ಕಾಡುಗಳಲ್ಲಿ ಕಂಡುಬರುವ ಒಂದು ನಾಯಿ ಜಾತಿಗೆ ಸೇರಿದ ಕಾಡು ಪ್ರಾಣಿಯ ಬಗ್ಗೆ ಚಿತ್ರೀಕರಿಸಿದ ಸಾಕ್ಷ್ಯಚಿತ್ರ.


ಚಿತ್ರದ ಸಾರಾಂಶ:ಮನೆಯಲ್ಲಿ ದುಃಖ ಆವರಿಸಿದೆ. ಮಡದಿ ತೀರಿಕೊಂಡಿದ್ದಾಳೆ. ಈ ನೆನಪು ಮಾಸುವ ಮುನ್ನವೇ ಅಪ್ಪ ಮತ್ತೊಬ್ಬಳನ್ನು ವರಿಸಿದ್ದು ಮಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಬೇಸತ್ತ ಮಗಳು ನಡುರಾತ್ರಿಯಲ್ಲಿ ಮನೆಯಿಂದ ಹೊರನಡೆದಿದ್ದಾಳೆ. ಅಪಾಯಗಳನ್ನು ಲೆಕ್ಕಿಸದೆ ಗುಡ್ಡಬೆಟ್ಟಗಳನ್ನೇರಿ ಅರಿಯದ ದಾರಿಯಲ್ಲಿ ಆಕೆಯ ಪ್ರಯಾಣ ಮುಂದುವರೆದಿದೆ. ಹೆಣ್ಣುಮಗಳೊಬ್ಬಳು ಒಬ್ಬಂಟಿಯಾಗಿ ದುರ್ಗಮ ಪರಿಸರದಲ್ಲಿ ಬದುಕುಳಿಯುವುದೇ ಕಷ್ಟಸಾಧ್ಯ. ಆದರೆ ಮುಂದೊಂದು ದಿನ ಗೆಳೆಯನನ್ನು ಹುಡುಕಿ ಸಂಸಾರ ಹೂಡುವಲ್ಲಿ ಆಕೆ ಯಶಸ್ವಿಯಾಗಿದ್ದಾಳೆ. ನೆಲೆ ಕಂಡುಕೊಂಡು ನೆಮ್ಮದಿಯ ನಿಟ್ಟುಸಿರು ಬಿಡುವ ಹೊತ್ತಿಗೆ ದುರಂತ ಮತ್ತೆ ಎದುರಾಗಿದೆ. ಪತಿ ಅಪಘಾತದಲ್ಲಿ ತೀರಿಕೊಂಡ ಸುದ್ದಿ ತಿಳಿಯುತ್ತದೆ. ರಾತ್ರಿ ಹಗಲು ದುಡಿಮೆ ಮಾಡಿ ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಹೆಗಲೇರುತ್ತದೆ.

ಯಜಮಾನನಿಲ್ಲದ ಮನೆಗೆ ಮತ್ತೊಬ್ಬನನ್ನು ಹುಡುಕಿ ತರುತ್ತಾಳೆ. ಸಮಸ್ಯೆ ಪರಿಹಾರವಾಗುವುದಿಲ್ಲ. ಏಕೆಂದರೆ ಆತ ಸೋಮಾರಿ. ಮಹಾ ಸೋಮಾರಿ. ತಿಂದು ಮಲಗುವುದಷ್ಟೇ ಆತನ ಕೆಲಸ. ಐದು ತಿಂಗಳ ಅವಧಿಯಲ್ಲಿ ಮತ್ತೊಂದು ದುರ್ಘಟನೆ ನಡೆಯುತ್ತದೆ. ಕಾಡಿನಲ್ಲಿ ಅಲೆಯುತ್ತಿದ್ದ ಸೋಮಾರಿ ಗಂಡ ಹುಲಿ ಬಾಯಿಗೆ ತುತ್ತಾಗುತ್ತಾನೆ. -ಹೀಗೆ, ಶೇಕ್ಸ್‌ಪಿಯರ್‌ನ ನಾಟಕದಂತೆ ಮಹಾದುರಂತಗಳ ಸರಣಿ, ನಾಟಕೀಯ ತಿರುವುಗಳನ್ನು ಕಂಡ ಕಥಾನಾಯಕಿ ಅಂತಿಮವಾಗಿ ಸಾಮ್ರಾಜ್ಯದ ಮಹಾರಾಣಿಯಾಗಿ, ವೀರ ವನಿತೆಯಾಗಿ ಹೊರಹೊಮ್ಮುತ್ತಾಳೆ.

‘ದಿ ಪ್ಯಾಕ್’ ಚಿತ್ರದ ಕಥಾಹಂದರವಿದು. ‘ದಿ ಪ್ಯಾಕ್’ ಮನುಷ್ಯ ಜೀವನವಲ್ಲ; ಕಾಡುನಾಯಿಗಳ ಬದುಕಿನ ಕಥನ!

ಆಸ್ಕರ್ ಪ್ರಶಸ್ತಿಗೆ ಸಮ ಎಂದು ಪರಿಗಣಿತವಾಗಿರುವುದರಿಂದ ವೈಲ್ಡ್ ಸ್ಕ್ರೀನ್ ವಿಶ್ವ ಚಲನಚಿತ್ರೋತ್ಸವ ಅತ್ಯಂತ ಪ್ರತಿಷ್ಠಿತವಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಉತ್ಸವದಲ್ಲಿ ‘ಅನಿಮಲ್ ಬಿಹೇವಿಯರ್’ ಅತ್ಯುತ್ತಮ ಪ್ರಶಸ್ತಿಯನ್ನು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಗಳಿಸಬೇಕು ಎನ್ನುವುದು ಬಹುತೇಕರ ಕನಸು.

ಇದಕ್ಕೆ ಮೊದಲು ಭಾರತದ ನೆಲದಲ್ಲಿ ನಿರ್ಮಿಸಿದ ಯಾವ ಚಿತ್ರವೂ ಇಂತಹ ಸಾಧನೆಗೆ ಪಾತ್ರವಾಗಿಲ್ಲ. ಅಂದರೆ ಬಿಬಿಸಿ ಮತ್ತು ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್ ಭಾರತದಲ್ಲಿ ನಿರ್ಮಿಸಿದ ಹಲವಾರು ಚಿತ್ರಗಳು ಸಹ ಈ ವಿಭಾಗದಲ್ಲಿ ಪ್ರವೇಶ ಗಿಟ್ಟಿಸಲು ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ ‘ದಿ ಪ್ಯಾಕ್’ಗೆ ಹೊಸ ಇತಿಹಾಸ ಬರೆದ ಕೀರ್ತಿ ಸಲ್ಲುತ್ತದೆ.

ಭಾರತದಲ್ಲಿ ಇಂಥ ಚಿತ್ರಗಳನ್ನು ರೂಪಿಸುವುದು ಸುಲಭವಲ್ಲ. ಇಲ್ಲಿರುವ ಸವಾಲು ಕಾಡುಗಳ ರಚನೆಯದ್ದು. ಇಲ್ಲಿಯ ದಟ್ಟಕಾಡುಗಳಲ್ಲಿ ಪ್ರಾಣಿಗಳನ್ನು ಕಾಣುವುದೇ ಕಷ್ಟ. ಚಿತ್ರೀಕರಣ ಅಸಾಧ್ಯವೆನಿಸುವಷ್ಟು ಕಷ್ಟ. ಆದರೂ ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ಆಫ್ರಿಕಾದ ಹುಲ್ಲುಗಾವಲು ಕಾಡಿನಲ್ಲಿ ನಿರ್ಮಿಸಿದ ಚಿತ್ರಗಳೊಂದಿಗೆ ಇವು ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಫ್ರಿಕಾದ ಕಾಡುಗಳ ವೈವಿಧ್ಯ ಹಾಗೂ ಮನುಷ್ಯರಿಗೆ ಒಗ್ಗಿದ ಪ್ರಾಣಿಗಳು ಅಲ್ಲಿ ಚಿತ್ರ ನಿರ್ಮಾಣವನ್ನು ಸರಳಗೊಳಿಸುತ್ತವೆ.

ಎರಡು ತಾಸುಗಳ ‘ದಿ ಪ್ಯಾಕ್’ ಚಿತ್ರ ನಿರ್ಮಿಸಲು ತೆಗೆದುಕೊಂಡ ಸಮಯ ಮೂರು ವರ್ಷ. ಇದಕ್ಕಾಗಿ ಕೃಪಾಕರ ಸೇನಾನಿ ಮತ್ತು ತಂಡ ನೀಲಗಿರಿ ತಪ್ಪಲಿನ ಕಾಡುಗಳಲ್ಲಿ ಹದಿನೈದು ವರ್ಷಗಳ ನಿರಂತರ ಸಂಶೋಧನೆ ಮಾಡಿದೆ. ಇದರ ಫಲವಾಗಿಯೇ ‘ದಿ ಪ್ಯಾಕ್’ ೨೦೦೮-೨೦೧೦ರ ಅವಧಿಯ ಶ್ರೇಷ್ಠ ಚಿತ್ರ ಎನ್ನುವ ಗೌರವಕ್ಕೆ ಪಾತ್ರವಾಯಿತು.

ಗುಂಪಿನಲ್ಲಿ ವಾಸಿಸುವ ಕಾಡುನಾಯಿಗಳದ್ದು ಅತ್ಯಂತ ಸಂಕೀರ್ಣ ಬದುಕು. ಅಧ್ಯಯನಕ್ಕಾಗಲೀ, ಚಿತ್ರೀಕರಣಕ್ಕಾಗಲೀ ಸುಲಭಕ್ಕೆ ಸಿಗದ ನಿಗೂಢ ಜೀವಿಗಳಿವು. ಸಂಕೋಚ ಪ್ರವೃತ್ತಿಯ ಇವು ಮಾನವನಿಂದ ಸದಾ ದೂರ. ಇದಕ್ಕೆ ಕಾರಣಗಳು ಇಲ್ಲವೆಂದಲ್ಲ. ಭಾರತವನ್ನು ಆಳಿದ ಬ್ರಿಟೀಷರು ಕಾಡುನಾಯಿಗಳ ಮಾರಣಹೋಮ ಮಾಡಿದರು. ತಾವು ಬೇಟೆಯಾಡುವ ಜಿಂಕೆಗಳ ಸಂತತಿಗೆ ಈ ನಾಯಿಗಳು ಮಾರಕವೆಂದು ತೀರ್ಮಾನಿಸಿದರು. ತಮಗೆ ಸಿಗಬೇಕಾದ ಜಿಂಕೆಯನ್ನೆಲ್ಲಾ ಇವು ತಿಂದು ಮುಗಿಸುತ್ತಿವೆಯೆಂದು ಭಾವಿಸಿ, ಕಂಡಲ್ಲಿ ಕೊಲ್ಲಲು ಆದೇಶಿಸಿದರು. ಆನಂತರ ಕಾಡುನಾಯಿಗಳ ಸಂತತಿ ನಿರ್ನಾಮ ಹಂತಕ್ಕೆ ಬಂದಿತು. ಇದು ೧೯೭೨ರವರೆಗೆ ಮುಂದುವರೆಯಿತು. ಈ ಆಘಾತದಿಂದ ತತ್ತರಿಸಿದ ಕಾಡುನಾಯಿಗಳು ಮನುಷ್ಯರನ್ನು ಕಂಡರೆ ಸಾಕು, ಹೆದರಿ ನಡುಗುತ್ತಿದ್ದವು. ಆ ನೆನಪು ಇನ್ನೂ ಅವುಗಳಲ್ಲಿ ಉಳಿದಿರುವುದರಿಂದ, ಅವುಗಳನ್ನು ಸುಲಭವಾಗಿ ಸಮೀಪಿಸಲು ಸಾಧ್ಯವಿಲ್ಲ.

ಅಂದು ಸೇನಾನಿ ಕೈಯಲ್ಲಿ ಪ್ರಶಸ್ತಿ ಹಿಡಿದು ಮಾತನಾಡಿದ್ದು ಹೀಗೆ-

‘ನಮ್ಮ ದೇಶದಲ್ಲಿ ಕಾಡುನಾಯಿಗಳಿಗೆ ಯಾವಾಗಲೂ ಕಡೆಯ ಸ್ಥಾನವೇ. ಜನಪದದಲ್ಲಿಯೇ ಇರಬಹುದು ಅಥವಾ ಕಿಪ್ಲಿಂಗ್ಸ್‌ನ ಜಂಗಲ್ ಬುಕ್‌ನಲ್ಲಿರಬಹುದು ಅಥವಾ ವಿಜ್ಞಾನಿಗಳಿರಬಹುದು... ಅವುಗಳಿಗೆ ಎಲ್ಲೂ ವೇದಿಕೆ ಸಿಕ್ಕಿಲ್ಲ. ಆದ್ಯತೆಯೇನಿದ್ದರೂ ಕಾಡುನಾಯಿಗಳ ಜೊತೆಗಾರರಾದ ಆಕರ್ಷಕ ಹುಲಿ, ಚಿರತೆಗಳಿಗಷ್ಟೇ ಸೀಮಿತ. ಈ ನನ್ನ ಕಾಡುನಾಯಿಗಳು ಈ ದೊಡ್ಡ ವೇದಿಕೆಯಲ್ಲಿ ರಾರಾಜಿಸುವುದು ನನ್ನ ಕನಸಾಗಿತ್ತು’.