ದಿವಾಳಿತನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Failure of John Law's Mississippi Company led to French national bankruptcy in 1720.

ದಿವಾಳಿತನ ವ್ಯಕ್ತಿ ಅಥವಾ ಸಂಸ್ಥೆ ತನ್ನ ಸಾಲಗಾರರಿಗೆ ಹಣವನ್ನು ಹಿಂದಿರುಗಿಸಲಾಗುವುದಿಲ್ಲವೆಂದು ಕಾನೂನಾತ್ಮಕವಾಗಿ ಘೋಷಿಸುವ ಒಂದು ಪ್ರಕ್ರಿಯೆ. ಒಬ್ಬ ವ್ಯಕ್ತಿ ತನ್ನ ಎಲ್ಲ ಋಣಗಳನ್ನೂ ಸಂದಾಯ ಮಾಡಲು ಆಶಕ್ತನಾಗಿರುವ ಪರಿಸ್ಥಿತಿಯನ್ನು ಅಥವಾ ಅವನ ಆರ್ಥಿಕ ಅವಸ್ಥೆಯನ್ನು ಸೂಚಿಸುವುದರ ಜೊತೆಗೆ, ಅಂಥ ವ್ಯಕ್ತಿಯ ಸ್ವತ್ತಿಗೆ ಬರಬೇಕಾದ ಸೂಕ್ತ ಬೆಲೆ ಬಂದಾಗ್ಯೂ ಅವನ ಎಲ್ಲ ಋಣಗಳನ್ನೂ ಅದರಿಂದ ತೀರಿಸುವುದು ಸಾಧ್ಯವಾಗದೆಂಬುದನ್ನೂ ದಿವಾಳಿತನ ಎಂಬ ಶಬ್ದ ವ್ಯಕ್ತಪಡಿಸುತ್ತದೆ. ಸಂಬಂಧಿತ ಸೂಕ್ತ (ಕಾಂಪಿಟೆಂಟ್) ನ್ಯಾಯಾಲಯವೊಂದು ಒಬ್ಬ ವ್ಯಕ್ತಿಯನ್ನು ದಿವಾಳಿಯೆಂದು ಘೋಷಿಸಿದ ಹೊರತು ಅವನನ್ನು ಹಾಗೆಂದು ಕರೆಯಲಾಗದು.

ಕಾನೂನುಗಳು[ಬದಲಾಯಿಸಿ]

ದಿವಾಳಿತನಕ್ಕೆ ಸಂಬಂಧಿಸಿದ ಆಧುನಿಕ ಅಧಿನಿಯಮಗಳು ಒಬ್ಬ ಮನುಷ್ಯನನ್ನು ದಿವಾಳಿಯೆಂದು ಘೋಷಿಸಲು ಅನುಸರಿಸಬೇಕಾದ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಸಾಲದಾತರಿಗೆ ಸಾಲಗಾರರಿಂದ ಬರಬೇಕಾದ ಮೊಬಲಗುಗಳಿಗೆ ಅನುಗುಣವಾಗಿ ಸಾಲಗಾರನ ಸ್ವತ್ತನ್ನು ಅವರಲ್ಲಿ ಹಂಚುವುದಕ್ಕೆ ಏರ್ಪಾಟು ಮಾಡುವುದೂ ಸಾಲಿಗರ ಕೋಟಲೆಯಿಂದ ಸಾಲಗಾರನನ್ನು ವಿಮೋಚನೆಗೊಳಿಸುವುದೂ ದಿವಾಳಿಯಾದವನು ಮತ್ತೆ ತನ್ನ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಅವಕಾಶ ಕಲ್ಪಿಸಿ ಕೊಡುವುದೂ ಈ ಅಧಿನಿಯಮಗಳ ಉದ್ದೇಶಗಳಾಗಿರುತ್ತವೆ. ದಿವಾಳಿತನದ ಕಾನೂನನ್ನು ಜಾರಿಗೆ ತರುವುದಕ್ಕೆ ಹಿಂದೆ, ಸಾಲ ತೀರಿಸಲಾಗದ ವ್ಯಕ್ತಿಯನ್ನು ಅಪರಾಧಿಯೆಂದು ಪರಿಗಣಿಸಲಾಗುತ್ತಿತ್ತು. ಅಂಥವರನ್ನು ಅನೇಕ ವೇಳೆ ಕಾರಾಗೃಹಕ್ಕೆ ಕಳುಹಿಸಲಾಗುತ್ತಿತ್ತು. ಅದರೆ ಹಲವೊಮ್ಮೆ ಇಂಥ ಪರಿಸ್ಥಿತಿ ದುರ್ವರ್ತನೆಗಿಂತ ದುರದೃಷ್ಟದ ಪರಿಣಾಮವೆನಿಸುತ್ತಿದ್ದುದೂ ಉಂಟು. ಆದ್ದರಿಂದ ಅಂಥ ದುರ್ದೈವಿ ಸಾಲಗಾರನು ತನ್ನ ಗತಕಾಲದ ಹೊಣೆಗಳಿಂದ ವಿಮೋಚನೆ ಹೊಂದಿ ಹೊಸದಾಗಿ ಜೀವನವನ್ನಾರಂಭಿಸಲು ಮಾರ್ಗವನ್ನು ಈ ಕಾನೂನು ಒದಗಿಸಿ ಕೊಡುತ್ತದೆ. ಸಾಲದಾತರಿಗೂ ಇದರಿಂದ ಪ್ರಯೋಜನವುಂಟು. ಸಾಲಗಾರನ ಲಭ್ಯವಿರುವ ಸ್ವತ್ತನ್ನು ಸಮನ್ವಯವಾಗಿ (ಎಕ್ವಿಟಬಲ್) ಅವನ ಎಲ್ಲ ಸಾಲದಾತರಿಗೆ ವಿತರಣೆಯಾಗುವಂತೆ ಇದು ಭರವಸೆ ನೀಡುತ್ತದೆ. ದಿವಾಳಿತನದ ಕಾನೂನು ಇಲ್ಲದಿದ್ದಲ್ಲಿ ಸಾಲಗಾರನು ತನ್ನ ಸ್ವತ್ತನ್ನು ಸಾಲಿಗರಲ್ಲಿ ಯಾದೃಚ್ಛಿಕವಾಗಿ ಹಂಚಬಹುದು. ಈ ವಿಚಾರದಲ್ಲಿ ಎಲ್ಲ ಸಾಲದಾತರು ಸಮಾನರಾಗಿ ಪರಿಗಣಿತರಾಗುವಂತೆ-ಒಂದೇ ದರದಲ್ಲಿ ಎಲ್ಲರಿಗೂ ಪಾವತಿಯಾಗುವಂತೆ-ನ್ಯಾಯಾಲಯ ನೋಡಿಕೊಳ್ಳಲು ಕಾನೂನು ಅವಕಾಶ ಮಾಡಿಕೊಡುತ್ತದೆ.

ಇತಿಹಾಸ[ಬದಲಾಯಿಸಿ]

ಸಾಲದ ವ್ಯವಹಾರ ಭಾರತಕ್ಕೆ ಹೊಸದೇನಲ್ಲ. ಋಣ ತೀರಿಸುವುದನ್ನು ಕುರಿತ ನಿಯಮಗಳು ಅತ್ಯಂತ ಪ್ರಾಚೀನ ಕಾಲದಿಂದಲೂ, ಮನುಸ್ಮೃತಿಯುದ್ದಕ್ಕೂ ಹಿಂದಿನ ಕಾಲದಿಂದಲೂ, ಆಚರಣೆಯಲ್ಲಿದ್ದವು. ಸನಾತನ ಹಿಂದೂ ನ್ಯಾಯಸೂತ್ರಗಳಲ್ಲಿ ದಿವಾಳಿತನಕ್ಕೆ ಸಂಬಂಧಿಸಿದ ನ್ಯಾಯಿಕ ಪರಿಕಲ್ಪನೆ ಇರಲಿಲ್ಲವೆಂದು ಹೇಳಬೇಕಾಗಿದೆ. ಋಣ ಪಾವತಿ ಮಾಡದವನು ಇನ್ನೊಂದು ಜನ್ಮವೆತ್ತಿ ಅದನ್ನು ತೀರಿಸಬೇಕಾಗುವುದೆಂದು ಭಾವಿಸಲಾಗಿತ್ತು. ಸಾಲ ತೀರಿಸಲು ಅಶಕ್ತನಾದವನನ್ನು ತನ್ನ ವಶಕ್ಕೆ ತೆಗೆದುಕೊಂಡು ಅವನ ಅಂಗಾಂಗಗಳನ್ನು ಕತ್ತರಿಸಿಹಾಕಲು ಆಥವಾ ಅವನನ್ನು ಗುಲಾಮನಂತೆ ಮಾಡಲು ಪ್ರಾಚೀನ ರೋಮನ್ ಚಕ್ರಾಧಿಪತ್ಯದಲ್ಲಿ ಸಾಲಿಗನಿಗೆ ಹಕ್ಕು ಇತ್ತು. ಸಾಲಗಾರನ ಸಾಲ ತೀರುವವರೆಗೂ ಅಥವಾ ಅವನು ಉಪವಾಸದಿಂದ ಸಾಯುವವರೆಗೂ ಕಾರಾಗೃಹದಲ್ಲಿ ಇಡಲು ಇಂಗ್ಲಿಷ್ ಕಾನೂನಿನಲ್ಲಿ ಅವಕಾಶವಿತ್ತು. ಪ್ರಾಚೀನ ಕಾಲದಲ್ಲಿ ಋಣ ವಿಮೋಚನೆಗೆ ಪ್ರಾಧಾನ್ಯ ನೀಡಲಾಗಿತ್ತೇ ವಿನಾ, ಋಣವಿಮೋಚನೆ ಅಸಾಧ್ಯವಾಗುವಂಥ ಪರಿಸ್ಥಿತಿಗೆ ಕಾರಣಗಳೇನೆಂಬುದರ ಕಡೆಗೆ ಗಮನ ನೀಡಲಾಗುತ್ತಿರಲಿಲ್ಲ. ಸಾಲಗಾರ ಸ್ವಇಚ್ಛೆಯಿಂದ ತನ್ನ ಸ್ವತ್ತನ್ನು ಸಾಲ ಕೊಟ್ಟವರಿಗೆ ಒಪ್ಪಿಸಿ ಅನಂತರ ಮನವಿಯೊಂದನ್ನು ಸಲ್ಲಿಸಿ ತನ್ಮೂಲಕ ವಿಮೋಚನೆ ಪಡೆಯಬಹುದಾದ ಪದ್ಧತಿಯೊಂದು ಕ್ರಿ. ಪೂ. 48 ರ ಸುಮಾರಿಗೆ ರೋಮನ್ ಚಕ್ರಾಧಿಪತ್ಯದಲ್ಲಿ ಜಾರಿಯಲ್ಲಿತ್ತು. ದಿವಾಳಿತನದ ಪರಿಣಾಮಗಳಾದ ದಸ್ತಗಿರಿ, ಕಾರಾಗೃಹವಾಸ, ಅಪಕೀರ್ತಿ ಮುಂತಾದವುಗಳಿಂದ ತಪ್ಪಿಸಿಕೊಳ್ಳಲು ಅನುಸರಿಸಬಹುದಾಗಿದ್ದ ಈ ಕ್ರಮವನ್ನು ಸೆಷಿಯೋ ಬೊನೋರಮ್ (ವಸ್ತು ವಿಸರ್ಜನೆ) ಎಂದು ಕರೆಯಲಾಗುತ್ತಿತ್ತು. ಅದರೆ ಅವನು ಅನಂತರ ಸಂಪಾದಿಸಿದ ಆಸ್ತಿ ಹಿಂದಿನ ಬಾಕಿಗೆ ಹೊಣೆಯಾಗಿರುತ್ತಿತ್ತು. ಅಂಥ ಆಸ್ತಿಯನ್ನು ಅವನ ಜೀವನೋಪಾಯಕ್ಕೆ ಅವಶ್ಯಕವಾದಷ್ಟನ್ನು ಮಾತ್ರ ಅವನಿಗೆ ಬಿಡಲಾಗುತ್ತಿತ್ತು.

ರೋಮನ್ ನ್ಯಾಯ ಪದ್ಧತಿಯ ವಸ್ತು ವಿಸರ್ಜನ ಪದ್ಧತಿ ಯೂರೋಪಿನ ಅನೇಕ ದೇಶಗಳಲ್ಲಿ ರೂಢಿಗೆ ಬಂತು. ಇಂಗ್ಲೆಡಿನಲ್ಲಿ 8ನೆಯ ಹೆನ್ರಿ 1542ರಲ್ಲಿ ಜಾರಿಗೆ ತಂದ ಅಧಿನಿಯಮಕ್ಕೆ ರೋಮನ್ ನ್ಯಾಯಸೂತ್ರವೇ ಆಧಾರವಾಗಿತ್ತು. ಈ ಅಧಿನಿಯಮದ ಮುಖ್ಯ ಉದ್ದೇಶವೆಂದರೆ ವಂಚಕರಾದ ಸಾಲದಾತರಿಂದ ಸಾಲಗಾರರಿಗೆ ಹಾನಿಯಾಗದಂತೆ ಸಹಾಯ ಮಾಡುವುದಾಗಿತ್ತು. ಈ ಕಾನೂನು ಅನೇಕ ಮಾರ್ಪಾಡುಗಳನ್ನು ಹೊಂದಿ ಈಗಿನ ಸ್ಥಿತಿಗೆ ಬಂದಿದೆ. ಈ ನ್ಯಾಯಸೂತ್ರದ ಬೆಳವಣಿಗೆಯಲ್ಲಿ 1751, 1831, ಮತ್ತು 1869 ರಲ್ಲಿ ಮಾಡಲಾದ ಬದಲಾವಣೆಗಳು ಮುಖ್ಯ ಘಟ್ಟಗಳು. 1833 ರ ಅಧಿನಿಯಮದ ಪ್ರಕಾರ, ದಿವಾಳಿತನಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳಲು ಒಂದು ಹೊಸ ವಿಭಾಗವೇ ಅಸ್ತಿತ್ವಕ್ಕೆ ಬಂತು. ಈ ಅಧಿನಿಯಮಕ್ಕೆ 1890 ರಲ್ಲಿ ತಿದ್ದುಪಡಿ ಮಾಡಲಾಯಿತು. ದಿವಾಳಿತನಕ್ಕೆ ಸಂಬಂಧಿಸಿದ ಇಂಗ್ಲೆಂಡಿನ ಆಧುನಿಕ ಕಾನೂನಿಗೆ 1914ರ ಅಧಿನಿಯಮವೇ ಆಧಾರವೆನ್ನಬಹುದು. ಇದಕ್ಕೆ 1926ರಲ್ಲಿ ತಿದ್ದುಪಡಿ ಮಾಡಲಾಯಿತು. ಈ ಅಧಿನಿಯಮದನ್ವಯ 1952 ರಲ್ಲಿ ನಿಯಮಗಳನ್ನು ಮಾಡಲಾಯಿತು. ಅವುಗಳಿಗೆ 1956 ರಲ್ಲಿ ಹಾಗೂ 1960 ರಲ್ಲಿ ತಿದ್ದುಪಡಿಗಳನ್ನು ಮಾಡಲಾಯಿತು. ಅವು ಈಗ ಆಚರಣೆಯಲ್ಲಿವೆ.

ಅಮೆರಿಕಾದಲ್ಲಿ ದಿವಾಳಿತನಕ್ಕೆ ಸಂಬಂದಿಸಿದ ಅಧಿನಿಯಮವನ್ನು 1800ರಲ್ಲಿ ಜಾರಿಗೆ ತರಲಾಯಿತು. ಇಂಗ್ಲಿಷ್ ಕಾನೂನಿನ ತಳಹದಿಯ ಮೇಲೆ ಈ ಅಧಿನಿಯಮವನ್ನು ಸಿದ್ಧಗೊಳಿಸಲಾಗಿತ್ತು. ಇದು ವಂಚಕ ಸಾಲಗಾರರಿಗೆ ವಿರುದ್ಧವಾಗಿತ್ತು. ಇದನ್ನು 1803 ರಲ್ಲಿ ರದ್ದುಗೊಳಿಸಲಾಯಿತು. ರಾಜ್ಯಗಳ ಅಧಿನಿಯಮಗಳು ಸುಮಾರು 40 ವರ್ಷಗಳ ಕಾಲ ಜಾರಿಯಲ್ಲಿದ್ದವು. ಎರಡನೆಯ ಕೇಂದ್ರೀಯ ಶಾಸನ 1841 ರಲ್ಲಿ ಅಸ್ತಿತ್ವಕ್ಕೆ ಬಂದರೂ 1843 ರಲ್ಲಿ ರದ್ದಾಯಿತು. 1874 ರ ವರೆಗೆ ರಾಜ್ಯಗಳ ಅಧಿನಿಯಮಗಳು ಮತ್ತೆ ಜಾರಿಯಲ್ಲಿದ್ದವು. 1893 ರ ಬಿಕ್ಕಟ್ಟಿನ ಪರಿಣಾಮವಾಗಿ 1898 ರ ಅಧಿನಿಯಮ ರೂಪುಗೊಂಡಿತು. 1933, 1934, 1935, 1938 ಮತ್ತು 1939 ರಲ್ಲಿ ಅಧಿನಿಯಮಕ್ಕೆ ತಿದ್ದುಪಡಿಗಳನ್ನು ಮಾಡಲಾಯಿತು. ಅನಂತರವೂ ಇದಕ್ಕೆ ಅನೇಕ ತಿದ್ದುಪಡಿಗಳನ್ನು ಮಾಡಲಾಗಿದೆ. ಈ ಕೇಂದ್ರೀಯ ಶಾಸನದ ಮೇರೆಗೆ ಜಿಲ್ಲಾ ನ್ಯಾಯಾಲಯಕ್ಕೆ ದಿವಾಳಿತನದ ಪ್ರಕರಣಗಳನ್ನು ವಿಚಾರಿಸುವ ಮೂಲ ಅಧಿಕಾರವ್ಯಾಪ್ತಿ ಇರುತ್ತದೆ.

ಭಾರತದಲ್ಲಿಯ ದಿವಾಳಿತನ ಕಾನೂನಿಗೆ ಆಂಗ್ಲರ ನ್ಯಾಯಸೂತ್ರಗಳೇ ಹಿನ್ನೆಲೆಯಾಗಿವೆ. ಸ್ಥಳೀಯ ಸಮಸ್ಯೆಗಳೂ ಹಿಂದೂ ಹಾಗೂ ಇಸ್ಲಾಮೀ ನ್ಯಾಯಸೂತ್ರಗಳೂ ಈ ಕಾನೂನಿನ ಮತ್ತು ದಿವಾಳಿತನವನ್ನು ಕುರಿತ ಪ್ರಕರಣಗಳಲ್ಲಿಯ ನಿರ್ಣಯಗಳ ಮೇಲೆ ಪ್ರಭಾವ ಬೀರಿವೆ. ಭಾರತ ಸ್ವತಂತ್ರವಾಗುವುದಕ್ಕೆ ಮುಂಚೆ 1909 ರಲ್ಲಿ ಪ್ರೆಸಿಡೆನ್ಸಿ ಪಟ್ಟಣಗಳ ದಿವಾಳಿತನ ಅಧಿನಿಯಮವೂ 1920 ರ ಪ್ರಾಂತೀಯ ದಿವಾಳಿತನ ಅಧಿನಿಯಮವೂ ಜಾರಿಯಲ್ಲಿದ್ದವು. ಇವು ಬ್ರಿಟಿಷರ ನೇರ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಿಗೆ ಅನ್ವಯವಾಗುತ್ತಿದ್ದವು. ದೇಶೀಯ ಸಂಸ್ಥಾನಗಳಲ್ಲಿ ಇಂಥವೇ ಅಧಿನಿಯಮಗಳು ಜಾರಿಯಲ್ಲಿದ್ದವು. ಸಂವಿಧಾನದ ಪ್ರಕಾರ ಈಗಲೂ ಈ ಅಧಿನಿಯಮಗಳು ಆಯಾ ಪ್ರದೇಶಗಳಲ್ಲಿ ಆಚರಣೆಯಲ್ಲಿವೆ. ಪ್ರೆಸಿಡೆನ್ಸಿ ಪಟ್ಟಣ ದಿವಾಳಿತನ ಅಧಿನಿಯಮವೂ ಪ್ರಾಂತೀಯ ದಿವಾಳಿತನ ಅಧಿನಿಯಮವೂ ಸ್ಥೂಲವಾಗಿ ಸಮಾನವಾದ ತತ್ತ್ವಗಳನ್ನು ಆಧರಿಸಿವೆ. ಇವುಗಳ ನಡುವಣ ಭಿನ್ನತೆಗಳು ವಿಶೇಷವಾಗಿ ಪ್ರಕ್ರಿಯೆ, ಸಾಲಗಾರನ ವರ್ತನೆ, ಸಾಲಗಾರನ ಸ್ವತ್ತನ್ನು ಯಾರಲ್ಲಿ ನಿಹಿತಗೊಳಿಸಬೇಕೆಂಬುದರ ಬಗ್ಗೆ ನಿರ್ಣಯ - ಮುಂತಾದವಕ್ಕೆ ಸಂಬಂಧಿಸಿದಂಥವಾಗಿವೆ.

ದಿವಾಳಿತನದ ಕೃತ್ಯಗಳು[ಬದಲಾಯಿಸಿ]

ಒಬ್ಬ ವ್ಯಕ್ತಿಯನ್ನು ದಿವಾಳಿಯೆಂದು ಘೋಷಿಸಲು ಎರಡು ಷರತ್ತುಗಳು ಪಾಲಿಸಲ್ಪಡಬೇಕು; (1) ಆತ ಋಣಿ (ಸಾಲಗಾರನಾಗಿರಬೇಕು) ಯಾಗಿರಬೇಕು; ಅವನು ತನ್ನ ಸಾಲದಾತನ ಪಾವತಿ ಮಾಡಬೇಕಾಗಿರುವ ಹಣವನ್ನು ಸಂಪೂರ್ಣವಾಗಿ ಪಾವತಿ ಮಾಡಲು ಅವನ ಆಸ್ತಿಯು ಸಾಕಾಗದಷ್ಟ್ತು (ಇನ್‍ಸಫೀಷಿಯಂಟ್) ಇರಬೇಕು. (2). ಆತ ದಿವಾಳಿತನದ ಕೃತ್ಯವೊಂದನ್ನು ಎಸಗಿರಬೇಕು. ಹಣಕಾಸಿನ ದೃಷ್ಟಿಯಿಂದ ಪೇಚಾಟಕ್ಕೆ ಸಿಲುಕಿದ್ದಾನೆಂಬುದನ್ನು ವ್ಯಕ್ತಪಡಿಸುವಂಥ ಕೃತ್ಯವೇನನ್ನಾದರೂ ಅವನು ಮಾಡಿದ್ದರೆ ಅದು ದಿವಾಳಿತನದ ಕೃತ್ಯ ಎನಿಸುತ್ತದೆ. ದಿವಾಳಿತನದ ಕೃತ್ಯಗಳು : (1) ತನ್ನ ಸಾಲದಾತನ ಲಾಭಕ್ಕಾಗಿಯೆಂದು ತನ್ನ ಎಲ್ಲ ಸ್ವತ್ತನ್ನು ಇಲ್ಲವೇ ಬಹುತೇಕ ತನ್ನೆಲ್ಲ ಸ್ವತ್ತನ್ನು ಮೂರನೆಯ ವ್ಯಕ್ತಿಯೊಬ್ಬನಿಗೆ ವರ್ಗಾಯಿಸುವುದು; (2) ತನ್ನ ಸಾಲದಾತನ ವಂಚಿಸುವ, ಪಾವತಿಯನ್ನು ವಿಳಂಬಗೊಳಿಸುವ ಉದ್ದೇಶದಿಂದ ತನ್ನ ಸ್ವತ್ತನ್ನು ಇಲ್ಲವೆ ಅದರ ಒಂದು ಭಾಗವನ್ನು ಪರಭಾರೆ ಮಾಡುವುದು; (3) ತನ್ನ ಸಾಲದಾತರಲ್ಲಿ ಯಾರಿಗಾದರೂ ಅಧಿಮಾನ್ಯತೆ ತೋರಿಸಿ, ಅವನಿಗೆ ತನ್ನ ಸ್ವತ್ತನ್ನು ವರ್ಗ ಮಾಡುವುದು; ಸಾಲಗಾರನನ್ನು ದಿವಾಳಿಯೆಂದು ನ್ಯಾಯಾಲಯ ತೀರ್ಪು (ಆಡ್‍ಜಡ್ಜ್) ಮಾಡಿದ್ದರೆ ಆ ಸಾಲದಾತನಿಗೆ ದಾಮಾಷಾ ಪ್ರಕಾರ ಸಲ್ಲುತ್ತಿದ್ದುದಕ್ಕಿಂತ ಹೆಚ್ಚಾಗಿ ಸಲುವಳಿ ಮಾಡುವುದು; (4) ತನ್ನ ಸಾಲದಾತರಿಗೆ ಪಾವತಿ ಮಾಡದೇ ತಪ್ಪಿಸಿಕೊಳ್ಳುವ ಇಲ್ಲವೇ ಪಾವತಿ ವಿಳಂಬ ಮಾಡುವ ಉದ್ದೇಶದಿಂದ ಭಾರತದಿಂದ ಹೊರಕ್ಕೆ ಪರಾರಿಯಾಗುವುದು, ತನ್ನ ವಾಸದ ಮನೆಯಿಂದ ಇಲ್ಲವೇ ತನ್ನ ವ್ಯವಹಾರವನ್ನು ಸಾಮಾನ್ಯವಾಗಿ ನಡೆಸುವ ಸ್ಥಳದಿಂದ ಪರಾರಿಯಾಗುವುದು. ಇಲ್ಲವೇ ಬೇರಾವುದಾದರೂ ರೀತಿಯಲ್ಲಿ ಗೈರುಹಾಜರಾಗುವುದು. ತನ್ನ ಸಾಲಿಗರು ತನ್ನೊಂದಿಗೆ ಸಂಪರ್ಕ ಹೊಂದುವುದು ಸಾಧ್ಯವಾಗದಂತೆ ಕಣ್ಮರೆಯಾಗುವುದು, (5) ಹಣದ ಪಾವತಿಗಾಗಿ ಯಾವುದೇ ನ್ಯಾಯಾಲಯದ ಡಿಕ್ರಿಯ ಜಾರಿಯಲ್ಲಿ ಅವನ ಯಾವುದೇ ಸ್ವತ್ತು ಬಿಕರಿಯಾಗುವುದು ಇಲ್ಲವೇ 21 ದಿನಗಳಿಗಿಂತ ಕಡಿಮೆಯಿಲ್ಲದ ಅವಧಿಗೆ ಜಫ್ತಿಯಾಗುವುದು, (6) ತಾನು ದಿವಾಳಿಯೆಂದು ನ್ಯಾಯನಿರ್ಣಯ ನೀಡಬೇಕೆಂದು ಅವನು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು; (7) ತನ್ನ ಸಾಲದ ಮೊಬಲಗಿನ ಪಾವತಿಯನ್ನು ಅಮಾನತಿನಲ್ಲಿಟ್ಟಿರುವುದಾಗಿ (ಸಸ್ಪೆಂಡ್), ಇಲ್ಲವೇ ಅಮಾನತು ಗೊಳಿಸಲಿರುವುದಾಗಿ ತನ್ನ ಸಾಲದಾತ (ಸಾಲಿಗ)ರಲ್ಲ್ಲಿ ಯಾರಿಗಾದರೂ ಅವನು ನೋಟೀಸು ಕೊಡುವುದು; (8) ಹಣದ ಪಾವತಿಗಾಗಿ ಯಾವುದೇ ನ್ಯಾಯಾಲಯದಿಂದ ನೀಡಲಾದ ನಿರ್ಣಯ (ಆದೇಶ-ಡಿಕ್ರಿ)ದ ಜಾರಿಗಾಗಿ ಅವನು ಬಂಧಿತನಾಗಿರುವುದು; ಮುಂತಾದವು. ==ನ್ಯಾಯನಿರ್ಣಯಕ್ಕೆ ಅರ್ಜಿ== ಒಬ್ಬಾತ ದಿವಾಳಿತನದ ಕೃತ್ಯ ಎಸಗಿದಾಗ ಸಾಲಗಾರನಾಗಲಿ, ಸಾಲದಾತನಾಗಲಿ ಯಾರೇ ಆಗಲಿ ಸಾಲಗಾರನು ದಿವಾಳಿ ಎಂದು ತೀರ್ಪು ಕೊಡುವ ಬಗ್ಗೆ ಸ್ಥಳೀಯ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಹಾಕಬಹುದು. ನ್ಯಾಯಾಲಯ ಅದನ್ನು ಪರಿಶೀಲಿಸಿ ಅವನು ದಿವಾಳಿ ಎಂದು ನ್ಯಾಯನಿರ್ಣಯ ಆದೇಶ ನೀಡಬಹುದು. ಒಬ್ಬ ವ್ಯಕ್ತಿ ದಿವಾಳಿಯೆಂದು ನ್ಯಾಯನಿರ್ಣಯ ನೀಡಬೇಕೆಂದು ಸಾಲದಾತನೊಬ್ಬ ಅರ್ಜಿ ಸಲ್ಲಿಸಬೇಕಾದರೆ ಕೆಲವು ಷರತ್ತುಗಳು ಪಾಲಿಸಲ್ಪಡಬೇಕು. ಅವನಿಗೆ (ಅಥವಾ ಅವನೊಂದಿಗೆ ಸೇರಿ ಅರ್ಜಿ ಹಾಕಿರುವವರಿಗೆ ಒಟ್ಟಾಗಿ) ಬರಬೇಕಾದ ಸಾಲದ ಮೊಬಲಗು 500 ರೂ. ಅಥವಾ ಅದಕ್ಕೂ ಹೆಚ್ಚಾಗಿರಬೇಕು. ಸಾಲ ತತ್‍ಕ್ಷಣ ಇಲ್ಲವೇ ಅಥವಾ ಯಾವುದೇ ನಿಶ್ಚಿತ ಭವಿಷ್ಯ ಕಾಲದಲ್ಲಿ ಪಾವತಿಯಾಗಬೇಕಾದ ಬಾಕಿಯಾಗಿರಬೇಕು. ಅಥವಾ ಅರ್ಜಿ ಸಲ್ಲಿಸುವ ದಿನಕ್ಕೆ ಹಿಂದಿನ ಮೂರು ತಿಂಗಳೊಳಗೆ ಸಾಲಗಾರನ ದಿವಾಳಿತನದ ಕೃತ್ಯವನ್ನು ಎಸಗಬೇಕು. ತಾನು ದಿವಾಳಿಯೆಂದು ನ್ಯಾಯನಿರ್ಣಯ ನೀಡಬೇಕೆಂದು ಬಯಸಿ ಋಣಿ ಅರ್ಜಿ ಸಲ್ಲಿಸಲು ಈ ಷರತ್ತು ಪಾಲಿತವಾಗಬೇಕು; ಅವನ ಸಾಲಗಳು ರೂ. 500 ಅಥವಾ ಅದಕ್ಕಿಂತ ಹೆಚ್ಚಿಗೆ ಇರಬೇಕು; ಇಲ್ಲವೇ ಹಣದ ಪಾವತಿಗಾಗಿ ಯಾವುದೇ ನ್ಯಾಯಾಲಯದ ಡಿಕ್ರಿಯ ಜಾರಿಯಲ್ಲಿ ಅವನು ದಸ್ತಗಿರಿಯಾಗಿ ಕಾರಾಗೃಹಕ್ಕೆ ಕಳುಹಿಸಲ್ಪಟ್ಟಿರಬೇಕು; ಇಲ್ಲವೇ ಹಣದ ಡಿಕ್ರಿಯ ಜಾರಿಯಲ್ಲಿ ಅವನ ಸ್ವತ್ತಿನ ಮೇಲೆ ಜಫ್ತಿಯ ಆದೇಶವೊಂದನ್ನು ನೀಡಿರಬೇಕು ಮತ್ತು ಅದು ಅಸ್ತಿತ್ವದಲ್ಲಿದ್ದಿರಬೇಕು.

ಅರ್ಜಿಯನ್ನು ವಿಚಾರಿಸಿ ನ್ಯಾಯಾಲಯ ದಿವಾಳಿತನದ ನ್ಯಾಯನಿರ್ಣಯ ಆದೇಶವನ್ನು ನೀಡಿದ ಮೇಲೆ ಸಾಲಗಾರನ ಸ್ವತ್ತು ನ್ಯಾಯಾಲಯದ ಅಧಿಕಾರಿಯೊಬ್ಬನ ಅಧಿಕಾರಾಂತರ್ಗತವಾಗಿರುತ್ತದೆ. ಇವನನ್ನು ನ್ಯಾಯಾಲಯ ನೇಮಿಸುತ್ತದೆ. ಇವನು ಆಧಿಕೃತ ಸ್ವತ್ತು ವಿಲೇವಾರಿದಾರ (ಆಫಿಷಿಯಲ್ ಅಸೈನೀ, ರಿಸೀವರ್). ಸಾಲಗಾರನ ಸ್ವತ್ತಿನ ಮೇಲಿನ ಹಣ ವಸೂಲಿಯಲ್ಲಿ ಈತನಿಗೆ ಸಾಲಗಾರನ ಸಹಾಯ ಮಾಡಬೇಕು. ಸಾಲಗಾರನ ಸ್ವತ್ತಿನ ಮೇಲ್ವಿಚಾರಣೆ, ಆಧಾರವಾಗಿ ನೀಡಲಾಗಿಲ್ಲದ ಸ್ವತ್ತಿನ ವಸೂಲಿ, ಋಣ ಪಾವತಿ ಇವನ್ನು ಸ್ವತ್ತು ನಿರ್ವಾಹಕನೇ ನ್ಯಾಯಾಲಯದ ಆದೇಶಾನುಸಾರವಾಗಿ ಮತ್ತು ಅದರ ಆಧೀನದಲ್ಲಿ ನಡೆಸುತ್ತಾನೆ. ಸಾಲಗಾರನ ಹೆಸರನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗುತ್ತದೆ. ದಿವಾಳಿಯಾದವನನ್ನು ಹಣ ವಸೂಲಿ ಕ್ರಮದ ಅಂಗವಾಗಿ ಬಂಧಿಸುವುದು ಅಥವಾ ಕೈದು ಮಾಡುವುದು, ಕಾರಾಗೃಹಕ್ಕೆ ಕಳುಹಿಸುವುದು ಇಂಥ ಕ್ರಮಗಳಿಗೆ ಒಳಗಾಗದಂತೆ ಅವನಿಗೆ ರಕ್ಷಣೆ ನೀಡಲಾಗುತ್ತದೆ. ಅವನು ಕಾರಾಗೃಹದಲ್ಲಿದ್ದರೆ ಕೂಡಲೇ ಅವನನ್ನು ಬಿಡುಗಡೆ ಮಾಡಲಾಗುತ್ತದೆ.

ಶೂನ್ಯೀಕರಣ ಮತ್ತು ವಿಮೋಚನೆ[ಬದಲಾಯಿಸಿ]

ದಿವಾಳಿತನದ ನ್ಯಾಯನಿರ್ಣಯ ಆದೇಶ ನೀಡಿದ್ದು ಸರಿಯಲ್ಲವೆನಿಸಿದಾಗ ನ್ಯಾಯಾಲಯ ಆ ಆದೇಶವನ್ನು ಅನೂರ್ಜಿತಗೊಳಿಸಬಹುದು. ದಿವಾಳಿಯು ತನ್ನ ಸಾಲವನ್ನು ಪೂರ್ತಿಯಾಗಿ ತೀರಿಸಿದಾಗ ದಿವಾಳಿಯನ್ನು ದಿವಾಳಿತನದಿಂದ ವಿಮೋಚನೆಗೊಳಿಸಬಹುದು. ಹೀಗೆ ಮಾಡುವುದೆಂದರೆ ದಿವಾಳಿತನದ ಕೆಲವು ಅನರ್ಹತೆಗಳಿಂದ ಅವನನ್ನು ಬಿಡುಗಡೆ ಮಾಡಿ, ಇತರರಂತೆ ಅವನೂ ಎಲ್ಲ ನ್ಯಾಯಬದ್ಧ ವ್ಯವಹಾರಗಳಲ್ಲೂ ಭಾಗವಹಿಸಿ, ಕರಾರು ಮಾಡಿಕೊಳ್ಳುವ ಸಂಪೂರ್ಣ ಸಾಮರ್ಥ್ಯ ವನ್ನು ಮತ್ತೆ ಪಡೆಯುವಂತೆ ಮಾಡುವುದು. ದಿವಾಳಿಯನ್ನು ದಿವಾಳಿತನದಿಂದ ವಿಮೋಚನೆಗೊಳಿಸುವ ಸಂದರ್ಭಗಳು ಇನ್ನೂ ಹಲವು ಉಂಟು. ಒಬ್ಬಾತ ದಿವಾಳಿ ಎಂದು ನ್ಯಾಯನಿರ್ಣಯವಾದ ಮೇಲೆ, ಅವನು ದಿವಾಳಿತನದಿಂದ ವಿಮೋಚನೆ ಹೊಂದದೇ ಆಜೀವಪರ್ಯಂತ ಹಾಗೇ ಉಳಿದು ಬರಬಹುದು. ವಿಮೋಚನೆಯಾದ ಮೇಲೆ ಅವನು ಸಾಲ ಕೊಟ್ಟವರ ಬಾದೆಯಿಂದ ತಪ್ಪಿಕೊಂಡಿರಬಹುದು. ಆದರೆ ಸರ್ಕಾರಕ್ಕೆ ಸಲ್ಲಬೇಕಾದ ಬಾಕಿ, ವಂಚನೆಯಿಂದ ಮತ್ತು ನಂಬಿಕೆ ದ್ರೊಹದ ಮೂಲಕ ಉಂಟಾದ ಋಣ ಹೊಣೆಗಾರಿಕೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಪ್ರಕಾರ ದಿವಾಳಿ ತನ್ನ ಹೆಂಡತಿ ಅಥವಾ ಮಕ್ಕಳಿಗೆ ಕೊಡಬೇಕಾದ ಜೀವನಾಂಶ - ಇವುಗಳನ್ನು ಅವನು ಕೊಡಬೇಕಾಗುತ್ತದೆ. ವಿಮೋಚನೆಯಾಗದೇ ಉಳಿದ ದಿವಾಳಿ ತಾನು ದಿವಾಳಿ ಎಂದು ತಿಳಿಸದೇ ರೂ. 50 ಅಥವಾ ಅದಕ್ಕಿಂತ ಹೆಚ್ಚಿಗೆ ಸಾಲ ಪಡೆದಲ್ಲಿ ಅವನು ದಂಡಾಧೀಶರ ನ್ಯಾಯಾಲಯದ ಆದೇಶದ ಮೇರೆಗೆ ಆರು ತಿಂಗಳು ಸಜಾ, ಜುಲ್ಮಾನೆ ಮತ್ತು ಎರಡಕ್ಕೂ ಗುರಿಯಾಗಬೇಕಾಗುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: