ದಿವಾನಖಾನೆ
ದಿವಾನಖಾನೆ ಒಂದು ಪಾರ್ಸಿ ಪದಸಮುಚ್ಚಯವಾಗಿದೆ. ಇದು ಒಂದು ಅತಿಥಿ ಗೃಹ ಅಥವಾ ಕೋಣೆಯನ್ನು ಸೂಚಿಸುತ್ತದೆ. ಇದು ಮಧ್ಯಕಾಲೀನ ಯೂರೋಪ್‍ನ ದೊಡ್ಡ ಕೋಣೆಗೆ ಸಮಾನವಾಗಿದೆ.
ಮಧ್ಯಪ್ರಾಚ್ಯ, ಅರಬ್, ಪರ್ಷಿಯನ್ ಹಾಗೂ ಕುರ್ದಿಷ್ ಸಮಾಜಗಳಲ್ಲಿ, ಬುಡಕಟ್ಟು ಮುಖಂಡನ ಅತಿಥಿ ಗೃಹವನ್ನು ಬಹುತೇಕವಾಗಿ ಬುಡಕಟ್ಟಿನ ವ್ಯವಹಾರಗಳನ್ನು ಚರ್ಚಿಸಲು ಬಳಸಲಾಗುತ್ತದೆ. ಇದು ಬುಡಕಟ್ಟಿನ ರಾಜಕೀಯ ಹಾಗೂ ಸಾಮಾಜಿಕ ವ್ಯವಹಾರಗಳಿಗೆ ಮೀಸಲಾದ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ದಿವಾನ್ ಅಥವಾ ದಿವಾನಖಾನೆಯು ಆಘಾ ಮತ್ತು ಅವನ ಪುರುಷ ಅತಿಥಿಗಳಿಗೆ ಮೀಸಲಾದ ವಿಶೇಷ ಕೋಣೆ ಅಥವಾ ಗೃಹವಾಗಿತ್ತು. ಕುಳಿತುಕೊಳ್ಳುವುದು ಹಾಗೂ ಚಹಾ ಕುಡಿಯುವುದು, ಬುಡಕಟ್ಟಿನ ರಾಜಕೀಯ ಹಾಗೂ ಸಾಮಾಜಿಕ ವ್ಯವಹಾರಗಳು ಮತ್ತು ಇತರ ಪ್ರಾಪಂಚಿಕ ವಿಷಯಗಳನ್ನು ಚರ್ಚಿಸುವುದು ಇದರ ಉದ್ದೇಶವಾಗಿತ್ತು.
ಆಘಾ ಮತ್ತು ಅವನ ಅತಿಥಿಗಳು ಮನೊರಂಜನೆ ನೀಡುತ್ತಿದ್ದ ಗಾಯಕರು ಹಾಗೂ ಕಥೆಗಾರರ ಕಥೆಗಳನ್ನು ಕೂಡ ಕೇಳುತ್ತಿದ್ದರು. ಸಾಮಾನ್ಯವಾಗಿ ಆಘಾ ತನ್ನ ಅಧಿಕಾರವ್ಯಾಪ್ತಿಯಲ್ಲಿನ ಬುಡಕಟ್ಟು ಸಮಾಜದ ಹಲವಾರು ಪ್ರಮುಖ ಕಾರ್ಯಗಳಿಗೆ ಜವಾಬ್ದಾರವಾಗಿರುತ್ತಿದ್ದನು.