ದಲ್ಲಾಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಲ್ಲಾಳಿ ಎಂದರೆ ಸರಕು, ಸ್ವತ್ತು, ಸ್ಟಾಕು, ಬಾಂಡು, ವಿಮೆ ಮತ್ತು ಪದಾರ್ಥಗಳನ್ನು ಖರೀದಿ ಮಾಡುವ ಅಥವಾ ವಿಕ್ರಯಿಸುವ ಉದ್ದೇಶದಿಂದ ತನ್ನ ಮುಖ್ಯನ (ಪ್ರಿನ್ಸಿಪಲ್) ಮತ್ತು ಮೂರನೆಯ ವ್ಯಕ್ತಿಯ ಅಥವಾ ಪಕ್ಷದ ನಡುವೆ ಸಂಧಾನ ನಡೆಸುವ ಅಭಿಕರ್ತ (ಏಜೆಂಟ್) (ಬ್ರೋಕರ್).[೧][೨][೩] ಇದಕ್ಕೆ ಅವನು ಪಡೆಯುವ ಶುಲ್ಕವೇ ಕಮೀಷನ್ ಅಥವಾ ದಲ್ಲಾಳಿ ರುಸುಂ ಅಥವಾ ದಲ್ಲಾಳಿ (ಬ್ರೋಕರೇಜ್). ಈ ಸಂಧಾನ ನಡೆಸುವ ದಲ್ಲಾಳಿಗೆ ಆ ಸರಕು, ಸ್ವತ್ತು, ಸ್ಟಾಕು, ಬಾಂಡು, ಮುಂತಾದುವುಗಳ ಸ್ವಾಧೀನವಾಗಲಿ, ಅವುಗಳ ಮೇಲೆ ಯಾವುದೇ ಹಕ್ಕಾಗಲಿ ಸಾಮಾನ್ಯವಾಗಿ ಇರುವುದಿಲ್ಲ. ಅವುಗಳ ಸ್ವಾಧೀನ ಹೊಂದಿದ್ದೇ ಆದರೆ ಆಗ ಅವನು ರಕ್ಷಕನ ಅಥವಾ ವಿಶ್ವಾಸಾವಲಂಬಿಯ ಸ್ಥಾನ ಹೊಂದಿರುತ್ತಾನೆ. ದಲ್ಲಾಳಿ ತನ್ನ ಮುಖ್ಯನ ನೌಕರ ಅಥವಾ ಸೇವಕನಲ್ಲ. ಅವನೊಬ್ಬ ಸ್ವತಂತ್ರ ಕರಾರುಗಾರ. ದಲ್ಲಾಳಿ ಒಬ್ಬ ವ್ಯಕ್ತಿಯಾಗಿರಬಹುದು; ಪಾಲುದಾರಿಕೆ ಸಂಸ್ಥೆ ಇಲ್ಲವೇ ಕೂಡುಬಂಡವಾಳ ಸಂಸ್ಥೆಯಾಗಿರಬಹುದು, ಒಂದು ದೃಷ್ಟಿಯಲ್ಲಿ ಪ್ರತಿಯೊಬ್ಬ ದಲ್ಲಾಳಿಯೂ ಒಬ್ಬ ಅಭಿಕರ್ತನೇ (ಏಜೆಂಟ್); ಆದರೆ ಪ್ರತಿಯೊಬ್ಬ ಅಭಿಕರ್ತನೂ ದಲ್ಲಾಳಿಯಲ್ಲ. ಅಭಿಕರಣ (ಏಜೆನ್ಸಿ) ಎಂಬುದು ಹೆಚ್ಚು ವಿಸ್ತøತವಾದ, ವ್ಯಾಪಕವಾದ ಅರ್ಥವುಳ್ಳ ಪದ. ದಲ್ಲಾಳಿ ವ್ಯವಹಾರದಲ್ಲಿ ನಿರತನಾಗುವ ಹಕ್ಕಿಗಾಗಿ ಪ್ರತಿಯೊಬ್ಬ ದಲ್ಲಾಳಿಯೂ ಅಧಿನಿಯಮದ ಅಥವಾ ಅಧ್ಯಾದೇಶದ ಪ್ರಕಾರ ಲೈಸೆನ್ಸು ಪಡೆಯುವುದು ಸಾಮಾನ್ಯವಾಗಿ ಅಗತ್ಯವಾಗಿರುತ್ತದೆ.

ದಲ್ಲಾಳಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಾದ ಪ್ರಾಧಿಕಾರ ಆತನಿಗೆ ಅಭಿವ್ಯಕ್ತವಾಗಿಯಾಗಲಿ ಸೂಚ್ಯವಾಗಲಿ ದತ್ತವಾಗಿರುತ್ತದೆ. ಆತ ತನ್ನ ಪ್ರಾಧಿಕಾರವನ್ನು ಮೀರಿ ನಡೆಯದಿರುವವರೆಗೂ ಅವನ ಕೃತಿಗಳಿಗೆ ಮುಖ್ಯ ಬದ್ಧನಾಗಿರುತ್ತಾನೆ. ಮುಖ್ಯನಾದವನು ತನ್ನ ದಲ್ಲಾಳಿಗೆ ರಹಸ್ಯವಾಗಿ ನೀಡಿರಬಹುದಾದ ಸೂಚನೆಗಳು ಮೂರನೆಯ ವ್ಯಕ್ತಿಯನ್ನು ಬಂಧಿಸಲಾರವು. ಆದರೆ ದಲ್ಲಾಳಿಯ ಪ್ರಾಧಿಕಾರದ ವ್ಯಾಪ್ತಿ ಎಷ್ಟೆಂಬುದನ್ನು ಅರಿತುಕೊಳ್ಳುವುದು ಆ ವ್ಯಕ್ತಿಯ ಹೊಣೆಯಾಗಿರುತ್ತದೆ. ಸರಕನ್ನು ಆಧಾರವಾಗಿ ನೀಡಲು ಸೂಚ್ಯ ಪ್ರಾಧಿಕಾರವೇನೂ ಸಾಮಾನ್ಯವಾಗಿ ದಲ್ಲಾಳಿಗೆ ಇರುವುದಿಲ್ಲ. ಆದರೆ ಕೆಲವು ವ್ಯಾಪಾರಗಳಲ್ಲಿ ಅದು ರೂಢಿಗತವಾಗಿ ಬಂದಿರಬಹುದು. ಆ ಪ್ರಾಧಿಕಾರ ಇಲ್ಲದಲ್ಲಿ ಆಧಾರವನ್ನು ನೀಡಬೇಕಾದರೆ ಅದಕ್ಕೆ ಮುಖ್ಯನ ಒಪ್ಪಿಗೆ ಅವಶ್ಯ. ಸರಕಿನ ಸಾಲದ ವ್ಯಾಪಾರ ಮಾಡಲೂ ದಲ್ಲಾಳಿಗೆ ಸಾಮಾನ್ಯವಾಗಿ ಪ್ರಾಧಿಕಾರ ಇರುವುದಿಲ್ಲ. ಮುಖ್ಯ ಅಂಥ ಪ್ರಾಧಿಕಾರವನ್ನು ನೀಡಬಹುದು. ಮುಖ್ಯನ ಹೆಸರನ್ನು ಬಹಿರಂಗಪಡಿಸದಿದ್ದ ಸಂದರ್ಭ ವಿನಾ ಉಳಿದ ಸಂದರ್ಭಗಳಲ್ಲಿ ಅವನು ಸರಕಿನ ಹಕ್ಕು ವರ್ಗಾಹಿಸಲು ಪ್ರಾಧಿಕಾರ ಹೊಂದಿರುವುದಿಲ್ಲ. ಸರಕಿನ ಹಣದ ಪಾವತಿ ಪಡೆಯಲೂ ಸಾಮಾನ್ಯವಾಗಿ ಅವನಿಗೆ ಸೂಚ್ಯಾಧಿಕಾರವೇನೂ ಇರುವುದಿಲ್ಲ. ದಲ್ಲಾಳಿ ತನ್ನ ಹೆಸರಿನಲ್ಲೇ ಕರಾರುಗಳನ್ನು ಮಾಡಿಕೊಳ್ಳುವ ಅಧಿಕಾರವನ್ನೂ ಪಡೆದಿರುವುದಿಲ್ಲ.

ಬೆಲೆಗಳನ್ನು ನಿಷ್ಕರ್ಷಿಸಲು ಅಥವಾ ಒಪ್ಪಲು ಹಾಗೂ ಆ ಬೆಲೆಗಳಲ್ಲಿ ಕೊಳ್ಳು ಅಥವಾ ವಿಕ್ರಯಿಸಲು ತಮ್ಮ ಮುಖ್ಯರನ್ನು ಬದ್ಧಗೊಳಿಸಲು ದಲ್ಲಾಳಿಗಳಿಗೆ ಪ್ರಾಧಿಕಾರ ಇರಬಹುದು. ಒಂದು ಬೆಲೆಯಲ್ಲಿ ಮಾರಲು ಅಥವಾ ಕೊಳ್ಳಲು ಇತರರಿಂದ ಬಂದ ಸವಾಲುಗಳನ್ನು (ಬಿಡ್) ಅಥವಾ ನೀಡಿಕೆಗಳನ್ನು ತಮ್ಮ ಮುಖ್ಯರಿಗೆ ಅವರು ಒಪ್ಪಿಸಬೇಕಾಗಿರುವುದುಂಟು. ಮುಖ್ಯನಾದಾತ ಅಭಿವ್ಯಕ್ತವಾಗಿ ಒಪ್ಪಿದ್ದ ವಿನಾ ದಲ್ಲಾಳಿ ಅವನಿಂದ ಏನನ್ನೂ ಕೊಳ್ಳಲಾಗಲಿ ವಿಕ್ರಯಿಸಲಾಗಲಿ ಸಾಧ್ಯವಿಲ್ಲ. ತನ್ನ ಮುಖ್ಯನ ಹಿತಕ್ಕೆ ಬಾಧಕವಾಗುವ ರೀತಿಯಲ್ಲಿ ಆತ ತನ್ನ ಸ್ವಂತ ಹಿತ ಪೂರೈಕೆ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಉದಾಹರಣೆಗೆ ಅವನು ತನ್ನ ಮುಖ್ಯನಿಗೆ ತಿಳಿಯದಂತೆ ರಹಸ್ಯವಾಗಿ ಲಾಭ ಮಾಡಿಕೊಳ್ಳುವಂತಿಲ್ಲ. ಆತ ಪರಸ್ಪರ ವಿರುದ್ಧ ಪಕ್ಷಗಳನ್ನು ಪ್ರತಿನಿಧಿಸುವಂತಿಲ್ಲ.

ಮುಖ್ಯನಿಗೂ ದಲ್ಲಾಳಿಗೂ ನಡುವಣ ಕರಾರು ಒಂದು ಗೊತ್ತಾದ ಅವಧಿಗೆ ಆಗಿರಬಹುದು. ಹಾಗಿಲ್ಲದೆ ಅನಿರ್ದಿಷ್ಟ ಕಾಲದ ವರೆಗೂ ಮುಂದುವರಿಯುವುದಾಗಿದ್ದು, ಎರಡು ಪಕ್ಷಗಳಲ್ಲಿ ಯಾವೊಂದು ಪಕ್ಷವಾದರೂ ಐಚ್ಛಿಕವಾಗಿ ಅದನ್ನು ಕೊನೆಗೊಳಿಸಬಹುದು. ದಲ್ಲಾಳಿ-ಮುಖ್ಯರ ಸಂಬಂಧ ಒಂದೊಂದೇ ವಹಿವಾಟಿಗೆ ಸೀಮಿತವಾಗಿದ್ದು, ಪ್ರತಿ ವಹಿವಾಟಿಗೂ ಅವರು ಪ್ರತ್ಯೇಕ ಕರಾರು ಮಾಡಿಕೊಳ್ಳಬಹುದು. ಒಂದು ಗೊತ್ತಾದ ಅವಧಿಗೆ ದಲ್ಲಾಳಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಆ ಅವಧಿ ಮುಗಿಯುವ ಮುನ್ನ ವಿನಾಕಾರಣವಾಗಿ ಯಜಮಾನ ಕರಾರನ್ನು ರದ್ದುಗೊಳಿಸಿದ ಪಕ್ಷದಲ್ಲಿ ಆತ ದಲ್ಲಾಳಿಗೆ ನಷ್ಟ ಪರಿಹಾರ ನೀಡಲು ಬಾಧ್ಯನಾಗಿರುತ್ತಾನೆ.

ಸರಕು ಬಿಕರಿ ದಲ್ಲಾಳಿ[ಬದಲಾಯಿಸಿ]

ಸರಕು ವಿಕ್ರಯಿಸುವ ದಲ್ಲಾಳಿಗಳಲ್ಲಿ ಮೂರು ಬಗೆ. ಯಾವುದೇ ಪ್ರದೇಶಕ್ಕೆ ಸೀಮಿತವಾಗಿರದೆ ಎಲ್ಲೆಲ್ಲಿ ಅವಕಾಶಗಳುಂಟೋ ಅಲ್ಲೆಲ್ಲ ಕೊಳ್ಳುವ ವಿಕ್ರಯಿಸುವ ಕಲಾಪಗಳಲ್ಲಿ ನಿರತರಾಗುವರು. ನಿರುಪಾಧಿಕ ದಲ್ಲಾಳಿಗಳು. ಅವರು ಯಾವ ನಿರ್ದಿಷ್ಟ ಮುಖ್ಯರಿಗೂ ಶಾಶ್ವತವಾಗಿ ಬದ್ಧರಲ್ಲ. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರಕು ಕೊಳ್ಳಲು, ವಿಕ್ರಯಿಸಲು ಬಯಸುವವರಿಗೆಲ್ಲ ಅವರು ಅಭಿಕರ್ತರಾಗಿ ಕಾರ್ಯ ನಿರ್ವಹಿಸುತ್ತಾರೆ. ತಯಾರಿಕೆದಾರರ ಅಭಿಕರ್ತರು ನಿರ್ದಿಷ್ಟ ತಯಾರಕರ ಉತ್ಪನ್ನಗಳನ್ನು ನಿರ್ದಿಷ್ಟ ಪ್ರದೇಶದಲ್ಲಿ ನಿರ್ದಿಷ್ಟ ಬೆಲೆ ಹಾಗೂ ಷರತ್ತುಗಳಿಗೆ ಒಳಪಟ್ಟು ವಿಕ್ರಯ ಮಾಡುತ್ತಾರೆ. ಇವರ ಮತ್ತು ತಯಾರಕರ ನಡುವಣ ಸಂಬಂಧ ಖಾಯಂ ಆದ್ದು. ಇವರು ಪರಸ್ಪರ ಸ್ಪರ್ಧಿಸದ ಹಲವು ತಯಾರಕರ ಉತ್ಪಾದನೆಗಳ ವಿಕ್ರಯ ಅಭಿಕರ್ತರಾಗಿರುವುದುಂಟು. ವಿಕ್ರಯ ಅಭಿಕರ್ತರು ಇಬ್ಬರು ಅಥವಾ ಹೆಚ್ಚಿನ ತಯಾರಿಕೆಗಾರರ ಒಂದೇ ಬಗೆಯ ಎಲ್ಲ ಉತ್ಪನ್ನಗಳನ್ನೂ ವಿಕ್ರಯಿಸಲು ಒಪ್ಪಂದ ಮಾಡಿಕೊಂಡು, ಆ ತಯಾರಿಕೆಗಾರರೊಂದಿಗೆ ನಿರಂತ ಸಂಬಂಧ ಹೊಂದಿರುತ್ತಾರೆ. ಇವರು ಆ ತಯಾರಿಕೆಗಾರರಿಗೆ ಧನಪೋಷಣೆಯನ್ನೂ ಮಾಡಬಹುದು. ಹಲವಾರು ತಯಾರಕರ ಸರಕು ವಿಕ್ರಯ ಮಾಡುವ ಈ ದಲ್ಲಾಳಿಗಳಿಂದಾಗಿ ಸರಕುಗಳ ವಿತರಣೆ ಸುಸೂತ್ರವಾಗಿ ನಡೆಯುವುದಲ್ಲದೆ ಬಿಕರಿಯ ವೆಚ್ಚದಲ್ಲಿ ಉಳಿತಾಯವಾಗುತ್ತದೆ.

ಸರಕು ಕೊಳ್ಳಿಕೆ ದಲ್ಲಾಳಿ[ಬದಲಾಯಿಸಿ]

ಸರಕು ಕೊಳ್ಳಿಕೆ ದಲ್ಲಾಳಿಗಳು ಮುಖ್ಯರಿಗಾಗಿ ಸರಕು ಕೊಳ್ಳುವವರು. ಇವರು ತಮ್ಮ ಮುಖ್ಯರ ಪರವಾಗಿ, ಸರಕು ಇರುವ ಸ್ಥಳವನ್ನು ಪತ್ತೆ ಹಚ್ಚಿ ಕೊಳ್ಳಿಕೆ ಕರಾರು ಮಾಡಿಕೊಳ್ಳಲು ಸಂಧಾನ ನಡೆಸುತ್ತಾರೆ. ಇದನ್ನು ಕೊಳ್ಳಬಯಸುವ ಹಲವರ ಪರವಾಗಿಯೂ ಸಂಧಾನ ನಡೆಸಬಹುದು. ಕರಾರುಗಳನ್ನು ಮುಗಿಸಿ, ಬೆಲೆಯ ವಿಚಾರವಾಗಿ ತಮ್ಮ ಮುಖ್ಯರಿಗೆ ಸಮಾಚಾರ ನೀಡುತ್ತಾರೆ. ಕೊಳ್ಳಿಕೆದಾರರ ಅಭಿಕರ್ತರಾಗಿದ್ದೂ ಬಿಕರಿದಾರರಿಂದ ತಮ್ಮ ಕಮೀಷನ್ ಪಡೆಯುವ ದಲ್ಲಾಳಿಗಳು ಇರುವುದುಂಟು.

ಸ್ವತ್ತಿನ ದಲ್ಲಾಳಿ[ಬದಲಾಯಿಸಿ]

ಸ್ವತ್ತಿನ ವಿಕ್ರಯಕ್ಕಾಗಿ, ಕೊಳ್ಳುವವರನ್ನೂ ಮಾರುವವರನ್ನೂ ಒಟ್ಟಿಗೆ ತಂದು ನೆರವು ನೀಡುವವರು ಸ್ವತ್ತಿನ ದಲ್ಲಾಳಿಗಳು ಈ ಕೆಲಸವನ್ನು ಸಾಮಾನ್ಯವಾಗಿ ಅವರು ಒಂದು ನಿಗದಿಯಾದ ಕಮೀಷನ್ ಅಥವಾ ಶುಲ್ಕಕ್ಕಾಗಿ ಮಾಡುತ್ತಾರೆ. ಅವರಿಗೆ ದತ್ತವಾಗುವ ಪ್ರಾಧಿಕಾರ ಸಾಮಾನ್ಯವಾಗಿ ಸೀಮಿತವಾಗಿರುತ್ತದೆ. ಅದನ್ನು ಅವರು ಮೀರಿದರೆ ಮುಖ್ಯರು ಕರಾರನ್ನು ನಿರಾಕರಿಸಬಹುದಲ್ಲದೆ ದಲ್ಲಾಳಿಯನ್ನು ಕೊಡದಿರಬಹುದು.

ವಿಮಾ ದಲ್ಲಾಳಿ[ಬದಲಾಯಿಸಿ]

ವಿಮಾ ಕ್ಷೇತ್ರದಲ್ಲೂ ದಲ್ಲಾಳಿಗಳಿರುವುದುಂಟು. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸಾಮಾನ್ಯವಾಗಿ ಇವರು ವಿಮೆ ಇಳಿಸುವವರ ಅಭಿಕರ್ತರದು. ವಿಮಾ ಕಂಪನಿಯಿಂದ ಸಾಮಾನ್ಯವಾಗಿ ಇವರು ಕಮೀಷನ್ ಪಡೆಯುತ್ತಾರೆ. ಆದರೆ ಕಮೀಷನ್ನಿನಿಂದ ತುಂಬಲಾಗದ ವಿಶೇಷ ಸೇವೆಗಾಗಿ ವಿಮಾದಾರರಿಂದಲೂ ಶುಲ್ಕವಸೂಲು ಮಾಡಬಹುದು. ಅವರಿಗೆ ಪಾವತಿಯಾಗುವ ಕಮೀಷನ್ನು ಪಾವತಿ ಮಾಡುವ ಪ್ರೀಮೀಯಮ್‍ಗೆ ಅನುಗುಣವಾಗಿರುತ್ತದೆ. ದಲ್ಲಾಳಿ ಯಾವುದೇ ಕಂಪನಿಯಲ್ಲಿ ವ್ಯವಹಾರ ನಡೆಸಬಹುದು. ಅಗ್ನಿ, ಸಮುದ್ರ ಮತ್ತು ಅಪಘಾತ ವಿಮೆಯಲ್ಲಿ ದಲ್ಲಾಳಿಯ ಪಾತ್ರ ಬಲು ದೊಡ್ಡದು. ದೊಡ್ಡ ದೊಡ್ಡ ವ್ಯವಹಾರ ಸಂಸ್ಥೆಗಳು ತಾವು ಇಳಿಸಬೇಕಾದ ನಾನಾ ಬಗೆಯ ವಿಮೆಗಳನ್ನು ಪೂರೈಸಲು ದಲ್ಲಾಳಿಯನ್ನು ನೇಮಿಸಿಕೊಳ್ಳಬಹುದು. ಅವನು ಅಂತರಿಕ ಮತ್ತು ವಿದೇಶಿ ವ್ಯವಹಾರಗಳಿಗೆ ಸಂಬಂಧಿಸಿದ ವಿಮಾಯೋಗ್ಯ ನಷ್ಟ ಸಂಬಂಧಗಳೇ ಮುಂತಾದವುಗಳ ವಿಮೆಯನ್ನು ಕುರಿತ ನಾನಾ ವಿಚಾರಗಳಲ್ಲಿ ಯಥೋಚಿತ ಸಲಹೆ ನೀಡಬಲ್ಲ ತಜ್ಞನಾಗಿರುತ್ತಾನೆ. ಬ್ರಿಟನ್ನಿನಲ್ಲಿ ವಿಮಾ ದಲ್ಲಾಳಿಗಳ ಮೇಲೆ ನಿಯಂತ್ರಣ ಹೊಂದಿರುವ ಸಂಸ್ಥೆಗಳು ಮೂರು. ಲಾಯ್ಡ್ಸ್ ಸಂಸ್ಥೆಯ ಸಮಿತಿ ಒಂದು. ಈ ಸಂಸ್ಥೆಯ ಸದಸ್ಯರಾಗಿರುವವರು ಲಾಯ್ಡ್ಸ್ ದಲ್ಲಾಳಿಗಳೆಂದು ಪ್ರಸಿದ್ಧರಾಗಿದ್ದಾರೆ. ವಿಮಾ ದಲ್ಲಾಳಿಗಳ ಕಾರ್ಪೊರೇಷನ್ ಇನ್ನೊಂದು. ತನ್ನ ಸದಸ್ಯರ ವರ್ತನೆಯ ಬಗ್ಗೆ ಇದೂ ನಾನಾ ಸೂತ್ರಗಳನ್ನು ವಿಧಿಸುತ್ತದೆ. ಇವೆರಡು ಸಂಸ್ಥೆಗಳಲ್ಲಿ ಯಾವುದರ ಸದಸ್ಯರೂ ಆಗಿಲ್ಲದವರಿಗಾಗಿ ವಿಮಾ ದಲ್ಲಾಳಿಗಳ ಸಂಘ ಎಂಬ ಒಂದು ಸಂಸ್ಥೆಯಿದೆ. ಇಂಗ್ಲೆಂಡಿನ ಪ್ರಮುಖ ವಿಮಾ ದಲ್ಲಾಳಿಗಳಲ್ಲಿ ಲಾಯ್ಡ್ಸ್ ಇಲ್ಲವೇ ಕಾರ್ಪೊರೇಷನ್ನಿನ ಸದಸ್ಯರಾಗಿರುತ್ತಾರೆ.

ಹಡಗು ದಲ್ಲಾಳಿ[ಬದಲಾಯಿಸಿ]

ಹಡಗುಗಳನ್ನು ಬಾಡಿಗೆಗೆ ಗೊತ್ತು ಮಾಡಿಕೊಳ್ಳುವುದು, ಮಾರುವುದು, ಕೊಳ್ಳುವುದು, ರಫ್ತಿಗಾಗಿ ಸರಕು ಆಹ್ವಾನಿಸುವುದು, ಸರಕನ್ನು ಇಳಿಸಿಕೊಳ್ಳುವುದು, ಕಳೆದುಹೋದ ಸರಕಿನ ನಷ್ಟಪೂರಣ-ಮುಂತಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಸೇವೆ ಸಲ್ಲಿಸುವುದು ಹಡಗು ದಲ್ಲಾಳಿಗಳ ಕಾರ್ಯಭಾರ. ಪ್ರಪಂಚದ ಪ್ರಮುಖ ಬಂದರುಗಳಲ್ಲಿ ಇವರು ಕಾರ್ಯನಿರತರಾಗಿರುತ್ತಾರೆ. ರಸ್ತೆ ಸಾರಿಗೆ ಮತ್ತು ವಿಮಾನ ಸಾರಿಗೆ ಕ್ಷೇತ್ರಗಳಲ್ಲೂ ಇಂಥ ದಲ್ಲಾಳಿಗಳಿರುವುದುಂಟು.

ವಾಯಿದಾ ದಲ್ಲಾಳಿ[ಬದಲಾಯಿಸಿ]

ಉತ್ಪನ್ನ ಮಾರುಕಟ್ಟೆಗಳಲ್ಲಿ ಭವಿಷ್ಯದಲ್ಲಿ ಸರಕು ಕೊಳ್ಳುವ ಅಥವಾ ಮಾರುವ-ವಾಯಿದಾ ವ್ಯವಹಾರ-ಕರಾರು ಮಾಡಿಕೊಳ್ಳಲು ನೆರವಾಗುವವರು ವಾಯಿದಾ ವ್ಯವಹಾರಗಳ ದಲ್ಲಾಳಿಗಳು. ಲಿವರ್‍ಪೂಲ್ ಧಾನ್ಯ ವ್ಯಾಪಾರ ಸಂಘ, ನ್ಯೂಯಾರ್ಕ್ ಅರಳೆಪೇಟೆ ಮುಂತಾದವು ಇಂಥ ಮಾರುಕಟ್ಟೆಗಳು. ಅವರು ತಮ್ಮ ಮುಖ್ಯ ಅಭಿವಕರ್ತರಾದರೂ ಮಾರುಕಟ್ಟೆಯಲ್ಲಿ ತಾವೇ ಮುಖ್ಯರೆನಿಸಿ, ಕರಾರಿನ ಪೂರೈಕೆಗೆ ನೇರವಾಗಿ ಬಾಧ್ಯರಾಗಿರುತ್ತಾರೆ. ಮಾರುಕಟ್ಟೆ ಸಂಸ್ಥೆಯ ನಿಬಂಧನೆಗಳಿಗೆ ಅನುಸಾರವಾಗಿ ಅವರು ವಹಿವಾಟು ನಡೆಸುತ್ತಾರೆ.

ಷೇರು ದಲ್ಲಾಳಿ[ಬದಲಾಯಿಸಿ]

ಪ್ರಾಥಮಿಕ ಮತ್ತು ದ್ವಿತೀಯಕ ಪ್ರತಿಭೂತಿಗಳ (ಸೆಕ್ಯೂರಿಟೀಸ್) ಮಾರುಕಟ್ಟೆಗಳಲ್ಲಿ ಪ್ರತಿಭೂತಿಗಳ ವಿತರಣೆ ಮತ್ತು ವಿಕ್ರಯಗಳಿಗಾಗಿ ದಲ್ಲಾಳಿಗಳಿರುತ್ತಾರೆ. ಪ್ರಾಥಮಿಕ ಮಾರುಕಟ್ಟೆಗಳಲ್ಲಿ ಷೇರುಗಳನ್ನೂ ಬಾಂಡುಗಳನ್ನೂ ಸಾರ್ವಜನಿಕರಿಗೆ ಸಂಸ್ಥೆಗಳು ನೀಡುವಾಗ ಅವು ದಲ್ಲಾಳಿಗಳ ಸೇವೆ ಪಡೆಯಬಹುದು. ಮಾರುವವರನ್ನೂ ಕೊಳ್ಳುವವರನ್ನೂ ಒಟ್ಟಿಗೆ ತರುವುದು ದಲ್ಲಾಳಿಗಳ ಕೆಲಸ. ಅವರು ಷೇರುಗಳನ್ನು ಸಾರ್ವಜನಿಕರು ಕೊಳ್ಳುವಂತೆ ಏರ್ಪಡಿಸಿ, ಹಾಗೆ ವಿಕ್ರಯವಾದ ಪ್ರತಿ ಷೇರಿಗೂ ಕಮೀಷನ್ ಪಡೆಯಬಹುದು. ಅಥವಾ ಅವರು ಒಂದು ನಿಗದಿಯಾದ ಸಂಖ್ಯೆಯ ಷೇರುಗಳನ್ನು ವಿಕ್ರಯಿಸುವ ಭರವಸೆ ನೀಡಬಹುದು. ನಿಗದಿಯಾದ ಸಂಖ್ಯೆಯ ಷೇರುಗಳ ವಿಕ್ರಯವಾಗದಿದ್ದರೆ ಉಳಿದ ಷೇರುಗಳನ್ನು ತಾವೇ ಕೊಂಡು ಕಂಪನಿಯ ನಷ್ಟಪೂರಣ ಮಾಡಲು ಅವರು ಒಪ್ಪಿಗೆ ನೀಡುವರು.

ದ್ವಿತೀಯಕ ಮಾರುಕಟ್ಟೆಗಳಲ್ಲಿ ಅವರು ಷೇರುಗಳು ಒಬ್ಬರಿಂದ ಇನ್ನೊಬ್ಬರಿಗೆ ವಿಕ್ರಯವಾಗುವಂತೆ ಏರ್ಪಡಿಸುತ್ತಾರೆ. ತಮ್ಮ ಮುಖ್ಯರಿಗಾಗಿ, ಅವರ ಸೂಚನೆಯಂತೆ ದಲ್ಲಾಳಿಗಳು ಷೇರುಗಳನ್ನು ಖಾಸಗಿಯಾಗಿ ವಿಕ್ರಯಿಸಬಹುದು ಅಥವಾ ಕೊಳ್ಳಬಹುದು. ಅಥವಾ ಷೇರು ಬಜಾರಿನಲ್ಲಿ (ಸ್ಟಾಕ್ ಎಕ್ಸ್‍ಚೇಂಜ್) ಅಧಿಕೃತವಾಗಿ ಕ್ರಯವಿಕ್ರಯ ಮಾಡಬಹುದು. ಆ ಸಂಸ್ಥೆಗಳಿಗೆ ಅವರು ಸದಸ್ಯರಾಗಿರುತ್ತಾರೆ. ಷೇರು ದಲ್ಲಾಳಿಗಳ ಅಧಿಕಾರ ಸಾಮಾನ್ಯ ದಲ್ಲಾಳಿಗಳದಕ್ಕಿಂತ ಹೆಚ್ಚು ವ್ಯಾಪಕವಾಗಿರುತ್ತದೆ. ಅವರು ಪ್ರತಿಭೂತಿಗಳ ಸ್ವಾಧೀನ ಹೊಂದಿದ್ದು, ತಮ್ಮ ಹೆಸರುಗಳಲ್ಲೇ ವ್ಯವಹಾರ ನಡೆಸಬಹುದು. ಈ ವ್ಯವಹಾರದ ರೀತಿನೀತಿಗಳು ಭಿನ್ನಭಿನ್ನವಾಗಿರುತ್ತವೆ.

ಷೇರು ಬಜಾರಿನಲ್ಲಿ ಸಾಮಾನ್ಯವಾಗಿ ದಲ್ಲಾಳಿಗಳು ಮತ್ತು ಜಾಬರುಗಳು ಎಂಬ ಎರಡು ಬಗೆಗಳುಂಟು. ಜಾಬರುಗಳು ವಾಸ್ತವವಾಗಿ ಪ್ರತಿಭೂತಿಗಳಲ್ಲಿ ವಹಿವಾಟು ನಡೆಸುವವರು. ಆದರೆ ಅವರು ನೇರವಾಗಿ ವಿನಿಯೋಜನದಾರರೊಂದಿಗೆ (ಇನ್ವೆಸ್ಟರ್ಸ್) ವ್ಯವಹಾರ ಮಾಡುವುದಿಲ್ಲ. ಅವರ ಸಂಪರ್ಕ ಇರುವುದು ದಲ್ಲಾಳಿಗಳೊಂದಿಗೆ. ಜಾಬರುಗಳು ಸಾಮಾನ್ಯವಾಗಿ ಒಂದೊಂದು ವಿಶಿಷ್ಟ ಗುಂಪಿನ ಪ್ರತಿಭೂತಿಗಳ ವ್ಯವಹಾರದಲ್ಲಿ ಪ್ರಾವೀಣ್ಯ ಸಂಪಾದಿಸಿರುತ್ತಾರೆ. (ಉದಾ. ಸರ್ಕಾರಿ ಪತ್ರಗಳು, ಗಣಿ ಷೇರುಗಳು, ತೈಲ ಕಂಪನಿ ಷೇರುಗಳು ಇತ್ಯಾದಿ) ಯಾವುದಾದರೊಂದು ಕಂಪನಿಯ ಷೇರಿನ ಬೆಲೆಯನ್ನು ಸೂಚಿಸಬೇಕೆಂದು ಜಾಬರನನ್ನು ದಲ್ಲಾಳಿ ಕೇಳಿದಾಗ, ಆ ದಲ್ಲಾಳಿ ಆ ಷೇರನ್ನು ಕೊಳ್ಳಬಯಸುವನೇ, ಇಲ್ಲವೇ ಮಾರುವನೇ ಎನ್ನುವುದು ಜಾಬರನಿಗೆ ಗೊತ್ತಿರುವುದಿಲ್ಲ. ಅವನು ಎರಡು ಬೆಲೆಗಳನ್ನು ಸೂಚಿಸುತ್ತಾನೆ. ಒಂದು ಕೊಳ್ಳುವ ಬೆಲೆ, ಇನ್ನೊಂದು ಮಾರುವ ಬೆಲೆ. ಕೊಳ್ಳುವ ಬೆಲೆಗಿಂತ ಮಾರುವ ಬೆಲೆ ಅಧಿಕವಾಗಿರುತ್ತದೆ. ಅನಂತರ ದಲ್ಲಾಳಿ ತಾನು ಷೇರನ್ನು ಮಾರಬಯಸುವನೇ ಇಲ್ಲವೇ ಕೊಳ್ಳಬಯಸುವನೇ ಎಂಬುದನ್ನು ಹೇಳುತ್ತಾನೆ. ವ್ಯಾಪಾರ ಕುದುರುತ್ತದೆ.

ದಲ್ಲಾಳಿ, ಜಾಬರು ಇಬ್ಬರಿಗೂ ಸಮಾನ ಸ್ಥಾನಮಾನಗಳುಂಟು. ಇಬ್ಬರ ಕಾರ್ಯಭಾರಗಳೂ ಪ್ರತ್ಯೇಕ. ಒಬ್ಬನೇ ಎರಡು ಕಾರ್ಯಭಾರಗಳನ್ನೂ ನಿರ್ವಹಿಸಲಾಗದು. ತಾನು ಯಾವ ಕಾರ್ಯಭಾರ ನಿರ್ವಹಿಸುವನೆಂಬುದನ್ನು ಮೊದಲೇ ಘೋಷಿಸಿಕೊಂಡಿರಬೇಕು. ಜಾಬರ್ ವರ್ತಕನಂತೆ, ದಲ್ಲಾಳಿ ಸಂಘದ ಹೊರಗಿರುವ ಸಾರ್ವಜನಿಕರ, ವಿನಿಯೋಗದಾರರ, ಅಭಿಕರ್ತನಂತೆ ಇರುತ್ತಾನೆ. ಅವನ ಅನುಭವಪೂರ್ಣ ದಕ್ಷಸೇವೆಯಿಂದ ಸಾರ್ವಜನಿಕರ ಹಿತರಕ್ಷಣೆಯಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Spiro, Rosann L.; Stanton, William J.; Rich, Gregory A. (2003). Management of a Sales Force. 12th ed. McGraw-Hill/Irwin.
  2. https://www.investopedia.com/terms/b/broker.asp
  3. https://economictimes.indiatimes.com/markets/stocks/news/who-is-a-broker/articleshow/72992384.cms
"https://kn.wikipedia.org/w/index.php?title=ದಲ್ಲಾಳಿ&oldid=974590" ಇಂದ ಪಡೆಯಲ್ಪಟ್ಟಿದೆ