ವಿಷಯಕ್ಕೆ ಹೋಗು

ದತ್ತಸ್ವೀಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದತ್ತಸ್ವೀಕಾರ ಎಂದರೆ ಸಂತಾನಹೀನರಿಗೆ ತಾಯಿತಂದೆಯರಾಗುವ ಸುಯೋಗವನ್ನೂ ತಾಯಿತಂದೆ ಇಲ್ಲದವರಿಗೆ ತಾಯಿತಂದೆಯರನ್ನು ಹೊಂದುವ ಅನುಕೂಲವನ್ನೂ ಪ್ರದಾನ ಮಾಡುವ ಒಂದು ವಿಧಾನ. ವಾಸ್ತವತಃ ಇಲ್ಲವೇ ಕಾನೂನು ರೀತ್ಯ ಒಬ್ಬ ವ್ಯಕ್ತಿಯ ಸಂತಾನವಾಗಿಲ್ಲದವನನ್ನು ಆ ವ್ಯಕ್ತಿಯ ಸಂತಾನವಾಗಿ ಸ್ಥಾಪಿಸುವ ಕ್ರಿಯೆ ಎಂಬುದು ಇದರ ವ್ಯಾಖ್ಯೆ. ದತ್ತಸ್ವೀಕಾರ ಸಾರ್ವತ್ರಿಕವಾಗಿ ಜಾರಿಯಲ್ಲಿರುವ ಒಂದು ಪದ್ಧತಿ. ಇದು ವಿಶ್ವವ್ಯಾಪಿ. ಅಲ್ಲದೆ ಅತ್ಯಂತ ಪ್ರಾಚೀನ. ಗ್ರೀಕ್ ಮತ್ತು ರೋಮನ್ ನಾಗರಿಕತೆಗಳಿಗೂ ಹಿಂದೆಯೂ ದತ್ತಸ್ವೀಕಾರ ಇತ್ತೆಂಬುದಕ್ಕೆ ಆಧಾರಗಳಿವೆ. ಆದರೆ ಪ್ರಾಚೀನ ಕಾಲದಲ್ಲಿ ದತ್ತ ಸ್ವೀಕಾರದ ಉದ್ದೇಶಗಳು ಈಗ ಇರುವವಕ್ಕಿಂತ ಭಿನ್ನವಾಗಿದ್ದುವು. ಕುಟುಂಬದಲ್ಲಿ ಪುತ್ರನಿಗೆ ವಿಶೇಷವಾದ ಪ್ರಾಮುಖ್ಯ ಕೊಡಲಾಗಿತ್ತು. ಸಾಮಾನ್ಯವಾಗಿ ಗಂಡು ಸಂತಾನಕ್ಕೇ ವಂಶಪಾರಂಪರ್ಯವಾಗಿ ಆಸ್ತಿಯ ಒಡೆತನ ಲಭ್ಯವಾಗುತ್ತಿತ್ತು. ಸಾಮಾನ್ಯವಾಗಿ ಗಂಡನ್ನೇ, ಅನೇಕ ವೇಳೆ ವಯಸ್ಕನನ್ನೇ, ದತ್ತುವಾಗಿ ಸ್ವೀಕರಿಸಲಾಗುತ್ತಿತ್ತು. ಆದರೆ ಆಧುನಿಕ ಯುಗದಲ್ಲಿ ಮುಂದುವರಿದ ದೇಶಗಳಲ್ಲಿ ಮಕ್ಕಳನ್ನು-ಹೆಣ್ಣುಗಂಡು ಎಂಬ ಭೇದವಿಲ್ಲದೆ-ದತ್ತುವಾಗಿ ಸ್ವೀಕರಿಸುವುದು ವಾಡಿಕೆಯಾಗಿದೆ. ದತ್ತಸ್ವೀಕಾರ ಮಾಡುವವನಿಗೆ ಇಹಪರಗಳಲ್ಲಿ ಕಲ್ಯಾಣವಾಗಬೇಕೆಂಬುದೂ ಆಗ ಮುಖ್ಯ ಉದ್ದೇಶವಾಗಿತ್ತು. ದತ್ತಕನಿಗೆ ಸುಖಪ್ರಾಪ್ತಿಯಾಗಬೇಕೆಂಬುದಾಗಿ-ಅವನ ಕಲ್ಯಾಣದ ಉದ್ದೇಶಕ್ಕಾಗಿ-ದತ್ತಸ್ವೀಕಾರ ಮಾಡುತ್ತಿದ್ದುದು ಆಗ ಕಡಿಮೆ. ಅವನಿಗೆ ಒಳ್ಳೆಯದಾಗಬಾರದೆಂದು ಅಲ್ಲ; ಆದರೆ ಮುಖ್ಯ ಗಮನ ಸಾಮಾನ್ಯವಾಗಿ ಅತ್ತ ಹರಿಯುತ್ತಿರಲಿಲ್ಲ. ಪ್ರಾಚೀನ ಸಮಾಜಗಳಲ್ಲಿ ದತ್ತಸ್ವೀಕಾರದ ಬಗ್ಗೆ ಇದ್ದ ವಿಧಿಗಳು ಆಧುನಿಕ ನ್ಯಾಯ ಪದ್ಧತಿಗಳ ಮೇಲೆ ತುಂಬ ಪ್ರಭಾವ ಬೀರಿವೆ.

ಆಧುನಿಕ ಸಮಾಜಗಳಲ್ಲಿ ಶಿಶುಕಲ್ಯಾಣ ಸಾಧನೆಯ ದೃಷ್ಟಿಯಿಂದ ದತ್ತ ಸ್ವೀಕಾರಕ್ಕೆ ಪ್ರಾಮುಖ್ಯ ಲಭ್ಯವಾಗುತ್ತಿದೆ. ವಂಶದ ಸೂತ್ರ ಕಡಿಯದಂತೆ ಮುಂದುವರಿಸುವುದೂ ಸ್ವತ್ತಿನ ಉತ್ತರಾಧಿಕಾರವನ್ನು ನೆಲೆಗೊಳಿಸುವುದೂ ಇಂದಿಗೂ ದತ್ತಸ್ವೀಕಾರದ ಮುಖ್ಯ ಉದ್ದೇಶಗಳಾಗಿವೆಯಾದರೂ ವೈವಾಹಿತ ದಂಪತಿಗಳಿಗೂ ಮಗುವಿಗೂ ನಡುವೆ ಮಾತಾಪಿತ-ಕಿಶೋರ ಸಂಬಂಧವನ್ನು ಸ್ಥಾಪಿಸುವ ಉದ್ದೇಶದಿಂದ ದತ್ತಸ್ವೀಕಾರವನ್ನು ಪ್ರೋತ್ಸಾಹಿಸುವುದು ಪಾಶ್ಚಾತ್ಯ ಸಮಾಜಗಳಲ್ಲಿ ಸಾಮಾನ್ಯವಾಗುತ್ತಿದೆ. ಒಂದನೆಯ ಮಹಾಯುದ್ಧ ಈ ದೃಷ್ಟಿಗೆ ವಿಶೇಷವಾಗಿ ಕಾರಣವಾಯಿತು. ಆಗ ಅನೇಕ ಮಕ್ಕಳು ತಬ್ಬಲಿಗಳಾದುವು. ಜಾರಜ ಶಿಶುಗಳ ಸಂಖ್ಯೆಯೂ ಹೆಚ್ಚಿತು. ಈ ಮಕ್ಕಳಿಗೆ ಮನೆಯನ್ನೂ ತಾಯಿತಂದೆಯರ ಪ್ರೀತಿಯನ್ನೂ ದೊರಕಿಸಿಕೊಡಲು ಕ್ರಮವಾಗಿ ದತ್ತಸ್ವೀಕಾರವನ್ನು ವಿಶೇಷವಾಗಿ ಪ್ರೋತ್ಸಾಹಿಸಲಾಯಿತು. ಮಕ್ಕಳ ಬೆಳೆವಣಿಗೆಗೆ ಚಿಕ್ಕಂದಿನಿಂದಲೇ ಕುಟುಂಬ ಜೀವನದ ಸುಭದ್ರತೆಯನ್ನೊದಗಿಸುವುದರ ಪ್ರಾಮುಖ್ಯವನ್ನು ಮನೋವೈಜ್ಞಾನಿಕ ದೃಷ್ಟಿಯಿಂದಲೂ ಮನಗಾಣಲಾಗಿದೆ.

ಹಿಂದೂ ಶಾಸ್ತ್ರ ಗ್ರಂಥಗಳಲ್ಲಿ[ಬದಲಾಯಿಸಿ]

ಅನಂತದೇವನ ಸ್ಮøತಿಕೌಸ್ತುಭ ಎಂಬ ಗ್ರಂಥದ ಒಂದು ಭಾಗವಾದ ಸಂಸ್ಕಾರಕೌಸ್ತುಭ ಎಂಬ ಶಾಸ್ತ್ರಗ್ರಂಥದಲ್ಲೂ ದತ್ತಕ ಮೀಮಾಂಸೆ ಹಾಗೂ ವ್ಯವಹಾರ ಮಯೂಖ ಎಂಬ ಗ್ರಂಥಗಳಲ್ಲೂ ದತ್ತ ಸ್ವೀಕಾರದ ವಿಷಯ ಬಂದಿದೆ. ಪುತ್ರಹೀನನಾದಾತ ಮತ್ತೊಬ್ಬರ ಪುತ್ರನನ್ನು ಶಾಸ್ತ್ರರೀತ್ಯ ಪುತ್ರನಂತೆ ಸ್ವೀಕಾರ ಮಾಡುವ ಕರ್ಮಕ್ಕೆ ದತ್ತು ಅಥವಾ ದತ್ತ ಸ್ವೀಕಾರ ಎನ್ನುತ್ತಾರೆ. ಇಂಥ ಸ್ವೀಕಾರಕ್ಕೆ ಎಲ್ಲರಿಗಿಂತ ಅಣ್ಣ ಅಥವಾ ತಮ್ಮನ ಮಗ ಯೋಗ್ಯ. ಸಗೋತ್ರನಲ್ಲದವನಿಗಿಂತ ಸಗೋತ್ರನೂ ಸಗೋತ್ರ ಅಸಪಿಂಡನಿಗಿಂತ ಅಸಗೋತ್ರ ಸಪಿಂಡನೂ ಅವನಿಗಿಂತ ಸಗೋತ್ರಸಪಿಂಡನೂ ಅರ್ಹ. ಅನಂತರ ಸಗೋತ್ರನಲ್ಲದೇ ಇದ್ದರೂ ಸವರ್ಣ ಯೋಗ್ಯ. ಚಿಕ್ಕಪ್ಪ, ದೊಡ್ಡಪ್ಪ, ಸೋಧರ ಮಾವ, ಸಹೋದರ, ಸಹೋದರಿ ಅಥವಾ ಮಗಳು- ಇವರ ಮಗಂದಿರು ನಿಷಿದ್ಧರು. ಶೂದ್ರನಾದವ ಸಹೋದರಿಯ ಅಥವಾ ಮಗಳ ಮಗನನ್ನು ಸ್ವೀಕಾರ ಮಾಡಬಹುದು. ಸ್ವೀಕಾರಕ್ಕೆ ಜ್ಯೇಷ್ಠ ಪುತ್ರನಾಗಲಿ ಏಕಮಾತ್ರ ಪುತ್ರನಾಗಲಿ ಕೂಡದು. ಜನಿಸಿದ ಕುಟುಂಬದಲ್ಲಿ ಉಪನಯನ ಸಂಸ್ಕಾರವಾದ ಮೇಲೆ ಅಸಗೋತ್ರನನ್ನು ಸ್ವೀಕಾರ ಮಾಡಬಹುದು. ಚೌಲ ಮತ್ತು ಉಪನಯನವನ್ನು ದತ್ತ ತಂದೆ ಮಾಡಿದಲ್ಲಿ ಅವನು ಸಗೋತ್ರನಾಗುತ್ತಾನೆ. ಉಪನಯನ ಮಾತ್ರ ಮಾಡಿದಲ್ಲಿ ಎರಡು ಗೋತ್ರಗಳಿಗೂ ಸೇರುತ್ತಾನೆ. ಎರಡು ಗೋತ್ರಗಳನ್ನು ಬಿಟ್ಟು ಪರಗೋತ್ರದಲ್ಲಿ ವಿವಾಹವಾಗಬೇಕು. ಸ್ವೀಕಾರ ಮಾಡಿದ ಅನಂತರ ಔರಸ ಪುತ್ರ ಜನಿಸಿದರೆ, ದತ್ತಪುತ್ರನಿಗೆ ಎಲ್ಲ ಸಂಸ್ಕಾರಗಳನ್ನು ಮಾಡಿದ್ದರೆ, ಔರಸಪುತ್ರನಿಗೆ ಸೇರುವಷ್ಟೇ ಆಸ್ತಿಯನ್ನು ಅವನೂ ಪಡೆಯುತ್ತಾನೆ. ಉಪನಯನವನ್ನು ಮಾತ್ರ ಮಾಡಿದ್ದರೆ ¼ ಭಾಗ ಆಸ್ತಿಯನ್ನು ಮಾತ್ರ ಪಡೆಯುತ್ತಾನೆ. ಉಪನಯನವಾದ ಮೇಲೆ ದತ್ತ ಸ್ವೀಕಾರವಾಗಿದ್ದರೆ, ವಿವಾಹಕ್ಕೆ ಮಾತ್ರ ಧನವನ್ನು ಪಡೆಯುತ್ತಾನೆ. ಅನಂತದೇವ ಹೆಣ್ಣುಮಗುವನ್ನು ದತ್ತುವಾಗಿ ಸ್ವೀಕರಿಸಲು ಸಮ್ಮತಿಸಿದ್ದಾನೆ. ವಿಚಿತ್ರವೆಂದರೆ, ದತ್ತಸ್ವೀಕಾರ ಪದ್ಧತಿ ಕಾನೂನುರೀತ್ಯಾ ಹಿಂದೂ ಧರ್ಮೀಯರಲ್ಲಿ ಮಾತ್ರ ಸಾಧ್ಯ.

ದತ್ತಕದ ಪರಿಣಾಮಗಳು[ಬದಲಾಯಿಸಿ]

ದತ್ತಕದ ದಿನದಿಂದ ದತ್ತುವಾಗುವವನು ತನ್ನೆಲ್ಲಾ ರೀತಿಯ ಬಂಧನಗಳನ್ನು ದತ್ತಿಗೆ ಕೊಡುವ ಸಂಸಾರದಿಂದ ಕಳೆದುಕೊಂಡು, ದತ್ತಕ ಸಂಸಾರದಲ್ಲಿ ತನ್ನೆಲ್ಲಾ ರೀತಿಯ ಬಂಧನಗಳಲ್ಲಿ ಸಿಲುಕುತ್ತಾನೆ.

ಹಿಂದೂ ದತ್ತ ಸ್ವೀಕಾರ ಕಾನೂನು[ಬದಲಾಯಿಸಿ]

1956ರ ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಅಧಿನಿಯಮದಲ್ಲಿ ದತ್ತು ತೆಗೆದುಕೊಳ್ಳುವುದು ಮತ್ತು ಕೊಡುವುದರ ಬಗ್ಗೆ ನಿಯಮಗಳಿವೆ. ಆ ಅಧಿನಿಯಮದ ಕಟ್ಟುಪಾಡುಗಳಿಗೆ ಅನುಗುಣವಾಗಿ ಮಾತ್ರ ದತ್ತಸ್ವೀಕಾರ ಸಾಧ್ಯ. ಅದಕ್ಕೆ ಬಾಹಿರವಾಗಿ ದತ್ತಸ್ವೀಕಾರವಾಗಿದ್ದರೆ ಅದು ಅಸಿಂಧುವಾಗುತ್ತದೆ. ದತ್ತಸ್ವೀಕಾರ ಅಸಿಂಧುವಾದರೆ ದತ್ತಕನಿಗೆ ಆ ಕುಟುಂಬದಲ್ಲಿ ಯಾವ ಹಕ್ಕೂ ಪ್ರಾಪ್ತವಾಗದು.

ದತ್ತಸ್ವೀಕಾರ ನಿಯಮಗಳು[ಬದಲಾಯಿಸಿ]

ದತ್ತಸ್ವೀಕಾರ ಕಾನೂನುಬದ್ಧವಾಗಿರಬೇಕಾದರೆ ಈ ಷರತ್ತುಗಳ ಪೊರೈಕೆಯಾಗಬೇಕು : 1 ದತ್ತು ತೆಗೆದುಕೊಳ್ಳುವ ವ್ಯಕ್ತಿಗೆ ಸಾಕಷ್ಟು ಅರ್ಹತೆಯಿರಬೇಕು; ಎಂದರೆ, ಸ್ವಸ್ಥಚಿತ್ತದಿಂದ ಕೂಡಿದ, ಅಪ್ರಾಪ್ತವಯಸ್ಕನಲ್ಲದ ಯಾವನೇ ಹಿಂದೂ ಗಂಡಸು ದತ್ತು ತೆಗೆದುಕೊಳ್ಳಲು ಅರ್ಹವ್ಯಕ್ತಿ ಎನಿಸುತ್ತಾನೆ. ಆದರೆ, ಅಂಥ ಗಂಡನ ಹೆಂಡತಿ ಜೀವಂತವಾಗಿದ್ದರೆ ದತ್ತಸ್ವೀಕಾರಕ್ಕೆ ಅವಳ ಒಪ್ಪಿಗೆ ಪಡೆದಿರಬೇಕಾಗುತ್ತದೆ. ಅವನ ಹೆಂಡತಿ ಜೀವಂತವಾಗಿದ್ದು ಅವಳು ಅನ್ಯಮತವನ್ನು ಸ್ವೀಕರಿಸಿದ್ದರೆ, ಅಥವಾ ನ್ಯಾಯಾಲಯದಲ್ಲಿ ಅವಳು ಅಸ್ವಸ್ಥಚಿತ್ತಳೆಂದು ನಿರ್ಣಯವಾಗಿದ್ದರೆ ಅಂಥವಳ ಒಪ್ಪಿಗೆ ದತ್ತಸ್ವೀಕಾರಕ್ಕೆ ಅವಶ್ಯವೆನಿಸದು. ಒಬ್ಬನಿಗೆ ಬಹುಪತ್ನಿಯರಿದ್ದಲ್ಲಿ ದತ್ತಸ್ವೀಕಾರಕ್ಕೆ ಅವರೆಲ್ಲರ ಒಪ್ಪಿಗೆ ಅವಶ್ಯ. 2 ಸ್ವಸ್ಥಚಿತ್ತವಿರುವ, ಅಪ್ರಾಪ್ತ ವಯಸ್ಕಳಲ್ಲದ ಅವಿವಾಹಿತ ಮಹಿಳೆ ಕೂಡ ಒಬ್ಬ ಮಗ ಅಥವಾ ಮಗಳನ್ನು ದತ್ತುವಾಗಿ ತೆಗೆದುಕೊಳ್ಳಬಹುದು. ಒಬ್ಬ ಮಹಿಳೆ ವಿಧವೆಯಾಗಿದ್ದರೆ ಅಥವಾ ಅವಳ ಗಂಡ ಅನ್ಯಮತಸ್ವೀಕಾರ ಮಾಡಿದ್ದರೆ ಅಥವಾ ಅವನು ಸ್ವಸ್ಥಚಿತ್ತನಲ್ಲವೆಂದು ನ್ಯಾಯಾಲಯ ತೀರ್ಪು ನೀಡಿದ್ದರೆ ಅಂಥವಳೂ ದತ್ತಸ್ವೀಕಾರ ಮಾಡಿಕೊಳ್ಳಬಹುದು. 3 ಯಾವುದಾದರೂ ಒಂದು ಮಗುವನ್ನು ಅದರ ತಂದೆ, ತಾಯಿ ಅಥವಾ ಅದರ ಪೋಷಕ ಮಾತ್ರ ದತ್ತುವಾಗಿ ಕೊಡಬಹುದು. ಮಗುವಿನ ತಂದೆ ಜೀವಂತನಾಗಿದ್ದಲ್ಲಿ, ತಾಯಿಯ ಒಪ್ಪಿಗೆ ಪಡೆದು ದತ್ತು ಕೊಡಬೇಕು. ತಂದೆ ಮೃತನಾಗಿದ್ದರೆ, ಅಥವಾ ಅನ್ಯಮತವನ್ನು ಸ್ವೀಕರಿಸಿದ್ದರೆ, ಅಥವಾ ಅವನು ಸ್ವಸ್ಥಚಿತ್ತನಲ್ಲವೆಂದು ನ್ಯಾಯಾಲಯದ ತೀರ್ಪಾಗಿದ್ದರೆ ಆಗ ತಾಯಿಯೇ ಮಗುವನ್ನು ದತ್ತುವಾಗಿ ಕೊಡಬಹುದು, ಯಾವನಾದರೂ ಅವಿವಾಹಿತ ಹಿಂದೂ ವ್ಯಕ್ತಿ 15 ವರ್ಷ ವಯಸ್ಸಿಗೆ ಮೀರದವನನ್ನು ದತ್ತು ತೆಗೆದುಕೊಳ್ಳಬಹುದು ಅಥವಾ ಕೊಡಬಹುದು. ದತ್ತುವಾಗುವವನು ಗಂಡಸಾಗಿದ್ದರೆ ದತ್ತಸ್ವೀಕಾರ ಮಾಡುವ ತಂದೆತಾಯಿಯರಿಗೆ ಜೀವಂತ ಪುತ್ರ ಪೌತ್ರರಿರಬಾರದು. ದತ್ತುವಾಗುವವಳು ಹೆಂಗಸಾಗಿದ್ದರೆ ದತ್ತಕ ಮಾತಾಪಿತೃಗಳಿಗೆ ಜೀವಂತ ಪುತ್ರಿ ಪೌತ್ರಿ ಇರಬಾರದು. ದತ್ತುವಾಗುವವಳು ಹೆಣ್ಣಾಗಿದ್ದಲ್ಲಿ ದತ್ತಸ್ವೀಕಾರ ಮಾಡುವವನು ಆ ಮಗುವಿಗಿಂತ ಕನಿಷ್ಠ 21 ವರ್ಷ ಹಿರಿಯನಾಗಿರಬೇಕು. ಒಂದೇ ಮಗುವನ್ನು ಇಬ್ಬರು (ದಂಪತಿಗಳಲ್ಲದೆ) ಅಥವಾ ಹೆಚ್ಚಿನವರು ದತ್ತುವಾಗಿ ತೆಗೆದುಕೊಳ್ಳಬಾರದು. ಮಾತಾಪಿತೃಗಳು ಮಗುವನ್ನು ದತ್ತಿಗೆ ಕೊಡುವ ಮತ್ತು ದತ್ತಕ ತಂದೆತಾಯಿಯರು ಆ ಮಗುವನ್ನು ದತ್ತಿಗೆ ತೆಗೆದುಕೊಳ್ಳುವ ಕಾರ್ಯ ನಡೆಸಿದಾಗ ಮಾತ್ರ ದತ್ತು ಅಸ್ತಿತ್ವಕ್ಕೆ ಬರುತ್ತದೆ. ಆ ಬಗ್ಗೆ ದತ್ತ ಹೋಮ ಜರುಗಲೇಬೇಕೆಂಬುದಿಲ್ಲ.

ದತ್ತಿಗೆ ಪಡೆದ ಮಗು ದತ್ತಸ್ವೀಕಾರ ಪಡೆದ ದಿನಾಂಕದಿಂದ ದತ್ತಕ ತಂದೆ ತಾಯಿಯರ ಮಗುವೆಂದು ಪರಿಗಣಿಸಲ್ಪಡುತ್ತದೆ. ಅಂಥ ಮಗುವಿಗೆ ಅನಂತರ ತನ್ನ ನೈಜ ಕುಟುಂಬದಲ್ಲಿ ಏನೊಂದೂ ಹಕ್ಕು ಉಳಿಯಲಾರದು. ದತ್ತು ಮಗುವಿಗೆ ದತ್ತಕ ತಂದೆತಾಯಿಯರ ಆಸ್ತಿಯ ಮೇಲೆ ಹಕ್ಕು ಪ್ರಾಪ್ತವಾಗುತ್ತದೆ.

ಒಮ್ಮೆ ಕಾನೂನುಬದ್ಧವಾಗಿ ದತ್ತಸ್ವೀಕಾರವಾದ ಮೇಲೆ ಅದನ್ನು ಎಷ್ಟು ಮಾತ್ರಕ್ಕೂ ಮುರಿಯಲು ಬರುವುದಿಲ್ಲ. ದತ್ತುವಾಗಿ ಕೊಟ್ಟ ಮಗು ಪುನಃ ತನ್ನ ಹಿಂದಿನ ಕುಟುಂಬಕ್ಕೆ ಹಿಂದಿರುಗಿ ಸೇರಲಾರದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: