ಥಾಮಸ್ ಡರ್ಫೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಥಾಮಸ್ ಡರ್ಫೀ (1653-1723) ಆಂಗ್ಲ ನಾಟಕಕಾರ, ವಿಡಂಬನಕಾರ ಮತ್ತು ಹಾಡುಗಳ ಲೇಖಕ.

ಬದುಕು, ಸಾಹಿತ್ಯ[ಬದಲಾಯಿಸಿ]

ಜನಿಸಿದ್ದು ಡೆವನ್‍ಷೈರಿನ ಎಕ್ಸ್‍ಟರ್‍ನಿಲ್ಲಿ. ಒಟ್ಟಿಗೆ ಸುಮಾರು 25 ನಾಟಕಕೃತಿಗಳನ್ನು ರಚಿಸಿದ್ದಾನೆ. ದಿ ಸೀಜ್ ಆಫ್ ಮೆಂಫಿಸ್ (1676) ಇವನ ಮೊದಲ ನಾಟಕಕೃತಿ. ಮ್ಯಡಾಮ್ ಫಿಕಲ್ (1677) ಇವನ ಮೊದಲ ಹರ್ಷನಾಟಕ. ಅದರಿಂದಾಗಿ ಈತ ಎರಡನೆಯ ಚಾರ್ಲ್ಸ್ ನ ಅನುಗ್ರಹಕ್ಕೆ ಪಾತ್ರನಾದ. ಇವನ ಹನ್ನೊಂದು ಹರ್ಷನಾಟಕಗಳು 1677ರಿಂದ 1688ರವರೆಗಿನ ಅವಧಿಯಲ್ಲಿ ಲಂಡನ್‍ನಲ್ಲಿ ಪ್ರದರ್ಶಿಸಲ್ಪಟ್ಟವು. 1691ರಲ್ಲಿ ಲವ್ ಫಾರ್ ಮನಿ ಎಂಬ ಹರ್ಷನಾಟಕ ರಚಿತವಾಯಿತು. ದಿ ಫಾಂಡ್ ಹಸ್ಬೆಂಡ್ ಅಥವಾ ದಿ ಪ್ಲಾಟಿಂಗ್ ಸಿಸ್ಟರ್ಸ್ (1676)-ಇದು ಇವನ ಅತಿ ಯಶಸ್ವಿ ನಾಟಕಕೃತಿ. ಕಾಮಿಕಲ್ ಹಿಸ್ಟರಿ ಆಫ್ ಡಾನ್ ಕ್ವಿಕ್ಸಟ್ ಎಂಬ ನಾಟಕಕೃತಿಯ ಎರಡು ಭಾಗಗಳು 1694ರಲ್ಲೂ ಮೂರನೆ ಭಾಗ 1696ರಲ್ಲೂ ಹೊರಬಿದ್ದವು. ದಿ ವಚ್ರ್ಯುಯಸ್ ವೈಫ್ (1680) ಮತ್ತು ದಿ ಕ್ಯಾಂಪೆನರ್ಸ್ (1698)-ಇವು ಈತನ ಗಮನಾರ್ಹ ನಾಟಕಕೃತಿಗಳು. ದಿ ಮಾಡರ್ನ್ ಪ್ರಾಫೆಟ್ಸ್ (1709) ಎಂಬುದು ಇವನ ಕೊನೆಯ ನಾಟಕ. ತನ್ನ ನಾಟಕಗಳಲ್ಲಿ ಈತ ಸೇರಿಸಿದ ಉಲ್ಲಾಸದ ಹಾಡುಗಳಿಗೆ ಹೆನ್ರಿ ಪಾಸೆಲ್, ತಾಮಸ್ ಫಾರ್ಮರ್ ಮೊದಲಾದ ಸಂಗೀತ ರಚನಾಕಾರರು ಸಂಗೀತವನ್ನೊದಗಿಸಿದ್ದಾರೆ. ಇವನ ನಾಟಕಗಳಲ್ಲಿ ಕಥಾವಸ್ತು ಅಷ್ಟು ಚೌಕವಾಗಿ ಬಂದಿಲ್ಲವಾದರೂ ನಾಟಕೀಯ ರಸಿಕೋಕ್ತಿ ಹಾಸ್ಯಮಯ ಸಂಘಟನೆಗಳು ಅವುಗಳಲ್ಲಿ ಯಥೇಚ್ಛವಾಗಿ ಇವೆ. 1690-91ರಲ್ಲಿ ಡರ್ಫೀ ಮಾಮಸ್ ರಿಡೆನಸ್ ಎನ್ನುವ ವಿಡಂಬನಾತ್ಮಕ ವಾರಪತ್ರಿಕೆಯ ಸಂಪಾದಕನಾದ. ಈತ ರಚಿಸಿದ ಕಾವ್ಯದ ಹೆಚ್ಚು ಭಾಗ ವಿಡಂಬನಾತ್ಮಕವಾಗಿದ್ದು ವ್ಹಿಗ್ಸ್ ಪಕ್ಷ ಆ ವಿಡಂಬನೆಯ ಗುರಿಯಾಗಿತ್ತು. ಅದರಿಂದಾಗಿ ಈತ ಕುಲೀನವರ್ಗದ ಮತ್ತು ಎರಡನೆಯ ಜೇಮ್ಸ್ ದೊರೆಯ ಆದರಕ್ಕೆ ಪಾತ್ರನಾದ. ರಾಜ್ಯದ ಪಟ್ಟಕ್ಕೆ ರಾಜಕುಮಾರಿ ಆ್ಯನಳ ಪ್ರತಿಸ್ಪರ್ಧಿಯಾಗಿದ್ದ ಸೋಫಿಯಾಳನ್ನು ಕುರಿತು ಈತ ಒಂದು ವಿಡಂಬನಾತ್ಮಕ ಕವಿತೆಯನ್ನೂ ರಚಿಸಿದ್ದುಂಟು. ವಿಟ್ ಆ್ಯಂಡ್ ಮರ್ತ್ ಅಥವಾ ಪಿಲ್ಸ್ ಟು ಪರ್ಜ್ ಮೆಲಂಕಲಿ-ಇದು ಇವನ ಕವಿತೆಗಳ ಸಂಗ್ರಹ. ಜೋಸೆಫ್ ಅಡಿಸನ್ ಈತನನ್ನು ಪ್ರಶಂಸಿಸಿದ್ದಾನೆ. ಡರ್ಫಿಯ ನಾಟಕಗಳ ಜನಪ್ರಿಯತೆ ಬಹುಕಾಲ ಉಳಿಯಲಿಲ್ಲ. ಆದರೆ ಅವನ ಹಾಡುಗಳನ್ನು ಮಾತ್ರ ಇಂದಿಗೂ ಹಾಡಲಾಗುತ್ತಿದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: