ವಿಷಯಕ್ಕೆ ಹೋಗು

ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಥಟ್ ಅಂತ ಹೇಳಿ ಇಂದ ಪುನರ್ನಿರ್ದೇಶಿತ)

ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮ ೪ ಜನವರಿ, ೨೦೦೨ರಿಂದ ಚಂದನ ವಾಹಿನಿಯಲ್ಲಿ ಪ್ರಾರಂಭವಾಯಿತು. ಕನ್ನಡಚಂದನ ವಾಹಿನಿಯಲ್ಲಿ ೪,೦೦೦ ಕಂತುಗಳನ್ನು ದಾಟಿ, ದಾಪುಗಾಲು ಹಾಕುತ್ತಾ ಮುಂದೆ ಮುಂದೆ ಸಾಗುತ್ತಿರುವ ಒಂದು ರಸಪ್ರಶ್ನೆ ಕಾರ್ಯಕ್ರಮ. ಭಾರತದ ದೂರದರ್ಶನದ ಇತಿಹಾಸದಲ್ಲೇ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದೆ. ರಸಪ್ರಶ್ನೆ ಕಾರ್ಯಕ್ರಮದ ರುವಾರಿಯಾಗಿ, ಡಾ. ನಾ. ಸೋಮೇಶ್ವರ, ಅತ್ಯಂತ ಕ್ರಮಬದ್ಧತೆಯಿಂದ ನಡೆಸಿಕೊಂಡು ಬಂದಿದ್ದಾರೆ. ಈ ಉತ್ಕೃಷ್ಟ ಕಾರ್ಯಕ್ರಮದ ವಿಶೇಷತೆಯೆಂದರೆ, ಕನ್ನಡನಾಡಿನ ಒಳ-ಹೊರಗುಗಳ, ಸುತ್ತಮುತ್ತಲಿನ ಜನಪದ ಪರಂಪರೆಯನ್ನು ಚೆನ್ನಾಗಿ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗನೊಬ್ಬ ಹೇಗೆ ಕಾರ್ಯ ನಿರ್ವಹಿಸಬಹುದೆನ್ನುವುದನ್ನು ಎಲ್ಲರಿಗೂ ಮನದಟ್ಟುಮಾಡಿಸುತ್ತಾರೆ.

ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)
ಶೈಲಿಆಟದ ಕಾರ್ಯಕ್ರಮ
ನಿರ್ದೇಶಕರುಆರತಿ ಹೆಚ್.ಎನ್.
ಪ್ರಸ್ತುತ ಪಡಿಸುವವರುಡಾ. ನಾ. ಸೋಮೇಶ್ವರ
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸಂಚಿಕೆಗಳು4,413 (9 ಮಾರ್ಚ್ 2023 ರಂತೆ)
ನಿರ್ಮಾಣ
ನಿರ್ಮಾಪಕ(ರು)ಮಹೇಶ್ ಜೋಶಿ
ಉಷಾ ಕಿಣಿ
ಆರತಿ ಹೆಚ್.ಎನ್.
ರಘು ಜಿ.
ಸ್ಥಳ(ಗಳು)ಬೆಂಗಳೂರು, ಕರ್ನಾಟಕ, ಭಾರತ
ಸಮಯಅಂದಾಜು 30 ನಿಮಿಷಗಳು
ವಿತರಕರುದೂರದರ್ಶನ
ಪ್ರಸಾರಣೆ
ಮೂಲ ವಾಹಿನಿಚಂದನ
ಮೂಲ ಪ್ರಸಾರಣಾ ಸಮಯ4 ಜನವರಿ 2002 (2002-01-04) – ಪ್ರಸ್ತುತ

ಇತಿಹಾಸ

[ಬದಲಾಯಿಸಿ]

ಥಟ್ ಅಂತ ಹೇಳಿ!

  • ಥಟ್ ಅಂತ ಹೇಳಿ-ಕ್ವಿಜ಼್ ಕಾರ್ಯಕ್ರಮವು ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ೪ ಜನವರಿ, ೨೦೦೨ ರಲ್ಲಿ ಆರಂಭವಾದ ಈ ಕಾರ್ಯಕ್ರಮ ಇದುವರೆವಿಗೂ ನಿರಂತರವಾಗಿ ಪ್ರಸಾರವಾಗುತ್ತಿದೆ. ಜೂನ್ ೧೭, ೨೦೧೨ರಂದು ತನ್ನ ೨೦೦೦ ನೆಯ ಕಂತನ್ನು ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶ್ರೀಸಚ್ಛಿದಾನಂದ ಗಣಪತಿ ಆಶ್ರಮದ ಸಭಾಂಗಣದಲ್ಲಿ ನಡೆಸಿತು.
  • ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮದ ಮೊದಲ ೧೦೦ ಕಂತುಗಳ ಪ್ರಶ್ನೆಗಳು ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಕುರಿತದ್ದಾಗಿದ್ದವು. ಒಂದು ಗಂಟೆಯ ಅವಧಿಯ ಕಾರ್ಯಕ್ರಮದಲ್ಲಿ ಮೂವರು ಸ್ಪರ್ಧಿಗಳಿಗೆ ಭಾಗವಹಿಸಲು ಅವಕಾಶವಿತ್ತು. ಪ್ರತಿ ಸ್ಪರ್ಧಿಗೆ ೧೫ ಪ್ರಶ್ನೆಗಳನ್ನು ಕೇಳಿ, ಅವರು ನೀಡುವ ಪ್ರತಿ ಸರಿ ಉತ್ತರಕ್ಕೆ ಒಂದು ಕನ್ನಡ ಪುಸ್ತಕವನ್ನು ಬಹುಮಾನವಾಗಿ ನೀಡುತ್ತಿದ್ದರು.
  • ೧೦೦ನೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದ ಶ್ರೀಮತಿ ಸುಧಾಮೂರ್ತಿಯವರು, ಕಾರ್ಯಕ್ರಮದ ಸ್ವರೂಪವನ್ನು ಬದಲಾಯಿಸಲು ಸೂಚಿಸಿದರು. ಇಂದಿನ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯವಾಗಿರುವ ಕಾರಣ ಜನರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕನಿಷ್ಠ ಮೂವರನ್ನು ಒಟ್ಟಿಗೆ ಕೂರಿಸಿ ಸ್ಪರ್ಧೆ ನಡೆಸುವಂತೆ ಸೂಚಿಸಿದರು. ಹಾಗೆಯೇ ಕಾರ್ಯಕ್ರಮದಲ್ಲಿ ಪ್ರಶ್ನೆಗಳು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ, ಭಾರತದ ಹಾಗೂ ವಿಶ್ವದ ಬಗ್ಗೆ ಇರುವುದು ಒಳ್ಳೆಯದು ಎಂದು ಹೇಳಿದರು. ಹಾಗೆಯೇ ಕನ್ನಡಿಗರಿಗೆ ಕನ್ನಡ ಭಾಷೆಯ ಜೊತೆಗೆ ಇತರ ಜ್ಞಾನಶಾಖೆಗಳ ಪರಿಚಯವೂ ಆಗಬೇಕೆಂದರು.
  • ಆ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ವರೂಪವನ್ನು ಬದಲಾಯಿಸಲಾಯಿತು. ೧೦೧ನೆಯ ಕಂತಿನಿಂದ ೨೦೦೦ನೆಯ ಕಂತಿನವರೆಗೆ ಶ್ರೀಮತಿ ಸುಧಾಮೂರ್ತಿಯವರ ಸಲಹೆಯಂತೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಕಾರ್ಯಕ್ರಮದ ಸ್ವರೂಪ ಕೆಳಕಂಡಂತಿದೆ.

• ಒಂದು ಕಂತಿನ ಅವಧಿ-೩೦ ನಿಮಿಷಗಳು • ಭಾಗವಹಿಸುವ ಸ್ಪರ್ಧಿಗಳು-ಮೂವರು • ಪ್ರಸಾರ ಅಂತರ-ವಾರಕ್ಕೆ ೫ ಕಾರ್ಯಕ್ರಮಗಳು; ಸೋಮವಾರದಿಂದ ಶುಕ್ರವಾರದವರೆಗೆ • ಸ್ಪರ್ಧಿಗಳು-೧೫ ವರ್ಷಕ್ಕೆ ಮೇಲ್ಪಟ್ಟ ಯಾರು ಬೇಕಾದರೂ ಭಾಗವಹಿಸಬಹುದು; ವಿಶೇಷ ಕಾರ್ಯಕ್ರಮಗಳಲ್ಲಿ ೧೫ ವರ್ಷಕ್ಕಿಂತ ಚಿಕ್ಕವರಿಗೆ ಅವಕಾಶ ಮಾಡಿಕೊಡಲಾಗಿದೆ. • ಆಯ್ಕೆ-ಪತ್ರದ ಮೂಲಕ • ವ್ಯಾಪ್ತಿ-ಅಖಿಲ ಕರ್ನಾಟಕ • ಪ್ರಯಾಣ ವೆಚ್ಚ-ಬೆಂಗಳೂರಿನ ಸ್ಪರ್ಧಿಗಳನ್ನು ಹೊರತು ಪಡಿಸಿ, ಕರ್ನಾಟಕದ ಉಳಿದ ಭಾಗಗಳಿಂದ ಬರುವ ಎಲ್ಲರಿಗೂ ಬಸ್ ಪ್ರಯಾಣದ ವೆಚ್ಚವನ್ನು ನೀಡುವರು. • ಒಂದು ಸಾಮಾನ್ಯ ಕಂತಿನಲ್ಲಿರುವ ಪ್ರಶ್ನೆಗಳು-೧೨

ಸ್ಪರ್ಧಿಗಳ ಆಯ್ಕೆ

[ಬದಲಾಯಿಸಿ]

ದೂರದರ್ಶನದವರೇ ಸ್ಪರ್ಧಿಗಳನ್ನು ಜಿಲ್ಲಾವಾರು, ಶೈಕ್ಷಣಿಕ, ಹಿನ್ನೆಲೆ, ವಯಸ್ಸಿನ ಆಧಾರಗಳ ಮೇಲೆ ಆಯ್ಕೆಮಾಡಲು ಸಹಾಯಮಾಡುತ್ತಿದ್ದಾರೆ. ಭಾಗವಹಿಸುವ ಅಭ್ಯರ್ಥಿಗಳು, ಬೆಂಗಳೂರು,ಹಾಗೂ ಕರ್ನಾಟಕದ ಹಲವೆಡೆಗಳಿಂದ ಬರುತ್ತಾರೆ.

ಎಡ ಮೆದುಳು ತಾತ್ವಿಕ, ಬಲಮೆದುಳು ಭಾವನಾತ್ಮಕ

[ಬದಲಾಯಿಸಿ]
  • ಮನುಷ್ಯನ ಎಡ ಮೆದುಳು ತಾತ್ವಿಕವಾದದ್ದಾದರೆ, ಬಲಭಾಗ ಭಾವನಾತ್ಮಕವಾದದ್ದು.'ಥಟ್ಟಂತ ಹೇಳಿ ಕ್ವಿಜ್ ಕಾರ್ಯಕ್ರಮಕ್ಕೆ', ಸಹಾಯವಾಗುವಂತೆ, ಎರಡು ಮೆದುಳಿನ ಭಾಗಗಳ ಸಾಮರ್ಥ್ಯವನ್ನು ಪರೀಕ್ಷಿಸುವಂತಹ ಪ್ರಶ್ನಾವಳಿಯನ್ನು 'ಸೋಮೇಶ್ವರ್' ಅತಿ ಎಚ್ಚರಿಕೆಯಿಂದ ತಯಾರು ಮಾಡುತ್ತಾರೆ. ಮನೋರಂಜನೆಯೂ ಇಲ್ಲಿ ಅಗತ್ಯವಾಗಿ ಬೇಕಾದ ಧಾತು.
  • ಹಾಗಾಗಿ, ಇವೆಲ್ಲವನ್ನೂ ಸೂಕ್ಷ್ಮವಾಗಿ-ಸೇರಿಸಿ, 'ಸುಂದರವಾಗಿ-ಹೆಣೆದು', 'ವೈಜ್ಞಾನಿಕವಾಗಿ ರೂಪಿಸಿ'ದ ಕಾರ್ಯಕ್ರಮವಿದು. ಮಾಹಿತಿಗಳ ಜೊತೆಗೆ, ಮನರಂಜನೆ ಹಾಗೂ ಅರಿವು ಮೂಡಿಸುವ ಮಾರ್ಗದಲ್ಲಿ ಸಾಗಿರುವ ಕಾರ್ಯಕ್ರಮ, ತನ್ನ ವಿಶೇಷವಾದ ಅನನ್ಯವಾದ ಪ್ರಯತ್ನಗಳಿಂದ ನಿರಂತರವಾಗಿ ಇಂದಿಗೂ ಸಾಗಿದೆ.

ಪ್ರಶ್ನೆಗಳ ವೈವಿಧ್ಯತೆ

[ಬದಲಾಯಿಸಿ]
  • ೧೨ ಪ್ರಶ್ನೆಗಳಲ್ಲಿ ೫ ಪ್ರಶ್ನೆಗಳು ಕಡ್ಡಾಯವಾಗಿ ಕನ್ನಡ ಭಾಷೆ, ಸಂಸ್ಕೃತಿ, ನಾಡಿಗೆ ಸಂಬಂಧಪಟ್ಟಿರುತ್ತವೆ. ಉಳಿದ ಪ್ರಶ್ನೆಗಳು ಕರ್ನಾಟಕವನ್ನು ಒಳಗೊಂಡಂತೆ, ಭಾರತ ಹಾಗೂ ವಿಶ್ವಕ್ಕೆ ಸಂಬಂಧಪಟ್ಟಿರುತ್ತವೆ.

• ಪ್ರಶ್ನೆಗಳ ರಚನೆ-ಮನುಷ್ಯನ ಮಿದುಳಿನ ಎಡ ಅರೆಗೋಳ ಹಾಗೂ ಬಲ ಅರೆಗೋಳಗಳೆರಡರ ಸಾಮರ್ಥ್ಯವನ್ನು ಪರೀಕ್ಷಿಸುವಂತೆ ಪ್ರಶ್ನೆಗಳನ್ನು ರೂಪಿಸಲಾಗಿದೆ. • ಬಹುಮಾನ-ಬಹುಮಾನವಾಗಿ ಕನ್ನಡ ಪುಸ್ತಕಗಳನ್ನು ಮಾತ್ರ ನೀಡಲಾಗುವುದು. ೧೦ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಗೆದ್ದವರಿಗೆ, ಪ್ರಸಾರ ಭಾರತಿ ದೂರದರ್ಶನದ ಭಂಡಾರದಿಂದ ಆಯ್ದು ಸಿದ್ಧಪಡಿಸಿದ ಸಂಗೀತ ಅಡಕಮುದ್ರಿಕೆಗಳನ್ನು (ಸಿಡಿ) ವಿಶೇಷ ಬಹುಮಾನವಾಗಿ ನೀಡುವರು. ಜೊತೆಗೆ ನವಕರ್ನಾಟಕ ಪ್ರಕಾಶನದವರು ನೀಡುವ ಜ್ಞಾನವಿಜ್ಞಾನ ಕೋಶದ ನಾಲ್ಕು ಸಂಪುಟಗಳನ್ನು ಬಹುಮಾನವಾಗಿಯೂ ನೀಡಲಾಗಿದೆ. • ಪುಸ್ತಕಗಳ ಸಂಖ್ಯೆ-ಒಂದು ಸ್ಪರ್ಧೆಯಲ್ಲಿ ಗರಿಷ್ಠ ೨೫ ಪುಸ್ತಕಗಳನ್ನು ಗೆಲ್ಲಲು ಅವಕಾಶವಿರುತ್ತದೆ.

  • ಬೆಂಗಳೂರು ದೂರದರ್ಶನ ನಿರ್ಮಿಸಿ ಪ್ರಸಾರ ಮಾಡುತ್ತಿರುವ ‘ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮವು ಅಖಿಲ ಭಾರತ ದಾಖಲೆಯನ್ನು ಮಾಡಿದೆ.
  • ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮವು ಜೂನ್ ೩೦, ೨೦೧೧ರವರೆಗೆ, ನಿರಂತರವಾಗಿ ೧೭೫೬ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದೆ. ಇಂತಹ ಪ್ರಸಾರ ಕಾರ್ಯ ಭಾರತದ ಯಾವುದೇ ಟೆಲಿವಿಷನ್ ವಾಹಿನಿಯಲ್ಲಿ ನಡೆದಿಲ್ಲ.
  • ಈಗ ಥಟ್ ಅಂತ ಹೇಳಿ ಕಾರ್ಯಕ್ರಮವು 2450 ಕಂತುಗಳನ್ನು ಪೂರೈಸಿದೆ.

ಕಾರ್ಯಕ್ರಮದ ಅಂಕಿ-ಅಂಶಗಳ ವಿವರ

[ಬದಲಾಯಿಸಿ]

‘ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮವು ಹಲವು ವಿಧಗಳಲ್ಲಿ ದಾಖಲೆಗಳನ್ನು ಸೃಷ್ಟಿಸಿದೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ವಿವರಿಸಲಾಗಿದೆ:

  • ನಿರಂತರತೆ 2450 ಕಂತುಗಳು. ಈ ದಾಖಲೆ ಕನ್ನಡದ ವಾಹಿನಿಗಳನ್ನು ಒಳಗೊಂಡಂತೆ ಎಲ್ಲ ಭಾರತೀಯ ವಾಹಿನಿಗಳಿಗೆ ಅನ್ವಯವಾಗುತ್ತದೆ.
  • ಕಾಲಾವಧಿ ಜನವರಿ ೪, ೨೦೦೨ ರಿಂದ ಇಂದಿನವರೆಗೆ, ಸುಮಾರು 12 ವರ್ಷಗಳಿಗೂ ಹೆಚ್ಚಿನ ಕಾಲ.
  • ಗಂಟೆಗಳು 1225 ಗಂಟೆಗಳ ಕಾರ್ಯಕ್ರಮ ಪ್ರಸಾರವಾಗಿದೆ.
  • ಪ್ರಶ್ನೆಗಳು ಇದುವರೆಗೂ ಒಟ್ಟು 40,000+ ಪ್ರಶ್ನೆಗಳನ್ನು ಕೇಳಲಾಗಿದೆ.
  • ಸ್ಪರ್ಧಿಗಳು ಒಟ್ಟು 7350 ಸ್ಪರ್ಧಿಗಳು ಭಾಗವಹಿಸಿರುವರು.
  • ಸ್ಪರ್ಧೆಯಲ್ಲಿ ಗೆಲ್ಲಲು ಇಟ್ಟಿದ್ದ ಒಟ್ಟು ಪುಸ್ತಕಗಳು 50,000
  • ಸ್ಪರ್ಧಿಗಳು ಗೆದ್ದಿರುವ ಪುಸ್ತಕಗಳು ಒಟ್ಟು ಸುಮಾರು 35,000 (ಈ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ವಿತರಿಸಲಾಗಿದೆ. )
  • ಪ್ರತಿ ಕಾರ್ಯಕ್ರಮದ ಆರಂಭದಲ್ಲಿ ಉತ್ತಮ ಕನ್ನಡ ಪುಸ್ತಕಗಳನ್ನು ಪರಿಚಯ ಮಾಡಿಕೊಡಲಾಗುತ್ತದೆ ಅಥವಾ ಗಣ್ಯರ ಬದುಕಿನ ರಸಘಳಿಗೆಗಳನ್ನು ಇಲ್ಲವೇ ಜೀವನಾನುಭವವನ್ನು ಹಂಚಿಕೊಳ್ಳಲಾಗುತ್ತದೆ.
  • ೧೯೦೦ ಕಾರ್ಯಕ್ರಮಗಳಲ್ಲಿ ಸುಮಾರು ೯೫೦ ಉತ್ತಮ ಕನ್ನಡ ಪುಸ್ತಕಗಳನ್ನು ಪರಿಚಯ ಮಾಡಿಕೊಡಲಾಗಿದೆ.
  • ಪ್ರಾಯೋಜಕತ್ವ ಕೆಲವು ದಿನಗಳ ಕಾಲ ಸಿಂಡಿಕೇಟ್ ಬ್ಯಾಂಕ್ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿತು. ಅದನ್ನು ಬಿಟ್ಟರೆ ಉಳಿದ ಎಲ್ಲ ಕಾರ್ಯಕ್ರಮಗಳನ್ನು ಪ್ರಾಯೋಜಕರ ನೆರವಿಲ್ಲದೆ ಪ್ರಸಾರ ಮಾಡಲಾಗಿದೆ.

ಕಾರ್ಯಕ್ರಮದ ವಿಶೇಷತೆಗಳು

[ಬದಲಾಯಿಸಿ]

•ಕಾರಾಗೃಹ ವಾಸಿಗಳಿಗಾಗಿ ವಿಶೇಷ ಸ್ಪರ್ಧೆ ಬೆಂಗಳೂರು ದೂರದರ್ಶನದ ಹಿರಿಯ ನಿರ್ದೇಶಕ ಡಾ|ಮಹೇಶ್ ಜೋಶಿಯವರ ನೇತೃತ್ವದಲ್ಲಿ ಒಂದು ಅಪರೂಪದ ಮಾನವೀಯ ಕಾರ್ಯಕ್ರಮ ನಡೆಯಿತು. ಪರಪ್ಪನ ಅಗ್ರಹಾರದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಖೈದಿಗಳನ್ನು ಸ್ಟುಡಿಯೋಕ್ಕೆ ಕರೆಸಿ, ಅವರಿಗೆ ಊಟ ಹಾಕಿ, ವಿಶೇಷ ಕ್ವಿಜ಼್ ಕಾರ್ಯಕ್ರಮವನ್ನು ನಡೆಸಲಾಯಿತು. ಇದೊಂದು ರಾಷ್ಟ್ರೀಯ ದಾಖಲೆ. • ಅಂಧರಿಗೆ ವಿಶೇಷ ಸ್ಪರ್ಧೆ ಈ ಕಾರ್ಯಕ್ರಮದಲ್ಲಿ ಅಂಧರೂ ಸಹಾ ಭಾಗವಹಿಸಿರುವರು. ಎಲ್ಲೆಲ್ಲಿ ದೃಶ್ಯ ರೂಪದ ಪ್ರಶ್ನೆಗಳಿರುತ್ತವೆಯೋ ಅಲ್ಲಿ ಧ್ವನಿ ರೂಪದ ಪ್ರಶ್ನೆಗಳನ್ನು ಹಾಡು, ಸಂಭಾಷಣೆಗಳ ರೂಪದಲ್ಲಿ ಕೇಳಲಾಯಿತು. • ಏಡ್ಸ್ ಪೀಡಿತರಿಗೆ ಸ್ಪರ್ಧೆ ಎಚ್.ಐ.ವಿ ಹಾಗೂ ಏಡ್ಸ್ ಬಗ್ಗೆ ಮಾಹಿತಿಯನ್ನು ನೀಡಲು ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಒಂದು ಕಾರ್ಯಕ್ರಮದಲ್ಲಿ ಏಡ್ಸ್ ರೋಗಿಗಳು ಸ್ವಯಂ ಭಾಗವಹಿಸಿ, ಏಡ್ಸ್ ನೊಂದಿಗೆ ಸಹಬಾಳ್ವೆ ಸಾಧ್ಯ ಎಂದು ಹೇಳಿದ್ದು ಮನನೀಯ. • ಐ.ಟಿ. ತಜ್ಞರಿಗೆ ಸ್ಪರ್ಧೆ : ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉತ್ಸಾಹಿ ತರುಣ-ತರುಣಿಯರಿಗೆ ವಿಶೇಷ ಕ್ವಿಜ಼್ ಸ್ಪರ್ಧೆಯನ್ನು ನಡೆಸಲಾಗಿದೆ. ಈ ಸ್ಪರ್ಧೆಗಳನ್ನು ‘ಅವಿರತ ಸಂಸ್ಥೆ ಪ್ರಾಯೋಜಿಸಿತು. • ಅನಿವಾಸಿ ಭಾರತೀಯರಿಗೆ ಸ್ಪರ್ಧೆ-ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಭಾರತಕ್ಕೆ ಬಂದಾಗ ಅವರಿಗಾಗಿ ವಿಶೇಷ ಕ್ವಿಜ಼್ ಸ್ಪರ್ಧೆಯನ್ನು ನಡೆಸಲಾಯಿತು. • ಸ್ವಾತಂತ್ರ್ಯ ದಿನೋತ್ಸವ-ಗಣರಾಜ್ಯೋತ್ಸವ ವಿಶೇಷ ಸ್ಪರ್ಧೆಗಳು-ಪ್ರತಿ ವರ್ಷ ಈ ಎರಡು ರಾಷ್ಟ್ರೀಯ ಹಬ್ಬಗಳಲ್ಲಿ ಒಂದು ವಾರದವರೆಗೆ ವಿಶೇಷ ಕ್ವಿಜ಼್ ಕಾರ್ಯಕ್ರಮಗಳನ್ನು ೧೫ ವರ್ಷಗಳಿಗಿಂತ ಚಿಕ್ಕವರಾಗಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಪ್ರಶ್ನೆಗಳೆಲ್ಲ ನಮ್ಮ ದೇಶಕ್ಕೆ ಸಂಬಂಧಪಟ್ಟಿರುತ್ತವೆ. • ಗಣ್ಯರು ಹಲವು ಸಂದರ್ಭಗಳಲ್ಲಿ ನಾಡಿನ ಹಿರಿಯ ಲೇಖಕರು ಹಾಗೂ ಗಣ್ಯರನ್ನು ಕರೆಯಿಸಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಾಗೆ ಭಾಗವಹಿಸಿದ ಕೆಲವು ಗಣ್ಯರ ಹೆಸರು ಈ ರೀತಿ ಇವೆ. ಜಿ. ವೆಂಕಟಸುಬ್ಬಯ್ಯ, ಮಾಸ್ಟರ್ ಹಿರಣ್ಣಯ್ಯ, ಸುಧಾಮೂರ್ತಿ, ಚಂದ್ರಶೇಖರ ಕಂಬಾರ, ನಿಸಾರ್ ಅಹಮದ್, ಹಂಪನಾ, ಕಮಲಾ ಹಂಪನಾ, ಜಯಂತ ಕಾಯ್ಕಿಣಿ, ಎಚ್.ಎಸ್. ವೆಂಕಟೇಶ ಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಮೋಹನ್ ಆಳ್ವ, ದುಂಡಿರಾಜ್, ವಸುಧೇಂದ್ರ, ಎಂ.ಆರ್.ದತ್ತಾತ್ರಿ, ನಾಗತಿಹಳ್ಳಿ ಚಂದ್ರಶೇಖರ್, ಡಾ.ಸಿ.ಆರ್.ಚಂದ್ರಶೇಖರ್ ಇತ್ಯಾದಿ. • ನಾಡಹಬ್ಬ, ಇತರ ಹಬ್ಬಗಳು-ಕರ್ನಾಟಕ ರಾಜ್ಯೋತ್ಸವ, ವಿಜಯದಶಮಿ, ದೀಪಾವಳಿ ಮುಂತಾದ ಹಬ್ಬಗಳಲ್ಲಿ ಅತಿಥಿಗಳನ್ನು ಕರೆಯಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಏಣಗಿ ಬಾಳಪ್ಪ, ಸುದೀಪ್, ಜಗ್ಗೇಶ್, ಸಿಹಿಕಹಿ ಚಂದ್ರು, ವಿಜಯ್, ಮಂಡ್ಯ ರಮೇಶ್, ಯೋಗರಾಜ್ ಭಟ್, ಕವಿತಾ ಲಂಕೇಶ್, ಮನೋಮೂರ್ತಿ, ಬಿ.ಜಯಶ್ರೀ, ಮಂಜುಳಾ ಗುರುರಾಜ್, ಚಿತ್ರಾ, ಬಿ.ಆರ್.ಛಾಯಾ, ಎಂ.ಡಿ.ಪಲ್ಲವಿ, ಸುಪ್ರಿಯಾ ಆಚಾರ್ಯ, ನಾಗಚಂದ್ರಿಕಾ, ರಾಜೇಶ್ ಕೃಷ್ಣನ್, ಎಲ್.ಎನ್.ಶಾಸ್ತ್ರಿ ಇತ್ಯಾದಿ. • ರಾಜ್ಯೋತ್ಸವ ವಿಶೇಷ ಒಂದು ತಿಂಗಳವರೆಗೆ (೨೦೧೧ ಹಾಗೂ ೨೦೧೨) ನಾಡಿನ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಭಾವಂತರನ್ನು ಕರೆದು ಅವರಿಗಾಗಿ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಯಿತು. • ಸ್ಟುಡಿಯೋ ಹೊರಗೆ ೧೫೦೦ ಕಾರ್ಯಕ್ರಮಗಳಲ್ಲಿ ೨ ಕಾರ್ಯಕ್ರಮಗಳನ್ನು ಸ್ಟುಡಿಯೋದಿಂದ ಹೊರಗೆ ನಡೆಸಲಾಗಿದೆ. ಹೊಸ ವರ್ಷದ ಹಿಂದಿನ ರಾತ್ರಿ ಬೆಂಗಳೂರಿನ ರಸ್ತೆ ರಸ್ತೆ, ಬಡಾವಣೆ ಬಡಾವಣೆಗಳನ್ನು ಸುತ್ತಿ, ದಾರಿಯಲ್ಲಿ ಬರುವವರಿಗೆ ಪ್ರಶ್ನೆ ಕೇಳಿ, ಸರಿ ಉತ್ತರವನ್ನು ನೀಡಿದವರಿಗೆ ಪುಸ್ತಕಗಳನ್ನು ನೀಡಲಾಯಿತು. ಹೀಗೆಯೇ ದಸರೆಯ ಸಂದರ್ಭದಲ್ಲಿ ಮೈಸೂರಿನಲ್ಲಿಯೂ ಕಾರ್ಯಕ್ರಮವನ್ನು ನಡೆಸಲಾಯಿತು. • ಪ್ರಧಾನ ನಿರ್ಮಾಪಕರು- ವೆಂಕಟೇಶ್ವರುಲು ಡಾ|ಮಹೇಶ್ ಜೋಷಿ • ನಿರ್ಮಾಪಕರು-ಉಷಾ ಕಿಣಿ, ಎಚ್.ಎನ್.ಆರತಿ ಮತ್ತು ರಘು ಐಡಿ ಹಳ್ಳಿ • ಕ್ವಿಜ಼್ ಮಾಸ್ಟರ್-ಥಟ್ ಅಂತ ಹೇಳಿ: ಕ್ವಿಜ಼್ ಕಾರ್ಯಕ್ರಮದ ಕ್ವಿಜ಼್ ಮಾಸ್ಟರ್ ಡಾ|ನಾ.ಸೋಮೇಶ್ವರ. ಅವರೇ ಪ್ರಶ್ನೆಗಳ ಸಂಶೋಧನೆ, ರಚನೆ ಹಾಗೂ ಪ್ರಸ್ತುತಿಯನ್ನು ಮಾಡುತ್ತಿರುವರು.

ಮುಂದಿನ ಯೋಜನೆಗಳು

[ಬದಲಾಯಿಸಿ]
  • ಕರ್ನಾಟಕದ ಪ್ರತಿಯೊಂದು ಜಿಲ್ಲೆಗೆ ಹೋಗಿ, ಆ ಜಿಲ್ಲೆಗೆ ಸಂಬಂಧಪಟ್ಟಂತಹ ಪ್ರಶ್ನೆಗಳನ್ನು ಒಳಗೊಂಡ ವಿಶೇಷ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯಿದೆ.
  • ಅಖಿಲ ಕರ್ನಾಟಕ ಮಟ್ಟದ ಕ್ವಿಜ಼್ ಸ್ಪರ್ಧೆಗಳನ್ನು ನಡೆಸುವ ಯೋಜನೆಯಿದೆ.

ಇದನ್ನು ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]