ವಿಷಯಕ್ಕೆ ಹೋಗು

ತೆರಕಣಾಂಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೆರಕಣಾಂಬಿ
ಹಳ್ಳಿ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಚಾಮರಾಜನಗರ
TalukasGundlupet
Population
 (2001)
 • Total೭,೭೩೮
Languages
 • OfficialKannada
Time zoneUTC+5:30 (IST)
PIN
570023
Telephone code08229
Lok Sabha constituencyChamarajanagar
Vidhan Sabha constituencyGundlupet

ತೆರಕಣಾಂಬಿ ಭಾರತ ದೇಶದ, ಕರ್ನಾಟಕ ರಾಜ್ಯದ ಒಂದು ಊರು. ಇದು ಚಾಮರಾಜನಗರ ಜಿಲ್ಲೆಗುಂಡ್ಲುಪೇಟೆ ತಾಲೂಕಿನಲ್ಲಿದೆ. ಇದು ಒಂದು ಐತಿಹಾಸಿಕ ಸ್ಥಳವಾಗಿದೆ.ಇಲ್ಲಿ ರಾಜಮಹಾರಾಜರು ನೆಲೆಸಿದ್ಧರೆಂಬ ಮಾಹಿತಿ ಇದೆ. ತೆರಕಣಾಂಬಿ - ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕಸಬೆಯಿಂದ 11ಕಿಮೀ ದೂರದಲ್ಲಿ ಚಾಮರಾಜನಗರದ ರಸ್ತೆಯಲ್ಲಿರುವ ಊರು. ಇದೇ ಹೆಸರಿನ ಹೋಬಳಿಯ ಮುಖ್ಯ ಸ್ಥಳ. ದ್ರಾವಿಡ, ಕೇರಳ ಮತ್ತು ಹದಿನಾಡು ಅಥವಾ ದಕ್ಷಿಣ ಕರ್ನಾಟಕ ಇಲ್ಲಿ ಕೂಡುತ್ತಿದ್ದುದರಿಂದ ಇದು ಕೂಡುಗಲ್ಲೂರು ಎಂದೂ ತ್ರಿಕದಂಬಪುರ ಎಂದೂ ಹೆಸರಾಯಿತೆಂದು ಪ್ರತೀತಿ. ಆರನೆಯ ಶತಮಾನದಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಆಳುತ್ತಿದ್ದ ಕದಂಬ ವಂಶದ ತ್ರಿನೇತ್ರ ಕದಂಬ (ಲಂಬಕರ್ಣರಾಯ) ಎಂಬುವನು ಈ ಕೂಡು ಸ್ಥಳದಲ್ಲಿ ತ್ರಿಕದಂಬ ಅಥವಾ ಮುಕ್ಕಣ್ಣನ (ಶಿವ) ದೇವಾಲಯವನ್ನು ಕಟ್ಟಿಸಿದ್ದ.[ಸಾಕ್ಷ್ಯಾಧಾರ ಬೇಕಾಗಿದೆ] ಈ ಕಾರಣದಿಂದ ಈ ಊರಿಗೆ ತೆರಕಣಾಂಬಿ ಹೆಸರು ಬಂತು ಎಂಬುದೂ ಒಂದು ಅಭಿಪ್ರಾಯ.

ಇತಿಹಾಸ

[ಬದಲಾಯಿಸಿ]

ತೆರಕಣಾಂಬಿಯಲ್ಲಿ ಶಿವಸಮುದ್ರದ ಮಾಧವರಾಯ ಆಳುತ್ತಿದ್ದ ಎನ್ನಲಾಗಿದೆ. ಹೊಯ್ಸಳ ರಾಜ್ಯದಲ್ಲಿದ್ದ ಈ ಊರನ್ನು ಅನಂತರ ವಿಜಯನಗರಹರಿಹರ ವಿಸ್ತರಿಸಿದ. 16ನೆಯ ಶತಮಾನದಲ್ಲಿ ಈ ಊರು ಉಮ್ಮತ್ತೂರಿನ ನಾಯಕನ ವಶದಲ್ಲಿತ್ತು. ತರುವಾಯ ಇದರ ಸುತ್ತಮುತ್ತಲ ಪ್ರದೇಶವು ತೆಲುಗುಮೂಲದ ದಾಳಿಕೋರರ ಲೂಟಿಗೆ ಒಳಗಾಯಿತು. 1624ರಲ್ಲಿ ಇದು ಮೈಸೂರಿನ ರಾಜ ಒಡೆಯರ ಅಧೀನಕ್ಕೊಳಪಟ್ಟಿತು. ಈ ಕಾಲದಲ್ಲಿ ಇದರ ಮಹತ್ತ್ವ ಕುಗ್ಗುತ್ತ ಬಂದು ಗುಂಡ್ಲುಪೇಟೆ ಮುಖ್ಯ ಸ್ಥಳವಾಯಿತು. ಹಾಗೆಯೇ ಇದು ಇಬ್ಧಾಗವಾಗಿ ಅವಲ್ ತೆರಕಣಾಂಬಿ ಮತ್ತು ದುಯಂ ತೆರಕಣಾಂಬಿ ಎಂದಾಯಿತು.ಪೂರ್ಣಯ್ಯನವರು ಇವೆರಡನ್ನೂ ಗುಂಡ್ಲುಪೇಟೆ ತಾಲ್ಲೂಕಿಗೆ ಸೇರಿಸಿದರು. 1747ರಲ್ಲಿ ಮರಾಠರು ಈ ಊರಿನ ಕೋಟೆಯನ್ನು ನಾಶಪಡಿಸಿದರು. ಇಂದೂ ಸಹ ಐದು ಪ್ರಾಕಾರದ ಭಗ್ನಕೋಟೆ, ಹಳೆಯ ಅರಮನೆಯ ನಿವೇಶನ ಉಳಿದಿವೆ. ಅರಮನೆ ಆರು ಮಹಡಿಗಳಿಂದ ಕೂಡಿತ್ತೆಂದು ಸ್ಥಳೀಯ ಐತಿಹ್ಯ. ಉಮ್ಮತ್ತೂರು ನಾಯಕರುಗಳು ಬರೆಸಿದ ಶಾಸನಗಳು (1489-1504) ಮತ್ತು ಕೃಷ್ಣದೇವರಾಯನ ಒಂದು ಶಾಸನ (1520) ಇಲ್ಲಿ ದೊರೆತಿವೆ.

ದೇವಾಲಯಗಳು

[ಬದಲಾಯಿಸಿ]

ತೆರಕಣಾಂಬಿಯಲ್ಲಿ 12 ದೇವಾಲಯಗಳ ಅವಶೇಷಗಳಿವೆ. ಮುಖ್ಯದೇವಾಲಯ ಲಕ್ಷ್ಮೀವರದರಾಜ ಸ್ವಾಮಿಯದು. ಇದು ಸುಂದರವಾದ ಕಂಬಗಳಿರುವ ದ್ರಾವಿಡ ಶೈಲಿಯ ಕಟ್ಟಡ. ಮುಮ್ಮಡಿ ಕೃಷ್ಣರಾಜ ಒಡೆಯರು ಇದರ ವಿಗ್ರಹವನ್ನು ಮೈಸೂರಿನ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನಕ್ಕೆ ಸಾಗಿಸಿ, ಬದಲಿಯಾಗಿ ಬೇರೊಂದನ್ನು ಮಾಡಿಸಿಕೊಟ್ಟಿದ್ದಾರೆ. ಬಾಲಕೃಷ್ಣ, ಬಾಲಬಲರಾಮ, ಕೃಷ್ಣನಿಗೆ ಹಾಲೂಡಿಸುತ್ತಿರುವ ಯಶೋಧೆ ಈ ಕಂಚಿನ ಶಿಲ್ಪಗಳು ದೇವಾಲಯದಲ್ಲಿವೆ.

ಸುಗ್ರೀವ ದೇವಾಲಯದಲ್ಲಿ 6 ಅಡಿ ಎತ್ತರದ ಸುಗ್ರೀವನ ವಿಗ್ರಹವಿದೆ. ಹನುಮಂತ ದೇವಾಲಯ ಉತ್ತಮ ವಾಸ್ತುಕೃತಿ. 1640ರಲ್ಲಿ ಒಬ್ಬ ವ್ಯಾಪಾರಿ ಇದನ್ನು ಕಟ್ಟಿಸಿದ. ಈ ಊರಿನ ಸುತ್ತಮುತ್ತ ಅನೇಕ ಕೆರೆಗಳಿದ್ದುದು ಹಾಗೂ ರಾಮಭದ್ರ ದೇವಾಲಯದ ಬೃಹತ್ ಅವಶೇಷ ಈಗಲೂ ಕಂಡುಬರುತ್ತದೆ. ಪ್ರತಿ ಗುರುವಾರ ತೆರಕಣಾಂಬಿಯಲ್ಲಿ ದೊಡ್ಡ ಸಂತೆ ನಡೆಯುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: