ತಿರುಮಲೆ ರಾಜಮ್ಮ

ವಿಕಿಪೀಡಿಯ ಇಂದ
Jump to navigation Jump to search
ತಿರುಮಲೆ ರಾಜಮ್ಮ
ಜನ್ಮನಾಮನವೆಂಬರ್ ೨೦, ೧೯೦೦
ತುಮಕೂರು
ಮರಣಸೆಪ್ಟೆಂಬರ್ ೨೪, ೧೯೮೪
ವೃತ್ತಿಸಾಹಿತಿ

ತಿರುಮಲೆ ರಾಜಮ್ಮ (ನವೆಂಬರ್ ೨೦, ೧೯೦೦ - ಸೆಪ್ಟೆಂಬರ್ ೨೪, ೧೯೮೪) ಕಳೆದ ಶತಮಾನದ ಪ್ರಸಿದ್ಧ ಬರಹಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. ಕನ್ನಡದ ಭೀಷ್ಮ, ಪತ್ರಿಕಾಕರ್ತ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ, ಈ ಎಲ್ಲವುಗಳ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಮೇಲ್ಮಟ್ಟದ ಸ್ಥಾನವನ್ನು ಪಡೆದಿರುವ ತಿರುಮಲೆ ತಾತಾಚಾರ್ಯ ಶರ್ಮರ ಪತ್ನಿಯಾದ ತಿರುಮಲೆ ರಾಜಮ್ಮನವರು, ಕೇವಲ ಸಾಹಿತಿ ಪತ್ನಿಯಾಗಿ ಉಳಿಯದೆ ‘ಭಾರತಿ’ ಎಂಬ ಹೆಸರಿನ ಬರಹಗಾರ್ತಿಯಾಗಿ ಪತಿಯಷ್ಟೇ ಕೀರ್ತಿಯನ್ನೂ, ಗೌರವವನ್ನೂ ಪಡೆದವರು.

ಜೀವನ[ಬದಲಾಯಿಸಿ]

ರಾಘವಾಚಾರ್ ಮತ್ತು ಸೀತಮ್ಮ ದಂಪತಿಗಳಿಗೆ ಮಗಳಾಗಿ ೧೯೦೦ನೇ ನವೆಂಬರ್ ೨೦ರಂದು ತುಮಕೂರಿನಲ್ಲಿ ರಾಜಮ್ಮ ಜನಿಸಿದರು. ಅವರ ತಂದೆಯವರು ಆಂಗ್ಲ, ಗಣಿತ ಮತ್ತು ಸಂಸ್ಕೃತ ವ್ಯಾಕರಣಗಳಲ್ಲಿ ಪಂಡಿತರು. ತವರು ಮನೆಯಲ್ಲಿ ತಾಯಿ ಹಾಡುತ್ತಿದ್ದ ಕನ್ನಡ, ತೆಲುಗು ಹಾಡುಗಳು, ತಂದೆಯ ಸಂಸ್ಕೃತ ಶ್ಲೋಕಗಳು ಇವೇ ಆಕೆಗೆ ದೊರೆತ ಮೊದಲ ಶಿಕ್ಷಣ. ತಂದೆ ಹಾಸನದಲ್ಲಿದ್ದಾಗ ಅಕ್ಷರಾಭ್ಯಾಸ ಪ್ರಾರಂಭಗೊಂಡಿತು. ಅಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ನಡೆಯಿತು. ಲೋಯರ್ ಸೆಕೆಂಡರಿಗೆ ಶಿಕ್ಷಣ ಮುಗಿಯಿತು. ಹದಿಮೂರನೆಯ ವಯಸ್ಸಿನಲ್ಲಿಯೇ ತಿರುಮಲೆ ತಾತಾಚಾರ್ಯ ಶರ್ಮರೊಂದಿಗೆ ವಿವಾಹವಾಯಿತು. ಅಂದಿನ ಪದ್ಧತಿಯಂತೆ ತಾತಾಚಾರ್ಯ ಶರ್ಮರ ವಿದ್ಯಾಭ್ಯಾಸ ಮುಗಿಯುವವರೆಗೆ ರಾಜಮ್ಮ ಅವರು ತವರು ಮನೆಯಲ್ಲೇ ಉಳಿದರು. ಮುಂದೆ ತಂದೆಯವರಿಗೆ ಬೆಂಗಳೂರಿಗೆ ವರ್ಗವಾದಾಗ ರಾಜಮ್ಮನವರಿಗೆ ಸಂಗೀತ ಶಿಕ್ಷಣಕ್ಕೆ ಮತ್ತು ಸಾಹಿತ್ಯ ರಚನೆಗೆ ಹೆಚ್ಚಿನ ಅವಕಾಶ ದೊರೆಯಿತು.

ಒಮ್ಮೆ, ಪ್ರಸಿದ್ಧ ವಿದ್ವಾಂಸರಾಗಿದ್ದ ಪಿಟೀಲು ತಾಯಪ್ಪನವರು ರಾಜಮ್ಮನವರ ವೀಣಾವಾದನ ಕೇಳಿ ಸಂತೋಷಪಟ್ಟು, ಹೆಚ್ಚಿನ ಶಿಕ್ಷಣ ಪಡೆಯಲೆಂದು ವೀಣೆ ಗೋಪಾಲರಾಯರ ಪರಿಚಯ ಮಾಡಿಸಿದರು. ಹೀಗೆ ಗೋಪಾಲರಾಯರ ಶಿಷ್ಯೆಯಾಗಿ ರಾಜಮ್ಮ ವೀಣಾವಾದನದಲ್ಲಿ ವಿದುಷಿಯೇ ಆದರು. ರಾಜಮ್ಮನವರ ಸೋದರಮಾವಂದಿರಾದ ವಿದ್ವಾನ್ ಟಿ. ವೆಂಕಟಾಚಾರ್ಯರು ಅಂದಿನ ಪ್ರಸಿದ್ಧ ನಾಟಕಕಾರರು. ಅವರ ಪ್ರಭಾವದಿಂದಾಗಿ ರಾಜಮ್ಮನವರ ಸಾಹಿತ್ಯದ ವ್ಯವಸಾಯದ ಬೆಳವಣಿಗೆ ಮತ್ತು ಸಂಸ್ಕ್ರತದಲ್ಲಿ ಅವರ ಹೆಚ್ಚಿನ ಅಭ್ಯಾಸ ನಡೆಯಿತು. ಆ ದಿನಗಳಲ್ಲೇ ರಾಜಮ್ಮನವರಿಗೆ ಕೈಲಾಸಂ ಅವರ ಪರಿಚಯ ಕೂಡ ಆಯಿತು.

ಮಹಾತ್ಮ ಗಾಂಧೀಜಿ ಪ್ರಭಾವ[ಬದಲಾಯಿಸಿ]

ಮುಂದೆ ತಾತಾಚಾರ್ಯರು ಇಂಟರ್ ಮೀಡಿಯೇಟ್ ಮುಗಿಸಿ ಮದರಾಸಿನ ಶಾಸನ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಅವರ ಕನ್ನಡ ಭಾಷಾಜ್ಞಾನ ಅಸಾಧಾರಣವಾಗಿತ್ತು. ರಾಜಮ್ಮನವರೂ ಪತಿಯೊಡನೆ ವಾಸಿಸಲು ಮದರಾಸಿಗೆ ಹೋದರು. ಅದೇ ಸಮಯದಲ್ಲಿ ಸ್ವಾತಂತ್ರ್ಯದ ಚಳುವಳಿ ಮತ್ತು ಭಾರತೀಯ ಸಮಾಜ ಸುಧಾರಣೆಗಳ ವಿಷಯಗಳು ತೀವ್ರ ಸ್ವರೂಪ ಪಡೆದಿದ್ದು ರಾಜಮ್ಮನವರು ಅನೇಕ ದೇಶಮುಖಂಡರ ಭಾಷಣಗಳನ್ನು ಕೇಳಿ ಪ್ರಭಾವಿತರಾದರು. ಇದರ ಪರಿಣಾಮವಾಗಿ ಬಾಲ್ಯ ವಿವಾಹ ನಿಷೇಧ, ಬಾಲ ವಿಧವೆಯರ ಪುನರ್ ವಿವಾಹ ಈ ವಸ್ತುವನ್ನುಳ್ಳ ಮೂರಂಕದ ಒಂದು ನಾಟಕ ರಚಿಸಿದರು. ನಾಟಕದ ಹೆಸರು “ಸುಖಮಾರ್ಗ”. ಅಂದಿನ ಅಮೆಚೂರ್ ನಾಟಕ ಸಂಘದವರು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಈ ನಾಟಕಕ್ಕೆ ಬಹುಮಾನವೂ ಬಂತು. ಈ ಮಧ್ಯೆ ರಾಜಮ್ಮನವರಿಗೆ ಮೈಸೂರಿನ ಪ್ರಖ್ಯಾತ ವೈಣಿಕರಾದ ಶೇಷಣ್ಣನವರಿಂದ ವೀಣೆ ಪಾಠವನ್ನು ಮುಂದುವರಿಸುವ ಅವಕಾಶವೂ ದೊರೆಯಿತು. ಮದ್ರಾಸಿನಲ್ಲಿದ್ದಾಗ ರಾಜಮ್ಮನವರು ಮೊಟ್ಟಮೊದಲ ಬಾರಿಗೆ ಗಾಂಧೀಜಿಯವರನ್ನು ಕಂಡರು. ಅವರೊಳಗೆ ಸುಪ್ತವಾಗಿದ್ದ ದೇಶಪ್ರೇಮ ಗಾಂಧೀಜಿಯವರ ದರ್ಶನದಿಂದ ಜಾಗೃತಗೊಂಡಿತು.

ವಿಶ್ವ ಕರ್ನಾಟಕಕ್ಕೆ ಬೆಂಬಲ[ಬದಲಾಯಿಸಿ]

ಪತಿ ತಿ. ತಾ. ಶರ್ಮರು ನಡೆಸುತ್ತಿದ್ದ ‘ವಿಶ್ವ ಕರ್ಣಾಟಕ’ ಪತ್ರಿಕೆಗೆ ರಾಜಮ್ಮನವರು ನೀಡುತ್ತಿದ್ದ ನೆರವು ಅಸಾಧಾರಣವಾದುದು. ಪತ್ರಿಕೆಯಲ್ಲಿ ಪ್ರಕಟವಾದ ತಪ್ಪುಗಳನ್ನು ತಿದ್ದಿ, ಸಂಪಾದಕರ ಮೇಜಿನ ಮೇಲೆ ಇಡುತ್ತಿದ್ದರು. ಅದನ್ನು ನೋಡಿದ ಕೂಡಲೇ ಸಂಪಾದಕರಿಗೆ ತಮ್ಮ ತಪ್ಪಿನ ಅರಿವಾಗುತ್ತಿತ್ತು. ಸರ್ಕಾರದವರು ಪತ್ರಿಕೆಗೆ ಸಾಕಾಗುವಷ್ಟು ಕಾಗದ ಕೊಡುತ್ತಿರಲಿಲ್ಲ. ಅಲ್ಪಸ್ವಲ್ಪ ಕೊಡುತ್ತಿದ್ದರು. ಮಿಕ್ಕುದನ್ನು ಕಾಳಸಂತೆಯಲ್ಲಿ ಕೊಳ್ಳಬೇಕಾಗಿತ್ತು. ಒಮ್ಮೆ ಹಣಕ್ಕೆ ವಿಪರೀತ ಅಡಚಣೆಯಾದಾಗ ರಾಜಮ್ಮನವರು ತಮ್ಮ ಕೈಯಲ್ಲಿದ್ದ ಚಿನ್ನದ ಬಳೆಗಳನ್ನೇ ತೆಗೆದು ವ್ಯವಸ್ಥಾಪಕರ ಕೈಯಲ್ಲಿಟ್ಟು “ಕೂಡಲೇ ಹೋಗಿ, ಇದನ್ನು ಮಾರಿಯೋ, ಒತ್ತೆ ಇಟ್ಟೋ, ಹಣ ತಂದು ಕಾಗದ ಕೊಂಡು ಪತ್ರಿಕೆಯನ್ನು ಹೊರಡಿಸಿ” ಎಂದರು. ಶರ್ಮರು ತಮ್ಮ ಪತ್ನಿಯ ಈ ತ್ಯಾಗವನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತಿದ್ದರು. ಕ್ರಾಂತಿಕಾರಿ ಜೀವನವನ್ನು ನಡೆಸಿದ ತಿ. ತಾ. ಶರ್ಮರಿಗೆ ಅವರ ಎಲ್ಲ ಕೆಲಸಗಳಿಗೆ ಚೇತನ ಕೊಡುವ ಪತ್ನಿಯಾಗಿದ್ದರು ರಾಜಮ್ಮನವರು. ಈ ಆದರ್ಶಪತ್ನಿಗೆ ತಕ್ಕ ಪತಿ ಶರ್ಮರು. ನಾನಾಮುಖ ಪ್ರತಿಭೆಗಳಿಂದ ಶೋಭಿಸುವ ರಾಜಮ್ಮನವರ ಎಲ್ಲ ಕೆಲಸಗಳಿಗೂ ಸ್ಪೂರ್ತಿಯನ್ನು ನೀಡುವ ಶಕ್ತಿಯಾಗಿದ್ದರು ಶರ್ಮರು. “ನನ್ನ ವೈಯಕ್ತಿಕ ಜೀವನದಲ್ಲಾಗಲೀ, ವೃತ್ತಿಯಲ್ಲಾಗಲಿ ಅಪೂರ್ವ ಪ್ರಭಾವ ಬೀರಿದವರು ನನ್ನ ಪತ್ನಿಯೇ” ಎಂದು ಸ್ವತಃ ಶರ್ಮರೇ ಹೇಳಿಕೊಂಡಿದ್ದಾರೆ. ಈ ಅಪರೂಪದ ದಂಪತಿಗಳಿಗೆ ಮೂರು ಮಕ್ಕಳು.

ಸಾಹಿತ್ಯ ಸೇವೆ[ಬದಲಾಯಿಸಿ]

ರಾಜಮ್ಮನವರ ಜೀವನವನ್ನು ಪರಿಶೀಲಿಸಿದಾಗ ಹೆಚ್ಚಿನ ಶಿಕ್ಷಣವಿಲ್ಲದ ಈಕೆ ಸಾಹಿತ್ಯರಂಗದಲ್ಲಿ ಇಂತಹ ಸಮರ್ಥ ಬರಹಗಾರ್ತಿ ಹೇಗಾದರೆಂದು ಆಶ್ಚರ್ಯವಾಗುತ್ತದೆ. ಸಾಹಿತ್ಯದಲ್ಲೂ ಈಕೆ ಆರಿಸಿಕೊಂಡಿದ್ದು ನಾಟಕ, ಗೀತೆ ಹಾಗೂ ಪ್ರಬಂಧಗಳು. ಅದರಲ್ಲೂ ನಾಟಕದಲ್ಲಿ ಈಗಲೂ ಲೇಖಕಿಯರ ಸಂಖ್ಯೆ ಬೆರಳೆಣಿಕೆಯಷ್ಟು ಇಲ್ಲವೆಂಬುದನ್ನು ನೆನೆದಾಗ ಇನ್ನಷ್ಟು ಅಚ್ಚರಿ ಎನಿಸುತ್ತದೆ. ರಾಜಮ್ಮನವರ ಮಾತೃ ಭಾಷೆ ತೆಲುಗು. ತೆಲುಗು ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದರು. ಅದರಲ್ಲೂ ದೇಶಭಕ್ತ ಸಾಹಿತಿ ಎನಿಸಿಕೊಂಡಿದ್ದ ‘ವೀರೇಶಲಿಂಗಂ’ ಅವರ ಸಾಹಿತ್ಯವನ್ನು ಓದಿ ಮೆಚ್ಚಿಕೊಂಡಿದ್ದರು. ಕ್ರಮೇಣ ದೇಶಭಾಷೆಯಾದ ಕನ್ನಡದಲ್ಲೂ ಆಸಕ್ತಿ ಮೂಡಿತು. ಆ ಕಾಲದ ಪ್ರಸಿದ್ಧ ಕಾದಂಬರಿಕಾರರಾದ ವೆಂಕಟಾಚಾರ್ಯ, ಗಳಗನಾಥ ಮುಂತಾದವರ ಕಾದಂಬರಿಗಳನ್ನು ಓದಿ ಕನ್ನಡದಲ್ಲಿ ಪ್ರಭುತ್ವ ಪಡೆದರು. ಪತಿ ತಿ. ತಾ. ಶರ್ಮರು ಕನ್ನಡಾಭಿಮಾನಿಯಾಗಿದ್ದುದೂ ಇವರ ಕನ್ನಡ ಕಲಿಕೆಗೆ ಕಾರಣವಾಗಿರಬಹುದು. ಸಂಗೀತದಂತೆಯೇ ರಾಜಮ್ಮನವರಿಗೆ ಸಾಹಿತ್ಯದಲ್ಲೂ ಚಿಕ್ಕಂದಿನಿಂದಲೇ ಪರಿಶ್ರಮವಿತ್ತು. ರವೀಂದ್ರನಾಥ ಠಾಕೂರರ ‘ದೃಢಪ್ರತಿಜ್ಞೆ’ ಎನ್ನುವ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದರು.

ಗಾಂಧೀಜಿಯವರ ದರ್ಶನ, ಪರಿಚಯಗಳಿಂದ ಸ್ಫೂರ್ತಿಗೊಂಡ ಮೇಲೆ ರಾಜಮ್ಮನವರು ಹೆಚ್ಚು ಹೆಚ್ಚು ಗೀತೆಗಳನ್ನು, ಮುಖ್ಯವಾಗಿ ದೇಶಭಕ್ತಿ ಗೀತೆಗಳನ್ನು ರಚಿಸಲಾರಂಭಿಸಿದರು. ಅವರ ಮೊದಲ ಗೀತೆ ‘ದೇಶ ಸೇವಾ ನಿರತರಾಗೈ ಲೋಗರೇ’ ಎಂಬುದು. ಅನಂತರ ಅವರು ನೂರಾರು ಗೀತೆಗಳನ್ನು ರಚಿಸಿದರು. ೧೯೪೨ರ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಚಳುವಳಿಯ ಸಂದರ್ಭದಲ್ಲಿ ರಚಿತವಾದ ‘ರಾಷ್ಟ್ರಶಕ್ತಿಯ ವಿರಾಡ್ರೂಪಧಾರೀ ನಮೋ’, ಉಪ್ಪಿನ ಸತ್ಯಾಗ್ರಹಕ್ಕೆ ಸಂಬಂಧಪಟ್ಟ ‘ಸತ್ಯ ಸಂಗ್ರಾಮ ರಂಗಕೆ ಬನ್ನಿ’, ದೇಶಸ್ವತಂತ್ರವಾದ ಬೆಳಗ್ಗೆ ರಚಿಸಿದ ‘ನಿದ್ದೆತಿಳಿದೆಚ್ಚರು’ ಮುಂತಾದವು ಪ್ರಸಿದ್ಧವಾದ ಹಾಡುಗಳು. ‘ಜೈ ಭಾರತ ಭುವಿಗೇ ಮಾತೆಗೆ’ ಎನ್ನುವ ಹಾಡು ಆ ದಿನಗಳಲ್ಲಿ ಶಾಲೆಯ ಪ್ರಾರ್ಥನಾ ಗೀತೆಯಾಗಿ ವಿದಾರ್ಥಿಗಳ ಬಾಯಲ್ಲಿ ನಲಿಯುತ್ತಿತ್ತು. ಇವಲ್ಲದೆ ಗಾಂಧೀಜಿಯವರಿಗೆ ಅತಿ ಪ್ರಿಯವಾಗಿದ್ದ ‘ವೈಷ್ಣವ ಜನತೋ ತೇನೆ ಕಹಿಯೇ’ ಎಂಬ ಹಾಡನ್ನು ‘ವೈಷ್ಣವನವನೇ ನಿಜವೀ ಜಗದಿ’ ಎಂದು ಕನ್ನಡಕ್ಕೆ ಅನುವಾದಿಸಿ ಅದನ್ನು ಗಾಂಧೀಜಿಯವರ ಮುಂದೆ ಹಾಡಿ ಅವರಿಂದಲೇ ಮೆಚ್ಚುಗೆಯನ್ನು ಪಡೆದಿದ್ದರು ರಾಜಮ್ಮನವರು. ಸ್ವತಃ ಸಂಗೀತಗಾರ್ತಿಯಾಗಿದ್ದರಿಂದ ಹಾಡಿಗನುಕೂಲವಾದ ಶಬ್ದಗಳನ್ನು ಜೋಡಿಸಿ, ಭಾವಕ್ಕೆ ತಕ್ಕ ರಾಗವನ್ನು ಜೋಡಿಸಿ ಸುಂದರವಾದ ಗೀತೆಗಳನ್ನು ರಚಿಸುವುದು ರಾಜಮ್ಮನವರಿಗೆ ಸುಲಭವಾಗಿತ್ತು. ‘ರಾಷ್ಟ್ರಭಕ್ತಿ’, ‘ರಾಷ್ಟ್ರಶಕ್ತಿ’ ಎಂಬ ಎರಡು ಕವನ ಸಂಕಲನಗಳಲ್ಲಿ ರಾಜಮ್ಮನವರ ಸುಮಾರು ನೂರು ಹಾಡುಗಳು ಸಂಗ್ರಹಿತವಾಗಿವೆ. ಜೊತೆಗೆ ‘ಜ್ವಾಲಾಮುಖಿ’ ಮತ್ತು ‘ವೇದನ ನಿವೇದನ’ ಎಂಬ ನೀಳ್ಗವನಗಳನ್ನೂ ಇವರು ರಚಿಸಿದ್ದಾರೆ.

‘ಆರ್ಯ ಕೈಲಾಸಂ’ ಮತ್ತು ‘ವೀಣೆ ಶೇಷಣ್ಣ’ ಭಾರತಿಯವರು ರಚಿಸಿದ ಎರಡು ಜೀವನ ಚಿತ್ರಗಳು. ಈ ಇಬ್ಬರು ಮಹನೀಯರು ರಾಜಮ್ಮನವರಿಗೆ ಆತ್ಮೀಯರಾಗಿದ್ದವರು. ವೀಣೆ ಶೇಷಣ್ಣನವರು ಅವರ ಗುರುಗಳು. ಶೇಷಣ್ಣನವರ ಬಗ್ಗೆ ಜೊತೆಗೆ ಅವರು ಪಾಠ ಕಲಿಸುತ್ತಿದ್ದ ರೀತಿಯ ಬಗ್ಗೆ ರಾಜಮ್ಮನವರು ವರ್ಣಿಸಿದ್ದಾರೆ. ಕೈಲಾಸಂ ಭಾರತಿಯವರ ಕುಟುಂಬಕ್ಕೆ ಆತ್ಮೀಯ ಬಂಧುವಿನಂತಿದ್ದರು. ರಾಜಮ್ಮನವರು ಕೈಲಾಸಂ ಅವರಲ್ಲಿ ಅಣ್ಣನನ್ನು ಕಂಡುಕೊಂಡವರು. ಅವರಿಗೆ ಕೈಲಾಸಂ ಅಂದರೆ ಅಪಾರ ಅಭಿಮಾನ. ಬಾಹ್ಯಚರ್ಯೆಯಲ್ಲಿ ಅವರು ಹೇಗಾದರೂ ಇರಲಿ ಅಂತರಂಗದ ನೈರ್ಮಲ್ಯದ ಕಡೆ ಗಮನಹರಿಸಿದರೆ ಕೈಲಾಸಂ ಋಷಿಗಳ ಪರಂಪರೆಯಲ್ಲಿ ಬಂದವರು ಎನ್ನುತ್ತಾರೆ ರಾಜಮ್ಮನವರು. ಅದಕ್ಕೆ ಕೈಲಾಸಂ ‘ಆರ್ಯ’ ಎನ್ನುವ ಗೌರವಕ್ಕೆ ಪಾತ್ರರು.

ಭಾರತಿಯವರಿಗೆ ವಿಶೇಷವಾಗಿ ಕೀರ್ತಿಯನ್ನು ತಂದುಕೊಟ್ಟಿದ್ದು ಅವರ ನಾಟಕಗಳು. ಅವೇ ‘ತಪಸ್ವಿನಿ’, ‘ಮಹಾಸತಿ’ ಮತ್ತು ‘ವಾತಲ್ಯ ತರಂಗ ಲೀಲಾ’. ಈ ಮೂರು ನಾಟಕಗಳು ‘ಭಾರತೀರೂಪಕತ್ರಯೀ’ ಎನ್ನಿಸಿಕೊಂಡಿವೆ. ೧೯೩೧ರಲ್ಲಿ ‘ತಪಸ್ವಿನಿ’ ನಾಟಕ ಪುಸ್ತಕರೂಪದಲ್ಲಿ ಪ್ರಕಟವಾಯಿತು. ಲಕ್ಷ್ಮಣ ಶ್ರೀರಾಮ ಸೀತೆಯರೊಂದಿಗೆ ವನವಾಸಕ್ಕೆ ಹೋದಾಗ ಆಗ ಅಯೋಧ್ಯೆಯಲ್ಲಿಯೇ ಉಳಿದಿದ್ದ ಊರ್ಮಿಳೆ ಏನು ಮಾಡಿರಬಹುದು” ಅವಳು ತನ್ನ ಪತಿಯನ್ನೇ ನಿರೀಕ್ಷಿಸುತ್ತಾ ತಪಸ್ವಿನಿಯಾಗಿ ಕಾಲಕಳೆದಳು ಎನ್ನುತ್ತಾರೆ ರಾಜಮ್ಮನವರು. ಇದೇ ವಸ್ತುವನ್ನೊಳಗೊಂಡಿದೆ ಅವರ ಈ ನಾಟಕ. ಬಿಡಿ ವೃತ್ತವನ್ನು ಉಪಯೋಗಿಸಿ ಈ ಕಾವ್ಯವನ್ನು ರಚಿಸಲಾಗಿದೆ. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರುವ ಮಾಸ್ತಿ ಅವರು ಭಾರತಿಯವರ ಕಾವ್ಯದೃಷ್ಟಿ ಮತ್ತು ಕಾವ್ಯಶಕ್ತಿಗಳನ್ನು ಕೊಂಡಾಡಿದ್ದಾರೆ, ‘ತಪಸ್ವಿನಿ’ ನಾಟಕಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಬಹುಮಾನವೂ ದೊರೆಯಿತು.

ತಿ. ತಾ. ಶರ್ಮರು ಪುರಾತನ ಶಾಸನಗಳ ಅನ್ವೇಷಣೆ, ಅಧ್ಯಯನ, ಸಂಶೋಧನೆ ನಡೆಸುವ ಪ್ರಾಚೀನ ಸಂಶೋಧನಾ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಜೊತೆಯಲ್ಲಿ ಇತಿಹಾಸ ಹಾಗೂ ಪುರಾಣ ಪ್ರಸಿದ್ಧವಾದ ಊರುಗಳಲ್ಲಿ ಸುತ್ತುವ, ಅಲ್ಲಿನ ಸ್ಥಳ ಮಹಿಮೆಯನ್ನು ತಿಳಿಸುವ ಶಾಸನಗಳನ್ನು ಕಾಣುವ ಅವಕಾಶ ರಾಜಮ್ಮನವರಿಗೆ ಒದಗಿತು. ಇದರ ಫಲವಾಗಿ ಮೂಡಿಬಂದ ನಾಟಕ ‘ಮಹಾಸತಿ’. ಚೋಳರಾಜನ ಅಧೀನದಲ್ಲಿ ನವಿಲನಾಡಿನೊಡೆಯ ಏಚನ ಹೆಂಡತಿ ದೇಕಬ್ಬೆ (ನುಗು ನಾಡಿನ ಅರಸುಕುವರಿ) ಇಲ್ಲಿನ ಮಹಾಸತಿ. ರಾಜನ ಆಜ್ಞೆಯನ್ನುಉಲ್ಲಂಘಿಸಿ ಏಚನು ಮಲ್ಲಯುದ್ಧದಲ್ಲಿ ತನ್ನ ದಾಯಾದಿ ಎರೆಯಂಗನನ್ನು ಕೊಲ್ಲಲು, ರಾಜ ಸಿಟ್ಟಿಗೆದ್ದು ಏಚನಿಗೆ ಮರಣದಂಡನೆ ವಿಧಿಸುತ್ತಾನೆ. ಈ ಸುದ್ಧಿಯನ್ನು ಕೇಳಿದ ದೇಕಬ್ಬೆ ಸಹಗಮನ ಮಾಡಲು ನಿಶ್ಚಯಿಸಿ ಏಚನ ದೇಹವನ್ನು ಜೊತೆಗಿಟ್ಟುಕೊಂಡು ಮಹಾವೈಭವದಿಂದ ಸಹಗಮನ ಮಾಡುತ್ತಾಳೆ. ‘ಮಹಾಸತಿ’ ರೂಪಕಕ್ಕೆ ಇದೇ ವಸ್ತು. ೧೯೫೬ರಲ್ಲಿ ಈ ನಾಟಕ ಪ್ರಕಟವಾಯಿತು. ಅಂದಿನ ಅನೇಕ ವಿದ್ವಾಂಸರಿಂದ ಈ ನಾಟಕ ಪ್ರಶಂಸೆಗಳಿಸಿತು. ಈ ನಾಟಕಕ್ಕೆ ಕನ್ನಡದ ಪ್ರಸಿದ್ಧ ಸಾಹಿತಿ ಪ್ರೊ. ವಿ. ಸೀತಾರಾಮಯ್ಯನವರು ಮುನ್ನುಡಿ ಬರೆದಿದ್ದಾರೆ.

ಭಾರತೀ ರೂಪಕತ್ರಯಿಯಲ್ಲಿನ ಮೂರನೆಯ ರೂಪಕ ‘ವಾತ್ಸಲ್ಯ ತರಂಗ ಲೀಲಾ’. ಈ ನಾಟಕವನ್ನು ಭಾರತಿಯವರು ತಮ್ಮ ಇಳಿ ವಯಸ್ಸಿನಲ್ಲಿ ರಚಿಸಿದರು. ಕಾಳಿದಾಸ ಮಹಾಕವಿಯ ಶಾಕುಂತಲ ನಾಟಕದ ಹಿನ್ನಲೆಯಲ್ಲಿ ಈ ರೂಪಕ ರಚಿತವಾಗಿದೆ. ಮೇನಕೆ ವಿಶ್ವಾಮಿತ್ರನಿಂದ ಹೆಣ್ಣುಮಗುವನ್ನು ಪಡೆಯುತ್ತಾಳೆ. ದೇವಕಾರ್ಯ ಮುಗಿದಿದ್ದರಿಂದ ದೇವಲೋಕಕ್ಕೆ ಹಿಂತಿರುಗುವಂತೆ ದೇವೇಂದ್ರ ಮೇನಕೆಗೆ ನಿರೂಪ ಕಳುಹಿಸುತ್ತಾನೆ. ಮಗುವನ್ನು ಬಿಟ್ಟು ಹೋಗಲಾರದೆ ಮೇನಕೆ ತೊಳಲಾಡುತ್ತಾಳೆ. ಕೊನೆಗೆ ಬಿಟ್ಟು ಹೋಗಲೇಬೇಕಾಗುತ್ತದೆ. ಮೇನಕೆಯ ಮನಸ್ಸಿನ ತೊಳಲಾಟವನ್ನು ಭಾರತಿಯವರು ತುಂಬಾ ಮನೋಜ್ಞವಾಗಿ ಚಿತ್ರಿಸಿದ್ದಾರೆ. ದೇವಗಣಿಕೆಯಾದರೇನು? ತಾಯಿ ತಾಯಿಯೇ! ಪ್ರಬಲವಾದ ಶಕ್ತಿಗೆ ಮಣಿದು ತಾನು ಹೆತ್ತ ಮಗುವನ್ನು ಬಿಟ್ಟು ಹೊರಡುವಾಗ ಆ ತಾಯಿ ಕೊರಗದಿರುವುದು ಸಾಧ್ಯವೇ? ಈ ಭಾವನೆಯೇ ಈ ರೂಪಕಕ್ಕೆ ಪ್ರೇರಣೆ. ಈ ಭಾವನೆಯಿಂದಾಗಿ ಮೇನಕಾ ಪ್ರಸಂಗಕ್ಕೆ ಒಂದು ಹೊಸ ತಿರುವು ಬಂದಿದೆ.

ಭಾರತಿಯವರು ಆಗಾಗ ರಚಿಸಿದ ಲೇಖನಗಳು ತಮ್ಮದೇ ಆದ ವೈಶಿಷ್ಟ್ಯದಿಂದ ಇಂದಿಗೂ ಸ್ಪೂರ್ತಿದಾಯಕವಾಗಿವೆ. ‘ಮರೆಯಲಾಗದ ಬಾಪೂ’ವಿನಲ್ಲಿ ಗಾಂಧೀಜಿಯವರ ಬಗ್ಗೆ ಭಕ್ತಿ, ಅಭಿಮಾನ ತುಂಬಿದ ಬರಹ ತುಂಬಿದ್ದರೆ, ವಾಸುದೇವಾಚಾರ್ಯರ ‘ನೆನಪುಗಳು’, ಪು.ತಿ.ನ ಅವರ ಕೃತಿ ‘ಅಹಲ್ಯೆ’, ಗೀತಕಾರ ಜಯದೇವ ಇಂತಹ ಲೇಖನಗಳಲ್ಲಿ ಸಹೃದಯ ವಿಮರ್ಶೆ ಇದೆ. ಅವರ ‘ಸ್ತ್ರೀ ವಿದ್ಯಾಭ್ಯಾಸ’, ‘ಶ್ರೀರಾಮನ ಪತ್ನೀ ಪ್ರೇಮ’ ಇಂತಹ ಲೇಖನದಲ್ಲಿ ಭಾರತಿಯವರ ಪ್ರಗತಿಪರ ಧೋರಣೆಯನ್ನು ಗುರುತಿಸಬಹುದಾಗಿದೆ. ಸಂಗೀತಕ್ಕೆ ಸಂಬಂಧಿಸಿದ ‘ಸಂಗೀತ ಸ್ವರೂಪ’ ಮುಂತಾದ ಲೇಖನಗಳಲ್ಲಿ ಸಂಗೀತದ ಬಗ್ಗೆ ಅವರಿಗಿರುವ ಆಳವಾದ ಜ್ಞಾನ ಗೋಚರವಾಗುತ್ತದೆ.

ಸಮಕಾಲೀನರಿಂದ ಗೌರವ[ಬದಲಾಯಿಸಿ]

ಭಾರತಿ ಅವರು ತಮ್ಮ ಸಮಕಾಲೀನ ಸಾಹಿತಿಗಳಿಂದ, ಸಂಗೀತಗಾರರಿಂದ ಆದರ, ಗೌರವಗಳನ್ನು ಪಡೆದಿದ್ದವರು. ಇದಕ್ಕೆ ಡಾ. ದ. ರಾ ಬೇಂದ್ರೆಯವರ ಒಂದು ಕವನವನ್ನೇ ಸಾಕ್ಷಿಯಾಗಿ ಉದಾಹರಿಸಬಹುದು.

ಭಾವಕ್ಕೆ ತಕ್ಕ ತಾಳವೂ ರಾಗವೂ ಉಂಟು

ಭಾರತದ ಏಳಿಗೆಗೆ ಯಾವುದೋ ಕೃತಕೃತ್ಯ

‘ಭಾರತಿ’ಯ ಬಾಳುವೆಗೆ ಆ ನಡಿಗೆಯ ನೃತ್ಯ

ಸಾಹಿತ್ಯ ಸಂಗೀತ ಸಹಜವಾಗಿದೆ ನಂಟು

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ರಾಜಮ್ಮನವರು ೧೯೪೩ರಲ್ಲಿ ಶಿವಮೊಗ್ಗೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾಗೋಷ್ಠಿಯ ಅಧ್ಯಕ್ಷೆಯಾಗಿದ್ದರು. ಆಗ ಅವರು ಮಾಡಿದ ಭಾಷಣ ವಿದ್ವತ್ಪೂರ್ಣವೂ, ವಿಚಾರಯುಕ್ತವೂ ಆಗಿದ್ದು ಗಣ್ಯರ ಮೆಚ್ಚುಗೆ ಗಳಿಸಿತು. ೧೯೬೮ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ರಾಜಮ್ಮನವರಿಗೆ ದೊರೆಯಿತು. ೧೯೭೨ರ ನವೆಂಬರ್ ೧೯ರಂದು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಅಧ್ಯಕ್ಷತೆಯಲ್ಲಿ ಇಡೀ ಕನ್ನಡ ನಾಡು ಅವರನ್ನು ವೈಭವದಿಂದ ಸನ್ಮಾನಿಸಿ ‘ಭಾರತಿ’ ಅಭಿನಂದನ ಗ್ರಂಥವನ್ನು ಸಮರ್ಪಿಸಿತು.

ತ್ರಿವೇಣಿ ಸಂಗಮ[ಬದಲಾಯಿಸಿ]

ರಾಜಮ್ಮನವರು ಸಾಹಿತ್ಯ, ಸಂಗೀತ, ದೇಶಭಾಕ್ತಿಗಳ ತ್ರಿವೇಣಿ ಸಂಗಮ. ‘ಭಾರತೀ’ ಕಾವ್ಯನಾಮ ಇವರಿಗೆ ಅನ್ವರ್ಥವಾಗಿದೆ ಎಂಬುದು ಎಲ್ಲ ವಿದ್ವಾಂಸರ ಅಭಿಪ್ರಾಯವಾಗಿತ್ತು.

ವಿದಾಯ[ಬದಲಾಯಿಸಿ]

ರಾಜಮ್ಮನವರು ೧೯೮೪ರ ಸೆಪ್ಟೆಂಬರ್ ೨೪ರಂದು ಈ ಲೋಕವನ್ನಗಲಿದರು.

ಕೃತಿಗಳು[ಬದಲಾಯಿಸಿ]

ನಾಟಕಗಳು[ಬದಲಾಯಿಸಿ]

 • ತಪಸ್ವಿನಿ
 • ವಾತ್ಸಲ್ಯ ತರಂಗಲೀಲಾ
 • ಮಹಾಸತಿ
 • ಸುಖಮಾರ್ಗ
 • ದೃಢಪ್ರತಿಜ್ಞೆ
 • ಕೈಲಾಸಂ ರವರ ಟೊಳ್ಳುಗಟ್ಟಿ
 • ಸ್ವರ್ಗ ನಿರಸನ
 • ಉನ್ಮತ್ತ ಭಾಮಿನಿ
 • ದುಂದುಭಿ
 • ಅಂತರ್ಜ್ಯೋತಿ

ಜೀವನ ಚರಿತ್ರೆ[ಬದಲಾಯಿಸಿ]

 • ಆರ್ಯ ಕೈಲಾಸಂ
 • ವೈಣಿಕ ಶಿಖಾಮಣಿ ಶೇಷಣ್ಣ

ದೇಶಭಕ್ತಿಗೀತೆಗಳು[ಬದಲಾಯಿಸಿ]

 • ರಾಷ್ಟ್ರಶಕ್ತಿ
 • ರಾಷ್ಟ್ರಭಕ್ತಿ

ಆಕರ[ಬದಲಾಯಿಸಿ]

 1. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಕಟಣೆಯಾದ ಸಾಲು ದೀಪಗಳು ಕೃತಿಯಲ್ಲಿ ಎಚ್. ಎಸ್ ಪಾರ್ವತಿ ಅವರ ‘ತಿರುಮಲೆ ರಾಜಮ್ಮ’ ಕುರಿತ ಲೇಖನ