ತಡಸಲು
ತಡಸಲು ಟೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ವನ್ಯವೃಕ್ಷ. ಗ್ರೀವಿಯ ಟೀಲಿಯಿಪೋಲಿಯ ಇದರ ವೈಜ್ಞಾನಿಕ ಹೆಸರು. ಹಿಮಾಲಯದ ತಪ್ಪಲಿನಲ್ಲೂ ಮಧ್ಯ ಪಶ್ಚಿಮ ಮತ್ತು ದಕ್ಷಿಣ ಭಾರತಗಳಲ್ಲೂ ಪರ್ಣಪಾತಿ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಮಧ್ಯಮ ಗಾತ್ರದಿಂದ ದೊಡ್ಡ ಗಾತ್ರದವರೆಗೆ ಬೆಳೆಯುವ ಈ ಮರ ಕಣಿವೆಗಳಲ್ಲೂ ದಕ್ಷಿಣ ಭಾರತದ ಬೆಟ್ಟಗಳ ಇಳಿಜಾರುಗಳಲ್ಲೂ ತುಂಬ ಹುಲುಸಾಗಿ ಬೆಳೆಯುತ್ತದೆ. ಇಂಥ ಪ್ರದೇಶಗಳಲ್ಲಿ ಇದರ ಮುಖ್ಯ ಕಾಂಡದ ಸುತ್ತಳತೆ ಸುಮಾರು 7 ಇರುವುದು ಕಾಂಡದ ಬಣ್ಣ ಬೂದಿ ಅಥವಾ ಕಡುಗಂದು. ಎಲೆಗಳು ಸರಳ ರೀತಿಯವು. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳ ಆಕಾರ ಅಂಡದಂತೆ: ಅಂಚುದಂತಿತ. ಹೂಗಳು ಚಿಕ್ಕವು. ಎಲೆಗಳ ಕಂಕುಳಲ್ಲಿ ಗುತ್ತವಾದ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಕಾಯಿ ಅಷ್ಟಿಫಲ ಮಾದರಿಯದು: ಬಟಾಣಿ ಕಾಳಿನ ಗಾತ್ರಕ್ಕಿದೆ. ಇದರ ಬಣ್ಣ ಕಪ್ಪು. ಕಾಯಿ ತಿನ್ನಲು ಯೋಗ್ಯ. ತಡಸಲು ಮರದ ಚೌಬೀನೆ ಬಲುಗಟ್ಟಿ, ನಯ, ಭಾರ ಹಾಗೂ ನೇರಕಣಗಳೂಳ್ಳದ್ದು. ಇದಕ್ಕೆ ಹೊಸತೊಗಲಿನ ವಾಸನೆಯುಂಟು. ಇದನ್ನು ಸುಲಭವಾಗಿ ಸಂಸ್ಕರಿಸಬಹದು, ಕೊಯ್ಯಬಹುದು ಮತ್ತು ಮೆರುಗು ಕೊಡಬಹುದು, ಅಲ್ಲದೆ ಇದು ಬಹಳ ಕಾಲ ಬಾಳಿಕೆ ಬರುವಂಥದ್ದು ಇದರಿಂದಾಗಿ ಚೌಬೀನೆಯನ್ನು ಹಲವಾರು ಕೆಲಸಗಳಿಗೆ ಬಳಸುವರು. ತೊಲೆ ಕಂಬ, ಕೂವೆಕಂಬ, ದೋಣಿಯ ಹುಟ್ಟು, ಉಪಕರಣಗಳ ಹಿಡಿ, ಕೃಷಿ ಉಪಕರಣಗಳೂ, ಮೀನಿನಗಾಳ, ಲಾಳಿ, ಪುಟ್ಟಿಮರ (ನೇಮಿ) ಬಾಬಿನ್, ಗಾಲ್ಫಕ್ಲಬ್ಬು, ಬಿಲಿಯರ್ಡ್ ಕ್ಯೂಗಳನ್ನು ತಯಾರಿಸಲು ಈ ಮರವನ್ನು ಉಪಯೋಗಿಸುತ್ತಾರೆ. ಅಲ್ಲದೆ ತಡಸಲಿನ ತೊಗಟೆಯಿಂದ ನಾರನ್ನು ಪಡೆಯುವುದುಂಟು. ತಡಸಲಿನ ಎಲೆಗಳನ್ನು ದನಕರುಗಳ ಮೇವಾಗಿ ಉಪಯೋಗಿಸುತ್ತಾರೆ. ತೊಗಟೆಗೆ ಔಷಧೀಯ ಗುಣಗಳೂ ಉಂಟು. ಇದನ್ನು ಆಮಶಂಕೆಗೆ ಮದ್ದಾಗಿ ಬಳಸುವರು.