ಡ್ಯಾನ್ಯೆಲ್ ಜೋನ್ಸ್
ಡ್ಯಾನ್ಯೆಲ್ ಜೋನ್ಸ್ (1881-1968). ಇಂಗ್ಲಿಷ್ ಧ್ವನಿವಿಜ್ಞಾನಿ.
ಬದುಕು ಮತ್ತು ಸಾಧನೆ
[ಬದಲಾಯಿಸಿ]ಲಂಡನಿನಲ್ಲಿ ಹುಟ್ಟಿದ ಈತ ರಾಡ್ಲೆ ಮತ್ತು ಕೇಂಬ್ರಿಜ್‍ಗಳಲ್ಲಿ ಕಾಲೇಜು ಶಿಕ್ಷಣ ಪಡೆದ. ನ್ಯಾಯಶಾಸ್ತ್ರವನ್ನು ಓದಿದ ಈತ 1907ರಲ್ಲಿ ವಕೀಲರ ಸಂಘಕ್ಕೆ ಸೇರಿದ. ಅದೇ ವರ್ಷ ಲಂಡನ್ನಿನ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಧ್ವನಿವಿಜ್ಞಾನದ ಅಧ್ಯಾಪಕನಾದ. 1921ರಲ್ಲಿ ಅಲ್ಲಿಯೇ ಪ್ರಾಧ್ಯಾಪಕನಾದ. ಅನಂತರ ಪ್ರಪಂಚದ ಅನೇಕ ದೇಶಗಳನ್ನು ಸುತ್ತಿ ಧ್ವನಿವಿಜ್ಞಾನದ ಬಗ್ಗೆ ಉಪನ್ಯಾಸಗಳನ್ನು ನೀಡಿದ. 1927ರಿಂದ 1949ರ ವರೆಗೆ ಅಂತರರಾಷ್ಟ್ರೀಯ ಧ್ವನಿವಿಜ್ಞಾನ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ. ಈತ ಹಲವಾರು ಉಪಯುಕ್ತ ಗ್ರಂಥಗಳನ್ನೂ ಲೇಖನಗಳನ್ನೂ ಬರೆದಿದ್ದಾನೆ. ಅವುಗಳಲ್ಲಿ ಎನ್ ಔಟ್ ಲೈನ್ ಆಫ್ ಇಂಗ್ಲಿಷ್ ಫೋನೆಟಿಕ್ಸ್ (1916); ಇಂಗ್ಲಿಷ್ ಪ್ರೊನೌನ್ಸಿಂಗ್ ಡಿಕ್ಷನರಿ (1971); ದಿ ಫೋನೀಮ್, ಇಟ್ಸ್ ನೇಚರ್ ಅಂಡ್ ಯೂಸ್ (1950)-ಇವು ಪ್ರಸಿದ್ಧವಾದವು. ಈತನ ಕೆಲವು ಪುಸ್ತಕಗಳು ಹಲವಾರು ಪರಿಷ್ಕೃತ ಮುದ್ರಣಗಳನ್ನು ಕಂಡಿವೆ.
ಭಾಷಾ ವಿಜ್ಞಾನ 1930ರಿಂದ ಈಚೆಗೆ ಇಂಗ್ಲೆಂಡಿನ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಿಷಯವಾಗಿ ಬರಲು ಕಾರಣಕರ್ತರಾದವರಲ್ಲಿ ಈತನೂ ಒಬ್ಬ ಎನ್ನಲಾಗಿದೆ. ಈತನನ್ನು ಜೂರಿಕ್ ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿಯನ್ನೂ ಎಡಿನ್‍ಬರೋ ವಿಶ್ವವಿದ್ಯಾಲಯ ಎಲ್.ಎಲ್.ಡಿ. ಪದವಿಯನ್ನೂ ಕೊಟ್ಟು ಗೌರವಿಸಿವೆ.