ವಿಷಯಕ್ಕೆ ಹೋಗು

ಡೇವಿಡ್ ರಿಕಾರ್ಡೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೇವಿಡ್ ರಿಕಾರ್ಡೋ ( 1772-1823)

ಆಡಂ ಸ್ಮಿತ್ ನಿಂದ ಸ್ಥಾಪಿಸಲ್ಪಟ್ಟ ಸಂಪ್ರದಾಯ ಪಂಥದ ಧುರೀಣನೆನಿಸಿಕೊಂಡ ಡೇವಿಡ್ ರಿಕಾರ್ಡೋ ಆರ್ಥಿಕ ಚಿಂತನೆಯ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ವ್ಯಕ್ತಿ ಎನಿಸಿದ್ದಾನೆ. ಆಡಂ ಸ್ಮಿತ್ ನಿಂದ ಆರಂಭವಾದ ಕಾರ್ಯವನ್ನು ಸಾಧ್ಯಾವಿರುವಷ್ಟು ಮುಂದುವರಿಸಿದ ರಿಕಾರ್ಡೋ ಸಂಪ್ರದಾಯ ಪಂಥದ ಆಧಾರ ಸ್ತಂಭ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ. "ಇಂಗ್ಲೀಷ್ ರಾಜಕೀಯಾರ್ಥ ಶಾಸ್ತ್ರವು ಆತನ ಕೈಗಳಲ್ಲಿ ಅಂತಿಮ ಮತ್ತು ಸಂಪೂರ್ಣ ರೂಪವನ್ನು ಪಡೆಯಿತು." ಎಂದು ರಿಕಾರ್ಡೋನ ಸಾಧನೆಗಳ ಬಗ್ಗೆ ಅರ್ಥಶಾಸ್ತ್ರಜ್ನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆತನ ಹೆಸರಿನ ಸುತ್ತ ಹೆಣೆದು ಕೊಂಡಿದ್ದ ವಾದ ವಿವಾದಗಳಾಗಲಿ, ಆತನ ಸಿದ್ಧಾಂತಗಳಿಗೆ ಸಾರ್ವಕಾಲಿಕತೆ. ಇಲ್ಲದಿರುವ ವಾಸ್ತವವಾಗಲಿ, ಆತನಿಗೆ ಮಹಾನ್ ಅರ್ಥಶಾಸ್ತ್ರಜ್ನ ಎಂಬ ಹೆಸರು ಬರುವುದ್ದನ್ನು ತಪ್ಪಿಸಲ್ಲಿಲ್ಲ. ಆತನ ಕಾಲದ ಚಿಂತಕರಲ್ಲಿ ರಿಕಾರ್ಡೂ ಅಗ್ರಗಣ್ಯನೆನಿಸಲು ಅವನ ಸ್ವಚ್ಛವಾದ ಯೋಚನಾ ಸರಣಿ, ತರ್ಕಬದ್ಧ ನಿಲುವು ಮತ್ತು ಅಪ್ರತಿಮ ಬುದ್ಧಿ ಶಕ್ತಿಗಳು ಕಾರಣವಾಗಿವೆ. ಕಾರ್ಲ್ ಮಾರ್ಕ್ಸ್ ನ ಚಿಂತನೆಗಳಿಗೆ ಆತನ ತತ್ವಗಳು ಪ್ರೇರಣೆಯಾಗಿದ್ದವು ಎನ್ನುವುದು ರಿಕಾರ್ಡೊನ ಚಿಂತನೆಯ ಶ್ರೇಷ್ಟತೆಯನ್ನು ತೋರಿಸುತ್ತದೆ.

ಡೇವಿಡ್ ರಿಕಾರ್ಡೋ

ಬದುಕು ಮತ್ತು ಬರಹಗಳು

[ಬದಲಾಯಿಸಿ]

ಆಬ್ರಹಾಂ ರಿಕಾರ್ಡೊ ಎಂಬ ಹಾಲೆಂಡಿನ ಯೆಹೂದಿ ವಲೆಸೆಗರನ ಹದಿನೇಳು ಮಂದಿ ಮಕ್ಕಳಲ್ಲಿ ಮೂರನೆಯವನಾಗಿ ೧೭೭೨ರಲ್ಲಿ ಡೇವಿಡ್ ರಿಕಾರ್ಡೋ ಲಂಡನ್ನಿನಲ್ಲಿ ಜನಿಸಿದ. ಅಬ್ರಹಾಂ ರಿಕರ್ಡೋ ಶೇರು ಪತ್ರ ಮತ್ತು ಹುಂಡಿಗಳ ದಲ್ಲಾಳಿಯಾಗಿದ್ದು ಸಾಕಷ್ಟು ಹಣ ಸಂಪಾದಿಸಿದ್ದ. ವ್ಯವಹಾರಗಳಲ್ಲಿ ಮಹಾ ಚಾಣಾಕ್ಷನಾಗಿದ್ದ. ಆಬ್ರಹಾಂ ರಿಕರ್ಡೋ ತೀರಾ ಸಂಪ್ರದಾಯವಾದಿಯೂ, ಮಡಿವಂತನೂ ಆಗಿದ್ದು,ತನ್ನ ಹಾದಿಯಲ್ಲೇ ಮಗನ ಜೀವನ ಮುಂದುವರಿಯಬೇಕೆಂಬ ಹಠವಾದಿಯೂ ಆಗಿದ್ದ, ಆದುದರಿಂದ ಹನ್ನೆರಡು ವರ್ಷಕ್ಕೆ ಡೇವಿಡ್ ರಿಕಾರ್ಡೋನ ವಿದ್ಯಾಭ್ಯಾಸ ಮೊಟಕುಗೊಂಡಿತು. ೧೭೮೪ ರಲ್ಲಿ ಆತನನ್ನು ವಾಣಿಜ್ಯ ಶಿಕ್ಷಣ ಕಲಿಕೆಗಾಗಿ ಹಾಲೆಂಡಿಗೆ ಕಳುಹಿಸಲಾಯಿತು. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ವಾಣಿಜ್ಯ ಜಗತ್ತನ್ನು ಪ್ರವೇಶಿಸಿದ ರಿಕಾರ್ಡೊ ಕೆಲವೇ ವರ್ಷಗಳಲ್ಲಿ ಒರ್ವ ತಜ್ಞ ಉದ್ಯಮಿಯಾದ. ತನ್ನ ಪ್ರಚಂಡ ವಾಣಿಜ್ಯ ಬುದ್ಧಿಯಿಂದ ದೊಡ್ಡ ಮೊತ್ತದ ಸಂಪತ್ತಿನ ಒಡೆಯನಾದ. ೧೮೧೯ ರಲ್ಲಿ ಹೌಸ್ ಆಫ್ ಕಾಮನ್ಸ್ ನ ಸದಸ್ಯನಾಗಿ ಆಯ್ಕೆಯಾದ.

   ೧೭೯೯ ರಲ್ಲಿ ರಿಕಾರ್ಡೋ, ಆಡಂ ಸ್ಮಿತ್ ನ wealth of nations ಗ್ರಂಥವನ್ನು ಓದಿದ. ಆ ಗ್ರಂಥವು ರಿಕಾರ್ಡೋವಿನ ಮೇಲೆ ಅಸದಳ ಪ್ರಭಾವಬೀರಿತು.ಬೆಂಥಾಮ್, ಜೆ.ಎಸ್. ಮಿಲ್ ರಿಂದ ಪ್ರಭಾವಿತನಾಗಿದ್ದ. ರಿಕಾರ್ಡೋವಿನ ಮಹಾನ್ ಕೃತಿ The Principles of Political Economy and Taxation, ೧೮೧೭ ರಲ್ಲಿ ಪ್ರಕಟವಾಗುವುದರೊಂದಿಗೆ ಆರ್ಥ ಚಿಂತನೆಯ ಇತಿಹಾಸದಲ್ಲಿ ಹೊಸತೊಂದು ಆಧ್ಯಾಯ ಆರಂಭವಾಯಿತು. ರಿಕಾರ್ಡೊ ಈಗ ಅರ್ಥಶಾಸ್ತ್ರಜ್ಞನಾಗಿ ಆಕರ್ಷಣೆಯ ಕೇಂದ್ರಬಿಂದುವೆನಿಸಿದ.
ಡೇವಿಡ್ ರಿಕಾರ್ಡೋ

ರಿಕಾರ್ಡೋನ ಆರ್ಥಿಕ ಅಭಿಪ್ರಾಯಗಳು

[ಬದಲಾಯಿಸಿ]

೧- ಮೌಲ್ಯತತ್ವ, ೨- ವಿತರಣಾತತ್ವ, ೩- ಆರ್ಥಿಕಾಭಿವೃದ್ಧಿಯ ತತ್ವ, ೪- ಹಣ ಮತ್ತು ಬ್ಯಾಂಕಿಂಗ್ ತತ್ವ ೫- ಅಂತರಾಷ್ಟ್ರೀಯ ವ್ಯಾಪಾರತತ್ವ ೬- ತೆರಿಗೆಯ ತತ್ವ ೭- ಯಂತ್ರಗಳ ಬಳಕೆಯ ಬಗೆಗಿನ ಅಭಿಪ್ರಾಯ

ಮೌಲ್ಯ ತತ್ವ

[ಬದಲಾಯಿಸಿ]

ಆಡಂ ಸ್ಮಿತ್ತನ ಹೆಜ್ಜೆಗಳನ್ನೇ ತನ್ನ ಮೌಲ್ಯತತ್ವದ ಬೆಳವಣಿಗೆಗೆ ಅನುಸರಿಸಿದ ರಿಕಾರ್ಡೊ ಸ್ಮಿತ್ತನದಕ್ಕಿಂತ ಉತ್ತಮವಾದ ತತ್ವವನ್ನು ಪ್ರಸ್ತುತಪಡಿಸಿದ. ರಿಕಾರ್ಡೋನ ಮೌಲ್ಯ ತತ್ವವು 'ಪರಿಶುದ್ಧ ತತ್ವ' ಎಂದು ಕರೆಸಿಕೊಳ್ಳುತ್ತದೆ. ಆಡಂ ಸ್ಮಿತ್ತನು ನಿರಪೇಕ್ಷ ಮೌಲ್ಯಗಳ ಬಗ್ಗೆ ವೀಕ್ಷಿಸಿದರೆ ರಿಕಾರ್ಡೋ ಸಾಪೇಕ್ಷ ಮೌಲ್ಯಗಳ ಬಗ್ಗೆ ವಿಶ್ಲೇಷಿಸುತ್ತಾನೆ. ಆರಂಭದಲ್ಲಿ ಆಡಂ ಸ್ಮಿತ್ತನಂತೆ ರಿಕಾರ್ಡೊ ಕೂಡಾ ಉಪಯೋಗದ ಮೌಲ್ಯ ಮತ್ತು ವಿನಿಮಯದ ಮೌಲ್ಯಗಳ ನಡುವೆ ವ್ಯತ್ಯಾಸ ಕಲ್ಪಿಸುತ್ತಾನೆ. ಉಪಯೋಗದ ಮೌಲ್ಯವೆಂದರೆ ವಸ್ತುಗಳಲ್ಲಿರುವ ತುಷ್ಠಿಗುಣ ಅಥವಾ ಆಸೆಗಳನ್ನು ತೃಪ್ತಿಪಡಿಸುವ ಶಕ್ತಿ. ವಿನಿಯೋಗದ ಮೌಲ್ಯವೆಂದರೆ ವಸ್ತುಗಳ ಬೆಲೆ ಅಥವಾ ಕೊಳ್ಳುವ ಶಕ್ತಿ. ವಿನಿಮಯ ಮೌಲ್ಯದ ಮಾಪನ ತುಷ್ಠಿಗುಣವಲ್ಲ. ಆದರೆಯಾವುದೇ ವಸ್ತುವಿಗೆ ತುಷ್ಠಿಗುಣ ಇಲ್ಲದೆ ಬೆಲೆ ಬರುವುದಿಲ್ಲ ಎನ್ನುವುದು ರಿಕಾರ್ಡೊವಿನ ಅಭಿಪ್ರಾಯ.

ಮೌಲ್ಯ ತತ್ವದ ವೀಕ್ಷಣೆಗಾಗಿ ರಿಕಾರ್ಡೋ ಸರಕುಗಳನ್ನು ೧ ಪುನರುತ್ಪಾದಿಸಲಾಗದ ಸರಕು ಮತ್ತು ೨. ಪುನರುತ್ಪಾದಿಸಬಹುದಾದ ಸರಕು, ಎಂದು ವರ್ಗೀಕರಿಸಿದ್ದಾನೆ.

ಅಪೂರ್ವ ಕಲಾಕೃತಿಗಳು ವಿಗ್ರಹಗಳು ಕಟ್ಟಡಗಳು ಮರಳಿ ನಿರ್ಮಿಸಲಾಗದ ಸರಕುಗಳು,ಉದಾಹರಣೆಗೆ ಗೋಮಟೇಶ್ವರ, ಪಿರಮಿಡ್, ತಾಜಮಹಲ್, ಅಜಂತಾ-ಎಲ್ಲೋರ ಗವಿಗಳ ಕಲಾಕೃತಿಗಳು, ಇತ್ಯಾದಿ. ಶ್ರಮ ಪ್ರಮಾಣದ ಆಧಿಕ್ಯದಿಂದ ಇಂತಹ ಸರಕುಗಳ ಪೂರೈಕೆಯನ್ನು ಹೆಚ್ಚಿಸಲಾಗದು. ಆದುದರಿಂದ ಇಂತಹ ಸರಕುಗಳ ಬೆಲೆಯನ್ನು ಕೊರತೆಯು ನಿರ್ಧರಿತ್ತದೆ. ನಮ್ಮ ದಿನಬಳಕೆಯ ಸರಕುಗಳೆಲ್ಲಾ ಮರಳಿ ಉತ್ಪಾದಿಸಬಹುದಾದ ಸರಕುಗಳು. ಅವುಗಳು ನಿರ್ಮಾಣಕ್ಕೆ ಆಗತ್ಯವಿರುವ ಶ್ರಮ ಪ್ರಮಾಣವು ಅವುಗಳ ಮೌಲ್ಯವನ್ನು ನಿರ್ಧರಿಸುತ್ತದೆ. ಅವುಗಳ ಮೌಲ್ಯದ ಅಸ್ತಿಭಾರವು ಶ್ರಮವೇ ಆಗಿರುತ್ತದೆ. ಏಕೆಂದರೆ ಶ್ರಮದ ಪೂರೈಕೆಯ ಹೆಚ್ಚಳದಿಂದ ಅವುಳ ಪೂರೈಕೆಯನ್ನು ಕೂಡಾ ಹೆಚ್ಚಿಸಬಹುದಾಗಿದೆ.

ಹೀಗೆ ರಿಕಾರ್ಡೊ ಒಂದು ಪರಿಶುದ್ದವಾದ ಶ್ರಮವೆಚ್ಚ ಮೌಲ್ಯ ತತ್ವವನ್ನು ನಿರೂಪಿಸಿದ.ಉತ್ಪಾದನೆಗೆ ಶ್ರಮವೊಂದೇ ಕಾರಣವಾಗಿರುವುದರಿಂದ ಶ್ರಮವು ಮೌಲ್ಯವನ್ನು ನಿರ್ಧರಿಸುತ್ತದೆ,ಎನ್ನುವುದ ಅವನ ಅಭಿಪ್ರಯವಾಗಿತ್ತು. ರಿಕಾರ್ಡೊನ ಪ್ರಕಾರ ೧] ಶ್ರಮವು ಮೌಲ್ಯದ ಅಸ್ತಿಭಾರ,ಮೂಲ ಮತ್ತು ಸಾರವಾಗಿದೆ, ೨]ಪರಿಪೂರ್ಣ ಮತ್ತು ಸಪೇಕ್ಷ ಮೌಲ್ಯಗಳಲ್ಲಿನ ವ್ಯತ್ಯಾಸಕ್ಕೆ ಶ್ರಮ ಕಾರಣವಾಗಿದೆ. ೩]ಮೌಲ್ಯದ ಅತಿ ಸಮಿಪದ ಮಾಪಕವೆಂದರೆ ಶ್ರಮವೇ, ೪] ಮೌಲ್ಯಕ್ಕೆ ಆರ್ಥಿಕ, ಸಾಮಾಜಿಕ ಮತ್ತು ನೈತಿಕ ಸಮರ್ಥನೆಯನ್ನು ಶ್ರಮವು ನೀಡುತ್ತದೆ. ೫] ಆರ್ಥಿಕ ಮೌಲ್ಯ ಮತ್ತು ತಾಂತ್ರಿಕತೆಗಳ ನಡುವೆ ಶ್ರಮವು ಸಂಬಂಧ ಕಲ್ಪಿಸುತ್ತದೆ.

ರಿಕಾರ್ಡೊನ ಮೌಲ್ಯ ತತ್ವವು ತನ್ನ ಶ್ರೇಷ್ಠತೆಯಿಂದಾಗಿ ಸ್ಮಿತ್ತ್ ನ ತತ್ವವನ್ನು ಮರೆಮಾಡಿಬಿಟ್ಟಿತು. ಸ್ಮಿತ್ತನ ಶ್ರಮ ಮೌಲ್ಯ ತತ್ವವು ಹಳೆಯ ಅರ್ಥವ್ಯವಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆಂದು ಭಾವಿಸಿದ್ದರೆ  ರಿಕಾರ್ಡೊ ತನ್ನ ತತ್ವಕ್ಕೆ ಸಾರ್ವತ್ರಿಕತೆ ಇದೆ ಎಂದಿದ್ದಾನೆ. ಆದರೂ ರಿಕಾರ್ಡೊನ ಮೌಲ್ಯತತ್ವವು ಈ ಕೆಳಗಿನ ಕಾರಣಗಳಿಂದಾಗಿ ಟೀಕೆಗೆ ಒಳಗಾಗಿದೆ.
        ಅದು ಗೊಂದಲಮಯವಾಗಿದೆ ಏಕೆಂದರೆ ಅವನ ಪ್ರಕಾರ ಶ್ರಮದ ಗುಣ ಮತ್ತು ಪ್ರಮಾಣ ವ್ಯತ್ಯಾಸಗಳು ಮಾರುಕಟ್ಟೆಯಲ್ಲಿ ಒಂದು ನಿರ್ದಿಷ್ಟ ರೀತಿಯಲ್ಲಿ ಸಂಪ್ರದಾಯದಿಂದ ನಿರ್ಣಯವಾಗುತ್ತದೆ. ಇದೊಂದು ಗೊಂದಲ ಪೂರ್ಣ ಹೇಳಿಕೆ. ಬೆಲೆಯ ಶ್ರಮದಿಂದ ನಿರ್ಣಯಿಸಲ್ಪಡುತ್ತದೆ. ಮತ್ತು ಬೆಲೆಯು ಶ್ರಮದ ಮೌಲ್ಯವನ್ನು ನಿರ್ಧರಿಸುತ್ತದೆ, ಎಂಬ ಪರಸ್ಪರ ವಿರುದ್ಧವಾದ ಎರಡು ಹೇಳಿಕೆಗಳನ್ನು ರಿಕಾರ್ಡೊನ ತತ್ವ ನೀಡುತ್ತದೆ.
     ಶ್ರಮ ಮೌಲ್ಯ ತತ್ವವನ್ನು ಪ್ರತಿಪಾದಿಸುವ ಮೂಲಕ ರಿಕಾರ್ಡೊ ಪೂರೈಕೆಗೆ ಹೆಚ್ಚು ಮಹತ್ವ ನೀಡಿ ತುಷ್ಠಿಗುಣವನ್ನು ಕಡೆಗಣಿಸುತ್ತಾನೆ.ಕೆಲವು ಸರಕುಗಳ ಉತ್ಪಾದನೆಗೆ ಬೃಹತ್ ಪ್ರಮಾಣದ ಶ್ರಮ ಬೇಕಾಗುತ್ತದಾದರೂ ಅವುಗಳ ಬೆಲೆ ಕಡಿಮೆ ಇರುತ್ತದೆ. ಹೀಗೇಕೆ ಎಂಬ ಪ್ರಶ್ನೆಗೆ ರಿಕಾರ್ಡೊನ ವಿಶ್ಲೇಷಣೆ ಉತ್ತರಿಸುವಿದಿಲ್ಲ.
  ಆತ ಉತ್ಪಾದನೆಯಲ್ಲಿ ಶ್ರಮದ ಪತ್ರವನ್ನು ಬಹುವಾಗಿ ಎತ್ತಿಹಿಡಿದು ಬಂಡವಾಳ ಮತ್ತು ಸಂಘಟನೆಗಳ ಪಾತ್ರವನ್ನು ಕಡೆಗಣಿಸಿದ.ಏಕಸ್ವಾಮ್ಯ ಮೌಲ್ಯದ ಬಗ್ಗೆ ರಿಕಾರ್ಡೊ ಯಾವ ಮತನ್ನು ಆಡುವುದಿಲ್ಲ.

ವಿತರಣಾ ತತ್ವ

[ಬದಲಾಯಿಸಿ]

ವಿತರಣಾ ತತ್ವವು ಅರ್ಥಶಾಸ್ತ್ರಕ್ಕೆ ರಿಕಾರ್ಡೊನ ಅತ್ಯುತ್ಕ್ಯಷ್ಟ ಕಾಣಿಕೆ ಎಂದು ಪರಿಗಣಿತವಾಗಿದೆ. "ರಿಕಾರ್ಡೊನ ಮುಖ್ಯ ಸಾಧನೆಗಳನ್ನು ಆತನ ಮೌಲ್ಯ ಮತ್ತು ವಿತರಣಾ ತತ್ವಗಳಲ್ಲಿ ಕಾಡುತ್ತೇವೆ." ಎಂದು ಎರಿಕ್ ರೋಲ್ ಹೇಳುತ್ತಾರೆ. ರಿಕಾರ್ಡೊ ಉತ್ಪಾದನೆಗಿದ್ದ. ಪ್ರಾಮುಖ್ಯತೆಯನ್ನು ವಿತರಣೆಗೆ ವರ್ಗಾಹಿಸಿದ. " ವಿತರಣೆಯನ್ನು ನಿಯಂತ್ರಿಸುವ ನಿಯಮಗಳ ನಿರ್ಧಾರವು ರಾಜಕೀಯಾರ್ಥಶಾಸ್ತ್ರದ ಪ್ರಮುಖ್ಯ ಸಮಸ್ಯೆಯಾಗಿದೆ." ಎಂದು ರಿಕಾರ್ಡೊ ವಿತರಣೆಯ ಮಹತ್ವವನ್ನು ಎತ್ತಿ ಹಿಡಿದ.

ಗೇಣಿ ಸಿದ್ದಂತ

[ಬದಲಾಯಿಸಿ]

ಗೈಡ್ ಮತ್ತು ರಿಸ್ಟ್ ಹೇಳಿದ "ರಿಕಾರ್ಡೊನ ತತ್ವಗಳ ಪೈಕಿ ಗೇಣಿ ತತ್ವವು ಅತ್ಯಂತ ಅಧಿಕ ಶ್ಲಾಘನೆಗೆ ಭಾಜನವಾದುದೂ. ಆತನ ಹೆಸರಿನೊಡನೆ ಪ್ರತೈಕಿಸಲಾಗದಂತೆ ಸಂಬಂಧ ಹೊಂದಿರುವುದೂ ಆಗಿದೆ" ಎಂಬ ಮಾತುಗಳು ಗೇಣಿ ತತ್ವದ ಶ್ರೇಷ್ಠತೆಯನ್ನು ಅಧಿಕಗೊಳಿಸುತ್ತದೆ.

ಗೇಣಿಗೆ ರಿಕಾರ್ಡೊ ನೀಡಿದ ಜಗತ್ ಪ್ರಸಿದ್ಧ ವ್ಯಾಖ್ಯೆ ಹೀಗಿದೆ. "ಗೆಣಿಯು ಮಣ್ಣಿನ ಮೂಲ ಮತ್ತು ಅವಿನಾಶಿಯಾದ ಶಕ್ತಿಗಳ ಉಪಯೋಗಕ್ಕಾಗಿ, ಭೂಮಾಲಿ ಕನಿಗೆ ಪಾವತಿ ಮಾಡುವು ನೆಲದ ಉತ್ಪನ್ನದ ಒಂದು ಭಾಗವಾಗಿದೆ," 
   ಗೇಣಿ ತತ್ವದ ವಿಮರ್ಶೆ:
ರಿಕಾರ್ಡೊನ ಗೇಣಿ ತತ್ವವು ಕೆಲವು ಕಾರಣಗಳಿಂದಾಗಿ ಟೀಕೆಗೆ ಒಳಗಾಗಿದೆ, 

೧> ರಿಕಾರ್ಡೊ ಗೇಣಿಯು ಭೂಮಿಯ ಮೂಲ ಮತ್ತು ಅವಿನಾಶಿ ಶಕ್ತಿಗಳ ಉಪಯೋಗಕ್ಕಾಗಿ ನೀಡಲಾಗುತ್ತದೆ ಎಂದಿದ್ದಾನೆ.ಭೂಮಿಗೆ ಮೂಲಶಕ್ತಿ ಇರುವುದು ವಿಜವಾದರು ಆಧಿಕ ಉತ್ಪನ್ನಕ್ಕಾಗಿ ಕೃಷಿಕರು ಕೃತಕ ಶಕ್ತಿಯನ್ನು ಬಳಸುವುದು ತೀರಾ ಸಹಜ.ಭೂಮಿಯ ಉತ್ಪನ್ನದಲ್ಲಿ ಮೂಲಶಕ್ತಿಯ ಪಾಲೆಷ್ಟು ಮತ್ತು ಕೃತಕ ಶಕ್ತಿಯ ಪಾಲೆಷ್ಟು ಎಂದು ನಿರ್ಧಾರ ಮಾಡುವುದು ಅಸಾಧ್ಯದ ವಿಷಯ. ೨> ಭೂಮಿಯನ್ನು ಫಲವತ್ತತೆಗೆ ಅನುಗುಣವಾಗಿ ಅವರೋಹಣ ಕ್ರಮದಲ್ಲಿ ವ್ಯವಸಾಯ ಮಾಡಲಾಗುತ್ತದೆ ಎನ್ನುವುದು ರಿಕಾರ್ಡೊನ ಹೇಳಿಕೆ, ೩> ರಿಕಾರ್ಡೊ ಪ್ರಕಾರ ರೈತರ ಮತ್ತು ಭೂಮಾಲಿಕರ ನಡುವೆ ಅಪರಿ ಪೂರ್ಣ ಪೈಪೋಟ ಇರುತ್ತದೆ ಮತ್ತು ದೀರ್ಘಾವಧಿಯಲ್ಲಿ ಗೇಣಿ ಉದ್ಭವವಾಗುತ್ತದೆ. ೪> ಪ್ರತಿ ದೇಶದಲ್ಲೂ ಗೇಣಿರಹಿತ ಭೂಮಿ ಇದೆ, ಎನ್ನುವ ರಿಕಾರ್ಡೊನ ವಾದವು ಸರಿಯಲ್ಲ. ಭೂಮಿಯ ಫಲವತ್ತೆತೆ ಹೇಗೆ ಇರಲಿ, ಅದಕ್ಕೆ ಗೇಣಿ ಇದ್ದೇ ಇರುತ್ತದೆ. ೫> ರಿಕಾರ್ಡೋ ತನ್ನ ತತ್ವಕ್ಕೆ ಇಳಿಮುಖ ಸೀಮಾಂತ ಪ್ರತಿಫ಼ಲ ನಿಯಮವನ್ನು ಆಧಾರವಾಗಿಸಿಕೊಂಡಿದ್ದಾನೆ. ಆದರೆ ಇಳಿಕೆಯ ಪ್ರತಿಫ಼ಲ ನಿಯಮದ ಅನ್ವಯತೆಯನ್ನು ತಾಂತ್ರಿಕ, ವೈಜ್ಞಾನಿಕ ಮತ್ತು ಸಂಘಟನಾತ್ಮಕ ಪ್ರಗತಿಯಿಂದ ತಡೆಗಟ್ಟ ಬಹುದು.

ಕೂಲಿ ತತ್ವ

[ಬದಲಾಯಿಸಿ]

ವ್ಯವಸಾಯ ಪಂಥೀಯರಿಂದ ವಾಣಿಜ್ಯ ಪಂಥೀಯರಿಂದ ಮತ್ತು ಆಡಂ ಸ್ಮಿತ್ತನಿಂದ ವಿವರಿಸಲ್ಪಟ್ಟ ಜೀವನಾಧಾರ ಕೂಲಿ ತತ್ವವನ್ನು ರಿಕಾರ್ಡೊ ಕೂಡಾ ಪ್ರತಿಪಾದಿಸಿದ. ಆದರೂ ಕೂಲಿಯ ಬಗೆಗಿನ ಅವನ ವಿವರಣೆಯು ಸಮರ್ಥಕವಾಗಿಲ್ಲದ ಕಾರಣ "ರಿಕಾರ್ಡೊನ ಕೂಲಿ ಮತ್ತು ಲಾಭ ತತ್ವವು ಗೊಂದಲ ಮತ್ತು ಸಾಧನೆಗಳ ಒಂದು ಸಮ್ಮಿಶ್ರಣ" ಎಂದು ಎರಿಕ್ ರೋಲ್ ಹೇಳಿದ್ದಾನೆ.

 ಕೂಲಿ ತತ್ವವನ್ನು ರಿಕಾರ್ಡೊ ಹೀಗೆ ವಿವರಿಸುತ್ತಾನೆ:

"ಉಳಿದೆಲ್ಲಾ ವಸ್ತುಗಳಂತೆ ಕೊಳ್ಳುಲು ಮತ್ತು ಮಾರಟ ಸಾದ್ಯ ವಿರುವ,ಪರಿಣಾಮದಲ್ಲಿ ಏರಿಕೆ ಆಥವಾ ಇಳಿಕೆ ಸಾಧ್ಯಾವಿರುವ ಶ್ರಮಕ್ಕೆ ಸಹಜ ಬೆಲೆ ಮತ್ತು ಮಾರುಕಟ್ಟೆ ಬೆಲೆಗಳಿವೆ. ಪರಸ್ಪರ ಹೊಟ್ಟೆ ಹೊರೆಯಲು ಮತ್ತು ಸಂತತಿಯನ್ನು ಶಾಶ್ವತಗೊಳಿಸಲು ಅಗತ್ಯವಾಗ ಶಮಿಕರಿಗೆ ಬೇಕಾಗುವಷ್ಟು ಏರಿಳಿತೆ ಇಲ್ಲದ ಬೆಲೆಯು ಶ್ರಮದ ಸಹಜ ಬೆಲೆಯಾಗಿದೆ. ಶ್ರಮದ ಸ್ವಾಭಾವಿಕವಾದ ಬೇಡಿಕೆ ಮತ್ತು ಪೂರೈಕೆಗಳ ಅನುಪಾತಕ್ಕನುಗುಣವಾಗಿ ನೀಡಲಾಗುವ ಬೆಲೆಯ ಸ್ರಮದ ಮಾರುಕಟ್ಟೆ ಬೆಲೆಯಾಗಿದೆ." ಶ್ರಮದ ಮಾರುಕಟ್ಟೆ ಬೆಲೆಯು ಶ್ರಮದ ಬೇಡಿಕೆಯನ್ನು ಮತ್ತು ಪೂರೈಕೆಯನ್ನು ಅವಲಂಬಿಸಿರುವುದರಿಂದ ಬದಲಾಗುತ್ತಿರುತ್ತದೆ.ಆಹಾರೋತ್ಪನ್ನ ಮತ್ತು ಇತರ ವಸ್ತುಗಳ ಬೆಲೆ ಏರಿಕೆಯೊಡನೆ ಕೂಲಿ ಅಧಿಕವಾಗುತ್ತದೆ, ಆಹಾರೋತ್ಪನ್ನ ಮತ್ತು ವಸ್ತುಗಳ ಬೆಲೆ ಇಳಿದಾಗ ಕೂಲಿ ಇಳಿಯುತ್ತದೆ. ಶ್ರಮದ ಸಹಜ ಬೆಲೆಗಿಂತ ಮಾರುಕಟ್ಟೆ ಬೆಲೆಯು ಅಧಿಕವಾದಾಗ, ಶ್ರಮಿಕರ ಕುಟುಂಬದ ವಿಸ್ತರಣೆಯಾಗಿರುತ್ತದೆ.

ಲಾಭ ಮತ್ತು ಬಡ್ದಿ ತತ್ವ

[ಬದಲಾಯಿಸಿ]

ಉಳಿದ ಸಂಪ್ರದಾಯ ಪಂಥೀಯರ ಹಾಗೆ, ರಿಕಾರ್ಡೊ ಲಾಭ ಮತ್ತು ಬಡ್ಡಿಗಳ ನಡುವಿನ ವ್ಯತ್ಯಾಸವನ್ನು ಗರುತಿಸಿಲ್ಲ, ಆತ ಬಂಡವಾಳವನ್ನು "ಉತ್ಪಾದನೆಯಲ್ಲಿ ತೊಡಗಿಸಲಾದ ದೀಶದ ಸಂಪತ್ತಿನ ಒಂದು ಭಾಗ ಮತ್ತು ಶ್ರಮಕ್ಕೆ ಪರಿಣಾಮ ನೀಡುವ ಆಹಾರ,ಉಡುಗೆ ಸಲಕರಣೆ, ಕಚ್ಚಾ ಸರಕು, ಯಂತ್ರ ಇತ್ಯಾದಿಗಳನ್ನು ಅದು ಒಳಗೊಂಡಿರುತ್ತದೆ," ಎಂದು ವ್ಯಾಖ್ಯಾನಿಸಿದ್ದಾನೆ. ರಿಕಾರ್ಡೊ ಸ್ಥಿರ ಮತ್ತು ಚರ ಬಂಡವಾಳದ ಬಗ್ಗೆ ವಿವರಣೆ ನೀಡುತ್ತಾನೆ, ಆದರೂ ಚರ ಬಂಡವಾಳಕ್ಕೆ ಹೆಚ್ಚು ಮಹತ್ವ ನೀಡಿದ್ದಾನೆ, ಆದರೆ ಲಾಭದ ಅರ್ಥವನ್ನು ಆತ ಸ್ಪಷ್ಟವಾಗಿ ವಿವರಿಸಿಲ್ಲ, ಕೆಲವೊಮ್ಮೆ ಲಾಭವನ್ನು ಶ್ರಮದ ಪ್ರತಿಫಲ ನೀಡಿಕೆಯ ಶೇಷಾದಾಯವೆಂದೂ, ಕೆಲವೆಡೆಗಳಲ್ಲಿ ಬಂಡವಾಳದಪ್ರತಿಫಲವೆಂದೂ ವಿಶ್ಲೇಷಿಸಿದ್ದಾನೆ.

ಆರ್ಥಿಕಾಭಿವೃದ್ಧಿಯ ತತ್ವ

[ಬದಲಾಯಿಸಿ]

ರಿಕಾರ್ಡೊ ತನ್ನ ಮೌಲ್ಯ ಮತ್ತು ವಿತರಣಾ ತತ್ವಗಳನ್ನು ಚಲನಾತ್ಮಕ ಸಮಸ್ಯೆಗಳಿಗೆ ಅನ್ವಯಿಸಿದ್ದಾನೆ, ಬಂಡವಾಳ ಸಂಚಯನವು ಕೂಲಿ, ಲಾಭಾ ಮತ್ತು ಗೇಣಿಗಳ ಮೇಲೆ ಬೀರುವ ಪರಿಣಾಮಗಳನ್ನು ಸಮಾಜ ಕಲ್ಯಾಣ ಮತ್ತು ಆರ್ಥಿಕ ಮುಗ್ಗಟ್ಟುಗಳಿಗೆ ಕಾರಣವಾಗುವುದನ್ನು ತನ್ನ ಆರ್ಥಿಕಾಭಿವೃದ್ಧಿಯ ತತ್ವದಲ್ಲಿ ಪ್ರಸ್ತುತ ಪಡಿಸುತ್ತಾನೆ

 ರಿಕಾರ್ಡೊನ ಆರ್ಥಿಕಾಭಿವೃದ್ಧಿಯ ತತ್ವವು ಹಿತಾಸಕ್ತಿಗಳ ಸಂಘರ್ಷವನ್ನು ವಿವರಿಸುತ್ತದೆ. ವ್ಯತ್ಯಾಸಾತ್ಮಕ ಗೇಣಿ ತತ್ವ,ಜೀವನಾಧಾರ ಕೂಲಿ ತತ್ವ ಮತ್ತು ಶ್ರಮ ಮೌಲ್ಯ ತತ್ವಗಳ ವಿವರಣೆಯಲ್ಲಿ ರಿಕಾರ್ಡೊ ಕೂಲಿ ಮತ್ತು ಲಾಭಗಳ ವಿಪರ್ಯ ಸಂಬಂಧವನ್ನು ತೋರಿಸುತ್ತಾನೆ, ಒಟ್ಟು ಉತ್ಪನ್ನವನ್ನು ಆತ o=p+w ಎಂಬ ಸಮಿಕರಣದಲ್ಲಿ ತೋರಿಸುತ್ತಾನೆ.o ಅನ್ನುವುದು ಒಟ್ಟು ಉತ್ಪನ್ನವನ್ನೂ, p ಅನ್ನುವುದು ಲಾಭವನ್ನೂ, w ಅನ್ನುವುದು ಕೂಲಿಯನ್ನೂ ಪ್ರತಿನಿಧಿಸುತ್ತವೆ. ಲಾಭ ಅಧಿಕವಾಗಬೇಕಾದರೆ ಕೂಲಿ ಕಡಿಮೆಯಾಗಬೇಕಾಗುತ್ತದೆ, ಭೂಮಿಯ ಉತ್ಪನ್ನ ಫಲ ಶಕ್ತಿ ಕಡಿಮೆಯಾಗಿ,ಆಹಾರದ ಬೆಲೆ ಏರುವಾಗ ಕೂಲಿ ಹೆಚ್ಚಿಸಬೇಕಾಗುತ್ತದೆಂದು ರಿಕಾರ್ಡೊ ಹೇಳುತ್ತಾನೆ, ಅವರ ಪ್ರಕಾರ "ಕೂಲಿ ಏರಿಕೆಯ ಏಕೈಕ ಸಮರ್ಪಕ ಮತ್ತು ಶಾಶ್ವತ ಕಾರಣವು,ಹೆಚ್ಚುತ್ತಿರುವ ಶ್ರಮಿಕರ ಸಂಖ್ಯೆಗೆ ಆಹಾರ ಮತ್ತು ಆವಶ್ಯಕ ವಸ್ತುಗಳನ್ನು ಒದಗಿಸುವುದರಲ್ಲಿ ಹೆಚ್ಚುತ್ತಿರುವ ಸಂಕಷ್ಟವಾಗಿದೆ." ಕೂಲಿ ಹೆಚ್ಚಾದರೆ ಲಾಭ ಕಡಿಮೆಯಾಗಲೇ ಬೇಕಾಗುತ್ತದೆ ಎನ್ನುವುದು ರಿಕಾರ್ಡೊನವಾದ.

ಸ್ಥಿರ ಸ್ಥಿತಿ

[ಬದಲಾಯಿಸಿ]

ಸಮಾಜದ ಸಹಜ ಪ್ರಗತಿಯ ಬಗ್ಗೆ ವಿಶ್ವಾಸ ಇರಿಸಿದ್ದ್ದ ರಿಕಾರ್ಡೊ ಅದರ ಆಧಾರದ ಮೇಲೆ ಸ್ಥಿರಸ್ಥಿತಿಯ ತತ್ವವನ್ನು ನಿರೂಪಿಸಿದ್ದಾನೆ;ಅರ್ಥವ್ಯವಸ್ಥೆಯು ಮೂರು ಹಂತಗಳಲ್ಲಿ ಸ್ಥಿರಸ್ಥಿಯನ್ನು ತಲುಪುತ್ತದೆ, ಎಂದು ರಿಕಾರ್ಡೊ ತನ್ನ ಆರ್ಥಿಕಾಭಿವೃದ್ಧಿಯ ತತ್ವದ ಮೂಲಕ ತೋರಿಸಿಕೊಟ್ಟದ್ದಾರೆ.ಅಭಿವೃದ್ಧಿಯ ಮೊದಲ ಹಂತದಲ್ಲಿ ಜನಸಂಖ್ಯೆ ತೀರಾ ಕಡಿಮೆ ಇರುವುದರಿಂದ ಅಧಿಕ ಫಲವತ್ತಾದ ಉತ್ತಮ ಭೂಮಿಗಳನ್ನು ಮಾತ್ರ ವ್ಯವಸಾಯ ಮಾಡಲಾಗುತ್ತದೆ.ಆಗ ವ್ಯವಸಾಯ ಮಾಡುವ ಭೂಮಿಯೆಲ್ಲವೂ ಗೇಣಿರಹಿತ ಭೂಮಿಯಾಗಿರುತ್ತದೆ, ಗೇಣಿ ಇಲ್ಲದ ಕಾರಣ ಆದಾಯವು ಕೂಲಿ ಮತ್ತು ಲಾಭಗಳಾಗಿ ಮಾತ್ರ ವಿಂಗಡಣೆಯಾಗುತ್ತದೆ. ಇದರಿಂದಾಗಿ ಭೂಮಾಲಿಕರ ಹೊರತಾಗಿ ಸಮಾಜದ ಉಳಿದೆಲ್ಲಾ ವರ್ಗಗಳು ಸಂತೋಷಮಯವಾದ ಜೀವನವನ್ನು ಸಾಗಿಸುತ್ತಾವೆ. ಎರಡನೆಯ ಹಂತದಲ್ಲಿ ಜನಸಂಖ್ಯಾ ಹೆಚ್ಚಳದಿಂದಾಗಿ ಕಡಿಮೆ ಫಲವತ್ತಾದ ಕೀಳು ದರ್ಜೆಯ ಭೂಮಿಗಳನ್ನು ವ್ಯವಸಾಯಕ್ಕೊಳಪಡಿಸಲಾಗುತ್ತದೆ,ಈಗ ಹೆಚ್ಚು ಫಲವತ್ತಾದ ಭೂಮಿಯು ಕಡಿಮೆ ಫಲವತ್ತಾದ ಭೂಮಿಯ ಉತ್ಪನ್ನಕ್ಕಿಂತ ಅಧಿಕ ಉತ್ಪಾದಿಸುವುದರಿಂದ ಆರ್ಥಿಕ ಮಿಗುತೆ ಉಂಟಾಗತ್ತದೆ. ಮೂರನೆಯ ಹುತದಲ್ಲಿ ಎಲ್ಲಾ ರೀತಿಯ ಭೂಮಿಗಳಲ್ಲೂ ಕೃಷಿ ಅನಿವಾರ್ಯವಾಗುತ್ತದೆ, ಜನಸಂಖ್ಯಾ ಏರಿಕೆ, ಆಹಾರೋತ್ಪನ್ನಗಳ ಅಭಾವ, ಬೆಲೆ ಏರಿಕೆ, ಗೇಣಿ ಏರಿಕೆ ಮುಂತಾದ ಸಮಸ್ಯೆಗಳು ತೀವ್ರವಾಗುತ್ತದೆ, ಪರಿಣಾಮವಾಗಿ ಕೂಲಿ ಮತ್ತು ಲಾಭಗಳು ಕದಿಮೆಯಾಗುತ್ತಾ ಹೋಗುತ್ತವೆ. ಇದು ಹೀಗೆಯೇ ಮುಂದುವರಿದು ಕೂಲಿಯು ಜೀವನಾಧಾರ ಮಟ್ಟಕ್ಕೆ ಬಂದು ನಿಲ್ಲುತ್ತದೆ, ಲಾಭವು ಇಳಿಯುತ್ತಾ ಕೊನೆಗೆ ಸೊನ್ನೆಗೆ ಬಂದು ತಲುಪುತ್ತದೆ. ಆಗ ಬಂಡವಾಳಶಾಹಿಗಳು ಬಂಡವಾಳ ಹೂಡಿಕೆಯಲ್ಲಿ ಎಲ್ಲಾ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಆರ್ಥಿಕ ವ್ಯವಸ್ಥೆಯು ನಿಲುಗಡೆಗೆ ಬಂದು ಮುಟ್ಟುವ ಈ ಸ್ಥಿತಿಯನ್ನು ಸ್ಥಿರಸ್ಥಿತಿ ಎಂದು ರಿಕಾರ್ಡೊ ಕರೆದಿದ್ದಾನೆ. ರಿಕಾರ್ಡೊನ ಸ್ಥಿರಸ್ಥಿತಿಯ ತತ್ವವು ಬಂಡವಾಳಶಾಹಿ ಅರ್ಥವ್ಯವಸ್ಥೆಯ ದೋಷವನ್ನು ಎತ್ತಿ ಹೇಳುತ್ತದೆ, ಈ ತತ್ವದ ಆಧಾರದ ಮೇಲೆ ಮುಂದೆ ನೂರು ವರ್ಷಗಳ ಬಳಿಕ ಅತಿ ದೀರ್ಘಾವಧಿಯ ಸ್ಥಗಿತತೆಯ ನಿಯಮ ನಿರೂಪಿತವಾಯಿತು.

ಯಂತ್ರಗಳ ಉಪಯೋಗದ ಬಗ್ಗೆ

[ಬದಲಾಯಿಸಿ]

ಶ್ರಮ ಉಳಿತಾಯದ ವಿಷಯವಾಗಿ ಉಪಯೋಗವನ್ನು ರಿಕಾರ್ಡೊ ಸಮರ್ಥಿಸಿದ್ದಾನೆ, ಆರಂಭಿಕ ಹಂತದಲ್ಲಿ ಯಂತ್ರಗಳ ಉಪಯೋಗದಿಂದ ಲಾಭವು ಅಧಿಕವಾಗುತ್ತದೆ, ಆದರೆ ಯಂತ್ರಗಳ ಉಪಯೋಗ ಸಾರ್ವತ್ರಿಕವಾದಂತೆ ಲಾಭವು ಕಡಿಮೆಯಾಗುತ್ತದೆ ಹಾಗೂ ಪೈಪೋಟಿಯು ಬೆಲೆಯನ್ನು ನಧಾನವಾಗಿ ಉತ್ಪಾದನಾ ವೆಚ್ಚಕ್ಕೆ ಸರಿಸಮಾನವಾಗಿ ಮಾಡುತ್ತದೆ ಎನ್ನುವುದು ರಿಕಾರ್ಡೊನ ಅಭಿಮತ.

ಯಂತ್ರಗಳ ಉಪಯೋಗದ ಬಗೆಗಿನ ಅವನ ವಿಶ್ಲೇಷಣೆಯು ಅವನನ್ನು ಕೆಳಗಿನ ತೀರ್ಮಾನಗಳಿಗೆ ಮುಟ್ಟಸುತ್ತದೆ: 

೧> ಯಂತ್ರಗಳ ಉಪಯೋಗದಿಂದಾಗಿ ರಾಷ್ಟ್ರದ ನಿವ್ವಳ ಉತ್ಪನ್ನ ಅಧಿಕವಾಗುತ್ತದೆ, ೨> ಯಂತ್ರಗಳ ಉಪಯೋಗವು ಆಪಾಯಕಾರವಾದುದು ಎಂದು ದುಡಿಯುವ ವರ್ಗ ಭಾವಿಸುತ್ತದೆ.ಈ ಭಾವನೆಯು ರಾಜಕೀಯಾರ್ಥಶಾಸ್ತ್ರದ ತತ್ವಗಳಿಗೆ ಸರಿಯಾಗಿ ಒಗ್ಗುತ್ತದೆ, ೩> ರಾಷ್ಟ್ರದ ನಿವ್ವಳ ಉತ್ಪನ್ನದಲ್ಲಿನ ಏರಿಕೆಯು, ಒಟ್ಟು ಉತ್ಪನ್ನದ ಇಳಿಕೆಗೆ ತಕ್ಕುದಾಗಿದೆ. ೪> ಯಂತ್ರಗಳ ಉಪಯೋಗದಿಂದಾಗಿ ಮತ್ತು ಸುಧಾರಿತ ಉತ್ಪಾದನಾ ಸಾಧನಗಳ ಬಳಕೆಯಿಂದ ರಾಷ್ಟ್ರದ ನಿವ್ವಳ ಉತ್ಪಾದನೆ ಹೆಚ್ಚಾದರೆ, ಎಲ್ಲಾ ವರ್ಗಗಳ ಜನರ ಆರ್ಥಿಕ ಸ್ಥಿತಿಯು ಸುಧಾರಣೆಯಾಗುತ್ತದೆ, ಆದರೆ ಯಂತ್ರಗಳ ಉಪಯೋಗದಿಂದಾಗಿ ಶ್ರಮದ ಸ್ಥಾನಪಲ್ಲಟವಾಗುತ್ತದೆಂದು ಹೇಳಿದ್ದಾನೆ, ಇದರ ಅರ್ಥ,ಯಂತ್ರಗಳ ಉಪಯೋಗವನ್ನು ಕಡಿಮೆ ಮಾಡ ಬೇಕೆಂದಲ್ಲ, ರಿಕಾರ್ಡೊನ ಅಭಿಪ್ರಾಯದಂತೆ ಯಂತ್ರ ಮತ್ತು ಶ್ರಮ ಸದಾ ಕಾಲ ಪೈಪೋಟಿಯಲ್ಲಿರುತ್ತವೆ ಆದರೂ ಸಂಚಯಿತ ಬಂಡವಾಳವು ಯಂತ್ರಗಳ ಬಳಕೆಗಾಗಿ ಉಪಯೋಗಿಸಲ್ಪಡಬೇಕು ಎಂದು ರಿಕಾರ್ಡೊ ವಾದಿಸುತ್ತಾನೆ, ಇಲ್ಲದಿದ್ದರೆ ಅವುಗಳು ಹೊರದೇಶದಲ್ಲಿ ಬಳಕೆಯಾಗಿ ಶ್ರಮದ ಸ್ವದೇಶಿ ಬೇಡಿಕೆ ಕಡಿಮೆಯಾಗುತ್ತದೆ.

     ರಿಕಾರ್ಡೊನ ಕಾಣಿಕೆಗಳ ಪರಾಮರ್ಶೆ:

ರಿಕಾರ್ಡೊ ಓರ್ವ ಶ್ರೇಷ್ಠ ಅರ್ಥಶಾಸ್ತ್ರಜ್ಞನಾದರೂ ತನ್ನ ನಿರಾಶಾವಾದದಿಂದಗಿ ಟೀಕೆಗೆ ಒಳಗಾಗಿದ್ದಾನೆ, ಆತನ ಶ್ರಮ ಆಧಾರಿತ ಮೌಲ್ಯತತ್ವವು ಅನೇಕ ಅರ್ಥಶಾಸ್ತ್ರಜ್ಞರ ಅಕ್ರಮಣಕ್ಕೆ ಒಳಗಾಗಿದೆ ಆತನ ಲಾಭ ತತ್ವವು ತೀರಾ ದುರ್ಬಲವಾದುದರಿಂದ ಸಮಸ್ತ ಸಂಪ್ರದಾಯ ಪಂಥವು ಮಾರ್ಕ್ಸ್ ನ ಕಟು ಟೀಕೆಗೆ ಒಳಗಾಯಿತು, ರಿಕಾರ್ಡೊನ ನಿಗಮನ ಪದ್ಧತಿ ಕೂಡಾ ಜರ್ಮನಿಯ ಐತಿಹಾಸಿಕ ಪಂಥದ ಟೀಕೆಗೆ ಒಳಗಾಗಿದೆ. ನಿರಾಶಾವಾದದಿಂದ ಪ್ರೇರಿತವಾದ ಆತನ ತತ್ವಗಳು ಪ್ರಬಲವಾಗಿ ಟೀಕಿಸಲ್ಪಟ್ಟಿವೆ. ಅತ ತನ್ನ ತೀರ್ಮಾನಗಳಿಗೆ ಇತಿಹಾಸದ ಮತ್ತು ಅಂಕೆ-ಸಂಖ್ಯೆಗಳ ಆಧಾರವನ್ನು ನೀಡದಿರುವುದು ಒಂದು ದೋಷವೆಂದು ಕೇನ್ಸ್ ಅಭಿಪ್ರಾಯಪಟ್ಟದ್ದಾನೆ, ನ್ಯೂಮನ್ನನ ಅಭಿಪ್ರಾಯದಂತೆ ರಿಕಾರ್ಡೊನ ತತ್ವವು ಆತನಿಗೆ ಮೇಲ್ವರ್ಗದ ಬುದ್ಧಿ ಜೀವಿಗಳ ಸೀಮಿತ ವರ್ತುಲದದಲ್ಲಿ ಇರುವ ಪರಿಚಯ ಮತ್ತು ಪೂರ್ವಾಗ್ರಹಗಳನ್ನು ಆಧರಿಸಿದೆ. ಇವೆಲ್ಲಾ ಟೀಕೆಗಳ ಹೊರತಾಗಿಯೂ ರಿಕಾರ್ಡೊನನ್ನು ಸಂಪ್ರದಾಯ ಪಂಥದ ಅತಿ ದೊಡ್ಡ ಪ್ರತಿನಿಧಿ ಎಂದ ಗೌರವಿಸಲಾಗುತ್ತದೆ, ಗೈಡ್ ಮತ್ತು ರಿಸ್ಟ್ ರ ಪ್ರಕಾರ "ಸ್ಮಿತ್ ನ ಬಳಿಕ ಅರ್ಥಶಾಸ್ತ್ರದಲ್ಲಿ ರಿಕಾರ್ಡೊನದ್ದು ಬಲು ದೊಡ್ಡ ಹೆಸರು, ರಿಕಾರ್ಡೊ ವಿತ್ತ ಮತ್ತು ಬ್ಯಾಂಕ್ ನೀತಿಗಳು ಉತ್ಕೃಷ್ಟವಾದವುಗಳೆಂದು ಪ್ರಶಂಸಿಸಲ್ಪಟ್ಟಿವೆ, ನೋಟು ಮುದ್ರಣಕ್ಕೆ ಪ್ರತಿಯಾಗಿ ಚಿನ್ನದ ದಾಸ್ತಾನು ಇಡ್ಬೇಕೆಂದು ರಿಕಾರ್ಡೊ ಸಲಹೆ ನೀಡಿದ್ದ. ಈ ಸಲಹೆಯು ಬ್ಯಾಂಕ್ ಆಫ್ ಇಂಗ್ಲೆಂಡನ್ನು ಆರ್ಥಿಕ ಬಿಕ್ಕಟ್ಟಿನಿಂದ ರಕ್ಷಿಸಿತು, ಜಗತ್ತಿನ ಎಲ್ಲಾ ಕೇಂದ್ರ ಬ್ಯಾಂಕುಗಳೂ ರಿಕಾರ್ಡೊನ ಈ ಸಲಹೆಯನ್ನು ಮಾನ್ಯ ಮಾಡಿ ಅನುಷ್ಠಾನಕ್ಕೆ ತಂದವು;ಆದುದರಿಂದ ಎರಿಕ್ ರೋಲ್ ರಿಕಾರ್ಡೊನನ್ನು 'ಅರ್ಥವಿಜ್ಞಾನದ ಮುಂದಾಳು' ಎಂದು ಕೊಂಡಾಡಿದ್ದಾನೆ. ರಿಕಾರ್ಡೊನ ಸ್ರಮ ಆಧರಿತ ಮೌಲ್ಯ ತತ್ವವು ಮಾರ್ಕ್ಸ್ ನ ಮೌಲ್ಯ ತತ್ವದ ತಳಪಾಯವಾಯಿತು, ರಿಕಾರ್ಡೊ ಓರ್ವ ಮುಕ್ತ ಅರ್ಥವ್ಯವಸ್ಥೆಯ ಪ್ರತಿಪಾದಕನಾದ ವ್ಯಕ್ತಿವಾದಿ, ಆತನ ತತ್ವಗಳು ಮಾರ್ಕ್ಸ್ ನ ಸಮಾಜವಾದಕ್ಕೆ ಪ್ರೇರಣೆಯಾದುದು ಆಶ್ಚರ್ಯವಾದರೂ,ನಿಜವಾದ ಸಂಗತಿಯಾಗಿದೆ, ರಿಕಾರ್ಡೊನ ಗೇಣಿ ಮತ್ತು ಲಾಭ ತಪ್ಪುಗಳು ಖಾಸಗಿ ಆಸ್ತಿಯ ಹಕ್ಕನ್ನು ಟೀಕಿಸಲು ಪ್ರಬಲ ತತ್ವಗಳಾದವು, ಆತನ ಕೂಲಿ ಮತ್ತು ಲಾಭ ತತ್ವಗಳು ವರ್ಗ ಸಂಘರ್ಷವನ್ನು ಸೂಚಿಸಿದವು ಸಮತಾವಾದದ ಆತಿ ಮುಖ್ಯ ಅಂಶವಾದ ವರ್ಗ ಸಂಘರ್ಷ ರಿಕಾರ್ಡೊನ ಮಾನಸಿಕ ಕೂಸು ಎನ್ನುವುದು ಗಮನಾರ್ಹ, ಆದುದರಿಂದ ಆಲೆಗ್ಸ್ಂಡರ್ ಗ್ರೇ ಹೇಳುತ್ತಾನೆ, "ಮಾಕ್ಸ್ ಮತ್ತು ಲೆನಿನರು ಪೂರ್ಣವಿಗ್ರಹಕ್ಕೆ ಅರ್ಹರಾದರೆ, ಹಿನ್ನೆಲೆಯಲ್ಲಿ ಎಲ್ಲಾದರೂ ರಿಕಾರ್ಡೊನ ಅರ್ಧವಿಗ್ರಹಕ್ಕೆ ಸ್ಥಳಾವಕಾಶ ಇರಲೇಬೇಕು," ಇದು ರಿಕಾರ್ಡೊ ಅರ್ಧ ಪ್ರಪಂಚಕ್ಕೆ ಮಾಡಿದ ದೊಡ್ಡ ಉಪಕಾರ.[][][]

ಹೊರಗಿನ ಕೊಂಡಿಗಳು

[ಬದಲಾಯಿಸಿ]

1.ಡೇವಿಡ್ ರಿಕಾರ್ಡೋ

2. ಡೇವಿಡ್ ರಿಕಾರ್ಡೋ ಎನ್ಸೈಕ್ಲೋಪೀಡಿಯಾ

3.ಡೇವಿಡ್ ರಿಕಾರ್ಡೋ ಲೈಬ್ರರಿ

4. ಡೇವಿಡ್ ರಿಕಾರ್ಡೋ ರಾಜಕೀಯ ಆರ್ಥಿಕ ತತ್ವಗಳು

ಉಲ್ಲೇಖಗಳು

[ಬದಲಾಯಿಸಿ]
  1. Miller, Roger LeRoy. Economics Today. Fifteenth Edition. Boston, MA: Pearson Education.
  2. Sowell, Thomas (2006). On classical economics. New Haven, CT: Yale University Press.
  3. "David Ricardo | Policonomics".

ಉಲ್ಲೇಖ

[ಬದಲಾಯಿಸಿ]