ಡೆಟ್ರಾಯಿಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೆಟ್ರಾಯಿಟ್ -ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಿಷಿಗನ್ ರಾಜ್ಯದ ಅತ್ಯಂತ ದೊಡ್ಡ ನಗರ. ವೇನ್ ಕೌಂಟಿಯ ಆಡಳಿತ ಕೇಂದ್ರ. ರಾಜ್ಯದ ಆಗ್ನೇಯ ಭಾಗದಲ್ಲಿ ಸೇಂಟ್ ಕ್ಲೇರ್ ಮತ್ತು ಈರೀ ಸರೋವರಗಳನ್ನು ಕೂಡಿಸುವ ಡಿಟ್ರಾಯಿಟ್ ನದಿಯ ದಂಡೆಯ ಮೇಲೆ ಇದೆ. ನಗರದ ಬಳಿ ಈ ನದಿ ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಕೆನಡದಿಂದ ವಿಭಜಿಸಿದೆ. ನದಿಯ ದಕ್ಷಿಣದಲ್ಲಿ ಕೆನಡದಲ್ಲಿರುವ ಆಂಟೇರಿಯೋ ಪ್ರಾಂತ್ಯದಲ್ಲಿರುವ ವಿಂಡ್ಸರ್ ನಗರ ಈ ನಗರಕ್ಕೆ ನೇರ ಎದುರಿನಲ್ಲಿದೆ. ಅಂಬಾಸಡರ್ ಸೇತುವೆ, ವಾಹನ ಸುರಂಗ, ರೈಲ್ವೆ ಸುರಂಗ ಮತ್ತು ರೈಲ್ವೆ ರಸ್ತೆ ಮತ್ತು ಮೋಟಾರ್ ವಾಹನಗಳ ದೋಣಿ ಸೇತುವೆ ಇವು ಕೆನಡದೊಂದಿಗೆ ಸಂಪರ್ಕ ಕಲ್ಪಿಸಿವೆ. 585 ಎತ್ತರದಲ್ಲಿರುವ ಡಿಟ್ರಾಯಿಟ್ ಅಮೆರಿಕದ ಮುಖ್ಯ ರೇವುಗಳಲ್ಲೊಂದು. ನಗರದ ವಿಸ್ತೀರ್ಣ 140 ಚ.ಮೈ. ಮಹಾನಗರ ಪ್ರದೇಶದ ವಿಸ್ತೀರ್ಣ 1,965 ಚ.ಮೈ. ಜನವರಯ ಸರಾಸರಿ ಉಷ್ಣತೆ 26ಲಿಈ ಈ; ಜುಲೈ ಸರಾಸರಿ ಉಷ್ಣತೆ 73ಲಿ ಈ ಈ. ವಾರ್ಷಿಕ ಸರಾಸರಿ ಮಳೆ ಸು. 32. ಜನಸಂಖ್ಯೆ 15,12,893 (1970).

ನದಿಯ ದಂಡೆಯ ಮೇಲೆ ಸಾಲುಗಟ್ಟಿದಂತೆ ಹಡಗುಕಟ್ಟೆಗಳು, ಮಳಿಗೆಗಳು, ರೈಲ್ವೆನಿಲ್ದಾಣಗಳು ಹಾಗೂ ಕಾರ್ಖಾನೆಗಳು ಇವೆ. ನಗರದ ಕಟ್ಟಡಗಳಲ್ಲಿ ವಿಶಿಷ್ಟವಾದ್ದು ವೆಟರನ್ಸ್ ಮೆಮೋರಿಯಲ್ ಎಂಬ ಯೋಧರ ಸ್ಮಾರಕ ಭವನ. ಅಲ್ಲಿ ವಿವಿಧ ಪರಿಣತ ಸಂಸ್ಥೆಗಳ ಸಭೆ ಸೇರುತ್ತವೆ. ಸರ್ಕಾರಿ ಕಚೇರಿಗಳು 20 ಅಂತಸ್ತುಗಳ ಕಟ್ಟಡದಲ್ಲಿವೆ. 12,500 ಮಂದಿ ಕೂಡುವ ವೃತ್ತಾಕಾರದ ಸಭಾಂಗಣ; 3,000 ಪ್ರೇಕ್ಷಕರಿಗೆ ಸ್ಥಳಾವಕಾಶವಿರುವ ಹೆನ್ರಿ ಮತ್ತು ಎಡ್ಸೆಲ್ ಫೋರ್ಡ್‍ಭವನ; 9 ಎಕರೆ ವಿಸ್ತೀರ್ಣದ ಕೋಜೊಹಾಲ್ ಎಂಬ ವಸ್ತುಪ್ರದರ್ಶನ, ಬಯಲು-ಇವು ನಗರದ ಇನ್ನು ಕೆಲವು ಆಕರ್ಷಣೆಗಳು.

ಡಿಟ್ರಾಯಿಟ್ ನಗರ ನದಿಗೆ ಹೊಂದಿಕೊಂಡಂತೆ ಅರ್ಧವೃತ್ತಾಕಾರದಲ್ಲಿದೆ. ನಗರದ ಮೂರು ಕಡೆಗಳಲ್ಲಿ ಕೈಗಾರಿಕೆ ಬಡಾವಣೆಗಳುಂಟು. ವಾನ್‍ಡಾಟ್, ಲಿಂಕನ್ ಪಾರ್ಕ್, ರಿವರ್ ರೋಗ್, ಲಿವೋನಿಯ, ಪಾಂಟಿಯಾಕ್, ರಾಯಲ್ ಓಕ್, ಫರ್ನ್‍ಡೇಲ್, ವಾರೆನ್, ಪೂರ್ವ ಡಿಟ್ರಾಯಿಟ್, ರೋಸ್‍ವಿಲ್, ಸೇಂಟ್ ಕ್ಲೇರ್-ಇವು ಈ ಬಡಾವಣೆಗಳಲ್ಲಿ ಕೆಲವು. ಬೃಹದಾಕಾರವಾಗಿ ವಿಸ್ತರಿಸಿಕೊಂಡಿರುವ ಡಿಟ್ರಾಯಿಟ್‍ನಲ್ಲಿ ವಾಸ್ತವಿಕವಾಗಿ ಎರಡು ನಗರಗಳು-ಹ್ಯಾಮ್‍ಟ್ರಾಂಕ್ ಹಾಗೂ ಹೈಲ್ಯಾಂಡ್ ಪಾರ್ಕ್-ಕೂಡಿಕೊಂಡಂತಿವೆ.

ನಗರದ 1/3 ಭಾಗದಷ್ಟು ಜನ ಮಾತ್ರ ಅಲ್ಲಿ ಹುಟ್ಟಿಬೆಳೆದವರು. ಉಳಿದವರು ಉದ್ಯೋಗಾರ್ಥಿಗಳಾಗಿ ಅಮೆರಿಕದ ವಿವಿಧ ಭಾಗಗಳಿಂದ ಬಂದವರು. ಕೆನಡದಿಂದ ಬಂದವರೂ ತಕ್ಕಮಟ್ಟಿನ ಸಂಖ್ಯೆಯಲ್ಲುಂಟು. ಅರಬ್ಬಿ ಭಾಷೆ ಆಡುವ ಜನರ ಸಂಖ್ಯೆ 40,000. ಅವರ ಸಂಖ್ಯೆ ಅಮೆರಿಕ ನಗರಗಳ ಪೈಕಿ ಇಲ್ಲಿ ಹೆಚ್ಚು. ರೋಮನ್ ಕ್ಯಾತೊಲಿಕರು ಅಧಿಕ.

ಇತಿಹಾಸ[ಬದಲಾಯಿಸಿ]

1648ಕ್ಕೆ ಹಿಂದೆ ಫ್ರಾನ್ಸ್ ದೇಶದ ಭೂಪರಿಶೋಧಕರು ಹಾಗೂ ಸಾಹಿತಿಗಳು ಡಿಟ್ರಾಯಿಟ್ ಪ್ರದೇಶಕ್ಕೆ ಬಂದಿದ್ದರು. 1701ರ ಜುಲೈ 24ರಂದು ಆಂತ್ವಾನ್ ಡ ಲ ಮೋತೆ ಕ್ಯಾಡಿಲಾಕ್ ಎಂಬಾತ ಇಲ್ಲಿಗೆ ಬಂದು ಇಲ್ಲೊಂದು ಕೋಟೆಯನ್ನು ನಿರ್ಮಿಸಿದ. ಫ್ರೆಂಚರ ತುಪ್ಪುಳು ವ್ಯಾಪಾರವನ್ನು ರಕ್ಷಿಸುವುದು ಇದರ ಉದ್ದೇಶ. ಕೋಟೆಯೊಳಗಿದ್ದ ನಾಗರಿಕರ ವಸತಿಗೆ ವಿಲ್ ಡಿಇಟ್ರಾಯಿಟ್ (ಜಲಸಂಧಿಯ ಪಟ್ಟಣ) ಎಂದು ಹೆಸರು ಬಂತು. ಕ್ರಮೇಣ ಇದು ಡಿಟ್ರಾಯಿಟ್ ಎಂಬ ಇಂಗ್ಲಿಷ್ ರೂಪ ತೆಳೆಯಿತು. 1760ರಲ್ಲಿ ಬ್ರಿಟಿಷರು ಇದನ್ನು ವಶಪಡಿಸಿಕೊಂಡರು. ಅಮೆರಿಕನ್ ಕ್ರಾಂತಿಯ ಅಂತ್ಯದಲ್ಲಿ ಬ್ರಿಟಿಷರು ಆಲಿಗನಿ ಪರ್ವತಗಳ ಪಶ್ಚಿಮದ ಪ್ರದೇಶವನ್ನು ಅಮೆರಿಕಕ್ಕೆ ಒಪ್ಪಿಸಿದರಾದರೂ ಒಪ್ಪಂದದಂತೆ ಡಿಟ್ರಾಯಿಟನ್ನು ಬಿಡದೆ ಇಟ್ಟುಕೊಂಡಿದ್ದರು. ಸ್ಥಳೀಯ ಇಂಡಿಯನರ ಮೂಲಕ ಕಿರುಕುಳ ಕೊಡುತ್ತಿದ್ದರು. ಇಂಡಿಯನರ ವಿರುದ್ಧ ಹಲವು ಕದನಗಳು ನಡೆದುವು. ಕೊನೆಗೆ ಬ್ರಿಟಿಷ್ ಸೇನೆಯನ್ನು ಅಲ್ಲಿಂದ ತೆರವು ಮಾಡಬೇಕೆಂದು ಕೌಲಾಗಿ, 1796ರಲ್ಲಿ ನಗರ ಅಮೆರಿಕನರ ವಶಕ್ಕೆ ಬಂತು. 1802ರಲ್ಲಿ ಡಿಟ್ರಾಯಿಟ್ ಪಟ್ಟಣವಾಯಿತು. 1805ರಲ್ಲಿ ಅದು ಹೊಸದಾಗಿ ನಿರ್ಮಿತವಾದ ಮಿಷಿಗನ್ ಪ್ರದೇಶದ ರಾಜಧಾನಿಯಾಯಿತು. ಆ ವರ್ಷ ಇಡೀ ಪಟ್ಟಣ ಬೆಂಕಿಗೆ ತುತ್ತಾಯಿತು. ಹೊಸ ದೊಡ್ಡ ನಗರವೊಂದು ನಿರ್ಮಾಣವಾಯಿತು. 1812ರ ಯುದ್ಧದ ಫಲವಾಗಿ ಈ ನಗರ ಬ್ರಿಟಿಷರ ಅಧೀನಕ್ಕೆ ಬಂದಿದ್ದು, 1813ರ ಸೆಪ್ಟೆಂಬರ್‍ವರೆಗೂ ಅವರ ವಶದಲ್ಲಿತ್ತು. 1815ರಲ್ಲಿ ನಗರವಾಯಿತು. 1837ರಲ್ಲಿ ಮಿಷಿಗನ್ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ಬಂದಾಗ ಡಿಟ್ರಾಯಿಟ್ ರಾಜಧಾನಿಯಾಗಿ ಮುಂದುವರಿಯಿತು. ಆದರೆ 1847ರಲ್ಲಿ ಲ್ಯಾನ್ಸಿಂಗ್ ರಾಜಧಾನಿಯಾಯಿತು. 1870ರವರೆಗೆ ಡಿಟ್ರಾಯಿಟ್ ಮುಖ್ಯವಾಗಿ ವಾಣಿಜ್ಯ ನಗರವಾಗಿತ್ತು; ಸುತ್ತ ಮುತ್ತಣ ರೈತರ ಸಗಟು ವ್ಯಾಪಾರಸ್ಥಳವಾಗಿತ್ತು. ತರುವಾಯ ಕೈಗಾರಿಕೆಗಳು ಬೆಳೆಯತೊಡಗಿದುವು. 20ನೆಯ ಶತಮಾನದ ಮೊದಲ ದಶಕದಲ್ಲಿ ಮೋಟಾರು ವಾಹನಗಳ ಕೈಗಾರಿಕೆ ಬೆಳೆಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ (1914-18) ಡಿಟ್ರಾಯಿಟ್ ನಗರ ಸಾವಿರಾರು ಮೋಟಾರು ವಾಹನಗಳನ್ನು ತಯಾರಿಸಿತು. ಎರಡನೆಯ ಮಹಾಯುದ್ಧದಲ್ಲಿ (1939-45) ಯುದ್ಧಕ್ಕೆ ಬೇಕಾದ ಮೋಟಾರು ವಾಹನಗಳು, ಟ್ಯಾಂಕ್, ವಿಮಾನ, ನೌಕೆ ಮೊದಲಾದುವನ್ನು ತಯಾರಿಸಿ ಪ್ರಪಂಚದ ಶಸ್ತ್ರಾಗಾರ ಎಂಬ ಹೆಸರು ಪಡೆಯಿತು. 1943 ಮತ್ತು 1967ರಲ್ಲಿ ಇಲ್ಲಿಯ ನೀಗ್ರೋಗಳಿಗೂ ಬಿಳಿಯರಿಗೂ ಘರ್ಷನೆ ಉಂಟಾಗಿತ್ತು.

ಇತರ ಮಾಹಿತಿ[ಬದಲಾಯಿಸಿ]

ಡಿಟ್ರಾಯಿಟ್‍ಗೆ ಮೋಟಾರು ನಗರ ಎಂಬ ಹೆಸರಿದೆ. ಇದು ಅಮೆರಿಕದ ದೊಡ್ಡ ನಗರಗಳಲ್ಲಿ 5ನೆಯದು. ಇದರ ಆಡಳಿತಕ್ಕೆ ಒಬ್ಬ ಮೇಯರ್ ಮತ್ತು ನಗರ ಸಭೆ ಉಂಟು. 4 ವರ್ಷಗಳಿಗೊಮ್ಮೆ ಮೇಯರ್ ಮತ್ತು ಸಭಾಸದಸ್ಯರ ಚುನಾವಣೆಯಾಗುತ್ತದೆ. ಚುನಾವಣೆ ಪಕ್ಷಾನುಗುಣವಲ್ಲ.

ನಗರದಲ್ಲಿ 300 ಶಾಲೆಗಳಿವೆ. ನಗರದ ಎರಡು ವಿಶ್ವವಿದ್ಯಾಲಯಗಳು ಡಿಟ್ರಾಯಿಟ್ ವಿಶ್ರವಿದ್ಯಾಲಯ (1877); ವೇನ್ ವಿಶ್ವವಿದ್ಯಾಲಯ (1933), ಕಾಲೇಜುಗಳಲ್ಲಿ ಪ್ರಮುಖವಾದವು ಮೇರಿ ಗ್ರೋವ್ ಕಾಲೇಜು (1910), ಮರ್ಸಿ ಕಾಲೇಜು (1941), ಡಿಟ್ರಾಯಿಟ್ ಬೈಬಲ್ ಕಾಲೇಜು (1945), ಮಿಷಿಗನ್ ಲೂತರನ್ ಕಾಲೇಜು (1962) ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆ (1891). ನಗರದ ಕೇಂದ್ರ ಗ್ರಂಥಾಲಯದಲ್ಲಿ 14,00,000ಕ್ಕೂ ಹೆಚ್ಚಿನ ಗ್ರಂಥಗಳಿವೆ. ಡಿಟ್ರಾಯಿಟ್ ಕಲಾ ಕೇಂದ್ರದಲ್ಲಿ ಅಮೂಲ್ಯ ಶಿಲ್ಪ ಹಾಗೂ ಚಿತ್ರಕೃತಿಗಳಿವೆ.

ಡಿಟ್ರಾಯಿಟ್ ನಗರ ಪ್ರಪಂಚದ ಹಿರಿಯ ಕೈಗಾರಿಕಾ ಪಟ್ಟಣಗಳಲ್ಲೊಂದು. ಇಲ್ಲಿ 6,000ಕ್ಕೂ ಹೆಚ್ಚಿನ ಕಾರ್ಖಾನೆಗಳಿವೆ. ಮಹಾನಗರದ ಜನರಲ್ಲಿ 1/3 ಭಾಗದಷ್ಟು ಜನರ ಉದ್ಯೋಗ ಮೋಟಾರು ಕಾರ್ಖಾನೆಗಳಲ್ಲಿ. ನಗರದ ಇತರ ಕೈಗಾರಿಕೆಗಳಲ್ಲಿ ಅಲ್ಯೂಮಿನಿಯಂ ಎರಕ, ಹಿತ್ತಾಳೆ ಹಾಗೂ ಕಂಚಿನ ಸಾಮಾನು, ಯಂತ್ರೋಪಕರಣಗಳು, ಬಣ್ಣ, ವಾರ್ನಿಷ್, ರಬ್ಬರ್ ಸರಕು, ರಾಸಾಯನಿಕ ಹಾಗೂ ಔಷಧಗಳ ಕೈಗಾರಿಕೆಗಳು ಮುಖ್ಯ. ಡಿಟ್ರಾಯಿಟ್ ಬಳಿ ಲವಣ ಕಾರ್ಖಾನೆಗಳೂ ಇವೆ. ಅಮೆರಿಕದ ಮಹಾಸರೋವರಗಳ ಪ್ರದೇಶದ ಪೂರ್ವ ಹಾಗೂ ಪಶ್ಚಿಮ ಬಂದರುಗಳ ನಡುವಣ ವ್ಯಾಪಾರಕ್ಕೆ ಡಿಟ್ರಾಯಿಟ್ ಪ್ರಮುಖ ಕೇಂದ್ರ. 700ಕ್ಕಿಂತ ಹೆಚ್ಚು ನೌಕೆಗಳು ಡಿಟ್ರಾಯಿಟ್ ಬಂದರಿಗೆ ಪ್ರತಿವರ್ಷ ಬರುತ್ತವೆ. ನಗರದೊಳಗೆ ಸಂಚಾರಕ್ಕೆ ಕಾರುಗಳು ಹಾಗೂ ಸಾರ್ವತ್ರಿಕ ಬಸ್ಸುಗಳು ಅಧಿಕ. ಕಾರುಗಳು ಸಂಚಾರಕ್ಕೆ ನಗರದ ವಾಯುವ್ಯ ಹಾಗೂ ಈಶಾನ್ಯ ಭಾಗಗಳಲ್ಲಿ ಎಡ್ಸಲ್ ಫೋರ್ಡ್ ಎಕ್ಸ್‍ಪ್ರೆಸ್ ಹೆದ್ದಾರಿಗಳಿವೆ. ಈ ಹೆದ್ದಾರಿಗಳಲ್ಲಿ ನಿಯತ ವೇಗದಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸಲಾಗಿದೆ. ನಗರದಲ್ಲಿ ಎರಡು ವಿಮಾಣ ನಿಲ್ದಾಣಗಳುಂಟು. ಮೆಟ್ರೊಪಾಲಿಟನ್ ವಿಮಾನ ನಿಲ್ದಾಣ ನಗರದ ಪಶ್ಚಿಮಕ್ಕೆ 21 ಮೈ. ದೂರದಲ್ಲಿದೆ ; ವಿಲೋರನ್ ವಿಮಾನ ನಿಲ್ದಾಣ ಇರುವುದು 31 ಮೈ. ದೂರದಲ್ಲಿ. ನಗರಕ್ಕೆ ರೈಲುಮಾರ್ಗ ಹಾಕಿದ್ದು 1817ರಲ್ಲಿ. ಈಗ ಡಿಟ್ರಾಯಿಟ್ ಒಂದು ಪ್ರಮುಖ ರೈಲ್ವೆ ಜಂಕ್ಷನ್.

ನಗರದಲ್ಲಿ ಮೊದಲು ಪ್ರಕಟವಾದ ವೃತ್ತಪತ್ರಿಕೆ ಡಿಟ್ರಾಯಿಟ್ ಗೆಜೆಟ್ (1817). ನಗರದ ಉದ್ಯಾನಗಳಿಗೆ ಮೀಸಲಾಗಿರುವ ಭೂಮಿಯ ಒಟ್ಟು ವಿಸ್ತೀರ್ಣ 5,700 ಎಕರೆ. ಡಿಟ್ರಾಯಿಟ್ ನದಿಯ ಬೆಲ್ ದ್ವೀಪದಲ್ಲಿ ಮಕ್ಕಳಿಗಾಗಿ ಪ್ರಾಣಿ ಸಂಗ್ರಹಾಲಯವಿದೆ. ವೃಕ್ಷರಾಶಿಯಿಂದ ಕೂಡಿದ 1,000 ಎಕರೆಗಳ ಈ ಉದ್ಯಾನ ದ್ವೀಪ ಒಂದು ಸುಂದರ ತಾಣ.