ಡೀಲಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೀಲಾಸ್- ಇಜೀಯನ್ ಸಮುದ್ರದಲ್ಲಿರುವ ಒಂದು ಸಣ್ಣ ಗ್ರೀಕ್ ದ್ವೀಪ. ಬೆಣಚುಕಲ್ಲಿನಿಂದ ಕೂಡಿದ ಈ ದ್ವೀಪ 3ಮೈ. ಉದ್ದ ಮತ್ತು 1/2-1 ಮೈ. ಅಗಲವಾಗಿದೆ. ರಿನಿಯಕ್ಕೆ 1/2 ಮೈ, ಪೂರ್ವಕ್ಕೂ ಮಿಕೊನಸ್‍ಗೆ 2 ಮೈ. ಪಶ್ಚಿಮಕ್ಕೂ ಇದೆ. ಇದರ ಮಧ್ಯಭಾಗದ ಶಿಖರವಾದ ಸಿಂತಸ್‍ನ ಎತ್ತರ 350'. ನೆರೆಯ ದ್ವೀಪಗಳ ಅನೇಕ ಶಿಖರಗಳು ಇದಕ್ಕಿಂತ ಎತ್ತರವಿದ್ದರೂ ಇದು ಸುತ್ತಲ ಸಮುದ್ರ ಪ್ರದೇಶದಲ್ಲಿ ಎದ್ದು ಕಾಣುತ್ತದೆ. ಇಲ್ಲಿ ದೊರಕಿದ ಪ್ರಾಚೀನ ವಸ್ತುಗಳನ್ನು ಇಡಲು ಒಂದು ವಸ್ತುಸಂಗ್ರಹಾಲಯವನ್ನು ಕಟ್ಟಲಾಗಿದೆ. ಡೀಲಾಸ್ ದ್ವೀಪ ಬಹುತೇಕ ನಿರ್ಜನವಾಗಿದೆ.

ಇತಿಹಾಸ[ಬದಲಾಯಿಸಿ]

ಡೀಲಾಸ್ ದ್ವೀಪದ ಉಗಮದ ಬಗ್ಗೆ ಪ್ರಾಚೀನ ಗ್ರೀಕರಲ್ಲಿ ಅನೇಕ ಐತಿಹ್ಯಗಳಿದ್ದುವು. ಅವುಗಳಲ್ಲಿ ಹೆಚ್ಚು ಪ್ರಚಲಿತವಾಗಿರುವುದು ಹೀಗಿದೆ: ಡೀಲಾಸ್ ದ್ವೀಪವು ಇಜೀಯನ್ ಸಮುದ್ರದಲ್ಲಿ ತೇಲಿಕೊಂಡು ಹೋಗುತ್ತಿತ್ತು. ಆಗ ಜ್ಯೂಸ್ ದೇವತೆ ತನ್ನ ಅಲೆದಾಡುತ್ತಿದ್ದ ಪ್ರೇಯಸಿ ಲೀಟೋಗಾಗಿ ಇದನ್ನು ತಡೆದು ನಿಲ್ಲಿಸಿದ, ಅವಳಲ್ಲಿ ಜನಿಸಲಿದ್ದ ಅಪಾಲೋ ಮತ್ತು ಆರ್ಟಿಮಿಸರಿಗೆ ಇದು ಜನ್ಮಸ್ಥಳವಾಗಲೆಂಬುದು ಅವನ ಉದ್ದೇಶವಾಗಿತ್ತು. ಮೈಸನೀಯನ್ ಅವಧಿಯಲ್ಲಿ ಬಹುಶಃ ಕ್ಯಾರಿಯನರಿಂದ ಇಲ್ಲಿ ವಸತಿ ಏರ್ಪಟ್ಟಿತ್ತೆಂಬುದು ಇಲ್ಲಿ ನಡೆಸಿರುವ ಉತ್ಖನನಗಳಿಂದ ತಿಳಿದು ಬರುವ ಸಂಗತಿ. ಪ್ರಸಿದ್ಧವಾದ ಐಯೋನಿಯನ್ ಉತ್ಸವ ಇಲ್ಲಿ ನಡೆಯುತ್ತಿತ್ತೆಂಬುದೇ ಇತಿಹಾಸದಲ್ಲಿ ಇದರ ಬಗ್ಗೆ ದೊರಕುವ ಪ್ರಥಮ ಉಲ್ಲೇಖ. ಇದಕ್ಕೆ ಆತೆನ್ಸೂ ಸೇರಿದಂತೆ ಎಲ್ಲ ಐಯೋನಿಕ್ ರಾಜ್ಯಗಳೂ ತಂತಮ್ಮ ಪವಿತ್ರ ರಾಯಭಾರಿಗಳನ್ನು ಕಳುಹಿಸುತ್ತಿದ್ದುವು. ಅಪಾಲೋನ ಜನ್ಮದಿನದ ಈ ಉತ್ಸವ ನಡೆಯುತ್ತಿತ್ತು. ಕ್ರಿ.ಪೂ.6ನೆಯ ಶತಮಾನದಲ್ಲಿ ಡೀಲಾಸ್‍ನ ಅಪಾಲೋ ಪ್ರಸಿದ್ಧಿಯ ಶಿಖರ ಮುಟ್ಟಿದ್ದ. ಆಗ ಸೇಮಾಸ್ ದ್ವೀಪದ ನಿರಂಕುಶಾಧಿಪತಿ ಪೊಲಿಕ್ರಿಟೀಸ್ ಎಂಬವನು ಅಪಾಲೋ ಸೇವಾರ್ಥವಾಗಿ ರಿನಿಯ ದ್ವೀಪವನ್ನು ದತ್ತಿಯಾಗಿ ಕೊಟ್ಟ. ಆತೆನ್ಸಿನ ನಿರಂಕುಶಪ್ರಭು ಪೈಸಿಸ್ಟ್ರಟಿಸ್ ಎಂಬವನು ಇಲ್ಲಿಯ ದೇವಸ್ಥಾನದಿಂದ ದೃಷ್ಟಿ ಹಾಯುವಷ್ಟು ದೂರದಲ್ಲಿದ್ದ ಸಮಾಧಿಗಳನ್ನೆಲ್ಲ ತೆಗೆಯಿಸಿದ. ಪರ್ಷಿಯನ್ ಯುದ್ಧಗಳ ಅನಂತರ ಆತೆನ್ಸ್ ಪ್ರಬಲವಾಯಿತು. ಡೀಲಿಯನ್ ಒಕ್ಕೂಟ ಹೋಗಿ ಅತೀನಿಯನ್ ಸಾಮ್ರಾಜ್ಯ ಏರ್ಪಟ್ಟಿತು. ಅತೀನಿಯನರು ಕ್ರಿ.ಪೂ.426ರಲ್ಲಿ ಇಲ್ಲಿಯ ಉತ್ಸವದ ಸ್ವರೂಪವನ್ನು ಮಾರ್ಪಡಿಸಿದರು. ದ್ವೀಪದ ಎಲ್ಲ ಸಮಾಧಿಗಳನ್ನು ತೆಗೆದು ಅದನ್ನು ಶುದ್ಧೀಕರಿಸಿದರಲ್ಲದೆ, ಸಾಯಲಿದ್ದ ಎಲ್ಲರೂ ಅಥವಾ ಪ್ರಸವಿಸಲಿದ್ದ ಎಲ್ಲರೂ ದ್ವೀಪದಿಂದ ನಿರ್ಗಮಿಸಬೇಕೆಂದು ಆಜ್ಞೆ ಮಾಡಿದರು.

ಪೆಲೊಪೊನೀಷಿಯನ್ ಯುದ್ಧದ ಕೊನೆಯಲ್ಲಿ ಸ್ಪಾರ್ಟನರು ಡೀಲಾಸ್ ದ್ವೀಪದ ಜನಕ್ಕೆ ಸ್ವಯಮಾಡಳಿತದ ಅಧಿಕಾರ ನೀಡಿದರು, ಆದರೆ ಆತೆನ್ಸಿನವರು ಮತ್ತೆ ಪ್ರಬಲರಾದರು. ಕ್ರಿ.ಪೂ.322-166ರಲ್ಲಿ ಮ್ಯಾಸಿಡೋನಿಯನರ ಕಾಲದಲ್ಲಿ ಡೀಲಾಸ್ ಪುನಃ ಸ್ವತಂತ್ರವಾಯಿತು. ಅಲ್ಲಿಯ ದೇವಾಲಯ ಮತ್ತು ಅದರ ಸ್ವತ್ತುಗಳ ಆಡಳಿತವನ್ನು ಏರೋಪಾಯ್ ಎಂಬ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಕ್ರಿ.ಪೂ.166ರ ತರುವಾಯ ರೋಮನರು ಡೀಲಿಯನ್ ಪೂಜೆಯ ನಿಯಂತ್ರಣವನ್ನು ಆತೆನ್ಸಿನವರಿಗೆ ಮತ್ತೆ ವಹಿಸಿದರು. ಆದರೆ ಆ ದ್ವೀಪಕ್ಕೆ ಅನೇಕ ವಾಣಿಜ್ಯ ಸವಲತ್ತುಗಳನ್ನು ನೀಡಿದ್ದರಿಂದ ಅದು ಉಚ್ಛ್ರಾಯ ಸ್ಥಿತಿಗೆ ಬಂತು.

ಕ್ರಿ.ಪೂ.87ರಲ್ಲಿ ಪಾರ್ತಿಯದ ದೊರೆ 6ನೆಯ ಮಿತ್ರಡಟೀಸನ ದಂಡನಾಯಕ ಮೆನೊಫೆನೀಸ್ ಎಂಬವನು ರೋಮಿಗೆ ನಿಷ್ಠೆಯಿಂದಿದ್ದ ಈ ದ್ವೀಪವನ್ನು ಧ್ವಂಸ ಮಾಡಿದ. ಈ ಆಘಾತದಿಂದ ಇದು ಎಂದೂ ಚೇತರಿಸಿಕೊಳ್ಳಲಿಲ್ಲ. ಕ್ರಿ.ಪೂ.42ರಲ್ಲಿ ಇದರ ಮೇಲೆ ಮತ್ತೆ ಆತೆನ್ಸಿನ ಹತೋಟಿ ಸ್ಥಾಪಿತವಾಯಿತು. ಆದರೆ ಆತೆನ್ಸಿನ ಕೆಲವು ಅಧಿಕಾರಿಗಳ ವಿನಾ ಅಲ್ಲಿ ಯಾರೂ ಇರಲಿಲ್ಲವೆಂದು ಕಾಣುತ್ತದೆ. ಪ್ರಾಚೀನ ಮತ ಅಧಿಕೃತವಾಗಿ ಅಳಿಸಿಹೋಗುವವರೆಗೂ ದೇವಸ್ಥಾನದ ಪೂಜಾದಿಗಳು ನಡೆಯುತ್ತಿದ್ದುವು.

ಪುರಾತತ್ವ[ಬದಲಾಯಿಸಿ]

ಆತೆನ್ಸ್‍ನಲ್ಲಿರುವ ಫ್ರೆಂಚ್ ಶಾಲೆ ಇಲ್ಲಿ 1873ರಿಂದ ನಡೆಸಿದ ಉತ್ಖನನಗಳ ಪರಿಣಾಮವಾಗಿ ಅನೇಕ ಪ್ರಾಚೀನ ಕಟ್ಟಡಗಳು ಪತ್ತೆಯಾಗಿವೆ. ಅಪಾಲೋ ದೇವತೆಯ ಸನ್ನಿಧಿ, ಗ್ರೀಕ್ ಮತ್ತು ರೋಮನ್ ಕಾಲದ ವಾಣಿಜ್ಯ ಪ್ರದೇಶ, ರಂಗಮಂಟಪ, ವಿದೇಶೀ ದೇವತೆಗಳ ದೇವಾಲಯಗಳು, ಸಿಂತಸ್ ಶಿಖರದ ಮೇಲಿರುವ ದೇವಾಲಯಗಳು, ಕೆಲವು ಖಾಸಗಿ ನಿವಾಸಗಳು ಮೊದಲಾದವನ್ನೂ ಉತ್ಖನನ ಮಾಡಲಾಗಿದೆ. ವಿವಿಧ ಕಾಲಗಳ ಶಿಲ್ಪಕೃತಿಗಳೂ ಆ ಕಾಲದ ದೇವಾಲಯದ ಆಡಳಿತ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಶಾಸನಗಳೂ ಸಿಕ್ಕಿವೆ.

ಈ ದ್ವೀಪದ ಪ್ರಾಚೀನ ಕಾಲದ ಹಡಗಿನ ಇಳಿದಾಣ ಡೀಲಾಸ್ ಮತ್ತು ರಿನಿಯ ದ್ವೀಪಗಳ ನಡುವಣ ಕಾಲುವೆಗೆ ಎದುರಾಗಿದೆ. ದೇವಾಲಯದ ಪ್ರಾಕಾರವನ್ನು ಕ್ರಿ.ಪೂ.ಸು.200ರಲ್ಲಿ ಮ್ಯಾಸಿಡೋನಿಯದ 5ನೆಯ ಫಿಲಿಪ್ ಕಟ್ಟಿಸಿದನೆಂದು ತಿಳಿದುಬರುತ್ತದೆ. ಅಲ್ಲಿಗೆ ಹೋಗಲು ಒಂದು ರಾಜಮಾರ್ಗವುಂಟು. ಪವಿತ್ರ ರಾಯಭಾರಿ ನಿಯೋಗಗಳು ಮತ್ತು ಮೆರವಣಿಗೆಗಳು ಸಾಮಾನ್ಯವಾಗಿ ಈ ಮಾರ್ಗದ ಮೂಲಕವೇ ಹೋಗುತ್ತಿದ್ದುವು. ಆದರೆ ಆತೆನ್ಸಿನ ಪವಿತ್ರ ಮೆರವಣಿಗೆ ಬರಲು ಹೆಕೇಟ್ ದ್ವೀಪವೆಂದು ಕರೆಯುವ ಕಲ್ಲಿನ ದಿಬ್ಬವೊಂದರಿಂದ ಡೀಲಾಸ್‍ಗೆ ನಿಷಿಯಸ್ ಎಂಬವನು ಒಂದು ಸೇತುವೆ ಕಟ್ಟಿಸಿದ. ಈ ರಾಜಮಾರ್ಗದ ಎದುರುಗಡೆ ನಾಲ್ಕು ಸ್ತಂಭಗಳ ಮುಂಚಾಚಿದ ಪ್ರವೇಶದ್ವಾರವಿದೆ. ಈ ಮಾರ್ಗ ಮುಂದಕ್ಕೆ ಬಯಲಿನಲ್ಲಿ ಸಾಗುತ್ತದೆ. ಇದರ ಪಶ್ಚಿಮಕ್ಕೆ ಆರ್ಟಮಿಸ್ ದೇವತೆಯ ಪ್ರಾಕಾರ ಮತ್ತು ಪೂರ್ವಕ್ಕೆ ಮೂರು ದೇವಾಲಯಗಳಿರುವ ಒಂದು ದಿಬ್ಬವಿದೆ. ಇವುಗಳಲ್ಲಿ ತೀರ ದಕ್ಷಿಣಕ್ಕಿರುವುದೇ ಪುರಾಣ ಪ್ರಸಿದ್ಧ ಅಪಾಲೋ ದೇವಾಲಯ. ಆದರೆ, ಪಶ್ಚಿಮಭಾಗದಿಂದ ಅದರ ಹಿಂಭಾಗ ಮಾತ್ರ ಕಾಣಿಸುತ್ತದೆ. ಇನ್ನೆರಡು ದೇವಾಲಯಗಳು ಪಶ್ಚಿಮದ ಕಡೆ ಮುಖ ಮಾಡಿವೆ. ಅವನ್ನು ವೀರರಿಗೆ ಅಥವಾ ಕಿರಿಯ ದೇವತೆಗಳಿಗೆ ಅಥವಾ ಖಜಾನೆಗಳಿಗಾಗಿ ಕಟ್ಟಿರಬೇಕು. ಅವುಗಳ ಆಚೆಗೆ ತಿರುಗಿದ ರಸ್ತೆ ಅಪಾಲೋ ದೇವಾಲಯದ ಮುಂದುಗಡೆಗೆ ಬರುತ್ತದೆ. ಈ ತಿರುವಿನಿಂದ ಹೊರಭಾಗದಲ್ಲಿ ವಿವಿಧ ದ್ವೀಪಗಳಿಂದಲೂ ನಗರಗಳಿಂದಲೂ ಬಂದ ಕಾಣಿಕೆಗಳನ್ನು ಸಂಗ್ರಹಿಸುವುದಕ್ಕಾಗಿ ಇಟ್ಟಿದ್ದ ಖಜಾನೆಗಳ ಸಾಲು ಬರುತ್ತದೆ. ಬೃಹತ್ ಅಪಾಲೋ ವಿಗ್ರಹದ ಪೀಠವಿರುವುದು ಇದರ ಉತ್ತರಕ್ಕೆ. ಪ್ರಖ್ಯಾತವಾದ ಪ್ರಾಚೀನ ಶಾಸನವೂ ಆ ವಿಗ್ರಹದ ಎರಡು ದೊಡ್ಡ ಭಿನ್ನ ಭಾಗಗಳೂ ಅಲ್ಲಿವೆ. ಇದನ್ನು ಅರ್ಪಿಸಿದವರು ನಕ್ಸಿಯನರು.

ಅಪಾಲೋ ದೇವಾಲಯ ಈ ದ್ವೀಪದ ಒಂದು ಆಕರ್ಷಣೀಯ ರಚನೆ. ಅದು ಡೋರಿಕ್ ಶೈಲಿಯಲ್ಲಿ ನಿರ್ಮಿತವಾಗಿತ್ತು. ಇದರ ನಿರ್ಮಾಣಕಾರ್ಯ ಕ್ರಿ.ಪೂ.5ನೆಯ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭವಾಗಿ ಕ್ರಿ.ಪೂ.3ನೆಯ ಶತಮಾನದವರೆಗೂ ಮುಂದುವರಿಯಿತು. ಈ ದೇವಾಲಯದ ಸಮೀಪದಲ್ಲೇ ಅರ್ಟೆಮಿಸಳ ಹಳೆಯ ದೇವಾಲವಿತ್ತು. ಆ ದೇವತೆಯ ಇತ್ತೀಚಿನ ದೇವಾಲಯ ಅದರ ದಕ್ಷಿಣಕ್ಕಿದ್ದು ಅಪಾಲೋ ದೇವತೆಯ ಪೂಜಾಸ್ಥಳದ ಕಡೆ ತೆರೆದಿತ್ತು. ಅಪಾಲೋ ದೇವತೆಯ ಪೂಜಾಸ್ಥಳದ ಹೊರವಲಯದಲ್ಲಿ ದಕ್ಷಿಣದ ಕಡೆ ಪುರೋಹಿತರ ಮನೆಯೂ ಸಮಾಧಿಗಳೆಂದು ಗುರುತಿಸಲಾಗಿರುವ ಸಣ್ಣ ಸಣ್ಣ ನಿರ್ಮಾಣಗಳೂ ಇದ್ದುವು. ಇದರ ಪೂರ್ವಕ್ಕೆ ಡೈಯಾನಿಸಸ್ ದೇವಾಲಯವಿತ್ತು. ಇನ್ನೊಂದು ಕಡೆಗೆ ದೊಡ್ಡ ಅಂಗಣದಲ್ಲಿ ವಾಣಿಜ್ಯ ವಿನಿಮಯ ಸ್ಥಳವಿತ್ತು. ಅಲ್ಲಿ ಅಪ್ರೊಡೈಟ್ ಮತ್ತು ಹರ್ಮಿಸ್ ದೇವಾಲಯಗಳಿದ್ದುವು. ಉತ್ತರದ ಕಡೆ ಪೂಜಾವರಣ ಮತ್ತು ಪವಿತ್ರಸರೋವರದ ಮಧ್ಯ ಪ್ರದೇಶದಲ್ಲಿ ಪಟ್ಟಣದ ವ್ಯಾಪಕವಾದ ಅವಶೇಷಗಳಿವೆ. ರಿನಿಯ ದ್ವೀಪಕ್ಕೆ ಎದುರಾಗಿರುವ ಕಾಲುವೆಯ ದಡದ ಉದ್ದಕ್ಕೂ ಹಡಗುಕಟ್ಟೆಗಳು ಮತ್ತು ದಾಸ್ತಾನು ಮಳಿಗೆಗಳಿವೆ. ಅವುಗಳ ಆಚೆಗೆ ಕ್ರಿ.ಪೂ.2 ಅಥವಾ 3 ಶತಮಾನದಲ್ಲಿ ಕಟ್ಟಿದ ಖಾಸಗಿ ಮನೆಗಳಿವೆ. ಸಿಂತಸ್ ಬೆಟ್ಟದ ಕೆಳಗಿನ ಇಳಿಜಾರಿನಲ್ಲಿ ಒಂದು ರಂಗಮಂದಿರವಿತ್ತು. ಅದೇ ಬೆಟ್ಟದ ಶಿಖರದ ಮೇಲೆ ಪ್ರಾಚೀನ ಗುಹಾದೇವಾಲಯದ ಮೇಲ್ಭಾಗದಲ್ಲಿ ಜû್ಯೂಸ್ ಮತ್ತು ಅತೀನ ದೇವತೆಗಳಿಗೆ ಅರ್ಪಿಸಿರುವ ಒಂದು ಸಣ್ಣ ಪೂಜಾ ಸ್ಥಳವುಂಟು. ಬೆಟ್ಟದ ಇಳಿಜಾರಿನಲ್ಲಿ, ಗುಹಾದೇವಾಲಯ ಮತ್ತು ಐನೋಪಸ್ ಕಮರಿಯ ನಡುವೆ, ವಿದೇಶೀ ದೇವತೆಗಳ ಎರಡು ದೇವಾಲಯಗಳನ್ನೂ ಒಂದು ಸಣ್ಣ ಸಂಗೀತಶಾಲೆಯನ್ನೂ ಒಳಗೊಂಡ ಸಮತಟ್ಟು ನೆಲವಿದೆ. ರಂಗಮಂದಿರಕ್ಕೂ ರೇವಿಗೂ ನಡುವೆ ಮನೆಗಳ ಅವಶೇಷಗಳುಂಟು. ದ್ವೀಪದ ಉತ್ತರದ ತುದಿಯ ಬಳಿ ವ್ಯಾಯಾಮಶಾಲೆ, ಕ್ರೀಡಾಂಗಣ ಮತ್ತು ಪ್ರಾಚೀನ ಆರಾಧನ ಮಂದಿರಗಳಿವೆ.

ಚಿತ್ರಸಂಪುಟ[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಡೀಲಾಸ್&oldid=1062484" ಇಂದ ಪಡೆಯಲ್ಪಟ್ಟಿದೆ