ಡಿ. ಕೆ. ರಾಜೇಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಿ.ಕೆ. ರಾಜೇಂದ್ರ ಇಂದ ಪುನರ್ನಿರ್ದೇಶಿತ)

ಜನಪದ ಸಾಹಿತ್ಯ, ವಿಮರ್ಶೆ, ಸಂಪಾದನೆ, ವಿಚಾರ ಸಾಹಿತ್ಯ – ಹೀಗೆ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ರಾಜೇಂದ್ರರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನ ಶಿವರದ ಪಟೇಲರ ಮನೆತನದಲ್ಲಿ ತಂದೆ ಕೆಂಪಲಿಂಗೇಗೌಡರು, ತಾಯಿ ಗೌರಮ್ಮ.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

  • ಪ್ರಾರಂಭಿಕ ಶಿಕ್ಷಣ ದಂಡಿನ ಶಿವರದಲ್ಲಿ. ಪ್ರೌಢಶಾಲಾ ಶಿಕ್ಷಣ ಅರಕಲಗೂಡು ಮತ್ತು ಶಿರಾ ಪ್ರೌಢಶಾಲೆಗಳಲ್ಲಿ. ಹಾಸನದ ಪ್ರಥಮ ದರ್ಜೆ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ನಂತರದ ವಿದ್ಯಾಭ್ಯಾಸ ಮೈಸೂರು. ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ‘ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ’ ಎಂಬ ಪ್ರೌಢ ಪ್ರಬಂಧವನ್ನು ಪ್ರೊ. ದೇಜಗೌರವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ.
  • ಗ್ರಾಮೀಣ ಪ್ರದೇಶದಿಂದ ಬಂದ ಇವರಿಗೆ ಸಹಜವಾಗಿಯೇ ಜಾನಪದ ಕ್ಷೇತ್ರದತ್ತ ಆಸಕ್ತಿ ಬೆಳೆದು ತಮ್ಮ ಊರಿನಲ್ಲಿ ನಡೆಯುತ್ತಿದ್ದ ಹೊನ್ನಾದೇವಿಯ ಜಾತ್ರೆ ಮತ್ತು ಜನಪದ ಪ್ರದರ್ಶನದಿಂದ ಪ್ರಭಾವಿತರಾದರು. ಇದರಿಂದ ಪ್ರೇರಿತರಾಗಿ ಎಂ.ಎ. ತರಗತಿಯಲ್ಲಿ ಐಚ್ಛಿಕ ವಿಷಯವಾಗಿ ಓದಿದ್ದು ಜಾನಪದ ವಿಷಯವೆ. ಗುರುಗಳಾಗಿ ದೊರೆತವರು ದೇಜಗೌ, ಎಸ್.ವಿ. ಪರಮೇಶ್ವರ ಭಟ್ಟ, ಜಿ. ವರದರಾಜರಾವ್, ಎಲ್. ಬಸವರಾಜು, ತಿಪ್ಪೇರುದ್ರಸ್ವಾಮಿ, ಸುಜನಾ, ಸಿಪಿಕೆ ಮುಂತಾದವರುಗಳು.[೧]
  • ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನ ಸಹಾಯಕರಾಗಿ ಸೇರಿದ ಇವರು ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ವಿವಿಧ ಹಂತಗಳಲ್ಲಿ ತಮ್ಮ ಜವಾಬ್ದಾರಿಯುತ ಕಾರ್ಯಗಳನ್ನು ನಿರ್ವಹಿಸಿದ್ದಾರೆ.

ಕೃತಿಗಳು ಮತ್ತು ಕಥೆಗಳು[ಬದಲಾಯಿಸಿ]

ಕೃತಿಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡುವುದರ ಮುಖಾಂತರ ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರಲ್ಲಿ ಪ್ರಮುಖರೆನಿಸಿದ್ದಾರೆ. ಸುಮಾರು ಒಂಬತ್ತು ವಿಮರ್ಶಾ ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ ಜಾನಪದದ ವಿವಿಧ ಮುಖಗಳನ್ನು ಪರಿಚಯಿಸುವ ಕೃತಿ ‘ಜಾನಪದ ಸಮೀಕ್ಷೆ’. ಈ ಕೃತಿಯಲ್ಲಿ ಕಳೆದ ಶತಮಾನದಲ್ಲಿ ಜಾನಪದ ಕ್ಷೇತ್ರದಲ್ಲಿ ದುಡಿದ ವಿದೇಶಿಯರ ಕಾರ್ಯಕ್ಷೇತ್ರವನ್ನು ವಿವೇಚಿಸಿರುತ್ತಾರೆ. ಗೋವರ್, ಜೆ.ಎಫ್. ಫ್ಲೀಟ್, ಕಿಟ್ಟೆಲ್ ಮುಂತಾದವರುಗಳ ಜೊತೆಗೆ ನಮ್ಮ ನಾಡಿನ ಜಾನಪದ ಸಂಗ್ರಾಹಕರಾದ ಮಾಸ್ತಿ, ಹಲಸಂಗಿ ಚೆನ್ನಮಲ್ಲಪ್ಪ, ರೇವಪ್ಪ, ಕೆ.ಆರ್. ಲಿಂಗಪ್ಪ, ಅರ್ಚಕ ರಂಗಸ್ವಾಮಿ, ದೇವುಡು, ಗೊರೂರು ಮುಂತಾದವರುಗಳ ಬಗ್ಗೆಯೂ ಅಧ್ಯಯನ ಪೂರ್ಣ ಲೇಖನವನ್ನು ಬರೆದಿದ್ದಾರೆ.
  • ೧.ಜಾನಪದ ಸಂಚಯ’ ಕೃತಿಯಲ್ಲಿ ವಿವಿಧ ಸಮ್ಮೇಳನಗಳಲ್ಲಿ ಪ್ರಸ್ತುತ ಪಡಿಸಿದ ಲೇಖನಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಕಲೆ, ತೊಗಲು ಬೊಂಬೆಯಾಟ, ಹಳ್ಳಿಗಾಡಿನ ಆಟಗಳು (ಕುಂಟೆ ಬಿಲ್ಲೆ, ಜೂಟಾಟ, ಕಣ್ನಾ ಮುಚ್ಚಾಲೆ, ಹರಳು ಮನೆ ಆಟ, ಕುಂಟಾಟ), ವೃತ್ತಿ ಗಾಯಕರು ಮುಂತಾದವುಗಳ ಬಗ್ಗೆ ಚರ್ಚಿಸಿದ್ದಾರೆ.
  • ೨.ಜಾನಪದ ಸಮಾಲೋಕ’ ಇನ್ನೊಂದು ವಿಮರ್ಶಾ ಕೃತಿ. ಇದು ಕಲೆ ಮತ್ತು ಸಂಸ್ಕೃತಿ, ಜನಪದ ಕಲೆಗಳು ಮತ್ತು ಧರ್ಮ, ಬಯಲಾಟಗಳ ಜೀವಾಳ, ಕಥೆಗಾರ ಮೇಳ, ಜಾನಪದ ನೃತ್ಯ ನಾಟಕಗಳು ಮತ್ತು ಬೊಂಬೆಯಾಟಗಳು ಮುಂತಾದ ವಿಷಯಗಳ ಬಗ್ಗೆ ವಸ್ತು ನಿಷ್ಠವಾಗಿ ವಿಮರ್ಶಾ ದೃಷ್ಟಿಯಿಂದ ರಚಿಸಿರುವ ಉತ್ತಮ ಕೃತಿಯಾಗಿದೆ.
  • ೩.ಜಾನಪದ ಸಮನ್ವಯ’ ಎಂಬ ಮತ್ತೊಂದು ವಿಮರ್ಶಾ ಕೃತಿಯಲ್ಲಿ ಜನಪದ ಕಲೆ ಮತ್ತು ಮತಧರ್ಮ ಇವೆರಡರ ಸಂಬಂಧವನ್ನು ತುಲನಾತ್ಮಕವಾಗಿ ಚಿರ್ಚಿಸಿರುವುದಲ್ಲದೆ ‘ತೊಗಲು ಬೊಂಬೆಯಾಟ’, ‘ನಂಬಿಕೆಗಳು’ ಮುಂತಾದ ವಿಷಯಗಳ ಬಗ್ಗೆ ವಿಸ್ತೃತ ಲೇಖನಗಳಿವೆ. ಇವಲ್ಲದೆ ಇತರ ವಿಮರ್ಶಾ ಕೃತಿಗಳೆಂದರೆ ‘ಮುರಾವು’, ಜಾನಪದ: ಕೆಲವು ಗ್ರಹಿಕೆಗಳು, ಜಾನಪದ ಮತ್ತು ಶಿಷ್ಟಪದ, ಕರಪಾಲದವರು, ಜನಪದ ನಂಬಿಕೆಗಳು, ಮುಂತಾದ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.[೨]

ಕಥೆಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • ಇವಲ್ಲದೆ ಇವರ ಸಂಪಾದಿತ ಕೃತಿಗಳೆಂದರೆ ಕರಪಾಲ ಮೇಳ, ಶಿಶು ಪ್ರಾಸಗಳು, ನಮ್ಮ ಸುತ್ತಿನ ನಂಬಿಕೆಗಳು, ಬೆದರು ಬೊಂಬೆ ಮತ್ತು ಇತರ ಜನಪದ ಕಥೆಗಳು.
  • ಹೀಗೆ ಜಾನಪದ ಸಾಹಿತ್ಯದ ಚಿಂತನೆ, ಸಂಪಾದನೆ, ವಿಮರ್ಶೆಗಳ ಜೊತೆಗೆ ಜಾನಪದ ಪತ್ರಿಕೆಗಳಾದ ಜಾನಪದ, ಜಾನಪದ ಜಗತ್ತು, ಮೂಡಲಪಾಯ, ಜಾನಪದ ಗಂಗೋತ್ರಿ ಮತ್ತು ಇಂಗ್ಲೀಷಿನಲ್ಲಿ ಪ್ರಕಟವಾಗುತ್ತಿದ್ದ ಕರ್ನಾಟಕ ಫೋಕ್ಲೋರ್ ನ್ಯೂಸ್ ಲೆಟರ್, ಜರ್ನಲ್ ಆಫ್ ಇಂಡಿಯನ್ ಫೋಕ್ಲೋರಿಸ್ಟಸ್, ಪ್ರಸಾರಾಂಗ ಮತ್ತು ಎಫ್.ಎಫ್.ಐ ನ್ಯೂಸ್ ಬುಲೆಟಿನ್ ಮುಂತಾದ ಪತ್ರಿಕೆಗಳ ಹುಟ್ಟು, ಬೆಳವಣಿಗೆ, ಸ್ವರೂಪ ಕುರಿತ ವಿವರಣಾತ್ಮಕ ವಿಶ್ಲೇಷಣೆಯನ್ನು ನೀಡಿದ್ದಾರೆ.
  • ಇವರ ಇತರ ಕೃತಿಗಳೆಂದರೆ ಪ್ರಬಂಧ ಸಂಕಲನಗಳು – ಮಾತಿನ ಮಲ್ಲರು, ದೇವಗಂಗೆ, ಘಟನೆಗಳು, ನಸುನಗೆಯ ಅಲೆಗಳು, ನಿಜಸಲ್ಲಾಪ ಗ್ರಂಥ ಸಂಪಾದನೆ- ಪರೋಪಕಾರಿ, ಅಮೃತವರ್ಷ, ಕಾವ್ಯ ಗಂಗೋತ್ರಿ, ಕಾವ್ಯ ಸಂಗಮ, ಟಿ. ಮರಿಯಪ್ಪನವರು ಮತ್ತು ನುಗ್ಗೇಹಳ್ಳಿ ಗುಜ್ಜೇ ಗೌಡರು.

ಪುಸ್ತಕಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • ಮಕ್ಕಳ ಪುಸ್ತಕಗಳು- ಕರ್ನಾಟಕದ ಗೊಂಬೆ ಆಟಗಳು, ಮೈಲಾರಲಿಂಗ, ಮೂಡಲಪಾಯ ಮತ್ತು ಯಕ್ಷಗಾನ ಬಯಲಾಟ.
  • ಸಾಹಿತ್ಯ ವಿಮರ್ಶೆ- ಅನುಶೀಲನ, ಒಳನೋಟ, ಸಾಹಿತ್ಯ ಸಂಚಯ ಮತ್ತು ಕುವೆಂಪು ಸಾಹಿತ್ಯಾವಲೋಕನ ಮುಂತಾದವುಗಳು

ಪ್ರಶಸ್ತಿಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

ಹೀಗೆ ಶಿಷ್ಟ ಮತ್ತು ಜಾನಪದ ಕ್ಷೇತ್ರದಲ್ಲಿ ಸಾಹಿತ್ಯ ಕೃಷಿ ಮಾಡುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ರಾಜೇಂದ್ರರವರಿಗೆ ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಡಾಮಿಯಿಂದ ಜಾನಪದ ತಜ್ಞ ಪ್ರಶಸ್ತಿ. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯಿಂದ ಎರಡು ಬಾರಿ ಪುಸ್ತಕ ಬಹುಮಾನ, ಜನದನಿ ಸಾಂಸ್ಕೃತಿಕ ಟ್ರಸ್ಟ್‌ನಿಂದ ರಾಜ್ಯ ಮಟ್ಟದ ಜೀಶಂಪ ಜಾನಪದ ತಜ್ಞ ಪ್ರಶಸ್ತಿ, ಕುವೆಂಪು ಟ್ರಸ್ಟ್ ಪುಸ್ತಕ ಬಹುಮಾನ, ಹಲವಾರು ಸಮ್ಮೇಳನ, ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ ಅಥವಾ ಅಧ್ಯಕ್ಷತೆಯ ಗೌರವಗಳು ದೊರೆತಿವೆ.

ಉಲ್ಲೇಖಗಳು[ಬದಲಾಯಿಸಿ]

  1. http://www.kannadaprabha.com/districts/chamarajanagar/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6-%E0%B2%9A%E0%B3%81%E0%B2%B0%E0%B3%81%E0%B2%95%E0%B3%81%E0%B2%97%E0%B3%8A%E0%B2%82%E0%B2%A1-%E0%B2%95%E0%B3%86%E0%B2%B2%E0%B2%B8/145145.html[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2016-10-14. Retrieved 2016-10-11.