ಡಿ.ಎಚ್.ಲೊರನ್ಸ್
ಆರಂಭಿಕ ಜೀವನ
[ಬದಲಾಯಿಸಿ]ಡೇವಿಡ್ ಹರ್ಬರ್ಟ್ ಲೊರನ್ಸ್ ೧೮೮೫ ಸೆಪ್ಟೆಂಬರ್ ೧೧ರಂದು ಇಂಗ್ಲಂಡಿನ ನೊಟಿಔಂಶಿಯರ್‍ನ ಈಸ್ಟ್‌ವುಡ್ ಎಂಬ ಕಲ್ಲಿದ್ದಲು ಗಣಿಗಳು ತುಂಬಿದ್ದ ಗ್ರಾಮದಲ್ಲಿ ಜೊನ್ ಲೊರನ್ಸ್ ಎಂಬ ಗಣಿ ಕಾರ್ಮಿಕನ ನಾಲ್ಕನೇ ಮಗನಾಗಿ ಜನಿಸಿದ. ತಂದೆ ತನ್ನ ಏಳನೇ ವಯಸ್ಸಿನಲ್ಲೇ ಗಣಿ ಕೆಲಸ ಪ್ರಾರಂಭಿಸಿದ ಕಾರ್ಮಿಕ ವಂಶದವ. ತಾಯಿ ಲಿಡಿಯಾ ಗಂಡನಿಗಿಂತ ಹುದ್ದೆಯಲ್ಲೂ ಘನತೆಯಲ್ಲೂ ಮಿಗಿಲಾದ ಶಾಲಾ ಅಧ್ಯಾಪಿಕೆ. ಈ ಸಂಘರ್ಷದೊಂದಿಗೆ ವಾತಾವರಣದ ಮಾಲಿನ್ಯವೂ ಸೇರಿಕೊಂಡು ಎಳವೆಯಲ್ಲೇ ಲೊರನ್ಸ್‌ನ ಆರೋಗ್ಯ ಹಾಳುಮಾಡಿತು. ನ್ಯುಮೋನಿಯಾ ಕ್ರಮೇಣ ಕ್ಷಯವಾಯಿತು. ಆದರೂ ಆತ ತಾಯಿಯ ಪ್ರೋತ್ಸಾಹದಿಂದ ಕಲಿಯಲು ಮುಂದಿದ್ದ. ಹೈಸ್ಕೂಲ್ ಬಿಟ್ಟೊಡನೆ ಸರ್ಜಿಕಲ್ ಕಂಪೆನಿಯೊ೦ದರಲ್ಲಿ ಕೆಲಸಕ್ಕೆ ಸೇರಿಕೊಂಡರೂ ಸರಿಹೊಂದದೆ ೧೯೦೩ರಲ್ಲಿ ನೊಟಿಔಂನ ಯುನಿವರ್ಸಿಟಿ ಕಾಲೇಜ್‍ನಲ್ಲಿ ಅಧ್ಯಾಪಕ ತರಬೇತಿಗೆ ದಾಖಲಾದ. ಕೆಲವು ವರ್ಷಗಳ ಕಾಲ ಕ್ರೋಯ್ಡನ್ ಎಂಬಲ್ಲಿ ಸ್ಕೂಲ್ ಅಧ್ಯಾಪಕನಾಗಿ ದುಡಿದರೂ ಅಸಹಿಷ್ಣುವಾಗಿ ಬೆಳೆದ. ಎಲ್ಲದರಲ್ಲೂ ಸಿನಿಕತನವನ್ನು ಕಾಣ ತೊಡಗಿದ. ತಾಯಿಯ ಆತ್ಮ ಸಂಘರ್ಷದಿಂದಾಗಿ ಮನೆಯೊಳಗಿನ ಆರೋಗ್ಯ ಹದಗೆಟ್ಟಿತು. ಕೌಟುಂಬಿಕ ಸಮಸ್ಯೆಗಳು ಉಲ್ಬಣಗೊಂಡುವು. ಕೊನೆಗೆ ಅವಳ ಮರಣ ಆತನನ್ನು ಖಿನ್ನನನ್ನಾಗಿಸಿತು. ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ಸಾಹಿತ್ಯಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿರಿಸಲು ತೀರ್ಮಾನಿಸಿದ. ಜೀವನದುದ್ದಕ್ಕೂ ಪ್ರತಿಯೊಂದರಲ್ಲೂ ಸಾಮಾಜಿಕ ಹಾಗೂ ತಾತ್ವಿಕ ಶತ್ರುತೆಯನ್ನು ಕಂಡ.
ಜೀವನ ಮತ್ತು ವೃತ್ತಿಜೀವನ
[ಬದಲಾಯಿಸಿ]ಆತನ ಪ್ರಾರಂಭದ ಕವಿತೆಗಳು ದ ಇಂಗ್ಲಿಷ್ ರಿವೈವ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದ್ದುವು. ೧೯೧೧ರಲ್ಲಿ ಪ್ರಥಮ ಕಾದಂಬರಿಯಾದ 'ದ ವೈಟ್ ಪೀಕಾಕ್'ನ್ನು ಆತ ಬಿಡುಗಡೆಗೊಳಿಸಿದ. ೧೯೧೨ ಏಪ್ರಿಲ್‌ನಲ್ಲಿ ಲೊರನ್ಸ್ ಜರ್ಮನಿಯಲ್ಲಿ ಕೆಲಸ ಹುಡುಕುವ ನಿಮಿತ್ತ ತನ್ನ ಕಾಲೇಜಿನ ಪ್ರೊಫೆಸರ್ ಆಗಿದ್ದ ಆರ್ನಿಸ್ಟ್ ಮೀಕ್ಷಿ ಎಂಬವರನ್ನು ಭೇಟಿಯಾಗುತ್ತಾನೆ. ಆದರೆ ಬಂದ ಉದ್ದೇಶ ಮರೆತು ಪ್ರೊಫೆಸರನ ಪತ್ನಿ ಪ್ರೀಡಾಳಲ್ಲಿ ಅನುರಕ್ತನಾಗುತ್ತಾನೆ. ಅವಳು ಮೂರು ಮಕ್ಕಳ ತಾಯಿಯಾಗಿದ್ದರೂ ಅವನ ಮೇಲೆ ಪ್ರೇಮ ಉಕ್ಕೇರಿ ಇಬ್ಬರೂ ವಾರಗಳ ನಂತರ ಪ್ರೀಡಾಳ ತಂದೆಯ ಊರಾದ ಜರ್ಮನಿಯ ಮೆಟ್ಸ್ ಎಂಬಲ್ಲಿಗೆ ಪಲಾಯನ ಹೂಡುತ್ತಾರೆ. ಮಗಳ ವರ್ತನೆ ಕಂಡು ದಿಗ್ಬ್ರಂತನಾದ ತಂದೆ ಅವಳನ್ನು ಹಿಡಿದಿರಿಸಿ ಲೊರನ್ಸ್‌ನ್ನು ಅಟ್ದಿದರೂ ಕೊನೆಗೆ ಇಬ್ಬರೂ ಇಟೆಲಿಯ ಗರ್ಗ್‌ನಾನ ಎಂಬಲ್ಲಿಗೆ ಪರಾರಿಯಾಗಿ ೧೯೧೩ರ ತನಕ ವಾಸಿಸುತ್ತಾರೆ. ಈ ಪಲಾಯನದಿಂದಾಗಿ 'ಉತ್ತಮ ಗೆಳೆಯನ ಹೆಂಡತಿಯನ್ನು ಕದ್ದವ' ಎಂಬ ಬಿರುದಿಗೂ ಆತ ಪಾತ್ರನಾಗುತ್ತಾನೆ. ಆತನ ಎರಡನೇ ಕಾದಂಬರಿಯಾದ 'ದ ಟ್ರೆಸ್‌ಪಾಸ್ಸರ್'(೧೯೧೨) ಕೂಡಾ ಜನಪ್ರಿಯವಾಗಲಿಲ್ಲ. ೧೯೧೪ ಮೇ ತಿಂಗಳಿನಲ್ಲಿ ಇಟೆಲಿಯ ಲೆರಿಸಿ ಎಂಬಲ್ಲಿ ತಂಗಿದರು. ಈ ಸಂದರ್ಭದಲ್ಲಿ ಆತನ 'ಲವ್ ಪೋಯಮ್ಸ್ ಆಯಂಡ್ ಆದರ್ಸ' ಎಂಬ ಕಾವ್ಯ ಸಂಗ್ರಹ ಬಿಡುಗಡೆಯಾಯಿತು. ಆತನ ಅತ್ಯುತ್ತಮ ಕೃತಿಗಳಲ್ಲೊಂದಾದ 'ಸನ್ಸ್ ಆಯಂಡ್ ಲವರ್ಸ' ಕೂಡ ಪ್ರಕಟವಾಯಿತು. ೧೯೧೪ರಲ್ಲಿ 'ದ ಪ್ರಷನ್ ಆಫೀಸರ್' ಎಂಬ ಕಥಾಸಂಕಲನವನ್ನು ೧೯೧೫ರಲ್ಲಿ 'ದ ರೈನ್ ಬೋ' ಎಂಬ ಕಾದಂಬರಿಯನ್ನೂ ಹೊರತಂದ. ಆದರೆ ಅಸಭ್ಯತನದ ಆರೋಪದ ಮೇಲೆ ಇವರ ಎಲ್ಲಾ ಪ್ರತಿಗಳನ್ನು ನಾಶಗೊಳಿಸಲಾಯಿತು. ೧೯೧೬ರಲ್ಲಿ ಯಾತ್ರಾ ವಿವರಣೆಯಾದ 'ಟ್ವೈಲೈಟ್ ಇನ್ ಇಟೆಲಿ' ಮತ್ತು 'ಅಮೋರ್ಸ' ಎಂಬ ಕವನಸಂಕಲನ, ೧೯೧೭ರಲ್ಲಿ 'ಲುಕ್! ವಿ ಹ್ಯಾವ್ ಕಮ್ ತ್ರಾಷ್' ಎಂಬ ಕಾವ್ಯವನ್ನೂ ಹೊರತಂದ. ಆತನ 'ಕಾಂಗರೂ' ಎಂಬ ಕಾದಂಬರಿ ೧೯೨೩ರಲ್ಲಿ ಪ್ರಕಟವಾಯಿತು.
ಕೊನೆಯ ದಿನಗಳು
[ಬದಲಾಯಿಸಿ]ಶನಿಯಂತೆ ಕಾಡಿದ ಅನಾರೋಗ್ಯ ದಿನೇದಿನೇ ಹೆಚ್ಚುತ್ತಾ ಬಂದಾಗ ಡಾಕ್ಟರನ ಉಪದೇಶದ ಮೇರೆಗೆ ೧೯೨೨ರಲ್ಲಿ ನ್ಯೂ ಮೆಕ್ಸಿಕೋ ಎಂಬಲ್ಲಿಗೆ ವಾಸ ಬದಲಾಯಿಸಿದರು. ಅದರೆ ಆರೋಗ್ಯ ತುಸು ನೆಟ್ಟಗಾದೊಡನೆ ೧೯೨೬ರಲ್ಲಿ ಇಟೆಲಿಯ ಫ್ಲೋರೆನ್ಸ್‌ಗೆ ದೌಡಾಯಿಸಿದರು. ಇಲ್ಲಾತ ತನ್ನ 'ಲೇಡಿ ಚಾಟರ್ಲಿ ಲವರ್' ಎಂಬ ಪ್ರಖ್ಯಾತ ಕಾದಂಬರಿಯನ್ನು ರಚಿಸಿದ. ಇದರ ಪ್ರಥಮ ಆವೃತ್ತಿಯನ್ನು ೧೯೨೮ರಲ್ಲಿ ಫ್ಲೊರೆನ್ಸ್‌ನಲ್ಲಿ ಗುಟ್ಟಾಗಿ ಮುದ್ರಿಸಲಾಯಿತು. ಅದೇ ವರ್ಷ ಇದರ ಶುದ್ಧೀಕೃತ ಆವೃತ್ತಿಯೊಂದನ್ನು ಲಂಡನ್‌ನಲ್ಲೂ ಬಿಡುಗಡೆಗೊಳಿಸಲಾಯಿತು. ವ್ಯಾಪಕವಾದ ಮಿಮರ್ಶೆ, ಪ್ರತಿಭಟನೆಗಳಿಂದ ಸಾಹಿತ್ಯ ರಂಗ ಅಲ್ಲೋಲ ಕಲ್ಲೋಲವಾದರೂ ಆತ ಇದನ್ನು ನಿರೀಕ್ಷಿಸಿದಂತೆ ಸುಮ್ಮನಿದ್ದ. ಜತೆಗೆ ಲಂಡನ್‌ನ ವಾರೆನ್ ಗ್ಯಾಲರಿಯಲ್ಲಿ ಆತ ತನ್ನ ಚಿತ್ರಗಳ ಪ್ರದರ್ಶನವೊಂದನ್ನು ನಡೆಸಿದರೂ ಪೊಲೀಸರು ಚಿತ್ರಗಳನ್ನು ಅಸಭ್ಯತನದ ಹೆಸರಿನಲ್ಲಿ ಜಪ್ತಿ ಮಾಡಿದರು. ೧೯೨೯ರಲ್ಲಿ 'ಫ್ಯಾನ್ಸೀಸ್' ಎಂಬ ಕವನಸಂಖಲನವನ್ನು ಹೊರತಂದಾಗಲೂ ಜಪ್ತಿಯ ಭೂತ ಅದನ್ನು ಕಾಯುತ್ತಿತ್ತು. ಈ ಎಲ್ಲಾ ಗಲಭಗಳ ನಡುವೆ ಆರೋಗ್ಯ ಹತೋಟಿ ತಪ್ಪಿ ೧೯೩೦ ಮಾರ್ಚ್ ೨ರಂದು ಲೊರನ್ಸ್ ತೀರಿಕೊಂಡ.
ಉಲ್ಲೇಖಗಳು
[ಬದಲಾಯಿಸಿ]೧.ತುಷಾರ, ಫೆಬ್ರವರಿ,೨೦೦೮