ವಿಷಯಕ್ಕೆ ಹೋಗು

ಡಿ.ಆರ್. ನಾಗರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಿ.ಆರ್. ನಾಗರಾಜ್
ಜನನದೊಡ್ಡಬಳ್ಳಾಪುರ ರಾಮಯ್ಯ ನಾಗರಾಜ್
(೧೯೫೪-೦೨-೨೦)೨೦ ಫೆಬ್ರವರಿ ೧೯೫೪
ದೊಡ್ಡಬಳ್ಳಾಪುರ, ಕರ್ನಾಟಕ, ಭಾರತ
ಮರಣ1998 (ವಯಸ್ಸು ೪೩–೪೪)
ವೃತ್ತಿಸಾಹಿತ್ಯ ವಿಮರ್ಶಕ, ಚಿಂತಕ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸMA, PhD
ಸಾಹಿತ್ಯ ಚಳುವಳಿಬಂಡಾಯ ಚಳುವಳಿ
ಪ್ರಮುಖ ಕೆಲಸ(ಗಳು)ಸಾಹಿತ್ಯ ಕಥನ
The Flaming Feet and Other Essays

ಡಿ.ಆರ್. ನಾಗರಾಜ್1954–1998[] - ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಇವರ "ಸಾಹಿತ್ಯ ಕಥನ" ಎಂಬ ಕೃತಿಗೆ ೧೯೯೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ."ಅಮೃತ ಮತ್ತು ಗರುಡ" ಇವರ ಇನ್ನೊಂದು ಪ್ರಸಿದ್ಧ ಕೃತಿಯಾಗಿದೆ.

ಜನನ, ಅಧ್ಯಯನ

[ಬದಲಾಯಿಸಿ]

ದೊಡ್ಡಬಳ್ಳಾಪುರ ರಾಮಯ್ಯ ನಾಗರಾಜ್[] ಹುಟ್ಟಿದ್ದು 20-2-1954 ದೊಡ್ಡಬಳ್ಳಾಪುರದಲ್ಲಿ. ತಂದೆ ರಾಮಯ್ಯ, ತಾಯಿ ಅಕ್ಕಯ್ಯಮ್ಮ. ಡಿ.ಆರ್.ನಾಗರಾಜ ಪ್ರೌಢ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಅಂದಿನ ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯಾದ ಅವರು ಆನರ್ಸ್ ಪದವಿಯನ್ನು ಅಲ್ಲಿಯೇ ಪಡೆದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪ್ರಾಪ್ತವಾಯಿತು. ಸ್ವಲ್ಪ ಕಾಲ ಸಂಶೋಧಕ ವೃತ್ತಿಯಲ್ಲಿದ್ದು ಅವರು ಅಲ್ಲಿಯೇ ಕನ್ನಡ ಅಧ್ಯಾಪಕರಾದರು; ಪ್ರವಾಚಕರಾದರು, ಕೈಲಾಸಂ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಆದರು.

ಆಸಕ್ತಿ ವಿಷಯ

[ಬದಲಾಯಿಸಿ]

ವಿದಾರ್ಥಿ ಜೀವನದಿಂದಲೂ ಅಧ್ಯಯನಶೀಲರೂ ಚಿಂತನಪರರೂ ಆದ ನಾಗರಾಜ್ ನಿರಂತರ ಅಧ್ಯಯನಶೀಲತೆಯನ್ನು ಕೊನೆಯವರೆಗೂ ಉಳಿಸಿಕೊಂಡು ಬಂದವರು. ಮಾರ್ಕ್ಸ್ ವಾದದಿಂದ ಪ್ರಭಾವಿತರಾದರೂ ಲೋಹಿಯಾವಾದ ಅವರ ಹೃದಯವನ್ನು ಗೆದ್ದರೂ ಗಾಂಧೀವಾದದಿಂದ ವಿಮುಖರಾಗಲಿಲ್ಲ. ಆದ್ದರಿಂದಲೇ ಅವರು ತಮ್ಮನ್ನು ಎಡಪಂಥೀಯ ಗಾಂಧೀವಾದಿ ಎಂದು ಕರೆದುಕೊಳ್ಳುತ್ತಿದುದುಂಟು. ಅಧ್ಯಯನ ಅವಧಿಯಲ್ಲಿ ಚರ್ಚಾಸ್ಪರ್ಧೆಗಳಲ್ಲಿ ವಿಶೇಷವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ನಾಗರಾಜರಿಗೆ ಅವು ತಮ್ಮ ವ್ಯಾಪಕವಾದ ಅಧ್ಯಯನವನ್ನು ಒರೆಹಚ್ಚುವ ಸಾಣೆಗಲ್ಲಾದದ್ದು ಒಂದು ವಿಶಿಷ್ಟ ಅಂಶವಾಗಿದೆ. ಕನ್ನಡ ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅವರು ಪಡೆದಿದ್ದ ಪ್ರಭುತ್ವ ಅವರನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಉತ್ತಮ ವಾಗ್ಮಿಯಾಗಿಸಿತ್ತು. ಹೀಗಾಗಿ ಅವರು ಎರಡೂ ಭಾಷೆಗಳಲ್ಲಿ ವಿಮರ್ಶಿಸುವ ಸಾಮರ್ಥ್ಯವನ್ನು ಪಡೆದಿದ್ದರು.

ವಿದೇಶ ಪ್ರವಾಸ ಮತ್ತು ಕಾರ್ಯನಿರ್ವಹಣೆ

[ಬದಲಾಯಿಸಿ]

ಡಿ.ಆರ್. ನಾಗರಾಜ್ ಅಮೆರಿಕೆಯ ಶಿಕಾಗೋ ವಿಶ್ವವಿದ್ಯಾಲಯದ ದಕ್ಷಿಣ ಭಾರತೀಯ ವಿಭಾಗದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಆಹ್ವಾನಿತರಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ವಿಭಾಗದ ನಿರ್ದೇಶಕರಾಗಿಯೂ ಹಾಗೆಯೇ ದೆಹಲಿಯ ವಿಕಾಸಶೀಲ ಸಮಾಜಗಳ ಅಧ್ಯಯನ ಕೇಂದ್ರದ ಸೀನಿಯರ್ ಫೆಲೋ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಅವರು ಕಾರ್ಯನಿರ್ವಹಿಸಿದ ಇತರ ಕೇಂದ್ರಗಳೆಂದರೆ ಸಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನ ಫೆಲೋ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ತೌಲನಿಕ ಸಾಹಿತ್ಯ ಕೇಂದ್ರದ ಸಂಶೋಧಕ ಸಹಾಯಕರಾಗಿ ಇಂಗ್ಲೆಂಡ್, ಅಮೆರಿಕೆಯ ಶಿಕಾಗೋ, ಜರ್ಮನಿ, ಇಟಲಿ, ಬ್ರೆಜಿಲ್, ರಷ್ಯ, ಚೀನಾ ದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಲ್ಲದೆ ಭಾರತದ ವಿವಿಧ ಕ್ಷೇತ್ರಗಳಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ ವ್ಯಾಪಕವಾದ ಹಾಗೂ ಆಳವಾದ ವಿದ್ವತ್ತಿನ ವ್ಯಕ್ತಿಯಾಗಿದ್ದರು ಡಾ.ಡಿ.ಆರ್.ನಾಗರಾಜ್.

ಸ್ವೋಪಜ್ಞತೆಯ ಹಾದಿ

[ಬದಲಾಯಿಸಿ]
  • ಡಾ.ಡಿ.ಆರ್.ನಾಗರಾಜರದು ಪ್ರಧಾನವಾಗಿ ಸ್ವೋಪಜ್ಞತೆಯ ಹಾದಿ. ಅವರು ಪ್ರಧಾನವಾಗಿ ಆಯ್ದುಕೊಂಡ ಕ್ಷೇತ್ರ ವಿಮರ್ಶೆಯೇ ಆದರೂ ಅಲ್ಲಿಯೇ ಅವರು ತಮ್ಮ ಸೃಜನಾತ್ಮಕತೆಯನ್ನೂ ತೋರಿದ್ದಾರೆ. ‘ಕತ್ತಲೆ ದಾರಿ ದೂರ’ ಎಂಬ ನಾಟಕವನ್ನು ಅವರು ಬರೆದಿದ್ದು, ರಂಗದ ಮೇಲೂ ಅದು ಯಶಸ್ವಿಯಾಗಿದೆ. ಅನುಭಾವಿಯಾದ ರೂಮಿ ಕವಿಯನ್ನು ಉಪಯುಕ್ತ ವಿಮರ್ಶೆಯೊಂದಿಗೆ ಕನ್ನಡಕ್ಕೆ ಅನುವಾದಿಸಿದ್ದಾರೆ.
  • ಕಾವ್ಯವೆನ್ನುವುದು ಅಮೃತಕ್ಕೆ ಹಾರುವ ಗರುಡ ಎಂಬ ದ.ರಾ.ಬೇಂದ್ರೆಯವರ ಚಿಂತನೆಯಿಂದ ‘ಅಮೃತ ಮತ್ತು ಗರುಡ’ ಗ್ರಂಥ ಮೂಡಿದೆ. ಕುವೆಂಪು, ಕಾರಂತ ಮಾಸ್ತಿ ಇತ್ಯಾದಿ; ರಂಗಭೂಮಿ, ಕಾವ್ಯ, ಪ್ರಾಯೋಗಿಕ ವಿಮರ್ಶೆ ಎಂಬ ನಾಲ್ಕು ವಿಭಾಗಗಳಲ್ಲಿ ಇಲ್ಲಿಯ ಲೇಖನಗಳು ವಿಂಗಡಣೆಗೊಂಡಿದ್ದರೂ ಅವುಗಳಲ್ಲಿ ಒಂದು ಒಳಸೂತ್ರವನ್ನು ಗಮನಿಸಬಹುದು. ಅದು ಬದುಕು ಮತ್ತು ಕಲೆಗಳಿಗಿರುವ ಸಂಬಂಧ ಮತ್ತು ಅದರ ಸಂಕೀರ್ಣತೆ.
  • ಕನ್ನಡದ ಪ್ರಧಾನ ಪ್ರತಿಭೆಗಳಾದ ಕುವೆಂಪು, ಕಾರಂತ, ಮಾಸ್ತಿಯವರ ಪ್ರತಿಭೆಗಳನ್ನು ಸಾಹಿತ್ಯ ಮತ್ತು ತತ್ವಜ್ಞಾನ, ವರ್ಣ-ವರ್ಗ-ಸಂಘರ್ಷ, ಪರಂಪರೆಗಳೊಂದಿಗೆ ವಿಶ್ಲೇಷಿಸುವ ಯತ್ನವಿಲ್ಲಿದೆ. ಕಾವ್ಯ ಭಾಗದಲ್ಲಿ ಜಿ.ಎಸ್. ಶಿವರುದ್ರಪ್ಪನವರ ಕಾವ್ಯವನ್ನು ವಿಮರ್ಶಿಸುತ್ತಾರೆ.
  • ‘ಶಕ್ತಿ ಶಾರದೆಯ ಮೇಳ’ ಇದು ಪಿ.ಎಚ್.ಡಿ ಗಾಗಿ ಸಿದ್ಧಪಡಿಸಿದ ಸಂಪ್ರಬಂಧವಾಗಿದೆ. ಭೂಮಿ ಮತ್ತು ಮನುಷ್ಯ, ಕಾಲ ಮತ್ತು ಮನುಷ್ಯ, ಕಾಮ ಮತ್ತು ಮನುಷ್ಯ, ಸಮಾಜ ಮತ್ತು ಮನುಷ್ಯ – ಈ ನಾಲ್ಕು ಮುಖಗಳಲ್ಲಿ ಕನ್ನಡದ ಪ್ರಾತಿನಿಧಿಕರಾದ ಕೆಲವರು ನವೋದಯ ಹಾಗೂ ನವ್ಯ ಕವಿಗಳ ಕಾವ್ಯವನ್ನು ಕುರಿತು 1957ರಿಂದ 1981ರವರೆಗೆ ನಡೆಸಿದ ಅಧ್ಯಯನ ಇಲ್ಲಿದೆ.
  • ಕನ್ನಡ ನವೋದಯದ ಪ್ರಧಾನ ಕವಿಗಳಾದ ಕುವೆಂಪು, ಬೇಂದ್ರೆ, ಪು.ತಿ.ನ, ವಿನಾಯಕ ಹಾಗೂ ನವ್ಯ ಕವಿಗಳಾದ ಗೋಪಾಲಕೃಷ್ಣ ಅಡಿಗ, ಕೆ.ಎಸ್.ನ, ಗಂಗಾಧರ ಚಿತ್ತಾಲರ ಕಾವ್ಯಗಳಂತೆಯೇ ರಾಮಚಂದ್ರ ಶರ್ಮ, ಚಂದ್ರಶೇಖರ ಕಂಬಾರ, ಎಚ್. ಎಂ. ಚನ್ನಯ್ಯ ಇವರ ಕಾವ್ಯಗಳ ವಿಶ್ಲೇಷಣೆಯೂ ಇದೆ.

ಪ್ರಮುಖ ಕೃತಿಗಳು

[ಬದಲಾಯಿಸಿ]

ಅವರ ಪ್ರಮುಖ ಕೃತಿಗಳೆಂದರೆ-

  1. ಅಮೃತ ಮತ್ತು ಗರುಡ (1983) - ಅಮೃತಕ್ಕೆ ಹಾರುವ ಗರುಡ ಎಂಬ ದ.ರಾ.ಬೇಂದ್ರೆಯವರ ಚಿಂತನೆಯಿಂದ
  2. ಶಕ್ತಿ ಶಾರದೆಯ ಮೇಳ (1987)- ಇದು ಪಿ.ಎಚ್.ಡಿಗಾಗಿ ಸಿದ್ಧಪಡಿಸಿದ ಸಂಪ್ರಬಂಧವಾಗಿದೆ
  3. ನಾಗಾರ್ಜುನ (1993),
  4. ಸಾಹಿತ್ಯ ಕಥನ (1995),
  5. ಅಲ್ಲಮಪ್ರಭು ಮತ್ತು ಶೈವಪ್ರತಿಭೆ (1998) (ಇದು ಮರಣೋತ್ತರ ಪ್ರಕಟಣೆ).
  • ಡಿ. ಆರ್. ನಾಗರಾಜ್ ಅವರ ಮರಣೋತ್ತರ ಪ್ರಕಟಣೆಯಾಗಿ 1998ರಲ್ಲಿ ಪ್ರಕಟವಾದ ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಅಪರೂಪದ ಗ್ರಂಥವಾಗಿದೆ. ಒಂಭತ್ತು ಅಧ್ಯಾಯಗಳಲ್ಲಿ ವ್ಯಾಪಿಸಿರುವ ಚಿಂತನೆ ಪ್ರಧಾನವಾಗಿ ಎರಡು ಮುಖವಾಗಿವೆ. ಮೊದಲ ಅಧ್ಯಾಯ ಶೈವದರ್ಶನಗಳ ಚಾರಿತ್ರಿಕ ಸಮೀಕ್ಷೆಯನ್ನೊಳಗೊಂಡಿದೆ. ಎರಡನೆಯ ಅಧ್ಯಾಯದಲ್ಲಿ ಬರುವ ಅಲ್ಲಮ ಲೋಕಕ್ಕೆ ಮತ್ತೆ ಅಲ್ಲಿ ಚರ್ಚಿತವಾಗುವ ಶೈವ ಸಾಹಿತ್ಯ ಮೀಮಾಂಸೆಗಳಿಗೆ ವೇದಿಕೆಯಾಗುತ್ತದೆ. ಮೂರನೆಯ ಅಧ್ಯಾಯ ಅಲ್ಲಮನದೇ ಎನ್ನುವಂತ ಕಾವ್ಯ ಮೀಮಾಂಸೆಯ ಕುರಿತು ಚರ್ಚಿಸುತ್ತದೆ. ನಾಲ್ಕನೆಯ ಅಧ್ಯಾಯದಲ್ಲಿ ಅಲ್ಲಮನ ಕಾಯ ಸಿದ್ಧಾಂತವಿದೆ. ಐದನೆಯ ಅಧ್ಯಾಯ ಅಲ್ಲಮನ ಜೀವನದ ಕಥಾನಕಗಳನ್ನು ಕುರಿತು ನಿರೂಪಣೆ ಮಾಡಿದರೆ, ಆರನೆಯ ಅಧ್ಯಾಯ ಅಲ್ಲಮನ ವಚನಗಳ ಪ್ರಾಯೋಗಿಕ ವಿಮರ್ಶೆಯಲ್ಲಿ ಮಗ್ನವಾಗುತ್ತದೆ. ಏಳನೆಯ ಅಧ್ಯಾಯ ಅಲ್ಲಮನ ಪ್ರತಿಭೆಯ ವಿವಿಧ ಆಯಮಗಳನ್ನು ಆಧುನಿಕ ಪೂರ್ವಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ಚರ್ಚಿಸುತ್ತದೆ.
  • ಸಾಹಿತ್ಯ ಕಥನ[] ದ ನಾಲ್ಕು ಭಾಗಗಲ್ಲಿ ಮೂವತ್ತೇಳು ಪ್ರಬಂಧಗಳಿವೆ. ಸ್ಕೂಲ್ ಮಾಸ್ಟರ್, ಚಂದವಳ್ಳಿಯ ತೋಟ, ಬಾಬ್ಬಿ, ಗೌರಿ ಗಣೇಶ, ನಾಂದಿ ಮೊದಲಾದ ಚಲನಚಿತ್ರಗಳ ಮೂಲಕ ಏಕಮುಖೀ ಭಾವನಾತ್ಮಕ ರೂಪ, ಬಹುಮುಖೀ ಭಾವನಾತ್ಮಕ ರೂಪಗಳನ್ನು ವಿಶ್ಲೇಷಿಸಿ ರಹಸ್ಯವನ್ನು ಭೇದಿಸುವ ಯತ್ನ ಕುತೂಹಲಕಾರಿಯಾದುದು. ಈ ಕೃತಿಯಲ್ಲಿ ಸಾಹಿತ್ಯಿಕ ಹಾಗೂ ಸೈದ್ಧಾಂತಿಕ ಚರ್ಚೆ ಸಂವಾದಗಳಿವೆ. ಪ್ರವಾಸ ಕಥನವಿದೆ, ಕೆಲವು ಪ್ರಮುಖ ಕೃತಿಗಳ ಪ್ರಶಂಸೆಯಿದೆ. ಎಲ್ಲಕ್ಕೂ ಮಿಗಿಲಾಗಿ ವಿವಿಧ ಆಕೃತಿಗಳ ಮೂಲಕ ಸಂಸ್ಕೃತಿಯ ಶೋಧವಿದೆ. ನಾಗಾರ್ಜುನ ಲೇಖನವಂತೂ ಬೌದ್ಧ ದರ್ಶನದ ಆಳವಾದ ಅಧ್ಯಯನಕ್ಕೇ ಮೀಸಲಾದುದು.

ಸಂಪಾದನೆ

[ಬದಲಾಯಿಸಿ]

ಅಕ್ಷರ ಚಿಂತನ ಮಾಲೆಗಾಗಿ ಅವರು ಹದಿನಾಲ್ಕು ಪುಸ್ತಕಗಳನ್ನು ಉಪಯುಕ್ತವೂ, ಅಧ್ಯಯನಶೀಲವೂ ಆದ ಮುನ್ನುಡಿಗಳೊಂದಿಗೆ ಸಂಪಾದಿಸಿಕೊಟ್ಟು ಸಂಪಾದನೆಯೂ ಒಂದು ಸೃಜನಕ್ರಿಯೆಯೇ ಎಂಬುದನ್ನು ಸೂಚಿಸಿದ್ದಾರೆ. ಉರ್ದು ಸಾಹಿತ್ಯ 1991ನ್ನು ಅವರು ಸ್ವತಂತ್ರವಾಗಿ ಸಂಪಾದಿಸಿದ್ದಾರೆ. ಪ್ರೊ. ಕೆ.ಆರ್. ನಾಗರಾಜರೊಂದಿಗೆ ಆಚಾರ್ಯ ನರೇಂದ್ರ ದೇವರ ಲೇಖನಗಳ ಸಂಕಲನವನ್ನೂ ಸಮಾಜವಾದಿ ಆಚಾರ್ಯ ಎಂಬ ಹೆಸರಿನಲ್ಲಿ ಸಂಪಾದಿಸಿದ್ದಾರೆ. ಸಂಸ್ಕೃತಿ ಮತ್ತು ವಿಕಾಸವನ್ನು ಕುರಿತ ಪ್ರಬಂಧಗಳನ್ನು Images of India ಶೀರ್ಷಿಕೆಯಲ್ಲಿ ಸಂಪಾದಿಸಿದ್ದಾರೆ. Vibhava ಎಂಬುದು ಇತರರೊಡನೆ ಸಂಗ್ರಹಿಸಿದ ಲೇಖನಗಳ ಸಂಕಲನ.

ಇಂಗ್ಲಿಷ್ ಕೃತಿಗಳು

[ಬದಲಾಯಿಸಿ]
  1. The flaming feet (ಉರಿ ಚಮ್ಮಾಳಿಗೆ) 1993,
  2. Recreating each other,
  3. Shiva’s plight 1987, ಇವು ಅವರ ಇಂಗ್ಲಿಷ್ ಕೃತಿಗಳು[].

ಪಾಶಾತ್ಯ ಸಾಹಿತ್ಯ

[ಬದಲಾಯಿಸಿ]

ಪಾಶಾತ್ಯ ಸಾಹಿತ್ಯ ಮಾರ್ಗದರ್ಶನ ಭಾಗ ಸಂಪುಟ ೧ ಪ್ರಕಟವಾದದ್ದು 1981ರಲ್ಲಿ. ಗ್ರೀಕ್ ಸಾಹಿತ್ಯಕ್ಕೆ ಸಂಬಂಧಪಟ್ಟ ಕವಿಕೃತಿ, ಸಾಹಿತ್ಯಿಕ ಹಿನ್ನೆಲೆ ಮತ್ತು ಕೃತಿ ವಿಮರ್ಶೆ ಮೊದಲಾದ ವಿವರಣೆಗಳನ್ನೊಳಗೊಂಡ ಕೃತಿಯಾಗಿದ್ದು ಇದರಲ್ಲಿ ಗ್ರೀಕ್ ಸಾಹಿತ್ಯದ ಒಂದು ಅರ್ಥಪೂರ್ಣ ನೋಟ ಪ್ರಾಪ್ತವಾಗಲೆನ್ನುವುದು ಲೇಖಕರ ಆಶಯವಾಗಿದೆ.

ಕತ್ತಲೆ ದಾರಿ ಬಹು ದೂರ.

ವಿಮರ್ಶಾ ಕ್ಷೇತ್ರದಲ್ಲಿ

[ಬದಲಾಯಿಸಿ]
  • ವಿಮರ್ಶಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದ ಡಿ. ಆರ್. ನಾಗರಾಜ ಉತ್ತಮ ವಾಗ್ಮಿ. ಇಂಗ್ಲಿಷಿನಲ್ಲಾಗಲಿ, ಕನ್ನಡದಲ್ಲಾಗಲಿ, ಅತ್ಯಂತ ಸಮರ್ಥವಾಗಿ ತಮ್ಮ ವಿಚಾರಗಳನ್ನು ಮಾತಿನ ಮೂಲಕವೂ ಕೃತಿಗಳ ಮೂಲಕವೂ ಅಭಿವ್ಯಕ್ತ ಗೊಳಿಸುವ ಸಾಮರ್ಥ್ಯವಿದ್ದವರು. ಹೀಗಾಗಿಯೇ ದೇಶ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು.
  • ಅಕ್ಷರ ಮಾಲಿಕೆಗಾಗಿ ಸಂಪಾದಿಸಿದ 14 ಕೃತಿಗಳಿಗೆ ಬರೆದ ಮುನ್ನುಡಿಗಳು ಡಾ.ನಾಗರಾಜರ ವಿದ್ವತ್ತು, ಅಧ್ಯಯನ ಶೀಲತೆ ಹಾಗೂ ಸ್ವೋಪಜ್ಞತೆಗಳಿಂದ ಕೂಡಿವೆ. ಪ್ರವಾಸ, ಮುನ್ನುಡಿ, ಅನುವಾದ, ಸಂವಾದ, ಚಲನಚಿತ್ರ, ವಿಶ್ಲೇಷಣೆ, ಉಪನ್ಯಾಸ ಯಾವುದೇ ಆಕೃತಿಯನ್ನೇ ನಾಗರಾಜ್ ಬಳಸಿಕೊಳ್ಳಲಿ ಅಲ್ಲಿ ನಡೆಸುವುದು ಅದಮ್ಯವಾದ ಜೀವ ಚೈತನ್ಯವಾದ ಬದುಕಿನ ಬೇರುಗಳ ಅನ್ವೇಷಣೆಯನ್ನು.
  • ಡಿ. ಆರ್. ನಾಗರಾಜ್ ಪ್ರಧಾನವಾಗಿ ಸಾಂಸ್ಕೃತಿಕ ಶೋಧ ಮಾಡುವ ವಿಮರ್ಶಕರು. ಕಾವ್ಯ ವಿಮರ್ಶೆಯ ಕೆಲಸ ಅಂತಿಮವಾಗಿ ಲೋಕ ವಿಮರ್ಶೆಯೂ ಹೌದು. ಅಥವಾ ನನ್ನ ಮಟ್ಟಿಗೆ ಲೋಕ ವಿಮರ್ಶೆಯ ಒಂದು ರೂಪವೇ ಕಾವ್ಯ ವಿಮರ್ಶೆ ಎನ್ನುವ ಡಿ.ಆರ್. ನಾಗರಾಜರ ಮಾತು ಅವರ ವಿಮರ್ಶಾ ವಿಧಾನದ ಮ್ಯಾನಿಫೆಸ್ಟೋ ಎನ್ನಬಹುದು.

ಪ್ರಶಸ್ತಿ,ಗೌರವ

[ಬದಲಾಯಿಸಿ]
  1. ಆರ್ಯಭಟ ಪ್ರಶಸ್ತಿ,
  2. ಶಿವರಾಮ ಕಾರಂತ ಪ್ರಶಸ್ತಿ,
  3. ವರ್ಧಮಾನ ಪ್ರಶಸ್ತಿಗಳೇ ಅಲ್ಲದೆ ಮರಣೋತ್ತರವಾಗಿ
  4. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡಾ ಇವರಿಗೆ ಲಭ್ಯವಾಯಿತು.

ಅವರು ನಮ್ಮನ್ನಗಲಿದ್ದು 12-8-1998 ಬೆಂಗಳೂರಿನಲ್ಲಿ. ಬದುಕಿದ್ದ 44 ವರ್ಷಗಳಲ್ಲಿ ಸಂಸ್ಕೃತಿ ಚಿಂತನೆಗೆ ಅವರು ನೀಡಿದ ಕೊಡುಗೆ ಮಹತ್ವದ್ದು.

ಡಾ. ಜಿ. ಎಸ್. ಸಿದ್ಧಲಿಂಗಯ್ಯನವರು ಬರೆದ ಡಾ. ಡಿ. ಆರ್. ನಾಗರಾಜರ ಕುರಿತಾದ ಲೇಖನ

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2015-04-21. Retrieved 2016-06-13.
  2. "ಆರ್ಕೈವ್ ನಕಲು". Archived from the original on 2016-10-31. Retrieved 2016-06-13.
  3. http://kannada.oneindia.com/literature/book/2002/1708drnagaraj.html
  4. http://kavidrsiddalingaiah.com/index.php/2015-12-22-14-06-30[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯಸಂಪರ್ಕಗಳು

[ಬದಲಾಯಿಸಿ]