ಡಿಯೊಡಾನ್ನಿ ಡಾಲಾಮ್ಯ
ಡಿಯೊಡಾನ್ನಿ ಡಾಲಾಮ್ಯ ( 1750-1801). ಫ್ರಾನ್ಸಿನ ಭೂವಿಜ್ಞಾನಿ ಮತ್ತು ಖನಿಜಶಾಸ್ತ್ರಜ್ಞ.
ಬದುಕು, ಸಾಧನೆ
[ಬದಲಾಯಿಸಿ]ಜನನ ಆಗ್ನೇಯ ಫ್ರಾನ್ಸಿನ ಭಾಗವಾದ ಈಜಿûೀರ್ ವಿಭಾಗದ ಡಾಲಾಮ್ಯ ಎಂಬಲ್ಲಿ (23-6-1750; ಮರಣ 28-11-1801). ಇನ್ನೂ ಹರೆಯದವನಾಗಿದ್ದಾಗಲೇ ಈತನಿಗೆ ಮೆಂಬರ್ ಆಫ್ ಆರ್ಡರ್ ಆಫ್ ಮಾಲ್ಟ ಎಂಬ ಗೌರವ ಸಂದಿತ್ತು. 25ನೆಯ ವಯಸ್ಸಿನಲ್ಲೇ ಈತ ಪ್ಯಾರಿಸ್ಸಿನ ವಿಜ್ಞಾನ ಅಕಾಡಮಿಗೆ ಚುನಾಯಿತನಾದ. ಇನ್ನೂ 19ನೆಯ ವರ್ಷ ವಯಸ್ಸಿದ್ದಾಗ ಒಂದು ಕೊಲೆಯ ಆಪಾದನೆಗೆ ಒಳಗಾದ ಈತನಿಗೆ ಗಲ್ಲುಶಿಕ್ಷೆಯನ್ನು ವಿಧಿಸಿದರು. ಆದರೆ ಇವನ ಎಳೆಯ ವಯಸ್ಸನ್ನು ಗಮನಿಸಿ ಇದನ್ನು 9 ತಿಂಗಳ ಕಾರಾಗೃಹ ಶಿಕ್ಷೆಗೆ ಇಳಿಸಿದರು. ಜೈಲುವಾಸದ ಬಳಿಕ ಇವನಿಗೆ ಕ್ಷಮಾದಾನ ಕೊಟ್ಟರು. ಜೈಲಿನಲ್ಲಿದ್ದು ನಿಸರ್ಗವಿಜ್ಞಾನವನ್ನು ಅಭ್ಯಸಿಸಿದ. ಕಾರಾಗೃಹದಿಂದ ಹೊರಬಂದ ಬಳಿಕ ಸ್ಪೇನ್, ಸಿಸಿಲಿ, ಕ್ಯಾಲಂಬ್ರಿಯ, ಪೈರೆನೀಸ್, ಆಲ್ಪ್ಸ್ ಪರ್ವತಗಳು ಮುಂತಾದ ಸ್ಥಳಗಳಿಗೆ ಭೇಟಿ ಕೊಟ್ಟ. ತನ್ನ ಪ್ರವಾಸಕಾಲದಲ್ಲಿ ನಡೆಸಿದ ಸಂಶೋಧನೆಗಳನ್ನು ಈತ ಕ್ರೋಡೀಕರಿಸಿ ಪ್ರಕಟಿಸಿದ (1783-84). ಆಲ್ಪ್ಸ್ ಪರ್ವತ ಪ್ರದೇಶದಲ್ಲಿ ಈತ ಆವಿಷ್ಕರಿಸಿದ (1789-90) ಖನಿಜವೊಂದಕ್ಕೆ ಈತನ ಗೌರವಾರ್ಥ ಡಾಲೊಮೈಟ್ ಎಂಬ ಹೆಸರೇ ಇದೆ. ಈಜಿಪ್ಟಿನ ಮೇಲೆ ಬೋನಾಪಾರ್ಟ್ ನಡೆಸಿದ ದಾಳಿಯ ಸಮಯದಲ್ಲಿ ಆ ಕಾರ್ಯಾಚರಣೆಯಲ್ಲಿ ವಿe್ಞÁನಿಯಾಗಿದ್ದ (1798) ಈತನನ್ನು ಬಂಧಿಸಲಾಯಿತು. ಕಾರಾಗೃಹವಾಸವನ್ನು ಅನುಭವಿಸುವಾಗಲೂ ಅಲ್ಲಿದ್ದ ಕಟ್ಟಿಗೆಯ ತುಂಡೊಂದನ್ನು ಲೇಖನಿಯನ್ನಾಗಿಯೂ ದೀಪದ ಕಾಡಿಗೆಯನ್ನೇ ಮಸಿಯನ್ನಾಗಿಯೂ ಬಳಸಿ ತನ್ನಲ್ಲಿದ್ದ ಬೈಬಲಿನ ಹಾಳೆಯ ಮೇಲಿನ ಖಾಲಿ ಜಾಗದಲ್ಲೆಲ್ಲ ಖನಿಜಶಾಸ್ತ್ರವನ್ನು ಕುರಿತು ಬರೆಯತೊಡಗಿದ. ಖನಿಜಶಾಸ್ತ್ರದ ತಾತ್ತ್ವಿಕ ವಿವೇಚನೆಯನ್ನು ಕುರಿತ ಈ ಬರೆಹ 1801ರಲ್ಲಿ ಪ್ರಕಟಗೊಂಡಿತು. 1800ರಲ್ಲಿ ಯುದ್ಧ ಮುಗಿದು ಶಾಂತ ಪರಿಸ್ಥಿತಿ ಉಂಟಾದಾಗ ಡಾಲಾಮ್ಯ ಬಿಡುಗಡೆಯಾದ. ಈಕೋಲೆ ಡೆಸ್ ಮೈನ್ಸ್ ಎಂಬಲ್ಲಿ ಈತ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದೂ ಉಂಟು.