ಡಾನಿಗಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾನಿಗಾಲ್ - ಐರ್ಲೆಂಡ್ ಗಣರಾಜ್ಯದ ಉತ್ತರಭಾಗದ ಅಲ್ಸ್‍ಟರ್ ಪ್ರಾಂತ್ಯದಲ್ಲಿರುವ ಒಂದು ಕೌಂಟಿ, ಉತ್ತರ ಹಾಗೂ ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ, ಪೂರ್ವದಲ್ಲಿ ಲಂಡನ್ ಪೆರಿ ಮತ್ತು ಟಿರೋನ್ ಕೌಂಟಿಗಳು ಮತ್ತು ಲಾಕ್ ಫಾಯಿಲ್ ಅಳಿವೆ, ದಕ್ಷಿಣದಲ್ಲಿ ಫರ್ಮನ ಮತ್ತು ಲೀಟ್ರ ಕೌಂಟಿಗಳು ಇದರ ಮೇರೆಗಳು. ವಿಸ್ತೀರ್ಣ 1,865 ಚ.ಮೈ. ಜನಸಂಖ್ಯೆ 1,08,000 (1971).

ಡಾನಿಗಾಲ್ ಕೌಂಟಿ ಪರ್ವತಸೀಮೆ. ಮಕಿಷ್ (2,197'), ಎರಗಾಲ್ (2,463') - ಇವು ಎತ್ತರವಾದ ಶಿಖರಗಳು. ದಕ್ಷಿಣದ ಬ್ಲೂ ಸ್ಟಾಕ್ ಮತ್ತು ಉತ್ತರದ ಡೆರಿವೀಗ್ ಶ್ರೇಣಿಗಳು ಸ್ಕಾಟ್ಲೆಂಡಿನ ಕ್ಯಾಲಿಡೋನಿಯನ್ ಪರ್ವತ ಶ್ರೇಣಿಯ ಮುಂದುವರಿದ ಭಾಗಗಳು.

ಡಾನಿಗಾಲ್ ತೀರ ಹೆಚ್ಚು ಅಂಕುಡೊಂಕು. ಲಫ್ ಸ್ವಿಲಿ ಮತ್ತು ಲಫ್ ಫಾಯಿಲ್ ಮುಖ್ಯ ಕೊಲ್ಲಿಗಳು. ಈ ಕೊಲ್ಲಿಗಳ ಮಧ್ಯೆ ಇನಿಷೊವೆನ್ ಪರ್ಯಾಯದ್ವೀಪವಿದೆ. ಇದರ ಉತ್ತರಭಾಗದ ತುಟ್ಟತುದಿಯ ಮಾಲಿನ್ ಭೂಶಿರವೇ ಐರ್ಲೆಂಡಿನ ಅತ್ಯಂತ ಉತ್ತರದ ಸ್ಥಳ. ತೀರಕ್ಕೆ ಸಮೀಪದಲ್ಲೆ ಅನೇಕ ದ್ವೀಪಗಳಿವೆ. ಅವುಗಳಲ್ಲಿ ಆರಾನ್ ಅತ್ಯಂತ ದೊಡ್ಡದು. ಫಿನ್ ಮತ್ತು ಅರ್ನ್ ಮುಖ್ಯ ನದಿಗಳು.

ವಾಯುಗುಣ[ಬದಲಾಯಿಸಿ]

ಡಾನಿಗಾಲಿನದು ಪಶ್ಚಿಮ ಯೂರೋಪಿಯನ್ ವಾಯುಗುಣ: ಬೆಚ್ಚನೆಯ ಬೇಸಗೆ ಮತ್ತು ಹಿತವಾದ ಆದ್ರ್ರ ಚಳಿಗಾಲ. ಪಶ್ಚಿಮ ಡಾನಿಗಾಲ್‍ನಲ್ಲಿ ಜನವರಿ ಉಷ್ಣತೆ 40ಲಿ-44ಲಿಈ. ಉತ್ತರದಲ್ಲಿ ಜುಲೈ ಸರಾಸರಿ ಉಷ್ಣತೆ 56ಲಿ-58ಲಿಈ. ಕೌಂಟಿಯ ಬಹುಭಾಗದಲ್ಲಿ 40" ಮಳೆ ಆಗುತ್ತದೆ.

ವ್ಯವಸಾಯ, ಉದ್ಯೋಗ, ಕೈಗಾರಿಕೆ[ಬದಲಾಯಿಸಿ]

ಫಾಯಿಲ್ ಮತ್ತು ಫಿನ್ ನದಿ ಪ್ರದೇಶಗಳು ಫಲವತ್ತಾಗಿವೆ. ಪಶ್ಚಿಮದ ಕರಾವಳಿ ಪ್ರದೇಶ ಬೆಟ್ಟಗುಡ್ಡಗಳಿಂದ ಕೂಡಿದ್ದು; ವ್ಯವಸಾಯಯೋಗ್ಯವಾಗಿಲ್ಲ. ಒಟ್ಟು ವಿಸ್ತೀರ್ಣದ 1/3 ಭಾಗ ಕೃಷಿಯೋಗ್ಯವಾಗಿದೆ. ಉಳಿದ ಪ್ರದೇಶದಲ್ಲಿ ಅರಣ್ಯಗಳನ್ನು ಬೆಳೆಸಲಾಗುತ್ತಿದೆ. ವ್ಯವಸಾಯವೇ ಪ್ರಧಾನ ಜೀವನೋಪಾಯ. ದನ, ಕುರಿ, ಕೋಳಿ ಮುಂತಾದವನ್ನು ಸಾಕುತ್ತಾರೆ. ಓಟ್ಸ್, ಆಲೂಗೆಡ್ಡೆ ಮುಖ್ಯ ಬೆಳೆಗಳು. ಇದು ಐರ್ಲೆಂಡಿನಲ್ಲಿ ಅತ್ಯಧಿಕ ಆಲೂಗೆಡ್ಡೆ ಬೆಳೆಯುವ ಕೌಂಟಿ. ಇಲ್ಲಿಂದ ಆಲೂಗೆಡ್ಡೆ ವಿಶೇಷವಾಗಿ ರಫ್ತಾಗುತ್ತದೆ. ಮೀನುಗಾರಿಕೆ ಎರಡನೆಯ ಮುಖ್ಯ ಕಸಬು. ಮೀನು ಸಂಸ್ಕರಣ ಮತ್ತು ರಫ್ತು ಕೇಂದ್ರವಾದ ರೇವುಪಟ್ಟಣ ಕಿಲಿಬೆಗ್ಸ್. ಸಮುದ್ರ ಜೊಂಡಿನಿಂದ ಐಯೊಡಿನ್ ತಯಾರಿಸಲು ಮೂಲ ಸಾಮಗ್ರಿಯಾದ ಕೆಲ್ಪವನ್ನು ಈ ಕೌಂಟಿಯಲ್ಲಿ ಉತ್ಪಾದಿಸಲಾಗುತ್ತದೆ. ನದಿಗಳಲ್ಲೂ ಮೀನು ಸಿಗುತ್ತವೆ. ಪ್ರವಾಸೋದ್ಯಮವೂ ಮುಖ್ಯವಾದ್ದು. ಅಸಂಖ್ಯಾತ ಪ್ರವಾಸಿಗರು ಡಾನಿಗಾಲ್‍ನ ಸಮುದ್ರತೀರದ ರಮಣೀಯ ತಾಣಗಳನ್ನು, ಬೀಚುಗಳನ್ನು, ಸರೋವರಗಳನ್ನು ಸಂದರ್ಶಿಸುತ್ತಾರೆ. ಮೀನುಗಾರಿಕೆ, ಬೇಟೆ ಮತ್ತು ಗಾಲ್ಫ್ ಅವರ ಮನೋರಂಜನೆಯ ಸಾಧನಗಳು.

ಲಿನನ್, ಮುಸ್ಲಿನ್ ಉಣ್ಣೆ ಮತ್ತು ಹತ್ತಿ ಜವಳಿ ಮತ್ತು ಆಟದ ಸಾಮಾನುಗಳ ಕೈಗಾರಿಕೆಗಳು ಮುಖ್ಯವಾದವು. ಹೊಗೆಸೊಪ್ಪು ಹದಮಾಡುವ ಮತ್ತು ಮದ್ಯ ತಯಾರಿಕೆಯ ಕಾರ್ಖಾನೆಗಳೂ ಇವೆ.

ಪಟ್ಟಣಗಳು[ಬದಲಾಯಿಸಿ]

ಡಾನಿಗಾಲ್ ಕೌಂಟಿಯ ಪ್ರಮುಖ ಪಟ್ಟಣಗಳು ಡಾನಿಗಾಲ್, ಬಂಕ್ರ್ಯಾನ, ಬ್ಯಾಲೀಷಾನನ್ ಮತ್ತು ಲೆಟರ್‍ಕೆನಿ. ಇದರ ಆಡಳಿತಕೇಂದ್ರ ಲಿಫರ್ಡ್.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: