ವಿಷಯಕ್ಕೆ ಹೋಗು

ಡಾಜ್ ಬಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾಜ್ ಬಾಲ್ - ಚೆಂಡಿನಿಂದ ಹೊಡೆದಾಗ ಆ ಹೊಡೆತವನ್ನು ತಪ್ಪಿಸಿಕೊಳ್ಳುವಂಥ ಆಟ. ಹೆಚ್ಚಿನ ಮನೋರಂಜನೆ ನೀಡುವ ಹಾಗೂ ಆಸಕ್ತಿ ಹುಟ್ಟಿಸುವ ಗೌಣಕ್ಷೇತ್ರದ ಆಟಗಳಲ್ಲಿ ಇದೂ ಒಂದು.

ಮೂಲ ಮತ್ತು ಪ್ರಭೇದಗಳು

[ಬದಲಾಯಿಸಿ]

ಈ ಆಟದ ಮೂಲವನ್ನು ಉತ್ತರ ಅಮೆರಿಕದ ಇಂಡಿಯನ್ನರ ಪ್ರದೇಶಗಳಲ್ಲಿ ಹಾಗೂ ಇಂಗ್ಲೆಂಡಿನಲ್ಲೂ ಕಾಣಬಹುದು. ಬೇರೆ ಬೇರೆ ದೇಶಗಳಲ್ಲಿ ಸೂಕ್ತ ಬದಲಾವಣೆಯೊಂದಿಗೆ ಈ ಆಟವನ್ನು ಆಡುತ್ತಾರೆ. ಒಂದು ತಂಡದ ಆಟಗಾರರು ಮತ್ತೊಂದು ತಂಡದ ಆಟಗಾರರನ್ನು ಚೆಂಡಿನಿಂದ ಹೊಡೆಯೆಲೆತ್ನಿಸುತ್ತಾರೆ. ಇದೇ ಆಟದ ಸ್ವರೂಪ. ಈ ಆಟವನ್ನು ಒಂದು ವೃತ್ತದಲ್ಲೊ ಎರಡು ಸಮಾಂತರ ರೇಖೆಗಳ ನಡುವೆಯೊ ಆಡುತ್ತಾರೆ. ಈ ಆಟದಲ್ಲಿ ಕಂಡುಬರುವ ಕೆಲವು ಪ್ರಭೇದಗಳು ಹೀಗಿವೆ:

1. ಸಮಸಂಖ್ಯೆಯ ಆಟಗಾರರಿರುವ ಎರಡು ತಂಡಗಳು ಇಲ್ಲಿರುತ್ತವೆ. ಇವರನ್ನು 12' ಅಂತರವಿರುವ ಎರಡು ಸಮಾಂತರ ರೇಖೆಗಳುದ್ದಕ್ಕೂ ಒಬ್ಬರನ್ನೊಬ್ಬರು ಎದುರುಬದುರಾಗಿ ನೋಡುವಂತೆ ನಿಲ್ಲಿಸಲಾಗುತ್ತದೆ. ಆಟದ ಪ್ರಾರಂಭಕ್ಕೆ ಒಂದನೆಯ ತಂಡದ ಮೊದಲನೆಯ ಆಟಗಾರ ಒಂದು ಹೆಜ್ಜೆ ಮುಂದಿಡುತ್ತಾನೆ. ಅವನಿಗೆದುರಾಗಿರುವ ಎರಡನೆಯ ತಂಡದ ಆಟಗಾರ ಒಂದು ಮೃದುವಾದ ಚೆಂಡಿನಿಂದಲೊ ಇಲ್ಲವೆ ಒಂದು ವಾಲಿಬಾಲಿನಿಂದಲೊ ಅವನನ್ನು ಹೊಡೆಯಲು ಪ್ರಯ್ನತಿಸುತ್ತಾನೆ. ಹೊಡೆತ ತಪ್ಪಿಸಿಕೊಳ್ಳಲು ಎದುರು ತಂಡದ ಆಟಗಾರ ಯಾವುದೇ ರೀತಿಯಲ್ಲಿ ಬೇಕಾದರೂ ವರ್ತಿಸಬಹುದು. ಆದರೆ ತನ್ನ ಕಾಲುಗಳನ್ನು ಮಾತ್ರ ಎತ್ತಬಾರದು. ಚೆಂಡು ಮೈಗೆ ತಗುಲದಿದ್ದರೆ ಹೊಡೆದವನು ಸೋತಂತೆ. ಆತ ತನ್ನ ಪಕ್ಷವನ್ನು ತ್ಯಜಿಸಿ ಎದುರು ಪಕ್ಷಕ್ಕೆ ಬರಬೇಕು. ಚೆಂಡಿನೇಟು ಎದುರಾಳಿಯ ಸೊಂಟದ ಮೇಲುಭಾಗಕ್ಕೆ ಬಿದ್ದರೆ ಮಾತ್ರ ಹೊಡೆದವನು ಗೆಲ್ಲುತ್ತಾನೆ. ಕೈತಪ್ಪಿ ಅದು ಸೊಂಟದ ಕೆಳಗಿನ ಭಾಗಕ್ಕೆ ಬಿದ್ದರೆ ಹೊಡೆದವನು ಸೋಲುತ್ತಾನೆ. ಎರಡನೆಯ ತಂಡದ ಎಲ್ಲ ಆಟಗಾರರೂ ಒಂದನೆ ತಂಡದ ಎಲ್ಲ ಆಟಗಾರರಿಗೆ ವಿರುದ್ಧವಾಗಿ ಚೆಂಡು ಎಸೆಯುವವರೆಗೆ ಈ ಸರಣಿ ನಡೆಯುತ್ತದೆ. ಅನಂತರ ಒಂದನೆಯ ತಂಡದ ಆಟಗಾರರೂ ಇದೇ ರೀತಿಯಲ್ಲಿ ಎರಡನೆಯ ತಂಡದ ಆಟಗಾರರಿಗೆ ಚೆಂಡಿನಿಂದ ಹೊಡೆಯಲು ಪ್ರಯತ್ನಿಸುತ್ತಾರೆ. ಎದುರಾಳಿ ತಂಡದಿಂದ ಹೆಚ್ಚಿನ ಸಂಖ್ಯೆಯ ಆಟಗಾರರನ್ನು ತನ್ನೆಡೆಗೆ ಸೆಳೆದುಕೊಳ್ಳುವ ತಂಡ ಗೆದ್ದಂತೆ. ಸೊಂಟದಿಂದ ಕೆಳಗೆ ಬಿದ್ದ ಯಾವುದೇ ಏಟನ್ನು ಒಂದು ಫೌಲ್ (ತಪ್ಪು) ಎಂದು ಪರಿಗಣಿಸಲಾಗುತ್ತದೆ. ಹೀಗಾದಾಗ ಏಟು ತಿಂದವ ಸ್ಥಳ ಬದಲಾಯಿಸುವ ಪ್ರಮೇಯವಿರದೆ ಚೆಂಡನ್ನು ಎಸೆದವನೇ ಎದುರು ತಂಡವನ್ನು ಸೇರಬೇಕಾಗುತ್ತದೆ. ಈ ಬಗೆಯ ಆಟವನ್ನು ಕ್ರೀಡಾಂಗಣದಲ್ಲಿ ಇಲ್ಲವೆ ಯಾವುದೇ ಆಟದ ಮೈದಾನದಲ್ಲಿ ಆಡಬಹುದು. 10ರಿಂದ 12ವರ್ಷಗಳ ವಯೋಮಿತಿಯ ವರೆಗಿನ ಮಕ್ಕಳಿಗೆ ಇದು ಒಂದು ಮೋಜಿನಾಟ.

2. ಮೂರು ಜನರಿಗಾಗಿ ಡಾಜ್ ಬಾಲ್ ಅಥವಾ ಸ್ಕಿಟಲ್ಸ್: ಮೂರು ಮಂದಿ ಮಾತ್ರ ಇರುವ ಎಷ್ಟು ತಂಡಗಳು ಬೇಕಾದರೂ ಏಕಕಾಲದಲ್ಲಿ ಈ ಆಟವನ್ನು ಆಡಬಹುದು. ಸುಮಾರು 13ರಿಂದ 15 ವರ್ಷ ವಯೋಮಿತಿಯ ವರೆಗಿನ ಮಕ್ಕಳಿಗೆ ಈ ಆಟ ಹೆಚ್ಚು ಮೋಜನ್ನುಂಟುಮಾಡುತ್ತದೆ. ಆಟಗಾರರಿಗೆ ಒಂದು, ಎರಡು ಮತ್ತು ಮೂರು ಎಂಬ ಸಂಖ್ಯೆಗಳನ್ನು ಕೊಡಲಾಗುತ್ತದೆ. ಮೈದಾನದ ಮಧ್ಯದಲ್ಲಿ 18" ತ್ರಿಜ್ಯದ ಒಂದು ವೃತ್ತವನ್ನು ಎಳೆದು ಅದರ ಅಕ್ಕಪಕ್ಕದಲ್ಲಿ 15' ಗಳಷ್ಟು ಅಂತರವಿರುವ ಎರಡು ರೇಖೆಗಳನ್ನು ಎಳೆಯುತ್ತಾರೆ. ಒಂದು ತಂಡದ ಮೊದಲನೆಯ ಆಟಗಾರ ವೃತ್ತದ ಮಧ್ಯದಲ್ಲಿ ನಿಲ್ಲುತ್ತಾನೆ. ಆ ತಂಡದ ಎರಡನೆಯ ಆಟಗಾರ ಮತ್ತು ಮೂರನೆಯ ಆಟಗಾರರು ಅನುಕ್ರಮವಾಗಿ ವೃತ್ತದ ಅಕ್ಕಪಕ್ಕದ ಗೆರೆಗಳ ಮೇಲೆ ನಿಂತಿರುತ್ತಾರೆ. ಹೀಗೆಯೇ ಇನ್ನಿತರ ತಂಡದ ಆಟಗಾರರು ಕೂಡ. ಎರಡನೆಯ ಮತ್ತು ಮೂರನೆಯ ಆಟಗಾರರು ಒಟ್ಟಿಗೆ ಆಡುತ್ತ ಬಂದ ಚೆಂಡನ್ನು ಮೊದಲನೆ ಆಟಗಾರರ ಕಾಲುಗಳಿಗೆ ತಗಲುವಂತೆ ಎಸೆಯುತ್ತಾರೆ. ವೃತ್ತದ ನಡುವೆ ಇರುವ ಆಟಗಾರ ಯಾವ ರೀತಿಯಲ್ಲಿ ಬೇಕಾದರೂ ನೆಗೆದು ಚೆಂಡಿನೇಟು ತಪ್ಪಿಸಿಕೊಳ್ಳಬಹುದು. ಆದರೆ ಅವನ ಕಾಲುಗಳು ವೃತ್ತದ ಹೊರಗೆ ಹೋಗುವಂತಿಲ್ಲ. ಒಂದು ವೇಳೆ ಚೆಂಡು ಕಾಲಿಗೆ ತಗುಲಿದರೆ ವೃತ್ತದ ಒಳಗಿರುವಾತನೂ ಚೆಂಡನ್ನು ಹೊಡೆದಾತನು ತಮ್ಮ ಜಾಗವನ್ನು ಪರಸ್ಪರ ಬದಲಾಯಿಸಿಕೊಳ್ಳಬೇಕು. ಪ್ರತಿಯೊಂದು ಸಲ ಚಾಕಚಕ್ಯತೆಯಿಂದ ತಪ್ಪಿಸಿಕೊಂಡಾಗಲೂ ವೃತ್ತದಲ್ಲಿರುವ ಆಟಗಾರನಿಗೆ ಒಂದು ಪಾಯಿಂಟ್ ದೊರಕುತ್ತದೆ. ಚೆಂಡು ಎಸೆಯುವಾತನಿಗೆ ತಾನು ಎಸೆದ ಚೆಂಡು ವೃತ್ತದಲ್ಲಿರುವ ಆಟಗಾರನಿಗೆ ತಗುಲಿದ ಪ್ರತಿಸಲವೂ ಒಂದು ಪಾಯಿಂಟ್ ಲಭಿಸುತ್ತದೆ. ಐದು ಮಿನಿಟುಗಳ ಕಾಲ ಇಂಥ ಆಟವನ್ನು ಆಡಿ ಪಾಯಿಂಟುಗಳನ್ನು ದಾಖಲೆ ಮಾಡಿಕೊಳ್ಳಲಾಗುತ್ತದೆ. ಅತ್ಯಧಿಕ ಪಾಯಿಂಟುಗಳನ್ನು ಪಡೆದ ತಂಡವನ್ನು ವಿಜಯೀ ತಂಡವೆಂದು ಪರಿಗಣಿಸುತ್ತಾರೆ.

3. ವೃತ್ತದಲ್ಲಿ ಆಡುವ ಡಾಜ್ ಬಾಲ್: ಇದನ್ನು ಒಂದು ವೃತ್ತದಲ್ಲಿ ಆಡುತ್ತಾರೆ. ಈ ಆಟದ ಯಾವ ವಯೋಮಿತಿಯೂ ಇರದು. ಭಾರತದಲ್ಲಿ ಈ ಆಟ ಹೆಚ್ಚು ಜನಪ್ರಿಯವಾಗಿದೆ. ಪ್ರೌಢಶಾಲೆಯ ಹುಡುಗರಿಗೆ ಇದು ಬಹಳ ಪ್ರಿಯವಾದ್ದು. ಆಟಗಾರರನ್ನು ಸಮಸಂಖ್ಯೆಯಿರುವ ಎರಡು ತಂಡಗಳನ್ನಾಗಿ ವಿಂಗಡಿಸಲಾಗುತ್ತದೆ. ಒಂದು ತಂಡದ ಆಟಗಾರರು ಮೈದಾನದ ಮೇಲೆ ಎಳೆದಿರುವ ಸು. 25' ವ್ಯಾಸದ ವೃತ್ತದ ಪರಿಧಿಯ ಅಂಚಿನ ಸುತ್ತಲೂ ನಿಲ್ಲುವರು. ಆಟಗಾರರ ಸಂಖ್ಯೆಗೆ ಅನುಗುಣವಾಗಿ ವೃತ್ತದ ತ್ರಿಜ್ಯ 8 ರಿಂದ 12'ಗಳಷ್ಟಿರಬಹುದು. ಎರಡನೆ ತಂಡದ ಆಟಗಾರರು ಅಸ್ತವ್ಯಸ್ತವಾಗಿ ಚದರಿದಂತೆ ವೃತ್ತದ ಒಳಗೆ ನಿಲ್ಲುವರು. ಆಟದ ಉದ್ದೇಶವೇನೆಂದರೆ ಹೊರಗೆ ನಿಂತಿರುವ ಆಟಗಾರರು ಒಳಗೆ ನಿಂತಿರುವ ಆಟಗಾರರನ್ನು ಒಂದು ಕಾಲ್ಚಂಡು (ಫುಟ್‍ಬಾಲ್) ಇಲ್ಲವೆ ವಾಲಿಬಾಲಿನಿಂದ ಹೊಡೆಯಬೇಕು. ಒಳಗಿರುವ ಆಟಗಾರನ ಸೊಂಟದಿಂದ ಕೆಳಗೆ ಮಾತ್ರ ಚೆಂಡು ತಗಲುವಂತೆ ಹೊಡೆಯಬೇಕು. ಒಳಗಿನ ಆಟಗಾರರು ಹೇಗಾದರೂ ಮಾಡಿ ಆ ಹೊಡೆತದಿಂದ ತಪ್ಪಿಸಿಕೊಳ್ಳಬೇಕು. ಅವರು ನೆಗೆಯಬಹುದು. ಬಗ್ಗಬಹುದು ಅಥವಾ ಇನ್ನಾವುದೇ ರೀತಿಯಲ್ಲೂ ತಪ್ಪಿಸಿಕೊಳ್ಳಬಹುದು. ಆದರೆ ವೃತ್ತವನ್ನು ಬಿಟ್ಟು ಹೊರಬರಬಾರದು. ವೃತ್ತದ ಹೊರಗಿರುವ ತಂಡದವರು ಹನ್ನೆರಡು ಸಲ ಚೆಂಡನ್ನು ವೃತ್ತದ ಒಳಗಿರುವರತ್ತ ಎಸೆಯುತ್ತಾರೆ. ಸೊಂಟಕ್ಕಿಂತ ಮೇಲೆ ಚೆಂಡು ಬಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಚೆಂಡೇಟು ತಿಂದವನು ಸೋತಂತೆ. ಕಡೆಯ ವರೆಗೆ ವೃತ್ತದಲ್ಲೇ ಉಳಿಯುವ ಆಟಗಾರರನ್ನು ವೃತ್ತದ ರಾಜ (ಕಿಂಗ್ ಆಫ್ ದಿ ರಿಂಗ್) ಎಂದು ಕರೆಯುವರು. ಅನಂತರ ಎರಡು ತಂಡಗಳೂ ತಮ್ಮ ತಮ್ಮ ಜಾಗಗಳನ್ನು ಪರಸ್ಪರ ಬದಲಾಯಿಸಿಕೊಂಡು ಆಟವಾಡುತ್ತಾರೆ. ಪ್ರತಿಯೊಂದು ತಂಡದ ವೃತ್ತದ ರಾಜ ಯಾರೆಂಬುದನ್ನು ತೀರ್ಮಾನಿಸಲು ಈ ಆಟವನ್ನು ಆಡುತ್ತಾರೆ. ಅಲ್ಲದೆ ಕಾಲವನ್ನು ದೃಷ್ಟಿಯಲ್ಲಿಟ್ಟುಕೊಂಡೂ ಈ ಆಟವನ್ನು ಆಡುವುದುಂಟು. ಯಾವ ತಂಡ ಕನಿಷ್ಠ ಅವಧಿಯಲ್ಲಿ ತನ್ನ ಎದುರು ತಂಡದ ಎಲ್ಲ ಆಟಗಾರರನ್ನೂ ಹೊರಗೆ ಹಾಕಿದೆ ಎಂಬುನ್ನು ಗುಮನಿಸುತ್ತಾರೆ. ಕಡಿಮೆ ಅವಧಿಯನ್ನು ತೆಗೆದುಕೊಂಡ ತಂಡ ಗೆದ್ದಂತೆ. ಕಾಲದ ಅವಧಿಯನ್ನು 5 ಅಥವಾ 3 ಮಿನಿಟು ಎಂದು ನಿಷ್ಕರ್ಷಿಸುವುದೂ ಉಂಟು. ಈ ಆಟದ ಇನ್ನೊಂದು ಬಗೆಯೂ ಬಹು ಜನಪ್ರಿಯವಾಗಿದೆ. ಹೊಡೆತ ತಿಂದ ಆಟಗಾರ ಔಟ್ ಆಗಿ ವೃತ್ತದಿಂದ ಹೊರಬರಬೇಕಾಗಿಲ್ಲ ವೃತ್ತದಲ್ಲೇ ಇರಬಹುದು. ಆದರೆ ನಿರ್ದಿಷ್ಟ ಅವಧಿಯಲ್ಲಿ ಯಾವ ಗುಂಪು ಹೆಚ್ಚು ಪಾಯಿಂಟುಗಳನ್ನು ಗಳಿಸುತ್ತದೋ ಅದು ಗೆದ್ದಂತೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: