ಡಾಕ್ಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾಕ್ಟರ್ -

ಯಾವುದೇ ಒಂದು ವಿಶ್ವವಿದ್ಯಾಲಯ ನೀಡಬಹುದಾದ ಪದವಿಗಳ ಪೈಕಿ ಅತ್ಯುನ್ನತವಾದದ್ದನ್ನು ಪಡೆದಾತ. ಸಾಮಾನ್ಯ ಜನಗಣನೆಯಂತೆ ವೈದ್ಯವೃತ್ತಿ ನಡೆಸುವ ಸಲುವಾಗಿ ಯಾವುದೆ ಪದವಿ ಪಡೆದವನನ್ನೂ ಡಾಕ್ಟರ್ ಎಂದೇ ವ್ಯವಹರಿಸುವುದು ರೂಢಿ. ವಾಸ್ತವವಾಗಿ ಈ ಶಬ್ದ ಲ್ಯಾಟಿನ್ ಭಾಷೆಯಲ್ಲಿ ಗುರು ಎಂಬ ಅರ್ಥಬರುವ ಶಬ್ದದ ಮೂಲದಿಂದ ಜನಿಸಿದ್ದು. ವಿಶ್ವವಿದ್ಯಾಲಯದ ಬ್ಯಾಚಲರ್ ಪದವಿ ಮತ್ತು ಲೈಸೆನ್ಷಿಯೇಟ್ (ಬೋಧಿಸುವುದಕ್ಕೆ ಅನುಮತಿ ನೀಡುವ) ಪದವಿಗಳಾದ ಮೇಲೆ ದೊರಕಬಹುದಾದ ಪದವಿಯನ್ನೂ ಈ ಪದ ಸೂಚಿಸುತ್ತದೆ. ಇದನ್ನು ಪಡೆದವರು ಅಧ್ಯಾಪಕರ ಸಂಘಕ್ಕೆ (ಟೀಚರ್ಸ್‌ ಗಿಲ್ಡ್‌) ಸೇರಿಸಲ್ಪಟ್ಟವರು ಎಂದು ಪ್ರಾರಂಭದ ಗಣನೆಯಾಗಿತ್ತು.

ಡಾಕ್ಟರ್ ಪದವಿಯನ್ನು ಮೊತ್ತಮೊದಲು ಬಲೋನ್ಯ ವಿಶ್ವವಿದ್ಯಾಲಯದಲ್ಲಿ 12ನೆಯ ಶತಮಾನದ ಅಂತ್ಯಭಾಗದಲ್ಲಿ ಸಾಮಾಜಿಕ ನ್ಯಾಯಶಾಸ್ತ್ರದಲ್ಲಿ ನೀಡಲಾಗಿತ್ತು. ಅನಂತರ ಮತಕ್ಕೆ ಸಂಬಂಧಪಟ್ಟ ನ್ಯಾಯಶಾಸ್ತ್ರ, ವೈದ್ಯಕೀಯ ಮತ್ತಿತರ ಶಾಸ್ತ್ರಗಳಲ್ಲಿಯೂ ಡಾಕ್ಟರ್ ಪದವಿ ನೀಡುವುದು ಪ್ರಾರಂಭವಾಯಿತು. ಕೆಲವು ವಿಶ್ವವಿದ್ಯಾಲಯಗಳಲ್ಲಿ ಇಂಥ ಅತ್ಯುನ್ನತ ಪದವಿಗೆ ಮಾಸ್ಟರ್ ಡಿಗ್ರಿ ಹಾಗೂ ಡಾಕ್ಟರ್ ಡಿಗ್ರಿ ಒಂದೇ ಎಂದು ಗಣಿಸುವುದೂ ರೂಢಿಯಲ್ಲಿತ್ತು. ಕ್ರಮೇಣ ಇಂಗ್ಲೆಂಡಿನಲ್ಲಿ ಪ್ರಮುಖ ವ್ಯಾಸಂಗಗಳಲ್ಲಿ ಅತ್ಯುನ್ನತ ಪದವಿಗೆ ಡಾಕ್ಟರ್ ಡಿಗ್ರಿ (ಡಾಕ್ಟೊರೇಟ್) ಎಂದು ಕರೆಯುವುದೂ ಅಷ್ಟು ಮುಖ್ಯವಲ್ಲದ ವಿಷಯಗಳಲ್ಲಿ ಅತ್ಯುನ್ನತ ಪದವಿ ಪಡೆದವರಿಗೆ ಮಾಸ್ಟರ್ಗಳೆಂದು ಕರೆಯುವುದೂ ಬಳಕೆಗೆ ಬಂದುವು. ಜರ್ಮನಿಯಲ್ಲಿ ಮೊತ್ತಮೊದಲು ಡಾಕ್ಟರ್ ಮತ್ತು ಮಾಸ್ಟರ್ ಡಿಗ್ರಿಗಳು ಒಂದೇ ಎಂದು ಗಣಿಸಲ್ಪಡುತ್ತಿದ್ದರೂ ಕ್ರಮೇಣ ಯಾವುದೇ ವಿಷಯದಲ್ಲಿಯೂ ಅತ್ಯುನ್ನತ ಪದವಿ ಪಡೆದವರನ್ನು ಮಾತ್ರ ಡಾಕ್ಟರ್ ಎಂದೇ ಕರೆಯಲು ಪ್ರಾರಂಭವಾಯಿತು. ಇಂದಿಗೂ ಪ್ರಪಂಚದಲ್ಲಿ ಸಾಮಾನ್ಯವಾಗಿ ಎಲ್ಲ ಕಡೆಯಲ್ಲಿಯೂ ಡಾಕ್ಟರ್ ಡಿಗ್ರಿಯನ್ನು ಈ ರೀತಿ ಗಣಿಸುವುದೇ ಕಂಡುಬರುತ್ತಿದೆ. ಡಾಕ್ಟರ್ ಪದವಿ ಪಡೆಯಬೇಕಾದರೆ ಪೂರ್ವಭಾವಿಯಾಗಿ ಒಂದು ಪದವಿಯನ್ನು ಪಡೆದ ಅನಂತರ ದೀರ್ಘಕಾಲಿಕವಾಗಿ ಪದವಿಯೋತ್ತರ ವ್ಯಾಸಂಗಮಾಡಬೇಕಾದುದು ವಿಧಿತ. ಯಾವ ವಿಷಯದ ಅತ್ಯುನ್ನತ ವ್ಯಾಸಂಗವೂ ಸಾಮಾನ್ಯವಾಗಿ ಮೂಲತತ್ತ್ವ ಸಂಶೋಧನೆಗೆ ಸಂಬಂಧಪಡುವುದರಿಂದ ಇಂಥ ಅತ್ಯುನ್ನತ ವ್ಯಾಸಂಗಗಳಿಗೆಲ್ಲ ಫಿಲಾಸಫಿ ಎಂದು ಹೆಸರಿಟ್ಟು ಅದನ್ನು ಆ ಮಟ್ಟದಲ್ಲಿ ವ್ಯಾಸಂಗಿಸಿದವರಿಗೆಲ್ಲ ಡಾಕ್ಟರ್ ಆಫ್ ಫಿಲಾಸಫಿ- ಪಿಎಚ್.ಡಿ. ಎಂಬ ಪದವಿಯನ್ನು (ಡಿಗ್ರಿ) ಕೊಡಲು ಪ್ರಾರಂಭವಾಯಿತು. ಆದರೆ ವಿಜ್ಞಾನ, ಸಾಹಿತ್ಯ, ನ್ಯಾಯಮತೀಯ ವಿಷಯ ಮುಂತಾದ ಶಾಸ್ತ್ರಗಳಲ್ಲಿ ಅತ್ಯುನ್ನತ ವ್ಯಾಸಂಗ ಮಾಡಿದವರಿಗೆ ಡಿ.ಎಸ್ಸಿ; ಡಿ.ಲಿಟ್; ಡಿ.ಸಿಎಲ್ ಅಥವಾ ಎಲ್ಎಲ್.ಡಿ ; ಡಿ.ಡಿ. ಮುಂತಾದ ಡಿಗ್ರಿಗಳನ್ನು ಕೊಡುವುದೂ ಇದೆ. ಇವೇ ಡಿಗ್ರಿಗಳನ್ನು ಗೌರವಾರ್ಥವಾಗಿ ಕೊಡುವುದೂ ಉಂಟು. ಆಯಾ ಕ್ಷೇತ್ರಗಳಲ್ಲಿ ಬಹುಪರಿಣತರೆಂದು ಗುರುತಿಸಿ ಅವರನ್ನು ಗೌರವಿಸಲು ವಿಶ್ವವಿದ್ಯಾಲಯಗಳು ಇಂಥ ಗೌರವಪದವಿಗಳನ್ನು ನೀಡುವುದು ರೂಢಿಗೆ ಬಂದಿದೆ. ನ್ಯಾಯವಾಗಿಯೇ ಈ ಗೌರವ ಪದವಿಗಳು ವಿರಳ.

ಡಾಕ್ಟರ್ ಡಿಗ್ರಿ (ಪಿಎಚ್ಡಿ) ಪಡೆಯಬೇಕಾದರೆ ಪದವಿಯನ್ನು ಮುಗಿಸಿ, ಸ್ನಾತಕೋತ್ತರ ಪದವಿಯನ್ನು ಪುರೈಸಬೇಕು. ಎಂ.ಫಿಲ್ ಮಾಡಬೇಕು. ತದನಂತರ ಪಿ.ಎಚ್ಡಿಗಾಗಿ ಮಹಾ ಪ್ರಬಂಧವನ್ನು ರಚಿಸಿ ಡಾಕ್ಟೋರೇಟ್ ಪದವಿ ಪಡೆಯಬೇಕು.

ಡಾಕ್ಟರ್ ಡಿಗ್ರಿ ಪಡೆದವರು ಆಯಾ ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಬಹುದೆಂದು ಹಿಂದಿನಿಂದಲು ಒಪ್ಪಿತವಾಗಿರುವ ವಿಷಯ. ಹಾಗೆಯೇ ಮೊದಲು ಮೊದಲು ಮತೀಯ, ವೈದ್ಯಕೀಯ, ನ್ಯಾಯ- ಈ ವಿಷಯಗಳ ಅಧ್ಯಾಪಕರು (ಅಂದರೆ ಡಾಕ್ಟರ್ ಡಿಗ್ರಿ ಪಡೆದವರು) ಬೋಧನೆಯಲ್ಲದೆ ಖಾಸಗಿ ವೃತ್ತಿ ನಡೆಸುವುದಕ್ಕೂ ವಿಶ್ವವಿದ್ಯಾಲಯ, ಸರ್ಕಾರ, ಜನತೆ ಇವೆಲ್ಲದರ ಸಮ್ಮತಿ ಇತ್ತು. ಕ್ರಮೇತ ಜನತೆ ವಿಶ್ವವಿದ್ಯಾಲಯದ ಮೊದಲ ವೈದ್ಯಪದವಿಯನ್ನು ಪಡೆದ ವ್ಯಕ್ತಿಗಳನ್ನು ಅವರು ವೃತ್ತಿ ನಡೆಸುವರಾದ್ದರಿಂದ, ಡಾಕ್ಟರ್ ಡಿಗ್ರಿ ಪಡೆದವರೆಂದು ಭಾವಿಸಿತು. ಪಾಶ್ಚಾತ್ಯ ವಿಶ್ವವಿದ್ಯಾಲಯಗಳಲ್ಲಿ ಅನೇಕ ಕಡೆ ವೈದ್ಯಕೀಯ ವ್ಯಾಸಂಗದ ಮೊದಲ ಪದವಿಗೆ ಡಾಕ್ಟರ್ ಪದವಿ-ಎಂ.ಡಿ.-ಡಾಕ್ಟರ್ ಆಫ್ ಮೆಡಿಸಿನ್ ಎಂದೇ ಕರೆದಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಡಾಕ್ಟರ್&oldid=1081576" ಇಂದ ಪಡೆಯಲ್ಪಟ್ಟಿದೆ