ವಿಷಯಕ್ಕೆ ಹೋಗು

ಡಾಂಕ್ಯಸ್ಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾಂಕ್ಯಸ್ಟರ್ - ಇಂಗ್ಲೆಂಡಿನ ಯಾರ್ಕ್‍ಷೈರಿನ ವೆಸ್ಟ್‍ರೈಡಿಂಗ್‍ನಲ್ಲಿರುವ ಒಂದು ಕೌಂಟಿ; ಪಾರ್ಲಿಮೆಂಟಿಗೆ ಪ್ರತಿನಿಧಿಯನ್ನು ಕಳುಹಿಸುವ ಅಧಿಕಾರವುಳ್ಳ ಪಟ್ಟಣ. ಲಂಡನ್ನಿಗೆ 156 ಮೈ. ಮತ್ತು ಲೀಡ್ಸ್‍ನ ಆಗ್ನೇಯಕ್ಕೆ ರಸ್ತೆಯ ಮೂಲಕ 31 ಮೈ. ದೂರದಲ್ಲಿ, ಡಾನ್ ನದಿಯ ದಡದ ಮೇಲೆ ಪಟ್ಟಣ ಇದೆ. ಜನಸಂಖ್ಯೆ 82,505 (1971). ಇದು ಡಾನ್ ಮತ್ತು ಟ್ರೆಂಟ್ ನದಿಗಳ ಜಲವಿಭಾಜಕ ದಿಣ್ಣೆಯ ಏಣಿನ ಆಚೀಚೆ ಹಬ್ಬಿದೆ. ಇದು ದೊಡ್ಡ ಕಲ್ಲಿದ್ದಲು ಗಣಿಪ್ರದೇಶದ ಕೇಂದ್ರ. ಬ್ರಿಟಿಷ್ ರೈಲ್ವೆಯ ಪೂರ್ವವಲಯದ ಒಂದು ಮುಖ್ಯ ನಿಲ್ದಾಣ. ಇಲ್ಲಿ ಅದರ ಮುಖ್ಯ ಕಾರ್ಯಾಗಾರವಿದೆ. ಗ್ರೇಟ್ ನಾರ್ತ್ ರಸ್ತೆ ಇದರ ಮೂಲಕ ಹಾದು ಹೋಗುತ್ತದೆ. ಡಾಂಕ್ಯಸ್ಟರಿನ ಬಳಿಯಿಂದ ಹೊರಡುವ ಡಾನ್ ನದೀ ಕಾಲುವೆಯಿಂದ ಟ್ರೆಂಟ್ ಮತ್ತು ಹಂಬರ್ ನದಿಗಳಿಗೂ ಗೂಲ್ ಮತ್ತು ಹಲ್ ಬಂದರುಗಳಿಗೂ ಸಂಪರ್ಕ ಏರ್ಪಟ್ಟಿದೆ. ಇಲ್ಲಿರುವ ಸೇಂಟ್ ಜೇಮ್ಸ್ ಚರ್ಚ್, ಗಿಲ್ಡ್ ಹಾಲ್, ಶ್ರೀಮಂತಮಹಲು, ಸಾರ್ವಜನಿಕ ಗ್ರಂಥಾಲಯ, ಕಲಾಶಾಲೆ, ವಸ್ತುಸಂಗ್ರಹಾಲಯ, ಕಲಾಪ್ರದರ್ಶನಾಲಯ, ತಾಂತ್ರಿಕ ಕಾಲೇಜು, ಧಾನ್ಯ ವಿನಿಮಯ ಕೇಂದ್ರ, ಮಾರುಕಟ್ಟೆ ಹಜಾರ-ಇವು ಇಲ್ಲಿಯ ಇತರ ಕೆಲವು ಮುಖ್ಯ ಕಟ್ಟಡಗಳು. ವಿಸ್ತಾರವಾದ ಕಲ್ಲಿದ್ದಲು ಗಣಿಗಳಿರುವ ಪ್ರದೇಶದ ನಡುವೆ ಇರುವ ಈ ಪಟ್ಟಣವನ್ನು ಕೌಂಟಿಯ ವಿವಿಧ ಕಲ್ಲಿದ್ದಲು ಗಣಿ ಪಟ್ಟಣಗಳೊಂದಿಗೆ ರಸ್ತೆ ಮಾರ್ಗಗಳು ಸಂಪರ್ಕ ಕಲ್ಪಿಸುತ್ತವೆ. ಇಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಹೆಚ್ಚಾಗಿ ನಡೆಯುತ್ತದೆ. ಆದರೂ ಕಲ್ಲಿದ್ದಲು ಗಣಿಗಾರಿಕೆ ಒಂದು ದೊಡ್ಡ ಉದ್ಯಮ. ಕೃಷಿ ಯಂತ್ರಗಳು. ವಿದ್ಯುತ್ ಉಪಕರಣಗಳು, ತಂತಿ ಹಗ್ಗಗಳು, ಹಿತ್ತಾಳೆ ಕೊಳವೆಗಳು, ಬಟ್ಟೆಗಳು, ನೈಲಾನ್ ಮತ್ತು ವಿಠಾಯಿ ತಯಾರಾಗುತ್ತವೆ.

ಡಾಂಕ್ಯಸ್ಟರಿನ ಕುದುರೆ ಪಂದ್ಯದ ಮೈದಾನ ಪಟ್ಟಣದ ಆಗ್ನೇಯಕ್ಕೆ 1 ಮೈ. ದೂರದಲ್ಲಿದೆ. ಇದರ ಮುಂದೆ ವಿಮಾನ ನಿಲ್ದಾಣವಿದೆ. ಡಾಂಕ್ಯಸ್ಟರ್ ಪಟ್ಟಣಕ್ಕೆ ಸಮೀಪದಲ್ಲಿ ಸ್ಯಾಕ್ಸನ್ ಮತ್ತು ನಾರ್ಮನ್ ಕಾಲದ ಅವಶೇಷಗಳುಂಟು. 17ನೆಯ ಶತಮಾನದಲ್ಲಿ ಇಲ್ಲಿ ದೊಡ್ಡ ಸಂತೆ ಕೂಡುತ್ತಿತ್ತು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: