ವಿಷಯಕ್ಕೆ ಹೋಗು

ಟ್ಯಾಲೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Tallow made by rendering calf suet


ಟ್ಯಾಲೊ ಪ್ರಾಣಿಜನ್ಯ ಕೊಬ್ಬು. ಚರ್ಬಿ ಎಂದೂ ಹೆಸರಿದೆ. ಇದನ್ನು ದನ ಹಾಗೂ ಕುರಿಗಳ ಮಾಂಸದಿಂದ ಬೇರ್ಪಡಿಸಲಾಗುತ್ತದೆ. ಇದು ಗಟ್ಟಿಯಾದ, ಚೆನ್ನಾಗಿ ಬೆರೆತುಕೊಳ್ಳದ ಕೊಬ್ಬುಗಳ ಮಿಶ್ರಣ. ಜೀವಕೋಶಗಳ ಭಾಗವನ್ನು ಬೇರ್ಪಡಿಸುವ ಮೊದಲು ಇದನ್ನು ಸುಯೆಟ್ ಎಂದು ಕರೆಯುತ್ತಾರೆ. ಕುರಿ ಮಾಂಸದ ಟ್ಯಾಲೊದಲ್ಲಿ ದನದ ಟ್ಯಾಲೊಗಿಂತ ಹೆಚ್ಚು ಸ್ಟೆರಿನ್ ಉಂಟು. ಟ್ಯಾಲೊವಿನ ಗುಣವು ದನ ಅಥವಾ ಕುರಿಯ ತಳಿ, ವಯಸ್ಸು ಮತ್ತು ಸ್ವಲ್ಪ ಮಟ್ಟಿಗೆ ಮೇವನ್ನೂ ಅವಲಂಬಿಸುತ್ತದೆ. ಹೋರಿ ಹಾಗೂ ಟಗರುಗಳಿಂದ ತೆಗೆದ ಟ್ಯಾಲೊ ಹಸು ಹಾಗೂ ಕುರಿಗಳಿಂದ ತೆಗೆದ ಟ್ಯಾಲೊಗಿಂತ ಗಟ್ಟಿಯಾಗಿರುವುದು. ಎಣ್ಣೆಹಿಂಡಿಗಳನ್ನು ತಿಂದ ಪ್ರಾಣಿಗಳಿಗಿಂತ ಬರಿಹುಲ್ಲು ಮೇದ ಪ್ರಾಣಿಗಳ ಟ್ಯಾಲೋ ಗಟ್ಟಿ. ಮಾದಕ ಪಾನೀಯಗಳ ತಯಾರಿಕೆಯಲ್ಲಿ ದೊರೆಯುವ ಉಪೋತ್ಪನ್ನಗಳನ್ನು ಮೇವಾಗಿ ಉಪಯೋಗಿಸಿದಾಗ ಟ್ಯಾಲೋ ಮತ್ತಷ್ಟು ಮೃದುವಾಗುತ್ತದೆ.

ಉತ್ಪಾದನೆ

[ಬದಲಾಯಿಸಿ]

ಟ್ಯಾಲೊವನ್ನು ಸಾಮಾನ್ಯವಾಗಿ ಕರಗಿಸಿ ಬೇರ್ಪಡಿಸುವುದರ ಮೂಲಕ ಪಡೆಯಬಹುದು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಮಾಂಸದ ತುಣುಕುಗಳನ್ನು ದೊಡ್ಡ ಕಬ್ಬಿಣದ ಕಡಾಯಕ್ಕೆ ಸುರಿದು ಅದಕ್ಕೆ ಸುಡು ನೀರನ್ನು ಬೆರಸಿ ವಿಶೇಷವಾಗಿ ಜೋಡಿಸಿರುವ ಕೊಳವೆಯ ಮೂಲಕ ಆವಿಯನ್ನು ಹಾಯಿಸಲಾಗುತ್ತದೆ. ಸ್ಪಲ್ಪ ಕಾಲದಲ್ಲೇ ಕರಗಿ ಬೇರ್ಪಟ್ಟು ನೀರಿನಲ್ಲಿ ತೇಲುವ ಕೊಬ್ಬನ್ನು ಎಚ್ಚರಿಕೆಯಿಂದ ಸಂಗ್ರಹಿಸಬಹುದು. ಇನ್ನೂ ಸ್ವಲ್ಪ ಕೊಬ್ಬಿನ ಅಂಶ ಉಳಿದಿರುವ ತಳದ ಮಾಂಸದ ತುಣುಕುಗಳನ್ನು ಒತ್ತಡಕ್ಕೆ ಒಳಪಡಿಸಿ ಆ ಕೊಬ್ಬನ್ನೂ ಬೇರ್ಪಡಿಸಬಹುದು. ಉಳಿಯುವ ಚರಟವನ್ನು ಜಾನುವಾರಗಳ ಮೇವು ಅಥವಾ ಗೊಬ್ಬರವಾಗಿ ಉಪಯೋಗಿಸಬಹುದು. ಮಾಂಸದ ತುಣುಕುಗಳನ್ನು ಸುಡುನೀರು, ಆವಿ ಅಥವಾ ಬಲು ಹೆಚ್ಚಿನ ಒತ್ತಡಕ್ಕೆ ಒಳಪಡಿಸಿ ಟ್ಯಾಲೊವನ್ನು ಹಿಂಡಿ ತೆಗೆಯಬಹುದು. ಆದರೆ ಇದು ಅಷ್ಟಾಗಿ ಬಳಕೆಯಲ್ಲಿರುವ ವಿಧಾನವಲ್ಲ.

ರಾಸಾಯನಿಕೆ ಗುಣಗಳು

[ಬದಲಾಯಿಸಿ]
Tallow consists mainly of triglycerides (fat), whose major constituents are derived from stearic and oleic acids.

ಟ್ಯಾಲೊ ಶುದ್ಧರೂಪದಲ್ಲಿ ಬಣ್ಣ ಹಾಗೂ ರುಚಿ ಹೊಂದಿರುವುದಿಲ್ಲ. ಆದರೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ದೊರೆಯುವ ಟ್ಯಾಲೊವಿಗೆ ತೆಳು ಹಳದಿ ಬಣ್ಣವಿರುವುದು. ಪ್ರಾಣಿಯ ತಳಿ, ವಯಸ್ಸು, ಮೇವು ಹಾಗೂ ಲಿಂಗಗಳು ಟ್ಯಾಲೊ ಗುಣದ ಮೇಲೆ ಪ್ರಭಾವ ಬೀರುತ್ತವಾದರೂ ಉಪಯೋಗಿಸುವ ದೇಹದ ಭಾಗ ಹಾಗೂ ಅಳವಡಿಸಿ ವಿಧಾನದ ನೈಪುಣ್ಯದ ಮೇಲೆ ಬದಲಿಸಬಹುದು. ರಾಸಾಯನಿಕವಾಗಿ ಟ್ಯಾಲೊವು ಪಾಲ್ಮೈಟಕ್, ಸ್ಟೆರಿಕ್ ಹಾಗೂ ಓಲಿಕ್ ಆಮ್ಲಗಳ ಟ್ರೈಗ್ಲಿಸರೈಡುಗಳನ್ನು ಹೊಂದಿರುತ್ತದೆ. ಆದರೆ ವಿಶೇಷ ಕ್ರಮಗಳಿಂದ ಓಲಿಯೋಡೈ ಪಾಲ್ಮೈಟಿನ್, ಸ್ಟಿರೋಡೈಪಾಲ್ಮೈಟಿನ್, ಓಲಿಯೋಪಾಲ್ಮೈಟೋಸ್ಟಿರಿನ್ ಹಾಗೂ ಪಾಲ್ಮೈಟೋಡೈಸ್ಟಿರಿನ್‍ಗಳಂಥ ಬೆರಕೆಗ್ಲಿ ಸರೈಡುಗಳನ್ನೂ ಟ್ಯಾಲೊವಿನಿಂದ ಬೇರ್ಪಡಿಸಲಾಗಿದೆ.

ವಿಧಾನಗಳು

[ಬದಲಾಯಿಸಿ]

ಟ್ಯಾಲೊವಿನ ಕರಗುವ ಬಿಂದು ಅದರ ರಾಸಾಯನಿಕ ರಚನೆಯೊಂದಿಗೆ ವ್ಯತ್ಯಾಸ ಹೊಂದುತ್ತದೆ. ಅದು ಸುಮಾರು 400-500 ಅ. ವಿಶಿಷ್ಟ ಗುರುತ್ವ ಸಾಮಾನ್ಯವಾಗಿ 0.93. ಟ್ಯಾಲೊವಿನಗಳ ಎರಡು ವಿಧಾನಗಳನ್ನು ಮುಖ್ಯವಾಗಿ ಗುರುತಿಸಬಹುದು.

1 ಕರಗಿಸಿ ಬೇರ್ಪಡಿಸಿದ ಟ್ಯಾಲೊ: ಪ್ರಾಣಿಯ ಶರೀರದ ಎಲ್ಲ ಭಾಗಗಳ ಕೊಬ್ಬೂ ಬೆರೆತಿರುತ್ತದೆ. ಇದರ ಉತ್ತಮ ಮಟ್ಟದ ಟ್ಯಾಲೊವನ್ನು ಮೋಂಬತ್ತಿ ಹಾಗೂ ಮೈಸಾಬೂನು ತಯಾರಿಸಲು ಉಪಯೋಗಿಸುತ್ತಾರೆ ; ಕೀಳುಮಟ್ಟದ ಹಳದಿ ಟ್ಯಾಲೊವನ್ನು ಸಾಬೂನು ತಯಾರಿಕೆ, ಚರ್ಮ ಹದಮಾಡುವಿಕೆ ಹಾಗೂ ಯಂತ್ರಗಳಲ್ಲಿ ಕೀಲೆಣ್ಣೆಯಾಗಿ ಬಳಸುತ್ತಾರೆ.

2 ಪ್ರೀಮಿಯರ್ ಜಸ್: ಇದು ಅತ್ಯುತ್ತಮ ಮಟ್ಟದ ಟ್ಯಾಲೊ. ಇದರ ತಯಾರಿಕೆಯಲ್ಲಿ ಅತ್ಯಂತ ಬೆಲೆಬಾಳುವ ಮೂತ್ರಪಿಂಡ ಹಾಗೂ ಕರುಳು ಭಾಗಗಳ ಕೊಬ್ಬನ್ನು ಮಾತ್ರ ಉಪಯೋಗಿಸಲಾಗುತ್ತದೆ. ಪ್ರೀಮಿಯರ್ ಜಸ್ ಟ್ಯಾಲೊವನ್ನು ಅಡುಗೆಗಳಲ್ಲಿ ಉಪಯೋಗಿಸುವ ಮಾರ್ಜರಿನ್ ತಯಾರಿಕೆಯಲ್ಲಿ ಬಳಸುವರು. ಮುಕ್ತ ಕೊಬ್ಬಿನ ಆಮ್ಲಗಳು ಹಾಗೂ ದುರ್ವಾಸನೆ ಪ್ರೀಮಿಯರ್ ಜಸ್‍ನ ಬೆಲೆಯನ್ನು ಕುಗ್ಗಿಸುತ್ತವೆ. ಉತ್ತಮ ಮಟ್ಟದ ತಾಜಾ ಟ್ಯಾಲೊವಿನಲ್ಲಿ ಮುಕ್ತ ಕೊಬ್ಬಿನ ಆಮ್ಲಗಳ ಪರಿಮಾಣ 0.5%ಕ್ಕಿಂತ ಹೆಚ್ಚಿರುವುದಿಲ್ಲ. ಆದರೆ ಮಾರುಕಟ್ಟೆಯ ಸಾಮಾನ್ಯ ಟ್ಯಾಲೊವಿನಲ್ಲಿ ಇದರ ಪ್ರಮಾಣ 25%ರ ವರೆಗೂ ಇರಬಹುದು.

ಉಪಯೋಗಗಳು

[ಬದಲಾಯಿಸಿ]

ಸಾಬೂನಿನ ತಯಾರಿಕೆಯಲ್ಲಿ ಟ್ಯಾಲೊವಿನ ಬೆಲೆ ಅದರ ಕೊಬ್ಬಿನ ಆಮ್ಲಗಳ ಘನೀಭವಿಸುವ ಬಿಂದುವನ್ನು ಅವಲಂಬಿಸುವುದು. ಮಟ್ಟದ ಮುಕ್ತ ಕೊಬ್ಬಿನ ಆಮ್ಲಗಳ ಟ್ಯಾಲೊವಿ ಮಟ್ಟವನ್ನು ಕುಗ್ಗಿಸುತ್ತವೆ. ಅಂಥ ಟ್ಯಾಲೊ ಉಪಯೋಗಿಸಿ ತಯಾರಿಸಿದ ಸಾಬೂನಿಗೆ ಕೀಳು ಬಣ್ಣವಿರುವುದು. ಕುರಿಮಾಂಸದ ಟ್ಯಾಲೊ ದನದ ಮಾಂಸದ ಟ್ಯಾಲೊವಿಗಿಂತ ಬೇಗ ಕೊಳೆಯುವುದರಿಂದ ಉತ್ತಮ ಮಟ್ಟದ ಸಾಬೂನಿನ ತಯಾರಿಕೆಗೆ ಸೂಕ್ತವಲ್ಲ. ಜಿಲಾಟಿನ್ ತಯಾರಿಕೆಯಲ್ಲಿ ಉಪೋತ್ಪನ್ನವಾಗಿಯೂ ಟ್ಯಾಲೊ ದೊರೆಯುತ್ತದೆ. ಭಾರತದಲ್ಲಿ ಟ್ಯಾಲೊ ಅಷ್ಟಾಗಿ ತಯಾರಾಗುತ್ತಿಲ್ಲ. ತಯಾರಾಗುವ ಸ್ವಲ್ಪ ಟ್ಯಾಲೊವನ್ನು ಸಾಬೂನಿನ ತಯಾರಿಕೆಗೆ ಉಪಯೋಗಿಸಲಾಗಿತ್ತಿತ್ತು. ಆದರೆ ಇತ್ತೀಚಿಗೆ ಸಾಬೂನಿನ ತಯಾರಿಕೆಗೆ ಟ್ಯಾಲೊ ಬದಲು ಪೆಟ್ರೋಲಿಯಮ್ ಉತ್ಪನ್ನಗಳ ಬಳಕೆ ಆಗುತ್ತಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟ್ಯಾಲೊ&oldid=920819" ಇಂದ ಪಡೆಯಲ್ಪಟ್ಟಿದೆ