ವಿಷಯಕ್ಕೆ ಹೋಗು

ಟೆನಸೀ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆನಸೀ ನದಿ- ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಹಾಯೊ ನದಿಯ ಅತ್ಯಂತ ದೊಡ್ಡ ಉಪನದಿ. ಟೆನಸೀ ರಾಜ್ಯದ ಪೂರ್ವ ಭಾಗದಲ್ಲಿ ನಾಕ್ಸ್ ವಿಲ್ ನಗರದಿಂದ 4.5 ಮೈ. ದೂರದಲ್ಲಿ ಹೋಲ್ ಸ್ಟೆನ್ ಮತ್ತು ಫ್ರೆಂಚ್ ಬ್ರಾಡ್ ನದಿಗಳ ಸಂಗಮದಿಂದ ಆಗಿದೆ. ಕ್ಲಿಂಚ್, ಟೆನಸೀ, ಪ್ಯಾವುಲ್-ಇವು ಇದರ ಪ್ರಮುಖ ಉಪನದಿಗಳು. ಈ ಉಪನದಿಗಳು ಆಪಲೇಷಿಯನ್ ಪರ್ವತಶ್ರೇಣಿಯಲ್ಲಿ ಹುಟ್ಟುತ್ತವೆ. ಟೆನಸೀ ರಾಜ್ಯದ ಪೂರ್ವಭಾಗದಲ್ಲಿ ಈ ನದಿ ಕಂಬರ್ ಲ್ಯಾಂಡ್ ಮತ್ತು ದಿ ಗ್ರೇಟ್ ಸ್ಮೋಕೀ ಪರ್ವತಶ್ರೇಣಿಯ ಮಧ್ಯದ ಫಲವತ್ತಾದ ಕಣಿವೆಯ ಮೂಲಕ ಹರಿಯುತ್ತದೆ. ಲಿಟ್ಲ್ ಟೆನಸೀ ನದೀಮುಖದಲ್ಲಿರುವ ಚೆರಕೀ ಇಂಡಿಯನರ ಗ್ರಾಮವಾದ ಟೆನೇಸ್ (ಟೆನಾಸೀ) ಇಂದಾಗಿ ಇದಕ್ಕೆ ಈ ಹೆಸರು ಬಂದಿರಬಹುದು.

ಟೆನಸೀಯ ಉದ್ದ 652 ಮೈ. (1,049 ಕಿಮೀ.). ಹೋಲ್ ಸ್ಟನ್ ನದಿಯ ಮೂಲದಿಂದ ಅಳೆದರೆ ಇದರ ಉದ್ದ 900 ಮೈ. ನಾಕ್ಸ್ ವಿಲ್ ನಿಂದ ಚಾಟ ನೂಗದ ವರೆಗೆ ನೈಋತ್ಯಾಭಿಮುಖವಾಗಿ ಹರಿದ ನದಿ ಅಲ್ಲಿ ಪಶ್ಚಿಮಕ್ಕೆ ತಿರುಗಿ ಕಂಬರ್ ಲ್ಯಾಂಡ್ ಪ್ರಸ್ಥಭೂಮಿಯ ಮೂಲಕ ಆಲಬಾಮ ರಾಜ್ಯದ ಉತ್ತರ ಭಾಗದಲ್ಲಿ ಪ್ರವಹಿಸುತ್ತದೆ. ಆಲಬಾಮ ಮತ್ತು ಮಿಸಿಸಿಪಿ ರಾಜ್ಯಗಳ ಗಡಿಯಲ್ಲಿ ಉತ್ತರಕ್ಕೆ ತಿರುಗಿ ಟೆನಸೀ ಮತ್ತು ಕೆಂಟಕೀ ರಾಜ್ಯಗಳಲ್ಲಿ ಹರಿದು ಪಡೂಕ ಎಂಬಲ್ಲಿ ಒಹಾಯೊ ನದಿಯನ್ನು ಸೇರುತ್ತದೆ. ಈ ನದಿಯ ಪ್ರದೇಶದಲ್ಲಿ ಜನವಸತಿ ಪ್ರಾರಂಭವಾದದ್ದು 18ನೆಯ ಶತಮಾನದ ಕೊನೆಯ ಭಾಗದಲ್ಲಿ. 1770-80ರಲ್ಲಿ ಅಮೆರಿಕನರು ಆಪಲೇಷಿಯನ್ ಪರ್ವತಶ್ರೇಣಿಗಳನ್ನು ದಾಟಿ ಈ ಪ್ರದೇಶದಲ್ಲಿ ನೆಲಸಲು ಪ್ರಾರಂಭಿಸಿದರು. ಹೀಗೆ ನೆಲಸಿದವರಲ್ಲಿ ಅನೇಕರು ನದಿಯ ಕೆಳಭಾಗಕ್ಕೆ ಚಪ್ಪಟೆ ದೋಣಿಗಳ (ಫ್ಲ್ಯಾಟ್ ಬೋಟ್) ಮೂಲಕ ಹೋಗಿ ಈಗಿನ ಉತ್ತರ ಆಲಬಾಮ ಪ್ರದೇಶದಲ್ಲಿ ನೆಲೆಸಿದರು. 1791ರಲ್ಲಿ ಚೆರಕೀ ಇಂಡಿಯನರೊಂದಿಗೆ ಒಪ್ಪಂದವಾದ ಮೇಲೆ ಈ ನದಿಯಲ್ಲಿ ಅನಿರ್ಬಂಧಿತ ಸಂಚಾರಕ್ಕೆ ಅವಕಾಶವಾಯಿತು.

ನದಿಯ ನೀರಿನ ಮಟ್ಟ ಆಯಾ ಋತುಗಳಿಗೆ ಅನುಗುಣವಾಗಿ ಬದಲಾಯಿಸುತ್ತಿತ್ತು. ಮಳೆಗಾಲದಲ್ಲಿ ಉಪನದಿಗಳಿಂದ ಹೆಚ್ಚು ನೀರು ಹರಿದು ಉಳಿದ ಕಾಲದಲ್ಲಿ ಸಾಕಷ್ಟು ನೀರಿಲ್ಲದೆ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಕಂಬರ್ ಲ್ಯಾಂಡ್ ಪ್ರದೇಶದಲ್ಲಿ ನದಿಯಲ್ಲಿ ಸುಳಿಗಳು ಹೆಚ್ಚಾಗಿದ್ದುವು. ನದಿಯ ಮೇಲುಭಾಗ ಹೆಚ್ಚು ಆಳವಿಲ್ಲದೆ ಪ್ರವಾಹ ರಭಸವಾಗಿದ್ದದ್ದರಿಂದ ಚಪ್ಪಟೆ ದೋಣಿಗಳಿಂದ ಮಾತ್ರ ಸಂಚಾರ ಸಾಧ್ಯವಿತ್ತು. ಉತ್ತರ ಆಲಬಾಮದಲ್ಲಿ ಹರಿಯುವ ನದಿಯ ಭಾಗದಲ್ಲಿ ಮಸಲ್ ಷೋಲ್ಸ್ ಎಂಬ ಸೆಳವಿನಿಂದ ಕೂಡಿದ ಕಡಿದಿಳಿತದ ಸಾಲುಗಳು ಸುಮಾರು 37 ಮೈ. ಗಳಷ್ಟು ಚಾಚಿಕೊಂಡಿದ್ದು ಇದನ್ನು ನೌಕೆಗಳು ದಾಟಲಾಗುತ್ತಿರಲಿಲ್ಲ. ಸಂಯುಕ್ತಸಂಸ್ಥಾನ ಸರ್ಕಾರ 1890ರಲ್ಲಿ ಇದರ ಸುತ್ತಲೂ ಕಾಲುವೆ ತೋಡಿ ಸಂಚಾರಕ್ಕೆ ಅನುವು ಮಾಡಿತು.

1795ರಲ್ಲಿ ಈ ನದಿಯ ಮೂಲಕ ನಾಕ್ಸ್ ವಿಲ್ ನಿಂದ ನ್ಯೂ ಆರ್ಲಿಯನ್ಸ್ ಗೆ ವ್ಯಾಪಾರನೌಕೆಗಳು ಸಂಚರಿಸಲಾರಂಭಿಸಿದುವು. ಪಶ್ಚಿಮದ ಮಾರುಕಟ್ಟೆಗಳಿಗೆ ಈ ಜಲಮಾರ್ಗ ಬಳಸಿದರೂ ಉಪಯುಕ್ತವಾಗಿತ್ತು. ಈ ಮಾರ್ಗದ ಮೂಲಕ ಹಿಟ್ಟು, ಹಂದಿಯ ಒಣಮಾಂಸ, ವಿಸ್ಕಿ ಮತ್ತು ಇತರ ಪದಾರ್ಥಗಳನ್ನು ಒಹಾಯೊ, ಮಿಸಿಸಿಪಿ ಮತ್ತು ನ್ಯೂ ಆರ್ಲಿಯನ್ಸ್‍ಗೆ ಚಪ್ಪಟೆದೋಣಿಗಳ ಮೂಲಕ ಸಾಗಿಸುತ್ತಿದ್ದರು. ಕೆಲವು ಕಾಲದ ವರೆಗೆ ನಾಕ್ಸ್ ವಿಲ್ ಮತ್ತಿತರ ಕಡೆಗಳಲ್ಲಿರುವ ಕಲ್ಲುಗಣಿಗಳಿಂದ ಅಮೃತಶಿಲೆಗಳನ್ನು ಪೂರ್ವಕ್ಕೆ ಸಾಗಿಸಲು ಈ ಜಲಮಾರ್ಗವನ್ನು ಉಪಯೋಗಿಸಲಾಗುತ್ತಿತ್ತು. 1840ರ ಅನಂತರ ರೈಲು ಮಾರ್ಗದ ನಿರ್ಮಾಣವಾದ ಮೇಲೆ ಈ ನದಿಯ ಪ್ರಾಮುಖ್ಯ ಕಡಿಮೆಯಾಯಿತು.

ನಾಕ್ಸ್ ವಿಲ್, ಚಾಟನೂಗ-ಇವು ಟೆನಸೀ ನದಿಯ ತೀರದಲ್ಲಿರುವ ದೊಡ್ಡ ಪಟ್ಟಣಗಳು. ಗಂಟರ್ಸ್ ವಿಲ್, ಡಿ ಕೇಟರ್, ಫ್ಲಾರನ್ಸ್, ಷೆಫೀಲ್ಡ್ ಮುಂತಾದವು ಸಣ್ಣ ಪಟ್ಟಣಗಳು.

ಈ ನದಿಯ ಪ್ರವಾಹದಿಂದ ಆಗುವ ಹಾನಿಯನ್ನು ತಡೆಗಟ್ಟಲು ಮತ್ತು ನದಿಯ ಸಂಪೂರ್ಣ ಉಪಯೋಗ ಪಡೆಯಲು 1933ರಲ್ಲಿ ಟೆನಸೀ ಕಣಿವೆ ಪ್ರಾಧಿಕಾರವನ್ನು (ಟೆನಸೀ ವ್ಯಾಲಿ ಅಥಾರಿಟಿ ಖಿಗಿಂ) ರಚಿಸಲಾಯಿತು. ಇಂದು ಟೆನಸೀ ನದೀ ಪ್ರದೇಶದಲ್ಲಿ ಕಟ್ಟೆಗಳಿಂದ ರೂಪುಗೊಂಡ ಅನೇಕ ಜಲಾಶಯಗಳಿವೆ. ಟೆನಸೀ ನದಿಗೆ ಕಟ್ಟಿದ ಪ್ರಮುಖವಾದ ಒಂಬತ್ತು ಕಟ್ಟೆಗಳು ಇವು : ಕೆಂಟಕೀ ರಾಜ್ಯದಲ್ಲಿ ಕೆಂಟಕೀ (1944), ಟೆನಸೀ ರಾಜ್ಯದಲ್ಲಿ ಪಿಕ್ ವಿಕ್ ಲ್ಯಾಂಡಿಂಗ್ (1938), ಗಂಟರ್ಸ್ವಿಲ್ (1939), ನಿಕಜ್ಯಾಕ್ (1968), ಚಿಕಮಾಗ (1940), ವ್ಯಾಟ್ಸ್ ಬಾರ್ (1942), ಫೋಟ್ ಲೌಡನ್ (1943), ಆಲಬಾಮ ರಾಜ್ಯದಲ್ಲಿ ವಿಲ್ಸನ್ (1925), ವೀಲರ್ (1936). ಇವಲ್ಲದೆ ಟೆನಸೀ ನದಿಯ ಉಪನದಿಗಳಿಗೂ ಅನೇಕ ಕಟ್ಟೆಗಳನ್ನು ಕಟ್ಟಿದ್ದಾರೆ. ಎಲ್ಲ ಕಟ್ಟೆಗಳಲ್ಲೂ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತಾರೆ. ಇದರಿಂದ ಈ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ತುಂಬ ಅನುಕೂಲವಾಗಿದೆ.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: