ವಿಷಯಕ್ಕೆ ಹೋಗು

ಟೂಟಾಂಕಾಮೆನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೂಟಾಂಕಾಮೆನ್ ನ ಬಂಗಾರದ ಮುಖವಾಡ

ಟೂಟಾಂಕಾಮೆನ್ ಕ್ರಿ. ಪೂ. ೧೪ ನೆಯ ಶತಮಾನ. ಪುರಾತನ ಈಜಿಪ್ಟಿನ ೧೮ ನೆಯ ವಂಶದ ಫೇರೋ. ಆಖೆನಾಟನನ ಮೂರನೆಯ ಮಗಳನ್ನು ವಿವಾಹವಾದ. ಆಖೆನಾಟನನಿಗೆ ಗಂಡು ಮಕ್ಕಳಿರಲಿಲ್ಲವಾದ್ದರಿಂದ ಅವನ ಹಿರಿಯ ಆಳಿಯ ಮರಣಾನಂತರ ಟೂಟಾಂಕಾಮೆನ್ ಫೇರೋ ಆದ. ಆಖೆನಾಟನನ ಸೂರ್ಯಾರಾಧನ (ಏಟನ) ಪಂಥವನ್ನೇ ಈತನೂ ಅನುಸರಿಸಿದ. ಇವನ ಮೊದಲ ಹೆಸರು ಟೂಟಾಂಕೇಟನ್. ಆಖೆನಾಟನ್ ಹೊಸದಾಗಿ ಕಟ್ಟಿಸಿದ ಆಖೆಟೇಟನ್ (ಈಗಿನ ಟೆಲ್ ಎಲ್ ಆಮರ್ನ) ನಗರವನ್ನೇ ಆರಂಭದಲ್ಲಿ ಇವನೂ ರಾಜಧಾನಿಯಾಗಿ ಮಾಡಿಕೊಂಡಿದ್ದ. ಆದರೆ ಅನಂತರ ಪುರೋಹಿತರ ಪ್ರಭಾವಕ್ಕೊಳಗಾಗಿ ಪ್ರಾಚೀನ ಧರ್ಮಕ್ಕೆ ಪರಿವರ್ತನೆ ಹೊಂದಿ ರಾಜಧಾನಿಯನ್ನು ತೀಬ್ಸಿಗೆ ವರ್ಗಾಯಿಸಿದ. ಆಗಲೇ ತನ್ನ ಹೆಸರನ್ನೂ ಟೂಟಾಂಕಾಮೆನ್ ಎಂದು ಬದಲಾಯಿಸಿಕೊಂಡ. ಕೇವಲ ೬-೮ ವರ್ಷ ಆಳಿದ ಈತ ಸು. ೧೮ ರ ಹರೆಯದಲ್ಲೇ ಮರಣಹೊಂದಿದನೆಂದು ತೋರುತ್ತದೆ.

ಟೂಟಾಂಕಾಮೆನ್ ನದೆಂದು ನಂಬಲಾದ ವಿಗ್ರಹ
ರಾಣಿಯೊಂದಿಗೆ

ಟೂಟಾಂಕೇಟನ್ ಪ್ರಮುಖ ರಾಜನಲ್ಲದಿದ್ದರೂ ಇವನ ವೈಭವಪೂರಿತವಾದ ಸಮಾಧಿಭವನ ದೊರೆತದ್ದರಿಂದ ತುಂಬ ಪ್ರಸಿದ್ಧನಾಗಿದ್ದಾನೆ. ಬ್ರಿಟನಿನ ಹಾವರ್ಡ್ ಕಾರ್ಟರನ ನೇತೃತ್ವದಲ್ಲಿ ೧೯೨೨ ರ ನವೆಂಬರ್ ೨೯ ರಂದು ಇವನ ಸಮಾಧಿಭವನ ಪತ್ತೆ ಆಯಿತು. ಇವನು ಉಪಯೋಗಿಸುತ್ತಿದ್ದ ಅತ್ಯಂತ ಸುಂದರವಾದ ಪೀಠೋಪಕರಣಗಳು, ಭವ್ಯ ಕಲಾಕೃತಿಗಳು, ಕುಶಲಕರೆಯಿಂದ ಕೂಡಿದ ಚಿನ್ನದ ಸಿಂಹಾಸನ ಮುಂತಾದವು ಸಮಾಧಿಯಲ್ಲಿ ದೊರೆತವು. ಈ ಆವಿಷ್ಕಾರದಿಂದ ಈಜಿಪ್ಟ ರಾಜರ ಇತಿಹಾಸವನ್ನು ತಿಳಿಯಲು ಸಾಧ್ಯವಾಗಿದೆ. ಇಲ್ಲಿಯ ಶಿಲಾಶವಸಂಪುಟದಲ್ಲಿ ಟೂಟಾಂಕಾಮೆನನ ಮಮ್ಮೀಕೃತ ದೇಹ ಇಂದಿಗೂ ಇದೆ. ಶವಸಂಪುಟದ ಮೇಲಿನ ಹೊರಸಂಪುಟಕ್ಕೆ ಚಿನ್ನದ ತಗಡನ್ನು ಹೊದೆಸಿದೆ; ಅದು ತುಂಬ ಭವ್ಯವಾಗಿದೆ. ಸಮಾಧಿಭವನದ ಬಹುಪಾಲು ಅವಶೇಷಗಳನ್ನು ಈಗ ಕೈರೊ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: