ಟೀರೊಬ್ರಾಂಕಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೀರೊಬ್ರಾಂಕಿಯ -ಪ್ರೋಟೊಕಾರ್ಡೇಟ ವಿಭಾಗದ ಹೆಮಿಕಾರ್ಡೇಟ ಉಪವಿಭಾಗಕ್ಕೆ ಸೇರಿದ ಒಂದು ವರ್ಗ.

ಈ ವರ್ಗಕ್ಕೆ ಸೇರಿದ ಜೀವಿಗಳು ಸಣ್ಣವು; ಇವುಗಳ ಉದ್ದ 1-3 ಮಿಲಿಮೀಟರುಗಳು. ಇವು ಸಮುದ್ರತಳದಲ್ಲಿ 60-100 ಮೀಟರ್‍ಗಳ ಆಳದಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಕೈಟಿನ್ನಿನಿಂದ ರಚಿತವಾಗಿರುವ ಕೊಳವೆಗಳಲ್ಲಿ ಜೀವಿಸುತ್ತವೆ. ಹೆಮಿಕಾರ್ಡೇಟ ಉಪವಿಭಾಗದ ಉಳಿದ ಪ್ರಾಣಿಗಳಲ್ಲಿರುವಂತೆಯೇ ಈ ವರ್ಗದ ಪ್ರಾಣಿಗಳ ದೇಹವೂ 3 ಸೀಲೋಮ್ ಭಾಗಗಳಾಗಿ ವಿಂಗಡಣೆಯಾಗಿದೆ. ಮೊದಲನೆಯ ಸೀಲೋಮ್ ಒಂದು ದೊಡ್ಡ ಹೀರುತಟ್ಟೆಯಾಗಿ (ಸೊಂಡಿಲು) ಮಾರ್ಪಟ್ಟಿದೆ. ಎರಡನೆಯ ಸೀಲೋಮಿನ ಮೇಲ್ಬಾಗ ಎರಡು 'ತೋಳುಗಳಾಗಿ ಇಲ್ಲವೆ ಸ್ಪರ್ಶಕಗಳಾಗಿ (ಟೆಂಟಕಲ್) ರೂಪುಗೊಂಡಿದೆ. ಒಂದೊಂದು ತೋಳಿನಲ್ಲೂ ಅನೇಕ ಕವಲುಗಳುಂಟು. ಮೂರನೆಯ ಸೀಲೋಮಿನಲ್ಲಿ ಜಠರ, ಕರುಳು (ಗಟ್) ಹಾಗೂ ಅಂಡರೇತ್ರಗ್ರಂಥಿಗಳೂ (ಗಾನ್ಸಡ್ಸ್) ಇವೆ. ಅಲ್ಲದೆ ದೇಹದೊಳಗೆ ನೋಟೊಕಾರ್ಡಿನಂತೆ ಕಾಣುವ ಸ್ಟೋಮೊಕಾರ್ಡ್ ಕೂಡ ಉಂಟು. ಜೀರ್ಣ ನಾಳ Ư-ಆಕಾರದಲ್ಲಿವೆ. ಇದರ ಒಂದು ತುದಿಯಲ್ಲಿ ಬಾಯಿಯೂ (ಅಂದರೆ ಸೊಂಡಿಲು ಇರುವ ಪಾರ್ಶ್ವದಲ್ಲಿ ಮತ್ತು ಸೊಂಡಿಲಿನ ಕೆಳಗೆ) ಇನ್ನೊಂದು ತುದಿಯಲ್ಲಿ ಗುದದ್ವಾರವೂ ಇವೆ. ಗುದದ್ವಾರ ಸೊಂಡಿಲಿಗೆ ವಿರುದ್ಧ ಪಾಶ್ರ್ವದಲ್ಲಿ ಹೊರತೆರೆಯುತ್ತದೆ. ಕರಬಳ್ಳಿಗಳ ಸಹಾಯದಿಂದ ತಮ್ಮ ಆಹಾರವಾದ ಸಣ್ಣ ಪುಟ್ಟ ಜೀವಿಗಳನ್ನು ಹಿಡಿದು ತಿನ್ನುತ್ತವೆ. ಸಂತಾನಾಭಿವೃದ್ಧಿ ಸಾಮಾನ್ಯವಾಗಿ ಅಲೈಂಗಿಕ ರೀತಿಯ ಮೊಗ್ಗೊಡೆಯುವುದರ ಮೂಲಕ ನಡೆಯುತ್ತದೆ. ರ್ಯಾಬ್ಡೊಪ್ಲೂರದಲ್ಲಿ ಹೀಗೆ ಉತ್ಪತ್ತಿಯಾದ ಮೊಗ್ಗುಗಳೆಲ್ಲ ಒಟ್ಟಿಗೇ ಬೆಳೆದು ಒಂದು ಸಮುದಾಯವಾಗಿ ರೂಪುಗೊಳ್ಳುತ್ತವೆ. ಸೆಫಲೊಡಿಸ್ಕಸ್ ಎಂಬುದರಲ್ಲಿ ಮೊಗ್ಗುಗಳು ಪರಸ್ಪರ ಬೇರೆಯಾಗುತ್ತವೆ. ಆದರೆ ಬೇರೆಯಾದ ಮೊಗ್ಗುಗಳೆಲ್ಲ ಒಂದೇ ಕೊಳವೆಯಲ್ಲಿ ಜೀವಿಸುವುದುಂಟು. ಈ ವರ್ಗದಲ್ಲಿ ಸೆಫಲೊಡಿಸ್ಕಿಡಿಯ ಮತ್ತು ರ್ಯಾಬ್ಡೊಪ್ಲೂರಿಡಿಯ ಎಂಬ ಎರಡು ಗಣಗಳಿವೆ. ಇವು ಒಂದೊಂದರಲ್ಲೂ ಒಂದೊಂದೇ ಕುಟುಂಬ ಇದೆ. ಸೆಫಲೊಡಿಸ್ಕಿಡೀ ಕುಟುಂಬಕ್ಕೆ ಸೆಫಲೊಡಿಸ್ಕಸ್ ಮತ್ತು ಅಟುಬೇರಿಯಗಳು ಮತ್ತು ರ್ಯಾಬ್ಡೊಪ್ಲೂರಿಡೀ ಕುಟುಂಬಕ್ಕೆ ರ್ಯಾಬ್ಡೊಪ್ಲೂರ ಎಂಬುದೂ ಸೇರಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: