ಟಿ.ಎ. ಗೋಪಿನಾಥ್ ರಾವ್
ಟಿ.ಎ. ಗೋಪಿನಾಥ್ ರಾವ್ ಶಾಸನತಜ್ಞ, ಮೂರ್ತಿಶಿಲ್ಪ ವಿಶಾರದ, ಪುರಾತತ್ವ ವಿದ್ವಾಂಸ.
ಬಾಲ್ಯ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ತಮಿಳುನಾಡಿನ ತಿರುಚ್ಚಿರಪಳ್ಳಿಯ ಸಮೀಪದ ಶ್ರೀರಂಗಂನಲ್ಲಿ ಜನಿಸಿದ ಇವರು ಮದ್ರಾಸಿನಲ್ಲಿ ಪ್ರೌಢವ್ಯಾಸಂಗ ಮಾಡಿ ಭೌತಶಾಸ್ತ್ರ ಎಂ.ಎ. ಪದವೀಧರರಾದರು. 1903ರಲ್ಲಿ ಆಗ ಮದ್ರಾಸಿನಲ್ಲಿ ಪ್ರಾರಂಭವಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಸನ ಮೇಲ್ವಿಚಾರಣಾಧಿಕಾರಿಗಳ ಕಚೇರಿಯಲ್ಲಿ (ಸೂಪರಿಂಟೆಂಡೆಂಟ್ ಫಾರ್ ಎಪಿಗ್ರಫಿ) ತಮಿಳು ಶಾಸನ ಸಹಾಯಕರಾಗಿ ಸೇರಿದರು. 1904ರಲ್ಲಿ ತಿರುವಾಂಕೂರಿನಲ್ಲಿ ಪುರಾತತ್ವ ಇಲಾಖೆ ಪುನವ್ರ್ಯವಸ್ಥೆಗೊಂಡಾಗ, ಆ ಇಲಾಖೆಯ ಮೇಲ್ವಿಚಾರಣಾಧಿಕಾರಿಯಾಗಿ ನೇಮಕವಾದರು.
ವೃತ್ತಿಜೀವನ
[ಬದಲಾಯಿಸಿ]ತಿರುವಾಂಕೂರಿನಲ್ಲಿ ಇವರು ವಿಶೇಷವಾದ ಕೆಲಸ ಮಾಡಿದರು. 1891ರಲ್ಲಿ ಪ್ರೊ. ಪಿ. ಸುಂದರಂ ಪಿಳ್ಳೆಯವರಿಂದ ಪ್ರಾರಂಭಿಸಲ್ಪಟ್ಟಿದ್ದ ಪುರಾತತ್ವ ಇಲಾಖೆಗೆ ಇವರು ಹೊಸ ಜೀವವನ್ನಿತ್ತು ಅದಕ್ಕೆ ಒಂದು ರೂಪು ಕೊಟ್ಟರು. ತಮ್ಮ ಅಂತಿಮ ದಿನಗಳವರೆಗೂ ತಿರುವಾಂಕೂರು ರಾಜ್ಯದಲ್ಲೆಲ್ಲ ಸುತ್ತಿ ಪ್ರಾಚೀನ ದೇವಸ್ಥಾನಗಳ, ಸ್ಮಾರಕಗಳ, ಭಾವಚಿತ್ರಗಳನ್ನೂ ಸಾವಿರಾರು ಶಾಸನಗಳನ್ನೂ ಗ್ರಂಥಗಳನ್ನೂ ಸಂಗ್ರಹಿಸಿದರು. ಆ ಭಾಗದ ಇತಿಹಾಸ ಸಂಸ್ಕøತಿಗಳ ಮೇಲೆ ಹೊಸ ಬೆಳಕು ಚೆಲ್ಲುವಂಥ ಅನೇಕ ಶಾಸನಗಳನ್ನು ಸಂಪಾದಿಸಿ ಪ್ರಕಟಿಸಿ ಪ್ರಸಿದ್ಧರಾದರು.
ಗ್ರಂಥಗಳು
[ಬದಲಾಯಿಸಿ]ಹಿಂದೂ ಮೂರ್ತಿಶಿಲ್ಪ ಶಾಸ್ತ್ರದ ಮೂಲಾಂಶಗಳನ್ನು ಕುರಿತು ಇವರು ಬರೆದ ಎಲಿಮೆಂಟ್ಸ್ ಆಫ್ ಹಿಂದು ಐಕೊನಾಗ್ರಫಿ ಎಂಬ ಬೃಹದ್‍ಗ್ರಂಥ ಎರಡೆರಡು ಸಂಚಿಕೆಗಳ ಎರಡು ಭಾಗಗಳಲ್ಲಿ 1904 ಮತ್ತು 1916ರಲ್ಲಿ ಪ್ರಕಟವಾಯಿತು. ಇದರ ಮೊದಲನೆಯ ಭಾಗದ ಎರಡು ಸಂಚಿಕೆಗಳಲ್ಲಿ ವೈಷ್ಣವ ಮೂರ್ತಿಶಿಲ್ಪವನ್ನು ಕುರಿತೂ ಎರಡನೆಯ ಭಾಗದ ಎರಡು ಸಂಚಿಕೆಗಳಲ್ಲಿ ಶೈವ ಮೂರ್ತಿಶಿಲ್ಪವನ್ನೂ ಕುರಿತೂ ಆಧಾರಸಹಿತವಾದ ಸಮರ್ಥ ವಿವೇಚನೆಯಿದೆ. ಭಾರತೀಯ ಮೂರ್ತಿಶಿಲ್ಪ ಶಾಸ್ತ್ರದ ವಿದ್ಯಾರ್ಥಿಗಳಗೆ ಇದು ಇಂದಿಗೂ ಒಂದು ಪ್ರಮಾಣ ಗ್ರಂಥ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಐಕೊನೊಮಿಟ್ರಿಕ್ಸ್ ಎಂಬ ಮತ್ತೊಂದು ಗ್ರಂಥವನ್ನು ಇವರು ರಚಿಸಿದರು. 1917ರ ಡಿಸೆಂಬರಿನಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸುಬ್ರಹ್ಮಣ್ಯ ಅಯ್ಯರ್ ಉಪನ್ಯಾಸಮಾಲೆಯ ಅಂಗವಾಗಿ ಇವರು ನೀಡಿದ ಉಪನ್ಯಾಸಗಳ ಆಧಾರದ ಮೇಲೆ ಹಿಸ್ಟೊರಿ ಆಫ್ ದಿ ಶ್ರೀ ವೈಷ್ಣವಾಸ್ (ಶ್ರೀ ವೈಷ್ಣವರ ಇತಿಹಾಸ) ಎಂಬ ಮತ್ತೊಂದು ಗ್ರಂಥವನ್ನು ರಚಿಸಿದರು.
ತಿರುವಾಂಕೂರು ರಾಜ್ಯದ ಶಾಸನ ಸಂಗ್ರಹಣೆ, ಅಧ್ಯಯನ, ಸಂಪಾದನೆ ಮತ್ತು ಅವುಗಳ ಪ್ರಕಟಣೆಯ ಕಾರ್ಯವನ್ನು ಚುರುಕುಗೊಳಿಸಿದ ಇವರು ಟ್ರಿವೇಂಡ್ರಂ ಆರ್ಕಿಯಾಲಾಜಿಕಲ್ ಸೀರೀಸ್ ಎಂಬ ಗ್ರಂಥಮಾಲೆಯನ್ನು ಪ್ರಾರಂಭಿಸಿ ಅದರ ಮೊದಲನೆಯ ಸಂಪುಟವನ್ನು ಸಂಪಾದಿಸಿ ಪ್ರಕಟಿಸಿದರು. ಅದರ ಎರಡನೆಯ ಸಂಪುಟ ಪ್ರಕಟವಾಗುವುದರೊಳಗಾಗಿ ಇವರು ತೀರಿಕೊಂಡರು(1919). ಎರಡನೆಯ ಸಂಪುಟ 1920ರಲ್ಲಿ ಪ್ರಕಟವಾಯಿತು. ಟೆಂಪ್ಲೇಟು:Includes wikisource