ವಿಷಯಕ್ಕೆ ಹೋಗು

ಟಿಲ್ಯಾಂಡ್ಸೀಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿಲ್ಯಾಂಡ್ಸೀಯ -ಬ್ರೊಮೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ವಿಚಿತ್ರ ಬಗೆಯ ಅಪ್ಪು ಗಿಡ. ಅಮೇರಿಕಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದು ಮರಗಳ ಕೊಂಬೆಗಳಿಂದ ಜೋತುಬಿದ್ದು, ಉಸ್ನಿಯ ಎಂಬ ಶಿಲಾವಲ್ಕದಂತೆ ಕಾಣುವುದುಂಟು. ಇದು ಮರಗಳ ಮೇಲೆ ಬೆಳೆದರೂ ಪರಾವಲಂಬಿಯಲ್ಲ. ಬರಿಯ ಆಸರೆಗಾಗಿ ಮಾತ್ರವೇ ಹೀಗೆ ಬೆಳೆಯುತ್ತದೆ. ಇದು ಇತರ ಹಸಿರು ಸಸ್ಯಗಳಂತೆಯೇ ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳಬಲ್ಲದು. ಆದರೆ ಇದಕ್ಕೆ ಸುಲಭವಾಗಿ ನೀರು ದೊರೆಯದು. ಇದರಿಂದಾಗಿ ಮಳೆಯ ರೂಪದಲ್ಲಿ ಇಲ್ಲವೆ ಇಬ್ಬನಿಯ ರೂಪದಲ್ಲಿ ದೊರೆಯುವ ನೀರಿನಂಶವನ್ನು ಸಂಗ್ರಹಿಸಿಟ್ಟುಕೊಳ್ಳುವ ಅಪೂರ್ವ ಸಾಮಥ್ರ್ಯ ಇದಕ್ಕೆ ಉಂಟು. ಹೀಗೆ ನೀರನ್ನು ಹಿಡಿಯುವುದಕ್ಕಾಗಿ ಎಲೆಗಳು ಬಟ್ಟಲಿನಾಕಾರದ ರಚನೆಗಳಾಗಿ ಮಾರ್ಪಾಟಾಗಿರುವುದೂ ಉಂಟು. ಅಲ್ಲದೆ ಮರದ ತೊಗಟೆಯಲ್ಲಿ ತನ್ನ ಬೇರಿನ ಬಲೆಯಲ್ಲ್ಲಿ ಸಂಗ್ರಹವಾಗುವ ಹಾಗೂ ಗಾಳಿಯಲ್ಲಿ ತೂರಿಬಂದ ದೂಳು, ಕಲ್ಮಷವಸ್ತುಗಳು ಮತ್ತು ಕೊಳೆಯುವ ಸಾವಯವ ವಸ್ತುಗಳು ಇತ್ಯಾದಿಗಳಿಂದ ತನಗೆ ಬೇಕಾಗುವ ಖನಿಜ ವಸ್ತುಗಳನ್ನು ದೊರಕಿಸಿಕೊಳ್ಳುತ್ತದೆ. ಇದು ಬಹುವಾರ್ಷಿಕ ಮೂಲಿಕ ಸಸ್ಯ. ಹೂಗಳು ಕದಿರು ಇಲ್ಲವೆ ಚಂಡು ಮಂಜರಿ ರೀತಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳ ಬಣ್ಣ ನೀಲಿ, ನೇರಿಳೆ, ಕೆಂಪು, ಹಳದಿ, ಇಲ್ಲವೆ ಬಿಳಿ. ಪ್ರತಿಹೂವಿನಲ್ಲಿ 3 ಪತ್ರಗಳು, 3 ದಳಗಳು, 6 ಕೇಸರಗಳು ಮತ್ತು 3 ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಇವೆ. ಫಲ ಸಂಪುಟ ಮಾದರಿಯದು. ಬೀಜಗಳ ಮೇಲೆ ಸಣ್ಣ ಕೂದಲುಗಳುಂಟು. ಇದರಿಂದ ಕಾಯಿ ಒಡೆದಾಗ ಹೊರಬರುವ ಬೀಜಗಳು ಗಾಳಿಯಲ್ಲಿ ತೇಲಿಹೋಗಲು ಅನುಕೂಲವಾಗಿದೆ. ಟಿಲ್ಯಾಂಡ್ಸೀಯದ ಎಲೆಗಳೂ ಹೂಗಳೂ ಸುಂದರವಾಗಿ ಕಾಣುವುದರಿಂದ ಅಲಂಕಾರ ಸಸ್ಯವನ್ನಾಗಿ ಬೆಳೆಸುತ್ತಾರೆ. ಇದನ್ನು ಬೀಜಗಳ ಮೂಲಕ ಇಲ್ಲವೆ ಬೇರುಸಸಿಗಳ ಮೂಲಕ ಬೆಳೆಸಬಹುದು. ಹೆಚ್ಚಿನ ಉಷ್ಣತೆ ಹಾಗೂ ಬೆಳಕು ಮತ್ತು ಸಸ್ಯಾಂಗಾರವಿರುವ ಭೂಮಿ ಇದರ ಬೆಳೆವಣಿಗೆಗೆ ಅಗತ್ಯ. ಟಿಲ್ಯಾಂಡ್ಸೀಯದ ಮುಖ್ಯ ಪ್ರಭೇದಗಳಿವು: ಊಸ್ನಿಯಾಯ್ಡಿಸ್, ರಿಕರ್ವೇಟ, ಆನ್ಸೆಪ್ಸ್, ಲಿಂಡೆನಿಯಾನ, ಬಲ್ಬೋಸ, ಪಾಲಿಸ್ಟ್ಯಾಕಿಯ, ಫ್ಯಾಸಿಕ್ಯುಲೇಟ ಮತ್ತು ಯುಟ್ರಿಕ್ಯುಲೇಟ.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: