ಟಿರಿನ್ಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿರಿನ್ಸ್ - ಗ್ರೀಸಿನ ಆರ್ಗೊಲಿಸ್‍ನಲ್ಲಿರುವ ಒಂದು ಪ್ರಾಗೈತಿಹಾಸಿಕ ನೆಲೆ. ಅಲ್ಲಿಯ ಪ್ರಾಚೀನ ಕಥೆಗಳಲ್ಲಿ ಬರುವ ಪ್ರೊಯೀಟಸ್, ಪಸ್ರ್ಯೂಸ್, ಯುರಿಸ್ತಸ್ ಇವರುಗಳ ರಾಜಧಾನಿಯಾಗಿತ್ತು. ಪ್ರೊಯೀಟಸನ ಆಜ್ಞೆಯಂತೆ ಒಕ್ಕಣ್ಣಿನ ಸೈಕ್ಲೋಪ್ಸ್ ಎಂಬ ರಾಕ್ಷಸರು ದೊಡ್ಡ ದೊಡ್ಡ ಕಲ್ಲುಗಳನ್ನು, ಅವು ನಿಸರ್ಗದಲ್ಲಿ ದೊರೆತ ಹಾಗೆಯೆ ಇಟ್ಟು ಗೋಡೆಗಳನ್ನು ಕಟ್ಟಿದರೆಂದು ಹೇಳಲಾಗಿದೆ. ಇಲ್ಲಿ ಉತ್ಖನನದಲ್ಲಿ ದೊರೆತ ಅವಶೇಷಗಳಲ್ಲಿ ಮೈಸಿನಿಯನ್ನರ ಒಂದು ಅರಮನೆ ಕುತೂಹಲಕರವೂ ಮುಖ್ಯವೂ ಅದ್ದು. ಇಲ್ಲಿಯ ನೂತನ ಶಿಲಾಯುಗದ ಅವಶೇಷಗಳೇ ಅತ್ಯಂತ ಪ್ರಾಚೀನ. ಈ ಸಂಸ್ಕøತಿಯ ಕಾಲ ಕ್ರಿ.ಪೂ. 2500-1900. ಈ ಸಂಸ್ಕøತಿಯ ಮೃತ್‍ಪಾತ್ರಯ ಅವಶೇಷಗಳಲ್ಲದೆ ಕಲ್ಲು ಮತ್ತು ಇಟ್ಟಿಗೆಗಳಿಂದ ಕಟ್ಟಲಾದ ಒಂದು ವರ್ತುಳಾಕಾರದ ಸ್ತಂಭ ದೊರೆತಿದೆ. ಕ್ರಿ.ಪೂ.ಸು. 2000ದ ಸಮಯದಲ್ಲಿ ಚಕ್ರದಿಂದ ಮಾಡಿದ ಬೂದುಬಣ್ಣದ ಮೃತ್‍ಪಾತ್ರೆಗಳನ್ನು ಉಪಯೋಗಿಸುತ್ತಿದ್ದ ಬೇರೆ ವರ್ಗದ ಜನರು ಬಂದು ಇಲ್ಲಿ ವಾಸಿಸತೊಡಗಿದರು. ಇವರು ಮುಂಭಾಗದಲ್ಲಿ ಮಾತ್ರ ಪ್ರವೇಶವಿದ್ದ ಇಕ್ಕಟ್ಟಾದ ಪಡಸಾಲೆಯಂಥ ಮನೆಗಳಲ್ಲಿ ವಾಸಮಾಡುತ್ತಿದ್ದರು. ಕ್ರಿ.ಪೂ.ಸು. 1400ರಲ್ಲಿ ಕಟ್ಟಲಾದ ಮೈಸಿನಿಯನ್ ಸಂಸ್ಕೃತಿಯ ಅರಮನೆಯ ಅವಶೇಷಗಳು ಗಮನಾರ್ಹ. ಮುಂಭಾಗದಲ್ಲಿ ಒಂದು ದೊಡ್ಡ ಬಲವಾದ ಹೆಬ್ಬಾಗಿಲಿದ್ದು ಅದರ ಬದಿಗಳಲ್ಲಿ ಚೌಕೋನದ ರಕ್ಷಣೆಯ ಬುರುಜುಗಳಿದ್ದವು. ಈ ಹೆಬ್ಬಾಗಿಲಿನಿಂದ ಒಳಗೆ ವಿಶಾಲವಾದ ಅಂಗಳವೂ ಅದರ ಉತ್ತರ ಭಾಗದಲ್ಲಿ ವಾಸದ ಕೋಣೆಗಳೂ ಇದ್ದುವು. ದಕ್ಷಿಣ ಭಾಗದಲ್ಲಿ ಕಲ್ಲಿನಿಂದ ಕಟ್ಟಲಾದ ಸೈಕ್ಲೋಪಿಯನ್ ಗೋಡೆ ಇತ್ತು. ಇದೇ ಸ್ಥಳದಲ್ಲಿ ಕ್ರಿ.ಪೂ.ಸು. 1300ರಲ್ಲಿ ಮತ್ತೊಂದು ಅರಮನೆಯನ್ನು ಕಟ್ಟಲಾಯಿತು. ದಕ್ಷಿಣ ಭಾಗದಲ್ಲಿ ಇದಕ್ಕೆ ಹೊಸದೊಂದು ಪ್ರವೇಶದ್ವಾರವನ್ನು ಸೇರಿಸಲಾಯಿತು. ಈ ಅರಮನೆಗೆ ಸಂಬಂಧಪಟ್ಟ ಕೆಲವೊಂದು ವರ್ಣಚಿತ್ರಗಳು ದೊರೆತಿವೆ. ಇಲ್ಲಿ ಕ್ರಿ.ಪೂ. 1200ರಲ್ಲಿ ಮತ್ತೊಂದು ಅರಮನೆಯನ್ನು ಕಟ್ಟಲಾಯಿತು. ಈ ಅರಮನೆಯ ಅವಶೇಷಗಳು ತಕ್ಕಮಟ್ಟಿಗೆ ದಕ್ಷಿಣ ಭಾಗದಲ್ಲಿ ಕಂಡುಬಂದಿವೆ. ವಾಯವ್ಯ ದಿಕ್ಕಿಗೆ ಒಂದು ಚೌಕೋನದ ಬುರುಜನ್ನು ಕಟ್ಟಲಾಯಿತು. ಹಳೆಯ ಪ್ರವೇಶದ್ವಾರವಿದ್ದಲ್ಲೂ ಕಂಬಗಳುಳ್ಳ ಅಲಂಕೃತ ಪ್ರವೇಶದ್ವಾರವನ್ನು ಕಟ್ಟಲಾಯಿತು. ಈ ಅರಮನೆಯಲ್ಲಿದ್ದ ಕುಶಲಕಲಾವಸ್ತುಗಳು ಹೆಚ್ಚಾಗಿ ಕ್ರೀಟಿನ ಮಿನೋವನ್ ಕಲೆಯ ಪ್ರಭಾವಕ್ಕೆ ಒಳಗಾಗಿದ್ದುವು. ಇದರಲ್ಲಿ ರಾಣಿವಾಸಕ್ಕೆ ಪ್ರತ್ಯೇಕ ಕೋಣೆಯಿತ್ತು. ವರ್ಣಚಿತ್ರಗಳು ನಾಸಸ್‍ಲ್ಲಿ ದೊರೆತ ಚಿತ್ರಗಳನ್ನು ಹೋಲುತ್ತವೆ. ಇವಲ್ಲದೆ ಬೇರೆಬೇರೆ ಚಿತ್ರಗಳೂ ಉಂಟು. ಈ ಅರಮನೆಯನ್ನು ಕ್ರಿ.ಪೂ. 1150ರಲ್ಲಿ ಡೋರಿಕ್ ಭಾಷೆಯನ್ನು ಆಡುತ್ತಿದ್ದ ಗ್ರೀಕರು ನಾಶಪಡಿಸಿದರು. ಆದರೂ ಇಲ್ಲಿ ಪ್ರಾಚೀನ ಪದ್ಧತಿಯ ಪಡಸಾಲೆಯಂಥ ಕಟ್ಟಡಗಳನ್ನು ಮತ್ತೆ ಕಟ್ಟಲಾಯಿತು. ಇವುಗಳ ಸಮೀಪದಲ್ಲೇ ಗ್ರೀಕರ ಕ್ರಿ.ಪೂ. 7ನೆಯ ಶತಮಾನದ ಒಂದು ದೇವಾಲಯ ಇತ್ತು. ಕ್ರಿ.ಪೂ. 6ನೆಯ ಶತಮಾನದಲ್ಲಿ ಈ ನಗರ ಪ್ರಮುಖವಾಗಿಲ್ಲದಿದ್ದರೂ ಊರ್ಜಿತ ಸ್ಥಿತಿಯಲ್ಲಿತ್ತು. ಇಲ್ಲಿಯ ಜನ ಕ್ರಿ.ಪೂ. 479ರಲ್ಲಿ ಪ್ಲೆಥೇಯ ಎಂಬಲ್ಲಿ ನಡೆದ ಯುದ್ಧದಲ್ಲಿ ಪರ್ಷಿಯನರ ವಿರುದ್ಧ ಹೋರಾಡಲು 80 ಸೈನಿಕರನ್ನು ಕಳುಹಿಸಿದ್ದರು. ಕ್ರಿ.ಪೂ. 468ರಲ್ಲಿ ಈ ನಗರದ ಪಕ್ಕದಲ್ಲೇ ಇದ್ದ ಆರ್ಗೋಸರು ಇದನ್ನೂ ಮೈಸಿನೇಯನ್ನೂ ಹಾಳುಮಾಡಿದರು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: