ವಿಷಯಕ್ಕೆ ಹೋಗು

ಟಿಪ್ಪು ಸುಲ್ತಾನನ ಅರಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿಪ್ಪು ಸುಲ್ತಾನರ ಅರಮನೆ, ಬೆಂಗಳೂರು

ಬೆಂಗಳೂರಿನ ಕೋಟೆಯ ಆವರಣದಲ್ಲಿ ೧೭೮೧ರಲ್ಲಿ ನವಾಬ್ ಹೈದರಾಲಿ ಖಾನ್ ಕಾಲದಲ್ಲಿ ಮರ ಹಾಗೂ ಗಾರೆಗಚ್ಚಿನ ಈ ಅರಮನೆಯ ನಿರ್ಮಾಣ ಪ್ರಾರಂಭಗೊಂಡು ತದನಂತರ ೧೭೯೧ರಲ್ಲಿ ಟಿಪ್ಪುಸುಲ್ತಾನನ ಕಾಲದಲ್ಲಿ ಪೂರ್ಣಗೊಂಡಿತು. ಇದು ಬೆಂಗಳೂರು ಕೋಟೆಯೊಳಗಣ ಆವರಣದ ಶ್ರೀ ವೆಂಕಟರಮಣ ದೇವಾಲಯದ ಸನಿಹದಲ್ಲಿದೆ.

ಅರಮನೆ ಕಟ್ಟಿದ ಹೈದರಾಲಿ ಮತ್ತು ಟಿಪ್ಪುವಿನ ಹೆಸರಿರುವ ಮಾಹಿತಿ ಫಲಕ

ನೋಡಲು ಒಂದು ಅಂತಸ್ತಿನ ಸ್ತಂಭಗಳ ಮಂಟಪದಂತೆ ಕಂಡರೂ, ನೈಜಸ್ಥಿತಿಯಲ್ಲಿ ಎರಡಂತಸ್ತಿನ ಈ ಕಟ್ಟಡವನ್ನು ಸಮಕಾಲೀನ ಇಂಡೋ ಇಸ್ಮಾಮಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಆಯತಾಕಾರದ ಕಲ್ಲಿನ ಅಧಿಷ್ಠಾನದ ಮೇಲೆ ನಿರ್ಮಿಸಲ್ಪಟ್ಟ ಈ ಕಟ್ಟಡದ ಮುಂಭಾಗದಲ್ಲಿ ಉನ್ನತವಾದ ಮರದ ಸ್ತಂಭಗಳನ್ನು ಕಲ್ಲಿನ ಪೀಠದ ಮೇಲೆ ಅಳವಡಿಸಲಾಗಿದ್ದು, ಬಹುಭಾರವಾದ ತೊಲೆಗಳನ್ನು ಆಧರಿಸಿ ನಿಲ್ಲಿಸಲಾಗಿದೆ. ಸ್ತಂಭಗಳ ನಡುವೆ ಇಂಡೋ-ಇಸ್ಮಾಮಿಕ್ ಶೈಲಿಯ ಅರ್ಧವರ್ತುಲಗಳ ಕಮಾನುಗಳನ್ನು ಹಾಗೂ ಬೋದಿಗೆಗಳನ್ನು ಅಳವಡಿಸಲಾಗಿದ್ದು ಇಡೀ ಸ್ತಂಭಗಳ ಈ ಮೊಗಸಾಲೆಯನ್ನು ಕಂದು ಹಾಗೂ ಹಳದಿ ಬಣ್ಣದ ಲೇಪನದಿಂದ ಸುಂದರಗೊಳಿಸಲಾಗಿದೆ.

ಅರಮನೆಯ ಮಾಹಿತಿ ಫಲಕ

ಅರಮನೆಯ ಗೋಡೆಗಳು ಮತ್ತು ಛತ್ತು ಪತ್ರಲತೆ ಹಾಗೂ ಬಣ್ಣದ ಚಿತ್ರಗಳಿಂದ ಅಲಂಕರಿಸಲಾಗಿದ್ದು, ನೋಡಲು ಮನೋಹರವಾಗಿವೆ. ಮೇಲಂತಸ್ತಿನ ಕೋಣೆಗಳಿಗೆ ಮತ್ತು ಮಧ್ಯದಲ್ಲಿ ಮುಂಚಾಚಿದ ಕಟಾಂಜನ ಮಂಟಪಗಳಿಗೆ ಉತ್ತರ ಹಾಗೂ ದಕ್ಷಿಣದ ಭಾಗದಲ್ಲಿ ಪಾವಟಿಕೆಗಳಿವೆ. ಈ ಕೋಣೆಗಳನ್ನು ಅಂತ:ಪುರವೆಂದು ಗುರುತಿಸಬಹುದು. ಕಟ್ಟಡದ ಮಧ್ಯಭಾಗದಲ್ಲಿ ಒಂದು ವಿಶಾಲವಾದ ಆಯತಾಕಾರದ ಹಜಾರವಿದ್ದು , ಅದರ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಕೆಳ ಅಂತಸ್ತಿಗೆ ಗೋಪುರವಾಗುವಂತೆ ಮುಂಚಾಚಿದ ಕಟಾಂಜನ ಮಂಟಪವಿದ್ದು ಅವುಗಳಲ್ಲಿ ಕುಳಿತ ಸುಲ್ತಾನನು ದೈನಂದಿನ ದರ್ಬಾರ್ ನಡೆಸುತ್ತಿದ್ದನು. ಇದರ ಕೆಳಭಾಗದಲ್ಲಿ ಒಂದು ಕೋಣೆಯಿದ್ದು ಪ್ರಸ್ತುತ ಇದರಲ್ಲಿ ಒಂದು ಛಾಯಾಚಿತ್ರ ಸಂಗ್ರಹಾಲಯವಿದೆ.

ಶ್ರೀ ವೆಂಕಟರಮಣ ದೇವಾಲಯ, ಕೆ.‌ಆರ್. ಮಾರ್ಕೆಟ್, ಬೆಂಗಳೂರು

ಅರಮನೆಯ ಗೋಡೆಗೆ ಹೊಂದಿಸಿರುವ ಒಂದು ಶಾಸನದಲ್ಲಿ ಇದನ್ನು 'ಸಂತೋಷದ ಆವಾಸ ಹಾಗೂ ಸ್ವರ್ಗದ ವೈರಿ', ಎಂದು ಬಣ್ಣಿಸಲಾಗಿದೆ.