ಟಾಸ್ಮೇನಿಯ ತೋಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Thylacinus.jpg

ಟಾಸ್ಮೇನಿಯ ತೋಳ - ಟಾಸ್ಮೇನಿಯದಲ್ಲಿ ಮಾತ್ರ ಕಾಣದೊರೆಯುವ ಒಂದು ವಿಚಿತ್ರ ರೀತಿಯ ಸಸ್ತನಿ. 1930ಕ್ಕೂ ಮುಂಚೆ ಆಸ್ಟ್ರೇಲಿಯದಲ್ಲೂ ಜೀವಿಸಿದ್ದಿತಂತೆ. ಈಗ ಅಲ್ಲಿ ಇದರ ಫಾಸಿಲುಗಳು ಮಾತ್ರ ಸಿಕ್ಕಿವೆ. ಬಹುಶಃ ಡಿಂಗೋ ನಾಯಿಗಳಿಂದಾಗಿ ಇದು ನಾಶವಾಗಿರಬೇಕು. ಮಾಸ್ರ್ಯೂಪಿಯೇಲಿಯ ಗಣದ ತೈಲ್ಯಾಸಿನಿಡೀ ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ತೈಲ್ಯಾಸಿನಸ್ ಸೈನೋಸಿಫ್ಯಾಲಸ್ (ತೋಳದ ತಲೆಯುಳ್ಳ ಮಾಸ್ರ್ಯೂಪಿಯಲ್ ನಾಯಿ ಎಂದು ಈ ಹೆಸರಿನ ಅರ್ಥ). ಈ ಗಣದ ಇತರ ಪ್ರಾಣಿಗಳಿಗೆ ಹೋಲಿಸಿದರೆ ಇದೇ ಅತ್ಯಂತ ದೊಡ್ಡದು. ಇದಕ್ಕೂ ನಾಯಿ ಮತ್ತು ತೋಳಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ.

ಬಾಲವೂ ಇದರ ಉದ್ದ ಸೇರಿದಂತೆ 100-110 ಸೆ.ಮೀ. ನಾಯಿಯಂತೆ ಚೂಪಾದ ತಲೆಯುಳ್ಳ ಇದು ಬಾಯನ್ನು ನಾಯಿಗಿಂತ ಬಹಳ ಅಗಲವಾಗಿ ತೆರೆಯಬಲ್ಲುದು. ಇದರ ಮೈಬಣ್ಣ ಕೆಂಪು ಮಿಶ್ರಿತ ಕಂದು. ಬೆನ್ನಿನ ಮೇಲೆ ಕಪ್ಪು ಬಣ್ಣದ ಅಡ್ಡ ಪಟ್ಟೆಗಳಿವೆ. ಇದರಿಂದಾಗಿ ಇದನ್ನು ಟಾಸ್ಮೇನಿಯ ಹುಲಿ ಎಂಬ ಹೆಸರಿನಿಂದಲೂ ಕರೆಯುವುದುಂಟು. ಕಿವಿಗಳು ಗಿಡ್ಡವಾಗಿ, ಗುಂಡಾಗಿ, ನೆಟ್ಟಗಿವೆ. 50 ಸೆ.ಮೀ ಉದ್ದದ ಚೂಪಾದ ಬಾಲವಿದೆ. ಮೊದಲನೆಯ ಕಾಲ್ಬೆರಳು ಇಲ್ಲವೇ ಇಲ್ಲ. ಬಾಲ ಬುಡದಲ್ಲಿ ದಪ್ಪನಾಗಿದ್ದು ಕಾಂಗರೂವಿನ ಬಾಲದಂತೆ ಬಗ್ಗಿದೆ. ಚರ್ಮದ ಪದರದಿಂದ ರಚಿತವಾಗಿರುವ ಚಿಕ್ಕದಾದ, ಅರ್ಧಚಂದ್ರಾಕೃತಿಯ ಹೊಟ್ಟೆಚೀಲವೋಂದಿದೆ. ಚೀಲದ ಒಳಗೆ ನಾಲ್ಕು ಮೊಲೆತೊಟ್ಟುಗಳುಂಟು. ಈ ಚೀಲದ ಬಾಯಿ ಹಿಮ್ಮುಖವಾಗಿ ತೆರೆಯುತ್ತದೆ. ನಿಶಾಚರಿಯಾದ ಇದು ತನ್ನ ಎರೆಗಳ ಜಾಡನ್ನು ವಾಸನೆಯಿಂದ ಕಂಡುಹಿಡಿಯುತ್ತದೆ. ಕಾಂಗರೂ, ವಾಲಬೀ, ಸಣ್ಣ ಪುಟ್ಟ ಸಸ್ತನಿಗಳು, ಹಕ್ಕಿಗಳು ಇದರ ಆಹಾರ. ಎರೆಗಳನ್ನು ಒಂಟಿಯಾಗಿ ಇಲ್ಲವೆ 3-4 ಪ್ರಾಣಿಗಳ ಗುಂಪುಗಳಾಗಿ ಬೇಟೆಯಾಡುತ್ತದೆ. ನಾಯಿಯಷ್ಟು ಚುರುಕಾಗಿ, ವೇಗವಾಗಿ ಓಡಲಾರದು. ಇದು ಹಲವಾರು ರೀತಿಗಳಲ್ಲಿ ಕೂಗಬಲ್ಲುದು. ತನ್ನ ಜಾತಿಯ ಇತರ ಪ್ರಾಣಿಗಳೊಂದಿಗೆ ಸಂಪರ್ಕಿಸುವಾಗ ಕುಂಯ್‍ಗುಡುತ್ತದೆ. ರೇಗಿದಾಗ ಗುರುಗುಡುತ್ತದೆ. ಬೇಟೆಯಾಡುವಾಗ ಕೆಮ್ಮುವಂತೆ ಬೊಗಳುತ್ತದೆ. ಟಾಸ್ಮೇನಿಯ ತೋಳ ಒಂದು 2-4 ಮರಿಗಳನ್ನು ಈಯುತ್ತದೆ. ಮರಿಗಳನ್ನು ತನ್ನ ಹೊಟ್ಟೆಚೀಲದಲ್ಲಿ ಹೊತ್ತು ತಿರುಗುತ್ತಿದ್ದು ಅವು ಶಕ್ತವಾಗುವವರೆಗೂ ಸಲಹುತ್ತದೆ.