ವಿಷಯಕ್ಕೆ ಹೋಗು

ಟಪೀಟಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಪೀಟಮ್ - ಉನ್ನತ ವರ್ಗದ ಸಸ್ಯಗಳಾದ ಜರೀಗಿಡಗಳ, ನಗ್ನಬೀಜ ಸಸ್ಯಗಳ ಮತ್ತು ಆವೃತಬೀಜಸಸ್ಯಗಳ ಜೀವನ ಚಕ್ರದಲ್ಲಿನ ಒಂದು ಪೀಳಿಗೆಯಾದ ಬೀಜಕಜನಕ (ಸ್ಪೋರೊಫೈಟ್) ಸಸ್ಯಗಳಲ್ಲಿ ಕಾಣಬರುವ ಒಂದು ವಿಶೇಷ ತೆರನ ಊತಕ. ಇದು ಬೀಜಕ ಕೋಶಗಳ (ಸ್ಪೊರ್ಯಾಂಜಿಯ) ಒಂದು ಮುಖ್ಯ ಭಾಗವಾಗಿದ್ದು ವೃದ್ಧಿಯಾಗುವ ಬೀಜಕಗಳಿಗೆ (ಸ್ಪೋರ್ಸ್) ಆಹಾರಾಂಶಗಳನ್ನು ಒದಗಿಸುತ್ತದೆ. ಜರೀಗಿಡಗಳಲ್ಲಿ ಎಲೆಗಳ ತಳಭಾಗದಲ್ಲಿ ಇಲ್ಲವೆ ವಿಶಿಷ್ಟರೀತಿಯ ಫಲವಂತಿ ಎಲೆಗಳ ಮೇಲೆ ಬೀಜಕಕೋಶಗಳುಂಟು. ಇವಕ್ಕೆ ಅನೇಕ ಪದರಗಳ ಕವಚ ಇದೆ. ಈ ಪದರಗಳಲ್ಲಿ ಅತ್ಯಂತ ಒಳಗಿನ ಪದರವೇ ಟಪೀಟಮ್. ಇದು ಒಳಗಿನ ಬೀಜಕಜನಕ ಕೋಶಗಳನ್ನು ಸಂಪೂರ್ಣವಾಗಿ ಸುತ್ತುವರಿದಿರುತ್ತದೆ. ಇದರ ಕೋಶಗಳು ಇತರ ಪದರಕೋಶಗಳಿಗಿಂತಲೂ ಗಾತ್ರದಲ್ಲಿ ದೊಡ್ಡದಾಗಿರುವುವಲ್ಲದೆ ಅಧಿಕ ಜೀವರಸದಿಂದ ತುಂಬಿರುತ್ತವೆ. ಬೀಜಕಗಳು ರೂಪುಗೊಳ್ಳುತ್ತ ಬರುತ್ತಿದ್ದಂತೆ ಈ ಕೋಶಗಳು ಪರಸ್ಪರ ಬೇರ್ಪಟ್ಟು, ಕಾಲಕ್ರಮೇಣ ಕರಗಿ ಬೀಜಕಗಳಿಗೆ ಆಹಾರವಾಗಿ ಮಾರ್ಪಡುತ್ತವೆ.

ಆವೃತಬೀಜ ಸಸ್ಯಗಳ ಪರಾಗಕೋಶಗಳಲ್ಲಿ ಈ ಊತಕವನ್ನು ಸುಲಭವಾಗಿ ಗುರುತಿಸಬಹುದು. ಪರಾಗಕೋಶದ ಸುತ್ತ ಅನೇಕ ಪದರಗಳಿಂದ ಕೂಡಿದ ಹೊದಿಕೆ ಉಂಟು. ಈ ಪದರಗಳಲ್ಲಿ ಅತ್ಯಂತ ಹೊರಗಿನದು ಎಪಿಡರ್ಮಿಸ್. ಇದರ ಕೆಳಗೆ ಎಂಡೋತೀಸಿಯಮ್ ಪದರ ಇದೆ. ಇದಾದಮೇಲೆ ಒಂದು ಅಥವಾ ಎರಡು ಪದರಗಳಿಂದಾದ ಮಧ್ಯ ಪದರವೂ ಅದರ ಒಳಗೆ ಟಪೀಟಮ್ ಪದರವೂ ಇವೆ. ಇದು ಕೂಡ ರೂಪುಗೊಳ್ಳುತ್ತಿರುವ ಪರಾಗಕ್ಕೆ ಆಹಾರವನ್ನು ಪೂರೈಸುತ್ತದೆ. ಟಪೀಟಮಿನಲ್ಲಿ 1-3 ಪದರಗಳುಂಟು. ಟಪೀಟಮ್ ಪ್ರಾಥಮಿಕ ಪಾಶ್ರ್ವಿಕ ಪದರದಿಂದ ಒಂದು ಸಮರೂಪದ ಕೋಶಗಳಿಂದಾದ ಪದರವಾಗಿ ರೂಪುಗೊಳ್ಳುತ್ತದೆ. ಕೆಲವು ಸಸ್ಯಗಳಲ್ಲಿ ಕೋಶಗಳು ಎರಡು ತೆರನಾಗಿರುವುದುಂಟು. ಇಂಥ ಟಪೀಟಮಿನಲ್ಲಿ ದೊಡ್ಡಗಾತ್ರದ ಕೋಶಗಳಿರುವ ಭಾಗ ಪರಾಗಕೋಶಗಳ ಸಂಬಂಧಕ ಕೋಶಗಳಿಂದಲೂ ಸಣ್ಣಗಾತ್ರದ ಕೋಶಗಳಿರುವ ಭಾಗ ಪಾಶ್ರ್ವಿಕ ಪದರದಿಂದಲೂ ರೂಪುಗೊಳ್ಳುತ್ತವೆ.

ಬಗೆಗಳು[ಬದಲಾಯಿಸಿ]

ಟಪೀಟಮಿನಲ್ಲಿ ಎರಡು ಬಗೆಗಳುಂಟು:

ಅಮೀಬೀಯ (ಪೆರಿಪ್ಲಾಸ್ಮೋಡಿಯಲ್) ಟಪೀಟಮ್[ಬದಲಾಯಿಸಿ]

ಇದು ಮೊದಲು ಕೋಶಗಳಿಂದ ಕೂಡಿರುತ್ತದೆ. ಬರಬರುತ್ತ ಕೋಶಗಳ ಒಳ ಹಾಗೂ ಪಕ್ಕದ ಗೋಡೆಗಳು ಕ್ಷಯಿಸಿಹೋಗಿ ಒಳಗಿನ ಜೀವರಸ ಹಾಗೂ ನ್ಯೂಕ್ಲಿಯಸುಗಳೆಲ್ಲ ಒಂದುಗೂಡಿ ಪರಾಗಕೋಶದ ಕುಹರಗಳಲ್ಲಿ ವ್ಯಾಪಿಸುತ್ತವೆ. ರೂಪುಗೊಳ್ಳುತ್ತಿರುವ ಪರಾಗದ ಸುತ್ತ ಈ ದ್ರವ ಆವರಿಸಿಕೊಂಡು ಅದಕ್ಕೆ ಬೇಕಾಗುವ ಆಹಾರವನ್ನು ಒದಗಿಸುವುದು. ಅಲ್ಲದೆ ಪರಾಗಕಣಗಳ ಭಿತ್ತಿಯ ರಚನೆಯಲ್ಲೂ ಇದು ಪಾಲುಗೊಳ್ಳುವುದು. ಇಂಥ ಟಪೀಟಮನ್ನು ಬ್ಯೂಟಮಸ್, ಅಲಿಸ್ಮ, ಟೈಫ, ಟ್ರ್ಯಾಡೆಸ್‍ಕ್ಯಾನ್ಷಿಯಗಳಲ್ಲಿ ಕಾಣಬಹುದು.

ಸ್ರಾವಕ ಅಥವಾ ಗ್ರಂಥೀಯ (ಸೆಕ್ರೀಟರಿ ಅಥವಾ ಗ್ಲ್ಯಾಂಡುಲಾರ್) ಟಪೀಟಮ್[ಬದಲಾಯಿಸಿ]

ಈ ಬಗೆಯಲ್ಲಿ ಕೋಶಗಳು ಮೊದಲಿನಿಂದ ಕೊನೆಯವರೆಗೂ ತಮ್ಮ ಕೋಶೀಯ ರೂಪವನ್ನೇ ಉಳಿಸಿಕೊಂಡಿರುತ್ತವೆ. ಇದು ಎಳೆಯದಿರುವಾಗ ಇದರ ಕೋಶಗಳಲ್ಲಿ ಮೈಟೊಕಾಂಡ್ರಿಯ, ಪ್ಲಾಸ್ಟಿಡುಗಳು, ಪ್ರೋ-ವ್ಯೂಬಿಷ್ ಕಾಯಗಳೆಂಬ ವಿಶೇಷ ಕಣಗಳು ಮತ್ತು ಡಿಕ್ಟಿಯೋಸೋಮುಗಳು ಕೆಲವು ತೆರನ ಸೂಕ್ಷ್ಮ ಸಂಚಿಗಳು ಇರುತ್ತವೆ. ಕೋಶಭಿತ್ತಿಗಳು ತೆಳುವಾಗಿವೆ. ಟಪೀಟಮ್ ಬಲಿಯುತ್ತಹೋದಂತೆ ಇದರ ಕೋಶಗಳ ಭಿತ್ತಿಗಳು ದಪ್ಪವಾಗುತ್ತವಲ್ಲದೆ ರೈಬೊಸೋಮುಗಳೂ ಪ್ರೋ-ವ್ಯೂಬಿಷ್ ಕಾಯಗಳೂ ಸಂಖ್ಯೆಯಲ್ಲಿ ಹೆಚ್ಚುತ್ತವೆ. ಈ ಕಾಯಗಳ ಸುತ್ತ ರೈಬೊಸೋಮುಗಳು ಆರೀಯವಾಗಿ ಜೋಡಣೆಗೊಳ್ಳುತ್ತವೆ. ಡಿಕ್ಟಿಯೋಸೋಮುಗಳು ಸೂಕ್ಷ್ಮ ಸಂಚಿಗಳೊಂದಿಗೆ ಗುಂಪು ಗೂಡಿಕೊಂಡು ಕೋಶಗಳ ಅಂಚಿನಲ್ಲಿ ಉಳಿಯುತ್ತವೆ. ಕೊಂಚ ಸಮಯದ ಅನಂತರ ಪರಾಗ ಕಣಗಳು ರೂಪುಗೊಂಡು ಪರಸ್ಪರ ಬೇರೆ ಬೇರೆಯಾಗ ತೊಡಗಿದಾಗ ಪ್ರೊ-ವ್ಯೂಬಿಷ್ ಕಾಯಗಳು ಟಪೀಟಮ್ ಕೋಶಗಳ ಕೋಶದ್ರವ್ಯದಿಂದ ಹೊರಬಂದು ಕೋಶಭಿತ್ತಿಗೂ ಪೊರೆಗೂ ನಡುವೆ ಇರುವ ಅವಕಾಶದಲ್ಲಿ ಸಂಗ್ರಹಗೊಳ್ಳುತ್ತವೆ. ಇವುಗಳ ಸುತ್ತ ಸ್ಪೋರೊಪೋಲನಿನ್ ಎಂಬ ವಸ್ತು ಸಂಚಯವಾಗುವುದು. ಈಗ ಇವನ್ನು ವ್ಯೂಬಿಷ್ ಕಾಯಗಳು ಎಂಬ ಹೆಸರಿನಿಂದ ಕರೆಯಲಾಗುವುದು. ಬರಬರುತ್ತ ಟಪೀಟಮಿನ ಕೋಶಗಳ ಭಿತ್ತಿ ಛಿನ್ನಭಿನ್ನವಾಗುತ್ತದೆ. ವ್ಯೂಬಿಷ್ ಕಾಯಗಳು ಈಗ ಪರಾಗಕಣಗಳ ಸಂಪರ್ಕಕ್ಕೆ ಬಂದು ಕಣಗಳ ಭಿತ್ತಿಯ ರಚನೆಗೆ ಸಹಾಯಮಾಡುತ್ತವೆ. ಸಾಮಾನ್ಯವಾಗಿ ಟಪೀಟಮಿನ ಜೀವಕೋಶಗಳಲ್ಲಿ ಒಂದೊಂದೇ ನ್ಯೂಕ್ಲಿಯಸ್ ಇರುವುದು. ಆದರೆ ಕೆಲವೊಮ್ಮೆ ವಿಭಜನೆಯ ಮೂಲಕ ಈ ಸಂಖ್ಯೆ 2, 3, 4, 8 ಅಥವಾ 16ರ ವರೆಗೂ ಏರಬಹುದು. ಅನೇಕ ವೇಳೆ ನ್ಯೂಕ್ಲಿಯಸ್ಸುಗಳು ಪರಸ್ಪರ ಕೂಡಿಕೊಂಡು ಸಂಖ್ಯೆಯಲ್ಲಿ ಕಡಿಮೆಯಾಗುವುದೂ ಉಂಟು. ಇನ್ನೂ ಕೆಲವು ಸಲ ನ್ಯೂಕ್ಲಿಯೈಗಳಲ್ಲಿಯ ಕ್ರೋಮೊಸೋಮುಗಳ ಸಂಖ್ಯೆಯೂ ಹೆಚ್ಚಾಗಬಹುದು. ಹೀಗಾದಾಗ ಬಹುಗುಣಿತ ನ್ಯೂಕ್ಲಿಯಸ್ಸುಗಳು ರೂಪುಗೊಳ್ಳುತ್ತವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟಪೀಟಮ್&oldid=1085493" ಇಂದ ಪಡೆಯಲ್ಪಟ್ಟಿದೆ