ಜ್ವಾಲಾ ಮುಖಿ

ವಿಕಿಪೀಡಿಯ ಇಂದ
Jump to navigation Jump to search

ನಮ್ಮ ಮಾತು

"ಜ್ವಾಲಾಮುಖಿ"

ಹೌದು, ಜ್ವಾಲಾಮುಖಿ! ಬಡ ಜನತೆಯ ದುರವಸ್ಥೆಯ ಹೃದಯ ಗರ್ಭದಿಂದೇಳುವ ಕಷ್ಟ-ಸಂಕಷ್ಟಗಳ ಜ್ವಾಲಾಮುಖಿ! ಅನ್ಯಾಯ ಪರಂಪರೆಗಳಿಂದ ನಿಸ್ಸಹಾಯಕತೆಯ, ಸಾಮಾಜಿಕ ಏರುಪೇರುಗಳ ದುಷ್ಪರಿಣಾಮದ, ಅಸಮಾನತೆ, ಅವಮಾನಗಳ, ಆರ್ದ್ರತೆ-ಅವಲಂಬನೆಗಳ ನಿಟ್ಟುಸಿರ ಬೇಗೆಯನ್ನೂ ಕಂಬನಿಯ ಪ್ರವಾಹವನ್ನೂ ಹೊರ ಉಕ್ಕಿಸುವ ಜ್ವಾಲಾಮುಖಿ ನಮ್ಮ ಪತ್ರಿಕೆ.

ಪಟ್ಟ ಭದ್ರರ, ಅಧಿಕಾರಶಾಹಿಗಳ, ಮದೋನ್ಮತ್ತ ನಾಯಕರ, ಶ್ರೀಮಂತರ ದೌರ್ಜನ್ಯ-ಹಿಂಸೆ-ಕೋಟಲೆಗಳಿಗೆ ತುತ್ತಾಗಿ, ಪರಿಹಾರಮಾರ್ಗ ಕಾಣದೆ ಒದ್ದಾಡುವ ಮೂಕ ಜನ ಕೋಟಿಯ ಪರಿಶುದ್ಧಾತ್ಮದಿಂದೇಳುವ ನೋವಿನ ಮುಖಪತ್ರ, ಈ ‘ಜ್ವಾಲಾಮುಖಿ’.

ದಲಿತರ, ದುರ್ಬಲರ, ಬಡವರ, ಶೋಷಿತರ, ನ್ಯಾಯವೇದಿಕೆ ಇದು. ಅನ್ಯಾಯವನ್ನು ಕಂಡಲ್ಲಿ ಅದನ್ನು ನಿರ್ದಾಕ್ಷಿಣ್ಯವಾಗಿ ಕೆಂಡದಂತೆ ಉಗುಳುವುದು. ನ್ಯಾಯ ಎಲ್ಲಿದೆಯೋ ಅದನ್ನು ನಿರ್ಭೀತಿಯಿಂದ ವ್ರತ ಪಡಿಸುವುದು, ಯಾರ ಹಂಗಿಗೂ ಒಳಗಾಗದೆ, ಯಾರ ನ್ಯಾಯಬದ್ಧ ಹಕ್ಕಿಗೂ ಧಕ್ಕೆ ತರದೆ, ಸತ್ಯಕ್ಕಾಗಿ, ಧರ್ಮಕ್ಕಾಗಿ-ಜನತಾ ಸುಖಕ್ಕಾಗಿ ಹೋರಾಡುವ ಜನತೆಯ ಪತ್ರಿಕೆಯಿದು.

ಹೊಸಯುಗದ ನಿಮಾಣಕ್ಕೆ, ಹೊಸ ಬಾಳ ಸ್ಥಾಪನೆಗೆ, ಹೊಸ ಜಗತ್ತಿನ ಪ್ರತಿಷ್ಠೆಗೆ ಕಂಕಣ ತೊಟ್ಟಿರುವ ಸೇವಾರ್ಥಿಗಳ ಉತ್ಸಾಹಿ ಉದ್ಯಮವಿದು. ಬಂಡವಾಳಗಾರರ ಬೆಂಬಲ ನಮಗಿಲ್ಲ; ಬಂಡವಾಳಶಾಹಿ ಆಕಾಂಕ್ಷೆಗಳಿಲ್ಲ. ಜನರ ಪ್ರೋತ್ಸಾಹ-ಅಭಿಮಾನಗಳೇ ನಮ್ಮ ಬಂಡವಾಳ; ಜನರ ಪ್ರೀತಿ-ಸೌಜನ್ಯವೇ ನಮ್ಮ ಶಕ್ತಿ. ಜನಪ್ರಿಯತೆಯೊಂದೇ ನಮ್ಮ ಆಧಾರ.

ಈ ಧರ್ಮಕಾಂಡಕ್ಕೆ, ನ್ಯಾಯದ ಜ್ವಾಲಾಮುಖಿಗೆ, ಕನ್ನಡಿಗರೆಲ್ಲರ ಸಹಾಯ-ಸಹಕಾರ-ಸಹಾನುಭೂತಿಗಳನ್ನು ಪ್ರಾರ್ಥಿಸುತ್ತೇವೆ. ಜನಸಾಮಾನ್ಯರ ಕಷ್ಟ-ದುಃಖಗಳನ್ನರುಹುವ ಪತ್ರಗಳಿಗೂ ಲೇಖನಗಳಿಗೂ ‘ಜ್ವಾಲಾಮುಖಿ’ಯಲ್ಲಿ ಸದಾ ಸ್ಥಳವಿದೆ!

ಜೈ ಹಿಂದ್!


(ಐವತ್ತರ ದಶಕದಲ್ಲಿ ಹೆಚ್. ರಾಮಸ್ವಾಮಿಯವರ ಸಂಪಾದಕತ್ವದಲ್ಲಿ ವಾರಕ್ಕೆರಡು ಬಾರಿ ಹೊರಬರುತ್ತಿದ್ದ ‘ಜ್ವಾಲಾಮುಖಿ’ ಪತ್ರಿಕೆ ಅಂದಿನ ದಿನಗಳಲ್ಲಿ ‘ಕಿಡಿ’ ಪತ್ರಿಕೆಯಷ್ಟೇ ಪ್ರಖರವಾಗಿ ರಾಜಕಾರಣಿಗಳನ್ನು ಸುಡುತ್ತಿತ್ತು. ಸ್ನೇಹಕ್ಕೆ ಕಟ್ಟುಬಿದ್ದು ಅದೆಷ್ಟೋ ಪತ್ರಿಕೆ/ನಿಯತಕಾಲಿಕಗಳಿಗೆ ಸಂಪಾದಕೀಯ ಮತ್ತು ಲೇಖನಗಳನ್ನು ಬರೆದುಕೊಡುತ್ತಿದ್ದರು ಹೆಚ್.ಆರ್.ನಾಗೇಶರಾವ್. 1953ರ ಅಕ್ಟೋಬರ್ 11ರಂದು ಆರಂಭವಾದ ‘ಜ್ವಾಲಾಮುಖಿ’ಯ ಮೊದಲ ಸಂಚಿಕೆಗೆ ಅವರು ಬರೆದುಕೊಟ್ಟ ಅಗ್ರಲೇಖನವಿದು)